World Social Media Day 2022: ಇಂದು ಸಾಮಾಜಿಕ ಮಾಧ್ಯಮ ದಿನ; ಸೋಷಿಯಲ್ ಮೀಡಿಯಾದ ಇತಿಹಾಸ, ಪ್ರಾಮುಖ್ಯತೆ ಬಗ್ಗೆ ತಿಳಿಯೋಣ ಬನ್ನಿ
ಒಬ್ಬರು ಎಲ್ಲರಿಗಾಗಿ ಎಲ್ಲರೂ ಒಬ್ಬರಿಗಾಗಿ ಎನ್ನುವ ಸಹಕಾರ ತತ್ವದ ಆಶಯಗಳು ಸಾಕಾರಗೊಂಡಿರುವ ಕ್ಷೇತ್ರ ಸೋಷಿಯಲ್ ಮೀಡಿಯಾ.
ಜಗತ್ತಿನಲ್ಲಿ ನಿಜವಾದ ಅರ್ಥದಲ್ಲಿ ಸಂವಹನ ಕ್ರಾಂತಿ (Communication Revolution) ತಂದಿದ್ದು, ಜನಸಾಮಾನ್ಯರ ಅಭಿಪ್ರಾಯಗಳು ವಿಶ್ವಕ್ಕೆ ತಲುಪುವಂತೆ ಮಾಡಿದ್ದು ಸಾಮಾಜಿಕ ಮಾಧ್ಯಮಗಳು (Social Media). ಒಬ್ಬರು ಎಲ್ಲರಿಗಾಗಿ ಎಲ್ಲರೂ ಒಬ್ಬರಿಗಾಗಿ ಎನ್ನುವ ಸಹಕಾರ ತತ್ವದ ಆಶಯಗಳು ಸಾಕಾರಗೊಂಡಿರುವ ಕ್ಷೇತ್ರ ಇದು. ಇಂದು (ಜೂನ್ 30) ವಿಶ್ವ ಸಾಮಾಜಿಕ ಮಾಧ್ಯಮ ದಿನ (World Social Media Day 2022). ಫೇಸ್ಬುಕ್ (Facebook), ಟ್ವಿಟರ್ (Twitter), ಕೂ (Koo), ಇನ್ಸ್ಟಾಗ್ರಾಮ್ (Instagram), ಯುಟ್ಯೂಬ್ನಂಥ (Youtube) ಸಾಮಾಜಿಕ ಮಾಧ್ಯಮಗಳು ಸಮಾಜದಲ್ಲಿ ತಂದಿರುವ ಪರಿವರ್ತನೆ, ಬೀರಿರುವ ಪ್ರಭಾವವನ್ನು ನೆನಪಿಸಿಕೊಳ್ಳುವ ದಿನ.
ಸಮೂಹ ಮಾಧ್ಯಮಗಳ ಮೂಲಕ ದನಿಎತ್ತಲು ಸಾಧ್ಯವಾಗದ, ಬೆಳಕು ಕಾಣಲು ಪರಿತಪಿಸುತ್ತಿದ್ದ ಎಷ್ಟೋ ಪ್ರತಿಭೆಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಹೊರ ಜಗತ್ತಿಗೆ ಪರಿಚಯವಾಗಿವೆ. ಸಾಮಾಜಿಕ ಮಾಧ್ಯಮಗಳು ಎಷ್ಟೋ ಜನರ ಹವ್ಯಾಸ, ಬದುಕಿನ ಭಾಗವೇ ಆಗಿಹೋಗಿವೆ. ಅಷ್ಟೇ ಅಲ್ಲ, ಸಾಕಷ್ಟು ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿದೆ. ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಾಗಿರುವ ಹಲವರು ಸಮಾಜದಲ್ಲಿ ಗಣ್ಯರಾಗಿದ್ದಾರೆ, ಸೋಷಿಯಲ್ ಮೀಡಿಯಾ ಸ್ಟಾರ್ಗಳಾಗಿರುವ ಎಷ್ಟೋ ಮಂದಿ ಸಿನಿಮಾ ನಟ-ನಟಿಯರಿಗೆ ಸೆಡ್ಡುಹೊಡೆಯುವಷ್ಟು ಪ್ರಭಾವ, ಮನ್ನಣೆ, ಪ್ರಚಾರ ಪಡೆದುಕೊಂಡಿದ್ದಾರೆ.
