ವೈಫಲ್ಯದ ಹೊಣೆಗಾರಿಕೆ ಹೊತ್ತು ಕೊಹ್ಲಿ ಆರ್​ಸಿಬಿಯ ನಾಯಕತ್ವ ತ್ಯಜಿಸಬೇಕು: ಗಂಭೀರ್ | Time for Kohli to step down from RCB captaincy: Gambhir

  • TV9 Web Team
  • Published On - 19:37 PM, 7 Nov 2020

ಭಾರತದ ಮಾಜಿ ಆರಂಭ ಆಟಗಾರ ಮತ್ತು ಕೊಲ್ಕತಾ ನೈಟ್ ರೈಡರ್ಸ್ ಟೀಮಿಗೆ ನಾಯಕನಾಗಿ ಎರಡು ಸಲ ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ಗೌತಮ್ ಗಂಭೀರ್, ಮತ್ತೊಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಕ್ಯಾಪ್ಟನ್ ವಿರಾಟ್ ಕೊಹ್ಲಿ ವಿರುದ್ಧ ಟೀಕಾ ಪ್ರಹಾರ ಮುಂದುವರಿಸಿ ಅವರನ್ನು ಅರ್​ಸಿಬಿಯ ನಾಯಕತ್ವದಿಂದ ಕೆಳಗಿಳಿಸಬೇಕು ಎಂದಿದ್ದಾರೆ.

ಕ್ರೀಡಾ ಚ್ಯಾನೆಲೊಂದರ ಜೊತೆ ನಡೆಸಿರುವ ಮಾತುಕತೆಯಲ್ಲಿ ಗಂಭೀರ್, ‘ನಾಯಕತ್ವದ ವಿಷಯದಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮ ಅವರೊಂದಿಗೆ ವಿರಾಟ್ ಕೊಹ್ಲಿಯವರನ್ನು ತುಲನೆ ಮಾಡಿವುದು ಸಾಧ್ಯವೇ ಇಲ್ಲ. ಶರ್ಮ 5ನೇ ಬಾರಿ ಮುಂಬೈ ಇಂಡಿಯನ್ಸ್​ಗೆ ಐಪಿಎಲ್ ಚಾಂಪಿಯನ್​ಶಿಪ್ ಗೆಲ್ಲುವ ಹೊಸ್ತಿಲಲ್ಲಿದ್ದರೆ, ಧೋನಿ ಮೂರು ಬಾರಿ ಅದನ್ನು ಚೆನೈ ಸೂಪರ್ ಕಿಂಗ್ಸ್ ಟೀಮಿಗೆ ಗೆದ್ದುಕೊಟ್ಟಿದ್ದಾರೆ. ಕೊಹ್ಲಿ ಆರ್​ಸಿಬಿ ಟೀಮಿನ ನಾಯಕನಾಗಿ 8 ವರ್ಷಗಳು ಕಳೆದಿವೆ, ಇದುವರೆಗೆ ಅವರು ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಆದಾಗ್ಯೂ ಅವರನ್ನು ನಾಯಕನ ಸ್ಥಾನದಲ್ಲಿ ಮುಂದುವರಿಸಲಾಗಿದೆ. ಬೇರೆ ಯಾವುದೇ ಟೀಮಿನಲ್ಲೂ ಇಂಥದ್ದು ಕಾಣಸಿಗುವುದಿಲ್ಲ,’ ಎಂದಿದ್ದಾರೆ.

ಕೆಕೆಆರ್ ಟೀಮಿಗೆ 2012 ಮತ್ತು 2014ರಲ್ಲಿ ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ಗಂಭೀರ್, ಕೊಹ್ಲಿಯನ್ನು ಅಗಾಗ್ಗೆ ಟೀಕಿಸುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ, ಕೊಹ್ಲಿಯೊಂದಿಗೆ ತನಗೆ ಯಾವುದೇ ಹಗೆತನವಿಲ್ಲವೆಂದು 2011 ರಲ್ಲಿ ವಿಶ್ವಕಪೆ್ ಗೆದ್ದ ಭಾರತದ ಟೀಮಿನ ಸದಸ್ಯರಾಗಿದ್ದ ಗಂಭೀರ್ ಹೇಳಿದ್ದಾರೆ.

