WhatsApp ಬಳಕೆದಾರರೇ ಎಚ್ಚರ: ಈ ಒಂದು ಸೆಟ್ಟಿಂಗ್ಸ್ ಬದಲಿಸದಿದ್ರೆ ನಿಮ್ಮ ಖಾತೆ ಕೂಡ ಹ್ಯಾಕ್ ಆಗುತ್ತೆ

| Updated By: ಝಾಹಿರ್ ಯೂಸುಫ್

Updated on: Aug 30, 2021 | 7:34 PM

WhatsApp Hackers: ವಾಟ್ಸ್​ಆ್ಯಪ್ ಮಾತ್ರವಲ್ಲ, ಯಾವುದೇ ರೀತಿಯಲ್ಲಿ ಇಂಟರ್ನೆಟ್ ಬಳಸುವಾಗ ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಹ್ಯಾಕರ್‌ಗಳ ಕುತಂತ್ರದಿಂದ ಪಾರಾಗಬಹುದು.

WhatsApp ಬಳಕೆದಾರರೇ ಎಚ್ಚರ: ಈ ಒಂದು ಸೆಟ್ಟಿಂಗ್ಸ್ ಬದಲಿಸದಿದ್ರೆ ನಿಮ್ಮ ಖಾತೆ ಕೂಡ ಹ್ಯಾಕ್ ಆಗುತ್ತೆ
WhatsApp
Follow us on

ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ (WhatsApp)​ ಉತ್ತಮ ಭದ್ರತಾ ವೈಶಿಷ್ಟ್ಯಗನ್ನು ಹೊಂದಿದೆ. ಹೀಗಾಗಿ ಬಳಕೆದಾರರ ಮಾಹಿತಿಯನ್ನು ಹ್ಯಾಕ್ ಮಾಡಿ ಕಲೆಹಾಕಲು ಸಾಧ್ಯವಿಲ್ಲ ಎಂಬ ಮಾತು ಪ್ರಚಲಿತದಲ್ಲಿದೆ. ಆದರೆ ನಿಮ್ಮ ಒಂದು ಸಣ್ಣ ನಿರ್ಲಕ್ಷ್ಯದಿಂದ ನಿಮ್ಮೆಲ್ಲಾ ವೈಯಕ್ತಿಕ ಡೇಟಾಗಳು ಹ್ಯಾಕರುಗಳ ಪಾಲಾಗುತ್ತೆ ಎಂಬುದು ಕೂಡ ನೆನಪಿರಲಿ. ಹೌದು, WhatsApp ಬಳಕೆದಾರರು ತಮ್ಮ ಗೌಪ್ಯ ಮಾಹಿತಿಯನ್ನು ಸುರಕ್ಷಿತವಾಗಿರಿಸಲು ಕೆಲವು ಸೆಟ್ಟಿಂಗ್‌ಗಳನ್ನು ಆನ್ ಅಥವಾ ಆಫ್ ಮಾಡುವುದು ಅಗತ್ಯ. ವಾಟ್ಸ್​​ಆ್ಯಪ್​ನಲ್ಲಿ ಸಾಮಾನ್ಯವಾಗಿ ಟೆಕ್ಸ್ಟ್​​ ಮೆಸೇಜ್, ವೀಡಿಯೊಗಳು, ಫೋಟೋಗಳು, ಪಿಡಿಎಫ್ ಫೈಲ್‌ಗಳನ್ನು ಕಳುಹಿಸಲಾಗುತ್ತದೆ. ಒಂದು ವೇಳೆ ಬಳಕೆದಾರರು ತಮ್ಮ ವಾಟ್ಸ್​ಆ್ಯಪ್​ನಲ್ಲಿ ಆಟೋಮ್ಯಾಟಿಕ್-ಡೌನ್‌ಲೋಡ್ ಅನ್ನು ಸಕ್ರಿಯಗೊಳಿಸಿದ್ದರೆ, ನಿಮಗೆ ಬಂದ ಫೈಲ್ ಅನುಮತಿಯಿಲ್ಲದೆ ಡೌನ್‌ಲೋಡ್ ಆಗುತ್ತದೆ. ಇದರ ಸಂಪೂರ್ಣ ಲಾಭ ಪಡೆದುಕೊಳ್ಳುವಲ್ಲಿ ಇದೀಗ ಹ್ಯಾಕರ್‌ಗಳು ಯಶಸ್ವಿಯಾಗುತ್ತಿದ್ದಾರೆ ಎಂದು ಎಚ್ಚರಿಸಿದ್ದಾರೆ ಸೈಬರ್ ತಜ್ಞರು.