ವಿಶ್ವ ಸಾಮಾಜಿಕ ಮಾಧ್ಯಮ ದಿನವನ್ನು ಮೊದಲು ಆರಂಭಿಸಿದ್ದು ಮಾಷಬಲ್ (Mashable) ಎನ್ನುವ ಮನರಂಜನೆ ಮತ್ತು ಮಲ್ಟಿಪ್ಲಾಟ್ಫಾರ್ಮ್ ಕಂಪನಿ. 2010ರಿಂದ ಸಾಮಾಜಿಕ ಮಾಧ್ಯಮ ದಿನ ಚಾಲ್ತಿಯಲ್ಲಿದೆ. ಅಂದಹಾಗೆ ಮಾಷಬಲ್ ಕಂಪನಿಯು 2005ರಿಂದಲೂ ಕಾರ್ಯನಿರ್ವಹಿಸುತ್ತಿದೆ.
ಸಾಮಾಜಿಕ ಮಾಧ್ಯಮ ದಿನದ ಪ್ರಾಮುಖ್ಯತೆ
ಸಾಮಾಜಿಕ ಮಾಧ್ಯಮಗಳು ಕೇವಲ ಕುಟುಂಬ ಮತ್ತು ಗೆಳೆಯರನ್ನು ಜೊತೆಯಾಗಿ ಬೆಸೆಯುವುದಷ್ಟೇ ಅಲ್ಲ. ಸಾಕಷ್ಟು ಜನರು ಅದನ್ನೇ ಜೀವನೋಪಾಯವನ್ನಾಗಿಯೂ ಮಾಡಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮಗಳು ಸಮಾಜ, ಆರ್ಥಿಕತೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ಉಂಟು ಮಾಡುವ ಶಕ್ತಿ ಹೊಂದಿವೆ. ಮಾಷಬಲ್ ವಿಶ್ವ ಸಾಮಾಜಿಕ ಮಾಧ್ಯಮ ದಿನ ಆರಂಭಿಸಿದಾಗ, ಅದರ ಹಿಂದೆ ಸಾಮಾಜಿಕ ಮಾಧ್ಯಮಗಳು ಜಗತ್ತಿನಲ್ಲಿ ಬೀರಿರುವ ಪರಿಣಾಮಗಳನ್ನು ಸಾರಿ ಹೇಳುವ ಉದ್ದೇಶವೂ ಇತ್ತು.
ಸಾಮಾಜಿಕ ಮಾಧ್ಯಮಗಳು ಜನಜೀವನದ ಮೇಲೆ ಕೇವಲ ಒಳಿತಿನ ಪರಿಣಾಮವಷ್ಟೇ ಅಲ್ಲ, ಸಾಕಷ್ಟು ದುಷ್ಪರಿಣಾಮಗಳನ್ನೂ ಬೀರಿದೆ. ಆದರೆ ಸಮರ್ಪಕ ರೀತಿಯಲ್ಲಿ ಬಳಸಿಕೊಂಡ ಸಾಕಷ್ಟು ಜನರಿಗೆ ಅನುಕೂಲ ಆಗಿರುವುದೇ ಹೆಚ್ಚು. ಇಂಥ ಸಾಮಾಜಿಕ ಪರಿಣಾಮಗಳನ್ನು ಶ್ಲಾಘಿಸುವ ದಿನವಾಗಿಯೂ ಜೂನ್ 30ರ ವಿಶ್ವ ಸಾಮಾಜಿಕ ಮಾಧ್ಯಮ ದಿನವನ್ನು ಆಚರಿಸಲಾಗುತ್ತಿದೆ.
ಹೇಗೆ ಆಚರಿಸಬಹುದು?
