ಇಂದು ವರ್ಲ್ಡ್ ವೈಡ್ ವೆಬ್ ಡೇ (World Wide Web Day). ಪ್ರತಿ ವರ್ಷ ಆಗಸ್ಟ್ 1 ರಂದು ಈ ದಿನವನ್ನು ಆಚರಿಸಲಾಗುತ್ತದೆ. ಸಂವಹನ, ಮಾಹಿತಿ, ಶಿಕ್ಷಣ ಮತ್ತು ಸಬಲೀಕರಣವನ್ನು ಸುಗಮಗೊಳಿಸುವ ಮೂಲಕ ಜನರ ಜೀವನವನ್ನು ಸುಧಾರಿಸುವಲ್ಲಿ ವೆಬ್‌ನ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುವ ಗುರಿಯನ್ನು ಈ ದಿನ ಹೊಂದಿದೆ. ಇಂದು ಜಗತ್ತಿನಾದ್ಯಂತ ಕೋಟ್ಯಾಂತರ ಜನರು ಇಂಟರ್‌ನೆಟ್ ಬಳಸಲು, ಇಂಟರ್ನೆಟ್ ಮೂಲಕ ವ್ಯವಹರಿಸಲು ಮತ್ತು ಮಾಹಿತಿ ಹುಡುಕಲು ಸೇರಿದಂತೆ, ಎಲ್ಲವನ್ನು ನಿರ್ದಿಷ್ಟವಾಗಿ ಗುರುತಿಸಲು ಮೂಲವಾದ ಭವಿಷ್ಯದ ಬ್ರಹ್ಮಾಂಡ ದ್ವಾರ ವರ್ಲ್ಡ್ ವೈಡ್ ವೆಬ್ (WWW) ಆಗಿದೆ.
ವರ್ಲ್ಡ್ ವೈಡ್ ವೆಬ್ ಇದು ಹೆಸರೇ ಹೇಳುವಂತೆ ವಿಶ್ವವ್ಯಾಪಿಯಾಗಿ ಹರಡಿಕೊಂಡಿರುವ ಜಾಲ. ಆಧುನಿಕ ಜಗತ್ತಿನ ಅತ್ಯಂತ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಈ ವ್ಯವಸ್ಥೆಯನ್ನು 1989ರ ಮಾರ್ಚ್ 12 ರಂದು ವಿಜ್ಞಾನಿ ‘ಟೀಮ್ ಬರ್ನಸ್ ಲೀ‘ ಕಂಡುಹಿಡಿದಿದ್ದರು. ಬ್ರಿಟೀಷ್ ಪ್ರಜೆಯಾಗಿದ್ದ ಟೀಮ್ ಬರ್ನಸ್ ಲೀ ಅವರು ಸ್ವಿಜ್ಜರ್‌ಲೆಂಡ್ ದೇಶದ ಜಿನಿವಾ ಸಮೀಪದ ಸರ್ನ್ನಲ್ಲಿ ಉದ್ಯೋಗಿಯಾಗಿದ್ದ ವೇಳೆಯಲ್ಲಿ ‘ವರ್ಲ್ಡ್ ವೈಡ್ ವೆಬ್(WWW)’ ಅನ್ನು ಹುಟ್ಟಹಾಕಿದರು.