‘‘ವಸ್ತುಸ್ಥಿತಿಯನ್ನು ನಾನು ವಿಶ್ಲೇಷಿಸುವ ಪ್ರಯತ್ನ ಮಾಡುತ್ತಿದ್ದೇನೆ. ಕೊಹ್ಲಿಯ ಬಗ್ಗೆ ನನಗ್ಯಾವ ದ್ವೇಷವೂ ಇಲ್ಲ. ಒಮ್ಮೆ ಯೋಚಿಸಿ ನೋಡಿ, ರವಿಚಂದ್ರನ್ ಅಶ್ವಿನ್ ಅವರು ಕೇವಲ ಎರಡು ಸೀಸನ್​ಗಳಿಗೆ ಮಾತ್ರ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿದ್ದರು. ಅವರ ನೇತೃತ್ವದಲ್ಲಿ ಟೀಮಿನ ಪ್ರದರ್ಶನಗಳು ಕಳಾಹೀನವಾಗಿದ್ದರಿಂದ ಅವರನ್ನು ನಾಯಕತ್ವದಿಂದ ಮಾತ್ರವಲ್ಲ ಟೀಮಿನಿಂದಲೇ ಕೈಬಿಡಲಾಯಿತು. ಟ್ರೋಫಿ ಗೆಲ್ಲದೆ ಹೋಗಿದ್ದರೆ ರೋಹಿತ್ ಅವರನ್ನಾಗಲೀ , ಧೋನಿಯನ್ನಾಗಲೀ ನಾಯಕತ್ವದಲ್ಲಿ ಮುಂದುವರಿಸಲಾಗುತ್ತಿತ್ತೇ? ಖಂಡಿತವಾಗಿಯೂ ಇಲ್ಲ,’’ ಎಂದು ಗಂಭೀರ್ ಹೇಳಿದ್ದಾರೆ.

‘‘ಟೀಮಿನ ನಾಯಕನಾದವನು, ಯಶಸ್ಸಿನ ಶ್ರೇಯಸನ್ನು ಬಾಚಿಕೊಳ್ಳುವಂತೆ ಸೋಲಿನ ಹೊಣೆಗಾರಿಕೆಯನ್ನೂ ಅಂಗೀಕರಿಸಬೇಕು. 8 ವರ್ಷಗಳ ಅವಧಿ ಚಿಕ್ಕದಲ್ಲ. ಖುದ್ದು ಕೊಹ್ಲಿಯವರೇ ತಮ್ಮ ವೈಫಲ್ಯವನ್ನು ಒಪ್ಪಿಕೊಂಡು ನಾಯಕತ್ವದ ಸ್ಥಾನದಿಂದ ಕೆಳಗಿಳಿಯಬೇಕು. ಐಪಿಎಲ್ 2020ರಲ್ಲಿ ಅವರ ಟೀಮಿನ ಪ್ರದರ್ಶನ ನೀರಸವಾಗಿವೆ. ಆರ್​ಸಿಬಿ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್ ಅವರನ್ನು ಮಾತ್ರ ನೆಚ್ಚಿಕೊಂಡಿದೆ. ಎಬಿಡಿ ಏಕಾಂಗಿಯಾಗಿ 2-3 ಪಂದ್ಯಗಳನ್ನು ಗೆದ್ದುಕೊಟ್ಟರು. ಒಮ್ಮೆ ಯೋಚಿಸಿ ನೋಡಿ, ಅವರಿಲ್ಲದೆ ಹೋಗಿದ್ದರೆ ಆರ್​ಸಿಬಿಯ ಸ್ಥಿತಿ ಏನಾಗುತಿತ್ತು? ಕೇವಲ ಒಬ್ಬ ಆಟಗಾರನ ಉತ್ಕೃಷ್ಟ ಪ್ರದರ್ಶನಗಳಿಂದ ಪ್ಲೇ ಆಫ್ ಹಂತ ಪ್ರವೇಶಿಸುವ ಟೀಮು ಪ್ರಶಸ್ತಿ ಗೆಲ್ಲುವ ಕನಸು ಕಾಣುವುದು ಹಾಸ್ಯಾಸ್ಪದ,’’ ಎಂದು ಗಂಭೀರ್ ಹೇಳಿದ್ದಾರೆ.