– ಸಾಮಾಜಿಕ ಮಾಧ್ಯಮಗಳನ್ನು ಸ್ಕ್ರಾಲ್ ಮಾಡುತ್ತಾ ದಿನ ಕಳೆಯುವ ವ್ಯಕ್ತಿ ನೀವಾಗಿದ್ದಾರೆ ನಿಮಗೆ ಹೊಸದಾಗಿ ಹೇಳುವಂಥದ್ದು ಏನೂ ಇಲ್ಲ. ನಿಮಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಪರಿಚಯವಾದ, ನೀವು ಇಷ್ಟಪಡುವ ವ್ಯಕ್ತಿಯನ್ನು ಇಂದು ನೆನಪಿಸಿಕೊಳ್ಳುವ ಮೂಲಕ ಗೌರವಿಸಬಹುದು.
– ಸೋಷಿಯಲ್ ಅಂದರೆ ಹೆದರಿ ಹಿಮ್ಮೆಟ್ಟುವಂಥವರು ನೀವಾಗಿದ್ದರೆ ನೀವು ಒಂದಿಷ್ಟು ಸಾಮಾಜಿಕ ಮಾಧ್ಯಮಗಳ ವೇದಿಕೆ ಪರಿಚಯ ಮಾಡಿಕೊಳ್ಳಲು ಯತ್ನಿಸಬಹುದು. ಇಂದಿನ ಜಗತ್ತಿನಲ್ಲಿ ಸಾಮಾಜಿಕ ಮಾಧ್ಯಮಗಳ ಸಮರ್ಪಕ ಬಳಕೆಯಿಂದ ಹಲವು ರೀತಿಯ ಲಾಭಗಳಿವೆ.
– ನೀವು ಈವರೆಗೆ ಬಳಸಿರದ ಒಂದಿಷ್ಟು ಒಳ್ಳೊಳ್ಳೋ ಸೋಷಿಯಲ್ ಪ್ಲಾಟ್ಫಾರ್ಮ್ಗಳನ್ನು ಪ್ರಾಯೋಗಿಕವಾಗಿ ಬಳಸಲು ಆರಂಭಿಸುವ ಮೂಲಕವೂ ನೀವು ಸಾಮಾಜಿಕ ಮಾಧ್ಯಮ ದಿನ ಆಚರಿಸಬಹುದು.
– ಏನಾದರೂ ಬರೆಯಿರಿ, ವಿಡಿಯೊ ಹಾಕಿ, ಹಾಡು ಹಂಚಿಕೊಳ್ಳಿ. ಭೌಗೋಳಿಕ ಗಡಿಯ ಹಂಗಿಲ್ಲದೆ ಸಮಾಜದೊಂದಿಗೆ ಬೆರೆಯಲು ಸೋಷಿಯಲ್ ಮೀಡಿಯಾ ಅತ್ಯುತ್ತಮ ವೇದಿಕೆ.
ಇತಿಹಾಸದ ಪುಟಗಳಲ್ಲಿ
ಈ ಮೊದಲೇ ಹೇಳಿದಂತೆ ವಿಶ್ವ ಸಾಮಾಜಿಕ ಮಾಧ್ಯಮ ದಿನವನ್ನು ಮಾಷಬಲ್ ಕಂಪನಿಯು ಜೂನ್ 30, 2010ರಂದು ಆರಂಭಿಸಿತು. ಮೊದಲ ಸೋಷಿಯಲ್ ಮೀಡಿಯಾ ಕಾರ್ಯನಿರ್ವಹಿಸಿದ್ದು 1997ರಲ್ಲಿ. ಸಿಕ್ಸ್ಡಿಗ್ರೀಸ್ (Sixdegrees) ಹೆಸರಿನ ಇಂಟರ್ನೆಟ್ ವೇದಿಕೆಯೊಂದು ಸಾಮಾಜಿಕ ಮಾಧ್ಯಮದ ಹಲವು ಆಯಾಮಗಳನ್ನು ಜನರಿಗೆ ಪರಿಚಯಿಸಿತ್ತು. ಬಳಕೆದಾರರು ತಮ್ಮ ಕುಟುಂಬ, ಸ್ನೇಹಿತರ ಪಟ್ಟಿ ಮಾಡಿಕೊಂಡು, ಪ್ರೊಫೈಲ್, ಬುಲೆಟಿಕ್ ಬೋರ್ಡ್, ಕಲಿತ ಶಾಲೆಗಳ ಬಗ್ಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿತ್ತು. ಒಂದು ಹಂತದಲ್ಲಿ 10 ಲಕ್ಷಕ್ಕೂ ಹೆಚ್ಚು ಬಳಕೆದಾರರು ಸಿಕ್ಸ್ಡಿಗ್ರೀಸ್ಗೆ ಇದ್ದರು. ಆದರೆ ಇದು 2001ರಲ್ಲಿ ಕಾರ್ಯನಿರ್ವಹಣೆ ಸ್ಥಗಿತಗೊಳಿಸಿತು.
