ಆಚರಣೆ ಸರಳವಾಗಿದ್ದರೇನು? ಮಕ್ಕಳ ಪಾಲಿಗಂತೂ ಸ್ವಾತಂತ್ರ್ಯೋತ್ಸವ ದೊಡ್ಡ ಹಬ್ಬವೇ ಸರಿ

ಉಡುಪಿ: ಸ್ವಾತಂತ್ರ್ಯ ದಿನಾಚರಣೆ ಎಂದ ತಕ್ಷಣ ಎಲ್ಲರಿಗೂ ಅವರ ಬಾಲ್ಯದ ನೆನಪು ತೆರೆದುಕೊಳ್ಳುತ್ತೆ. ಮುಂಜಾನೆ ಎದ್ದು, ಬಿಳಿ ಯೂನಿಫಾರಂ ತೊಟ್ಟದ್ದು, ಸೆಲ್ಯೂಟ್ ಹೊಡೆದು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದು, ದೊಡ್ಡ ದೊಡ್ಡ ಬಾವುಟಗಳು ಹಾರುವುದನ್ನು ನೋಡಿದ್ದು,  ಮಿಠಾಯಿ, ಲಡ್ಡು ತಿಂದದ್ದು .. ಹೀಗೆ ನೆನಪಿನ ಬುತ್ತಿ ಬಿಚ್ಚಿಕೊಳ್ಳುತ್ತದೆ.

ಆಚರಣೆ ಎಷ್ಟೇ ಸರಳವಾಗಿದ್ದರೂ ಮಕ್ಕಳ ಹುಮ್ಮಸ್ಸು ಕಡಿಮೆಯಾಗಿರಲಿಲ್ಲ..
ಸ್ವಾತಂತ್ರ್ಯ ದಿನಾಚರಣೆಯ ಕ್ರೇಜ್ ಇವತ್ತಿಗೂ ಮಕ್ಕಳಲ್ಲಿ ಕಡಿಮೆಯಾಗಿಲ್ಲ. ಕೊರೊನಾ ಬಂದ ಕಾರಣಕ್ಕೆ ಅತ್ಯಂತ ಸರಳವಾಗಿ ಉಡುಪಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಆಚರಣೆ ಎಷ್ಟೇ ಸರಳವಾಗಿದ್ದರೂ ಮಕ್ಕಳ ಹುಮ್ಮಸ್ಸು ಕಡಿಮೆಯಾಗಿರಲಿಲ್ಲ. ಅಜ್ಜರಕಾಡು ಮೈದಾನದಲ್ಲಿ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಧ್ವಜಾರೋಹಣ ಮಾಡಿದರು.

ಜಿಲ್ಲಾಧಿಕಾರಿಗಳಿಗೆ ಧ್ವಜಾರೋಹಣ ಮಾಡುವ ಅವಕಾಶ ಸಿಗುವುದೇ ಅಪರೂಪ. ಜಿಲ್ಲಾಧಿಕಾರಿ ಜಗದೀಶ್ ಅವರು ಟಿಪ್ ಟಾಪ್ ಕೋಟು ಧರಿಸು ಬಂದಿದ್ರು. ಜಿಲ್ಲಾಧಿಕಾರಿಗಳ ಮಗಳ ಪಾಲಿಗಂತೂ ಅಪ್ಪನೇ ಹೀರೋ ಸೆಲೆಬ್ರಿಟಿ …ಸಭಾ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಓಡಿ ಹೋಗಿ ವೇದಿಕೆ ಹತ್ತಿ ತಂದೆ ಜೊತೆ ಮಗಳು ಫೋಟೋ ತೆಗೆಸಿಕೊಳ್ಳಲು ಚಡಪಡಿಸುತ್ತಿದ್ದಳು. ಹಾಗೂ ಹೀಗೂ ಕೊನೆಗೂ ಫೋಟೋ ತೆಗೆಸಿಕೊಂಡು ಖುಷಿಪಟ್ಟಳು. ಜಿಲ್ಲಾಧಿಕಾರಿಗಳ ತಮ್ಮನ ಮಗಳು ಕೂಡ ಜೊತೆಗಿದ್ದಳು.

ಖಾಕಿ ಧರಿಸಿ ಬಂದಿದ್ದ ಪುಟಾಣಿ ಎಲ್ಲರ ಗಮನ ಸೆಳೆಯಿತು..
ಖಾಕಿ ಧರಿಸಿ ಬಂದಿದ್ದ ಆ ಪುಟಾಣಿ ಮಗುವೊಂದು ಅಜ್ಜರಕಾಡು ಮೈದಾನದಲ್ಲಿ ಎಲ್ಲರ ಗಮನ ಸೆಳೆಯಿತು. ಮಯೂರಿ ಎಂಬ ಹೆಸರಿನ ಮೂರು ವರ್ಷದ ಪುಟಾಣಿಯ ಓಡಾಟ ಮಯೂರ ನರ್ತನಕ್ಕಿಂತ ಹೆಚ್ಚೇನೂ ಭಿನ್ನವಾಗಿರಲಿಲ್ಲ . ಈಕೆಯ ಜೊತೆ ಬಂದವರೆಲ್ಲಾ ಫೋಟೋ ತೆಗೆಸಿಕೊಂಡಿದ್ದು ಮಾತ್ರವಲ್ಲ ಜಿಲ್ಲಾಧಿಕಾರಿ ಜಗದೀಶ್ ತೋಳಲ್ಲಿ ಮಗುವನ್ನು ಎತ್ತಿ ಹಿಡಿದು ಪೋಸು ಕೊಟ್ಟರು.

ಸರಳ ಆಚರಣೆಯಿಂದ ಸಾರ್ವಜನಿಕರ ಪಾಲಿಗೆ ಸ್ವಾತಂತ್ರೋತ್ಸವ ಕಳೆಗುಂದಿರಬಹುದು. ಆದರೆ ಈ ಪುಟ್ಟ ಮಕ್ಕಳ ಪಾಲಿಗಂತೂ 74ನೇ ಸ್ವಾತಂತ್ರ್ಯೋತ್ಸವ ಆಚರಣೆ ನೆನಪಿನ ಪುಟದಲ್ಲಿ ಸ್ಮರಣೀಯವಾಗಿ ಉಳಿಯುತ್ತೆ.
ಹರೀಶ್ ಪಾಲೇಚ್ಚಾರ್

Related Tags:

Related Posts :

Category: