ಬೈಕ್ ಹುಡುಕೋಕೆ ಹೋಗಿ ಸಿಕ್ತು ಕಾರು, ತೆಲಂಗಾಣ ಶಾಸಕನ ಸಂಬಂಧಿಕರ 3 ಮೃತದೇಹ ಪತ್ತೆ

ಹೈದರಾಬಾದ್: ಎಲ್ರೂ ಶಾಕ್ ಆಗಿದ್ದಾರೆ. ನಾಲೆ ಪಕ್ಕದಲ್ಲಿ ನಿಂತಿರೋರು ನಡುಗಿ ಹೋಗಿದ್ದಾರೆ. ಕೆಲವರು ಮೂಗು ಮುಚ್ಕೊಂಡು ಒಡಾಡ್ತಿದ್ದಾರೆ. ಕ್ರೇನ್​​ನಲ್ಲಿ ಕಾರನ್ನ ಮೇಲೆತ್ತಿ ಇಳಿಸ್ತಿದ್ರೆ, ಪೊಲೀಸ್ರು ಇಂಚಿಂಚು ಜಾಲಾಡ್ತಿದ್ದಾರೆ. ಅಲ್ಲೊಂದು ರಾಜಕಾರಣಿ ಕಾರು ಕೂಡ ಸೈಲೆಂಟಾಗಿ ಎಂಟ್ರಿ ಕೊಟ್ಟಿದೆ.

ತೆಲಂಗಾಣದ ಕರೀಂನಗರದಲ್ಲಿರೋ ಕಾಕತೀಯ ಕಾಲುವೆ ಯಾವಾಗ್ಲೂ ಮೈದುಂಬಿ ಹರಿಯುತ್ತಿತ್ತು. ಆದ್ರೆ, ಅವತ್ತು ನೀರು ಅಲ್ಪಮಟ್ಟಿಗೆ ಕಡಿಮೆಯಾಗಿತ್ತು. ಯಾಕಂದ್ರೆ, ಬೈಕ್ ಅಪಘಾತದ ಪ್ರಕರಣದ ತನಿಖೆಗೆ ಅಂತ ಪೊಲೀಸ್ರು ಎಂಟ್ರಿ ಕೊಟ್ಟಿದ್ರು. ಕಾಲುವೆ ನೀರನ್ನ ಕೊಂಚ ಮಟ್ಟಿಗೆ ಕಡಿಮೆ ಮಾಡಿಸಿದ್ರು.

ಆದ್ರೆ, ಬೈಕ್ ಆ್ಯಕ್ಸಿಡೆಂಟ್ ಪ್ರಕರಣ ಬೆನ್ನು ಹತ್ತಿದ್ದ ಖಾಕಿ ಪಡೆಗೆ ಬಿಗ್ ಶಾಕ್ ಕಾದಿತ್ತು. ಅದೇನಂದ್ರೆ ಕಾಲುವೆಯಲ್ಲಿ ಕಾರೊಂದು ಪತ್ತೆಯಾಗಿತ್ತು. ಗುರುತೇ ಸಿಗದಷ್ಟು ರೇಂಜಿಗೆ ಕೊಳೆತ್ತಿದ್ದ ಆ ಮೂರು ಡೆಡ್ ಬಾಡಿಗಳನ್ನ ಕಂಡು ಎಲ್ರೂ ನಡುಗಿ ಹೋಗಿದ್ರು.

ಶಾಸಕರ ಸಂಬಂಧಿಕರ ಮೃತದೇಹಗಳು ನಾಲೆಯಲ್ಲಿ ಪತ್ತೆ..!
ಬೈಕ್ ಅಪಘಾತದ ಕೇಸ್ ಬೆನ್ನು ಹತ್ತಿದ್ದ ತೆಲಂಗಾಣ ಪೊಲೀಸ್ರಿಗೆ ಯಾವಾಗ ಈ ಭಯಾನಕ ದೃಶ್ಯ ಕಣ್ಣಿಗೆ ಬಿತ್ತೋ ಕ್ರೇನ್ ತರಿಸಿ ಕಾರನ್ನ ಮೇಲಕ್ಕೆ ಎತ್ತಿಸಿದ್ರು. ಆದ್ರೆ, ಕಾರಿನಲ್ಲಿದ್ದ 3 ಮೃತದೇಹಗಳು ಯಾರದ್ದು ಅನ್ನೋದನ್ನ ಪತ್ತೆ ಹಚ್ಚೋದು ಸವಾಲಾಗಿತ್ತು.