ಸೈಬರ್ ತಜ್ಞರ ಪ್ರಕಾರ, ಹ್ಯಾಕರುಗಳು ಡಾರ್ಕ್ ನೆಟ್‌ ಮೂಲಕ ವಿಶೇಷ ಸಾಫ್ಟ್‌ವೇರ್ ಸಹಾಯದಿಂದ ನಿಮ್ಮ ಖಾತೆ ಮೇಲೆ ಕಣ್ಣಿಡುತ್ತಿದ್ದಾರೆ. ಇದಕ್ಕಾಗಿ ಅವರು ಬಳಸುತ್ತಿರುವ ತಂತ್ರ ಆಟೋಮ್ಯಾಟಿಕ್ ಡೌನ್​ಲೋಡ್. ಅಂದರೆ ಹ್ಯಾಕರ್‌ಗಳು ನಿಮ್ಮ ಮೊಬೈಲ್ ಸಂಖ್ಯೆಗೆ ಪಿಡಿಎಫ್ ಫೈಲ್‌ಗಳನ್ನು ಕಳುಹಿಸುತ್ತಾರೆ. ಪಿಡಿಎಫ್ ಫೈಲ್ ನಿಮಗೆ ತಿಳಿಯದೆ ಡೌನ್‌ಲೋಡ್ ಆಗುತ್ತದೆ. ಏಕೆಂದರೆ ನಿಮ್ಮ ವಾಟ್ಸ್​ಆ್ಯಪ್​ನಲ್ಲಿ ಆಟೋಮ್ಯಾಟಿಕ್ ಡೌನ್‌ಲೋಡ್ ಆನ್​ನಲ್ಲಿರುತ್ತದೆ. ಹೀಗೆ ಡೌನ್​ಲೋಡ್​ ಆದ ಹ್ಯಾಕಿಂಗ್ ಫೈಲ್​ ಮೂಲಕ ನಿಮ್ಮ ಡೇಟಾವನ್ನು ಸರ್ವರ್‌ಗೆ ತಲುಪಿಸುತ್ತಾರೆ. ಈ ಮೂಲಕ ನಿಮ್ಮ ಖಾಸಗಿ ಫೋಟೋಗಳು, ವಿಡಿಯೋಗಳನ್ನು ಹ್ಯಾಕರುಗಳು ವರ್ಗಾಯಿಸಲು ಯಶಸ್ವಿಯಾಗುತ್ತಿದ್ದಾರೆ. ಇಂತಹ ವೈಯಕ್ತಿಕ ಡೇಟಾವನ್ನು ಹಣಕಾಸು ವಂಚನೆ ಅಥವಾ ಬ್ಲಾಕ್​ಮೇಲ್ ಹಾಗೂ ನಿಮ್ಮ ಖಾಸಗಿತನಕ್ಕೆ ಧಕ್ಕೆಯಾಗುವಂತಹ ಕೃತ್ಯಗಳಿಗೆ ಹ್ಯಾಕರುಗಳು ಬಳಸುವ ಸಾಧ್ಯತೆಯಿದೆ ಎಂದು ಸೈಬರ್ ಎಕ್ಸ್​ಪರ್ಟ್​ಗಳು ಎಚ್ಚರಿಸಿದ್ದಾರೆ.