ಇದಲ್ಲದೇ, 1990 ರಲ್ಲಿ ಮೊದಲ ವೆಬ್ ಬ್ರೌಸರ್ ಅನ್ನು ರೂಪಿಸಿ ಜನಸಾಮಾನ್ಯರ ಬಳಿಗೆ ವೆಬ್ ಬ್ರೌಸರ್ ಎಂಬ ಭವಿಷ್ಯದ ಬ್ರಹ್ಮಾಂಡ ದ್ವಾರವನ್ನು ತೆರೆದಿದ್ದರು. ಹೈಪರ್‌ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರೊಟೊಕಾಲ್ (HTTP) ಬಳಸುವ ಎಲ್ಲ ಇಂಟರ್‌ನೆಟ್ ಬಳಕೆದಾರರು ಹಾಗೂ ರಿಸೋರ್ಸ್‌ಗಳ ಸಂಯುಕ್ತ ರೂಪವೇ ಈ ವರ್ಲ್ಡ್ ವೈಡ್ ವೆಬ್. ಲೀ ಅವರ 1989ರಲ್ಲಿ ಬರೆದ ಪ್ರಸ್ತಾಪದ ಹಿನ್ನೆಲೆಯಲ್ಲಿ ನ್ಯೂಕ್ಲಿಯರ್ ಫಿಸಿಕ್ಸ್‌ಗೆ ಸಂಬಂಧಿಸಿದ ಮಾಹಿತಿಯನ್ನು ರವಾನಿಸಲು ಯುರೋಪಿಯನ್ ಸೆಂಟರ್ ಫಾರ್ ನ್ಯೂಕ್ಸಿಯರ್ ರಿಸರ್ಚ್‌ನಲ್ಲಿ ವಲ್ಡ್‌ವೈಡ್ ವೆಬ್‌ಗೆ ಸಂಬಂಧಿಸಿದ ಮೊದಲ ಪ್ರಯತ್ನಗಳು ಆರಂಭವಾದವು. ಅದರಂತೆ 1991ರ ವೇಳೆಗೆ ವೆಬ್ ಬ್ರೌಸರ್ ಮತ್ತು ಸರ್ವರ್ ಸಾಫ್ಟ್‌ವೇರ್ ಸಿದ್ಧವಾಗಿದ್ದವು.
ಬಹುತೇಕರು ಇಂಟರ್ನೆಟ್ ಮತ್ತು ವೆಬ್ ಒಂದೇ ಎಂದು ತಿಳಿದುಕೊಂಡಿದ್ದಾರೆ. ಆದರೆ, ಇಂಟರ್ನೆಟ್ ಮತ್ತು ವಲ್ಡ್ ವೈಡ್ ವೆಬ್ ಬೇರೆ ಬೇರೆ. ಇಂಟರ್ನೆಟ್ ಅನ್ನುವುದು ವಿಶ್ವದ ಎಲ್ಲ ಕಂಪ್ಯೂಟರ್ ನೆಟ್‌ವರ್ಕ್ ಮೂಲಸೌಲಭ್ಯಗಳಿಗೆ ಸಂಬಂಧಿಸಿದ್ದು. ಇಂಟರ್ನೆಟ್ ಬಳಸಿಕೊಂಡು ನೋಡಬಹುದಾದ, ಅಪ್‌ಲೋಡ್ ಮಾಡಬಹುದಾದ ಟೆಕ್ಸ್ಟ್‌ಗಳು, ಡಿಜಿಟಲ್ ಫೋಟೋ, ಮ್ಯೂಸಿಕ್ ಫೈಲ್, ವಿಡಿಯೋಗಳ ಸಂಗ್ರಹಕ್ಕೆ ವಲ್ಡ್‌ವೈಡ್ ವೆಬ್ ಎನ್ನುತ್ತಾರೆ. ವಲ್ಡ್‌ವೈಡ್ ವೆಬ್ ಇಂಟರ್ನೆಟ್‌ನ ಒಂದು ಭಾಗವಷ್ಟೆ.
ವರ್ಲ್ಡ್ ವೈಡ್ ವೆಬ್ ಪ್ರಪಂಚಕ್ಕೆ ಕಾಲಿಟ್ಟು ಈಗ 33 ವರ್ಷಗಳಾಗಿವೆ. ಇಂಟರ್ನೆಟ್‌ನ ಶಕ್ತಿ ಏನೆಂಬುದು ಎಲ್ಲರಿಗೂ ಅರಿವಾಗಿದೆ. ಆದರೆ, ಈ ಶಕ್ತಿಯ ಮೂಲ ಯಾವುದು, ವೆಟ್‌ಪುಟಗಳನ್ನು ಮುಕ್ತವಾಗಿ ನೋಡುವ ಶಕ್ತಿ ನಮಗೆ ಹೇಗೆ ಸಿಕ್ಕಿತು ಎನ್ನುವ ಮಾಹಿತಿ ಗೊತ್ತಿಲ್ಲದಿದ್ದರೆ ಹೇಗೆ?.
Published On - 9:48 am, Mon, 1 August 22