ಅದ್ಯಾವಾಗ ಕಾರಿನ ನಂಬರ್ ಪ್ಲೇಟ್ ವಿವರ ಸರ್ಚ್ ಮಾಡಿದ್ರೋ ಮೃತಪಟ್ಟವರು ಶಾಸಕರೊಬ್ಬರ ಸಂಬಂಧಿಕರು ಅನ್ನೋ ಬೆಚ್ಚಿ ಬೀಳಿಸೋ ಸಂಗತಿ ಬಯಲಾಗಿದೆ. ಮೃತರೆಲ್ಲರೂ ಕರೀಮ್​​ನಗರ ಜಿಲ್ಲೆಯ ಶಾಸಕ ದಾಸರಿ ಮನೋಹರರೆಡ್ಡಿ ಸಹೋದರಿ ರಾಧಿಕಾ, ಆಕೆ ಪತಿ ನಾಗರೆಡ್ಡಿ ಸತ್ಯನಾರಾಯಣ ಹಾಗೂ ಪುತ್ರಿ ವಿನಯಶ್ರೀ ಅನ್ನೋ ಅಸಲಿ ವಿಚಾರ ಗೊತ್ತಾಗಿದೆ. ಈ ಸಾವಿನ ಸುತ್ತ ಅನುಮಾನಗಳ ಹುತ್ತ ಹರಿದಾಡ್ತಿದೆ.

ಇನ್ನು ಜನವರಿ 27ರಂದು ಹೈದರಾಬಾದ್​​​ನಿಂದ ಕರೀಂನಗರಕ್ಕೆ ಮೂರು ಜನ ಹೊರಟಿದ್ರಂತೆ. ಆದ್ರೆ, ದಿಢೀರ್ ನಾಪತ್ತೆಯಾಗಿದ್ರೂ ಯಾರೂ ಕೂಡ ಲಿಖಿತ ದೂರು ನೀಡಿರ್ಲಿಲ್ವಂತೆ. ಆದ್ರೆ ಅಂದಾಜು 20 ದಿನಗಳ ಬಳಿಕ ಕಾಕತೀಯ ಕಾಲುವೆಯಲ್ಲಿ ಈ ಮೂವರ ಮೃತದೇಹ ಪತ್ತೆಯಾಗಿರೋದು ಸಾಕಷ್ಟು ಅನುಮಾನ ಸೃಷ್ಟಿಸಿದೆ. ಇದು ಅಪಘಾತವೋ.. ಕೊಲೆಯೋ ಅನ್ನೋದು ನಿಗೂಢವಾಗಿದೆ.

ಒಟ್ನಲ್ಲಿ ನಾರಾಯಣರೆಡ್ಡಿ-ರಾಧಿಕಾ ದಂಪತಿ ಪುತ್ರ ಕಳೆದ ವರ್ಷ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ರಂತೆ. ಆದ್ರೀಗ, ಈ ಮೂವರ ಮೃತದೇಹ ನಾಲೆಯಲ್ಲಿ ಪತ್ತೆಯಾಗಿರೋದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಅದ್ರಲ್ಲೂ ಶಾಸಕರ ಸಹೋದರಿ ಮತ್ತವರ ಕುಟುಂಬ ದುರಂತಮಯ ಅಂತ್ಯಕಂಡಿರೋದು ತೆಲಂಗಾಣವನ್ನೇ ಬೆಚ್ಚಿ ಬೀಳಿಸಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!