ಭಾರತದ ಯಾವ ಹುಲಿಯೂ ಮಾಡಿರದ ಸಾಧನೆಯನ್ನು ಈ ಹುಲಿರಾಯ ಮಾಡವ್ನೆ! ಏನದು?

  • sadhu srinath
  • Published On - 16:18 PM, 18 Nov 2020

ಕೂತಲ್ಲಿ ಕೂರಲ್ಲ, ನಿಂತಲ್ಲಿ ನಿಲ್ಲಲ್ಲ… ತ್ರಿಲೋಕ ಸಂಚಾರಿ ಹಂಗೆ ಓಡಾಡ್ತಾನೆ ಅನ್ನೋ ಮಾತು ಈ ಹುಲಿರಾಯನಿಗೆ ಸರಿ ಹೊಂದಬಹುದೇನೋ! ಏಕೆಂದರೆ ಇದುವರೆಗೂ ಭಾರತದ ಯಾವ ಹುಲಿಯೂ ಮಾಡಿರದ ಸಾಧನೆಯೊಂದನ್ನು ಈ ಹುಲಿ ಮಾಡಿದೆ. ಅಂದಹಾಗೆ ಈ ಸಾಧನೆಯನ್ನು ನೋಡಿ ಅರಣ್ಯಾಧಿಕಾರಿಗಳು ಹುಲಿಗೆ ಇಟ್ಟ ಹೆಸರು ವಾಕರ್.

9 ತಿಂಗಳಲ್ಲಿ 3 ಸಾವಿರ ಕಿ.ಮೀ. ಅಡ್ಡಾಡಿದ ಹುಲಿರಾಯ!
ಜೂನ್ 2019ರಂದು ಮಹಾರಾಷ್ಟ್ರದ ಅಭಯಾರಣ್ಯವೊಂದರಿಂದ ಹೊರಟ ಮೂರೂವರೆ ವರ್ಷದ ವಾಕರ್ ಒಂಭತ್ತು ತಿಂಗಳ ನಂತರ ಅಂದರೆ ಮಾರ್ಚ್ 2020ಕ್ಕೆ ಮಹಾರಾಷ್ಟ್ರಕ್ಕೆ ಮರಳಿ ಬಂದಿದೆ. ಈ ಒಂಬತ್ತು ತಿಂಗಳ ಅವಧಿಯಲ್ಲಿ ಮಹಾರಾಷ್ಟ್ರದ ಏಳು ಜಿಲ್ಲೆಗಳನ್ನು ದಾಟಿ ಪಕ್ಕದ ತೆಲಂಗಾಣದಲ್ಲಿ ಓಡಾಡಿ ಬಂದಿರುವ ಹುಲಿ ಕ್ರಮಿಸಿರುವ ಒಟ್ಟು ದೂರ ಬರೋಬ್ಬರಿ ಮೂರು ಸಾವಿರ ಕಿ.ಮೀ!

ಕಾಲರ್ ಐಡಿ ಮೂಲಕ ವಾಕರ್​ನ ಚಲನವಲನಗಳನ್ನು ಪತ್ತೆ ಹಚ್ಚಿದ ಅರಣ್ಯಾಧಿಕಾರಿಗಳು ಈ ಹುಲಿ ಸುತ್ತಾಡಿದ ಪರಿಯನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಆಹಾರ, ಸಂಗಾತಿ ಹಾಗೂ ಸೂಕ್ತ ನೆಲೆಯನ್ನು ಅರಸಿ ಇಷ್ಟು ಓಡಾಡಿರುವ ಸಾಧ್ಯತೆ ಇದೆಯೆಂದು ಊಹಿಸಲಾಗಿದೆ.

ಇನ್ನೂ ಎಷ್ಟು ದೂರ ಕ್ರಮಿಸಲಿದೆಯೋ!?
ಸದ್ಯ 205 ಚ.ಕಿ.ಮೀ ವ್ಯಾಪ್ತಿಯ ಜ್ಞಾನಗಂಗಾ ಅಭಯಾರಣ್ಯದಲ್ಲಿ ನೆಲೆಸಿರುವ ವಾಕರ್ ಈ ಭಾಗದಲ್ಲಿ ನೆಲೆಸಿರುವ ಏಕೈಕ ಹುಲಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಾಲರ್ ಐಡಿ ಜೋಡಿಸಿದ ಕಾರಣ ಹುಲಿಯ ಓಡಾಟದ ಕುರಿತು ಮಾಹಿತಿ ಲಭಿಸಿದೆ. ಇದಕ್ಕೂ ಮುನ್ನ ಬೇರೆ ಹುಲಿಗಳು ಇಷ್ಟು ದೂರ ಚಲಿಸಿರಬಹುದು ಎಂಬ ಅಭಿಪ್ರಾಯ ಇದೆಯಾದರೂ ಅದರ ಸಾಧ್ಯತೆ ಬಹಳ ಕಡಿಮೆ ಎಂಬ ಮಾತು ಸಹ ಕೇಳಿಬರುತ್ತಿದೆ.
-ಸ್ಕಂದ ಕೆ.ಎನ್.