ಆಧುನಿಕ ಜಗತ್ತಿನ ಮೊದಲ ಸೋಷಿಯಲ್ ಮೀಡಿಯಾ ಫ್ರೆಂಡ್ಸ್ಟರ್ ಶುರುವಾಗಿದ್ದು 2002ರಲ್ಲಿ. ಸುಮಾರು 10 ಕೋಟಿ ಬಳಕೆದಾರರನ್ನು ಸಂಪಾದಿಸಿದ್ದ ಫ್ರೆಂಡ್ಸ್ಟರ್ ಹೊಸ ಗೆಳೆಯರನ್ನು ಸಂಪಾದಿಸಲು ನೆರವಾಗುವ ವೇದಿಕೆಯಾಗಿ ಜನಪ್ರಿಯವಾಗಿತ್ತು. 2003ರಲ್ಲಿ ಲಿಂಕ್ಡ್ಇನ್, 2004ರಲ್ಲಿ ಮೈಸ್ಪೇಸ್ ಮತ್ತು ಫೇಸ್ಬುಕ್, 2005ರಲ್ಲಿ ಯುಟ್ಯೂಬ್, 2006ರಲ್ಲಿ ಟ್ವಿಟರ್ ಕಾರ್ಯಾರಂಭ ಮಾಡಿದವು. 2010ರಲ್ಲಿ ಆರಂಭವಾದ ಇನ್ಸ್ಟಾಗ್ರಾಮ್ ಉಳಿದೆಲ್ಲಾ ಮಾಧ್ಯಮಗಳನ್ನು ಹಿಂದಿಕ್ಕಿ ಜನಪ್ರಿಯವಾಯಿತು. ಫೇಸ್ಬುಕ್ ಈ ಕಂಪನಿಯನ್ನು ಖರೀದಿಸಿತು. 2016ರಲ್ಲಿ ಆರಂಭವಾದ ಟಿಕ್ಟಾಕ್ ವಿಡಿಯೊ ಆಯಾಮವನ್ನು ಹಲವು ನೆಲೆಗಳಲ್ಲಿ ವಿಸ್ತರಿಸಿ ಜನಪ್ರಿಯವಾಯಿತು. ಭಾರತದ ಎಷ್ಟೋ ಜನರು ಟಿಕ್ಟಾಕ್ ಸ್ಟಾರ್ಗಳಾದರು. ಇಂದು ಭಾರತದಲ್ಲಿ ಟಿಕ್ಟಾಕ್ಗೆ ನಿಷೇಧವಿದೆಯಾದರೂ ವಿಶ್ವದ ಹಲವೆಡೆ ಇದು ಜನಪ್ರಿಯ ಪ್ಲಾಟ್ಫಾರ್ಮ್ ಆಗಿದೆ. ಶೇರ್ಚಾಟ್, ಕೂ, ಪಿಂಟರೆಸ್ಟ್ ಸೇರಿದಂತೆ ಇತರ ಹಲವು ಸೋಷಿಯಲ್ ಮೀಡಿಯಾಗಳೂ ಭಾರತದಲ್ಲಿ ಸದ್ದು ಮಾಡುತ್ತಿವೆ.
Published On - 8:11 am, Thu, 30 June 22