ಡಿಕೆಶಿ ಮತ್ತು ನನ್ನ ನಡುವಿನ ಸಂಬಂಧ ವಿಭಿನ್ನವಾದದ್ದು: HD ಕುಮಾರಸ್ವಾಮಿ

ಬೆಂಗಳೂರು:ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಬಿಜೆಪಿ ಸೇರುವಂತೆ ತಮಗೆ ಕರೆಯನ್ನಿತ್ತ ಮಾಜಿ ಸಚಿವ ಹಾಗೂ ಬಿಎಸ್ವೈ ಸಂಪುಟ ಸೇರಲು ಹಾತೊರೆಯುತ್ತಿರುವ ಸಿಪಿ ಯೋಗೇಶ್ವರ್ ವಿರುದ್ಧ ಸರಣಿ ಟ್ವೀಟ್ಗಳ ಮೂಲಕ ಹರಿಹಾಯ್ದಿದ್ದಾರೆ. ತಾನ್ಯಾವತ್ತೂ ಹೊಂದಾಣಿಕೆ ರಾಜಕಾರಣ ಮಾಡಿಲ್ಲ ಎಂದಿರುವ ಹೆಚ್ಡಿಕೆ, ತಮ್ಮ ಮತ್ತು ಶಿವಕುಮಾರ್ ನಡುವಿನ ಸಂಬಂಧ ವಿಭಿನ್ನವಾದ್ದು ಎಂದಿದ್ದಾರೆ.

“ನಾನು ಅಡ್ಜಸ್ಟ್ಮೆಂಟ್ ರಾಜಕಾರಣವನ್ನು ಹಿಂದೆಯೂ ಮಾಡಿಲ್ಲ. ಮುಂದೆಯೂ ಮಾಡಲ್ಲ. ಡಿ.ಕೆ. ಶಿವಕುಮಾರ್ ಮತ್ತು ನನ್ನ ನಡುವಣ ರಾಜಕಾರಣವೇ ಬೇರೆ. ವೈಯಕ್ತಿಕ ವಿಶ್ವಾಸವೇ ಬೇರೆ. ಹಿಂಬಾಗಿಲ ರಾಜಕಾರಣದ ಮೂಲಕ ನೆಲೆ ಕಂಡುಕೊಂಡವರಿಂದ ಯಾವುದೇ ಡ್ಯಾಮೇಜ್ ಮಾಡಲು ಸಾಧ್ಯವಿಲ್ಲ,” -ಹೆಚ್ ಡಿ ಕುಮಾರಸ್ವಾಮಿ

ತನ್ನ ಮತ್ತು ಶಿವಕುಮಾರ್ ನಡುವೆ ಹುಳಿ ಹಿಂಡುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ, ಆದರೆ ಅಂಥವರ ಪ್ರಯತ್ನ ಯಶಕಾಣದು ಎಂದು ಹೆಚ್ಡಿಕೆ ಹೇಳುತ್ತಾರೆ.

“ಶಿವಕುಮಾರ್ ಮತ್ತು ನಮ್ಮ ನಡುವಣ ಹಿಂದಿನ ಹಾಗೂ ಇಂದಿನ ರಾಜಕಾರಣ ಬೇರೆ. ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ. ಎಲ್ಲರೂ ಒಂದು ಗುರಿ ಇಟ್ಟು ಕೊಂಡೇ ದುಡಿಮೆ ಮಾಡುತ್ತಾರೆ. ಈ ಮಧ್ಯೆ ಹುಳಿ ಹಿಂಡುವವರ ನಾಟಕ ಫಲಿಸದು” -ಹೆಚ್ ಡಿ ಕುಮಾರಸ್ವಾಮಿ

ಯೋಗೇಶ್ವರ್ ಅವರ ಹೆಸರು ಉಲ್ಲೇಖಿಸದೆ, ಅವರು ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ, ಆದರೆ ಅವರ ಮಸಲತ್ತುಗಳಿಗೆ ಜನ ಮರುಳಾಗರು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

“ತನ್ನ ಬೇಳೆ ಬೇಯಿಸಿಕೊಳ್ಳಲು ಮಸಾಲೆ ಅರೆಯುತ್ತಿರುವ ವ್ಯಕ್ತಿಯ ಕುತಂತ್ರ ರಾಜಕಾರಣಕ್ಕೆ ರಾಮನಗರ ಜಿಲ್ಲೆಯ ಜನತೆ ಸೊಪ್ಪು ಹಾಕುವುದಿಲ್ಲ” -ಹೆಚ್ ಡಿ ಕುಮಾರಸ್ವಾಮಿ

ಕೊರೊನಾ ಸೃಷ್ಟಿಸಿರುವ ಭಯಾನಕ ಸ್ಥಿತಿಯ ಹಿನ್ನೆಲೆಯಲ್ಲಿ ಸರ್ಕಾರದ ಪರ ಮಾತಾಡಿರುವುದನ್ನೇ ತಾನು ಬಿಜೆಪಿ ಕಡೆ ವಾಲಿದ್ದ್ದೇನೆನ್ನುವುದು ಕೀಳು ಅಭಿರುಚಿಯ ಪ್ರತೀಕ ಅಂತ ಕುಮಾರಸ್ವಾಮಿ ಹೇಳಿದ್ದಾರೆ.

“ನೆರೆಹಾವಳಿ, ಕೊರೋನಾ ಸಂಕಷ್ಟ ಸಮಯದಲ್ಲಿ ರಾಜಕಾರಣ ಬಿಟ್ಟು ರಾಜ್ಯದ ಜನತೆಯ ಹಿತಕಾಯುವ ದೃಷ್ಟಿಯಿಂದ ಸರ್ಕಾರಕ್ಕೆ ಬೆಂಬಲ ಇದೆ ಎಂದಾಕ್ಷಣ ಅದನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸುವ ಕೀಳು ಅಭಿರುಚಿಯ ಹೇಳಿಕೆ ನೀಡುವುದು ಯಾರಿಗೂ ಶೋಭೆ ತರುವುದಿಲ್ಲ” -ಹೆಚ್ ಡಿ ಕುಮಾರಸ್ವಾಮಿ

ಅಂತಿಮವಾಗಿ, ಮಾಜಿ ಮುಖ್ಯಮಂತ್ರಿಗಳು ಶರಣರ ವಚನಗಳೊಂದಿಗೆ ಅತ್ಯಂತ ಮಾರ್ಮಿಕವಾಗಿ ತಮ್ಮ ಟ್ವೀಟ್ ಸರಣಿಯನ್ನು ಮುಗಿಸುತ್ತಾರೆ.

“ತನಗೆ ಮುನಿದವರಿಗೆ ತಾ ಮುನಿಯಲೇಕಯ್ಯಾ? ತನಗಾದ ಆಗೇನು? ಅವರಿಗಾದ ಚೇಗೆಯೇನು? ತನುವಿನ ಕೋಪ ತನ್ನ ಹಿರಿಯತನದ ಕೇಡು. ಮನದ ಕೋಪ ತನ್ನ ಅರಿವಿನ ಕೇಡು. ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯಸುಡದು, ಕೂಡಲಸಂಗಮದೇವಾ” -ಹೆಚ್ ಡಿ ಕುಮಾರಸ್ವಾಮಿ

ಕುಮಾರಸ್ವಾಮಿಯವರ ಆಕ್ರಮಣಕ್ಕೆ ಯೋಗೇಶ್ವರ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

Related Tags:

Related Posts :

Category:

error: Content is protected !!