ನಿಮ್ಮ ಮೊಬೈಲ್ ಸಂಖ್ಯೆಯನ್ನು ಕ್ಲೋನ್ ಮಾಡಬಹುದು!
ವಾಟ್ಸ್​ಆ್ಯಪ್ ಸುಮಾರು 17 ಕ್ಲೋನಿಂಗ್ ಆ್ಯಪ್‌ಗಳನ್ನು ಹೊಂದಿದೆ. ಎರಡು ಮೂರು ಸಂಖ್ಯೆಗಳಲ್ಲಿ ವಾಟ್ಸ್​ಆ್ಯಪ್​ ಬಳಸಲು ಇಂತಹ ಆ್ಯಪ್​ಗಳ ಮೊರೆ ಹೋಗುತ್ತಾರೆ. ಆದರೆ ಈ ಆ್ಯಪ್​ಗಳ ಮೂಲಕ ಹ್ಯಾಕರ್‌ಗಳು ನಿಮ್ಮ ಸಂಖ್ಯೆಯನ್ನು ಕ್ಲೋನ್ ಮಾಡಬಹುದು. ವಾಟ್ಸಾಪ್ ಹೆಸರಿನಲ್ಲಿ ವಂಚನೆ ತಪ್ಪಿಸಲು, ಪ್ಲೇಸ್ಟೋರ್ ನಿಂದ ಮಾತ್ರ ಆ್ಯಪ್​ನ್ನು ಡೌನ್​ಲೋಡ್ ಮಾಡುವಂತೆ ಸೈಬರ್ ತಜ್ಙರು ತಿಳಿಸಿದ್ದಾರೆ. ಇದರ ಹೊರತಾಗಿ ಯಾವುದೇ ಥರ್ಡ್ ಪಾರ್ಟಿ ಆ್ಯಪ್​ಗಳನ್ನು ಬಳಸದಿರಿ. ಇದರಿಂದ ನಿಮ್ಮ ಖಾತೆ ಹ್ಯಾಕ್ ಆಗುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಎಚ್ಚರಿಸಿದ್ದಾರೆ.

ಹೆಚ್ಚುವರಿ ಮುನ್ನೆಚ್ಚರಿಕೆ ತೆಗೆದುಕೊಳ್ಳಿ:
ವಾಟ್ಸ್​ಆ್ಯಪ್ ಮಾತ್ರವಲ್ಲ, ಯಾವುದೇ ರೀತಿಯಲ್ಲಿ ಇಂಟರ್ನೆಟ್ ಬಳಸುವಾಗ ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಹ್ಯಾಕರ್‌ಗಳ ಕುತಂತ್ರದಿಂದ ಪಾರಾಗಬಹುದು. ನೀವು ಯಾವುದೇ ಡೆಸ್ಕ್‌ಟಾಪ್ ಅಥವಾ ಥರ್ಡ್ ಪಾರ್ಟಿ ಇಂಟರ್‌ನೆಟ್‌ನಲ್ಲಿ ವಾಟ್ಸಾಪ್‌ಗೆ ಲಾಗಿನ್ ಮಾಡಿದರೆ, ಜಾಗರೂಕರಾಗಿರಿ. ಯಾವುದೇ ಸಂದರ್ಭದಲ್ಲಿ ನೀವು ವಾಟ್ಸ್​ಆ್ಯಪ್​ ವೆಬ್‌ಗೆ ಲಾಗಿನ್ ಆದಾಗ ಕೀಪ್ ಮಿ ಅಸೈನ್ ಅನ್ನು ಟಿಕ್ ಮಾಡಬೇಡಿ. ಹಾಗೆಯೇ ವಾಟ್ಸ್​ಆ್ಯಪ್ ವೆಬ್​ನಲ್ಲಿ ಪ್ರತಿ ಬಾರಿ ಲಾಗ್ ಔಟ್ ಆಗುವುದನ್ನು ಮರೆಯಬೇಡಿ ಎಂದು ಸೈಬರ್ ಎಕ್ಸ್​ಪರ್ಟ್ ಅಭಿಪ್ರಾಯಪಟ್ಟಿದ್ದಾರೆ.

ವಾಟ್ಸ್​ಆ್ಯಪ್​ ಆಟೋಮ್ಯಾಟಿಕ್-ಡೌನ್‌ಲೋಡ್ ತಪ್ಪಿಸಲು ಏನು ಮಾಡಬೇಕು?
ನಿಮ್ಮ ವಾಟ್ಸ್​ಆ್ಯಪ್​​ನ ಸೆಟ್ಟಿಂಗ್​ಗೆ ಹೋಗಿ>ಅಲ್ಲಿ ಸ್ಟೊರೇಜ್ ಅ್ಯಂಡ್ ಡೇಟಾವನ್ನು ಕ್ಲಿಕ್ ಮಾಡಿ>ಆ ಬಳಿಕ ಅಲ್ಲಿ ನಡುಭಾಗದಲ್ಲಿ ಮೀಡಿಯಾ ಆಟೋ-ಡೌನ್​ಲೋಡ್ ಆಯ್ಕೆ ಕಾಣಿಸುತ್ತದೆ. ಅದರ ಕೆಳಗೆ ಮೊಬೈಲ್ ಡೇಟಾ, ವೈಫೈ ಹಾಗೂ ರೋಮಿಂಗ್​ನಲ್ಲಿ ಡೌನ್​ಲೋಡ್ ಆಗುವ ಡೇಟಾಗಳ ಬಗ್ಗೆ ಮಾಹಿತಿ ಇರುತ್ತದೆ. ಹೀಗೆ ನೀಡಲಾದ ಒಂದೊಂದೇ ಆಯ್ಕೆಯ ಟಿಕ್​ ಅನ್ನು ಕ್ಯಾನ್ಸಲ್ ಮಾಡಿ ಒಕೆ ಕೊಡಿ. ಇದರಿಂದ ಮುಂದೆ ವೈಫೈಗೆ ಕನೆಕ್ಟ್​ ಆದರೆ ಅಥವಾ ಇನ್ನಿತರ ಸಂದರ್ಭಗಳಲ್ಲಿ ನಿಮ್ಮ ವಾಟ್ಸ್​ಆ್ಯಪ್​ನಲ್ಲಿ ಯಾವುದೇ ಫೈಲ್ ಆಟೋಮ್ಯಾಟಿಕ್ ಡೌನ್​ಲೋಡ್ ಆಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಈ  ಲಿಂಕ್ ಕ್ಲಿಕ್ ಮಾಡಿ.

 

ಇದನ್ನೂ ಓದಿ: ಮುಂದುವರೆದ ದರ ಸಮರ: ಭರ್ಜರಿ ರಿಚಾರ್ಜ್​ ಆಫರ್ ನೀಡಿದ ಮೂರು ಕಂಪೆನಿಗಳು

ಇದನ್ನೂ ಓದಿ: ಫ್ರೀಡಂ 251 ರೂ. ಮೊಬೈಲ್ ಕಥೆ ಏನಾಯ್ತು? ಮತ್ತೆ ಸುದ್ದಿಯಲ್ಲಿ ಕಂಪೆನಿಯ ಮಾಲೀಕ

ಇದನ್ನೂ ಓದಿ: ವಿದೇಶಿ ತಂಡದ ನಾಯಕತ್ವನ್ನು ತ್ಯಜಿಸಿ ಭಾರತದಲ್ಲಿ ಕಣಕ್ಕಿಳಿಯಲಿರುವ ಸ್ಟಾರ್ ಆಟಗಾರ