CM of Karnataka
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ರಾಜ್ಯದ ಸರಕಾರದ ಮುಖ್ಯಸ್ಥರಾಗಿರುತ್ತಾರೆ. ಅಲ್ಲದೇ ಮುಖ್ಯಮಂತ್ರಿಯು ರಾಜ್ಯದ ಕಾರ್ಯಾಂಗದ ಮುಖ್ಯಸ್ಥರು ಹೌದು. ಮುಖ್ಯಮಂತ್ರಿಯನ್ನು ರಾಜ್ಯದ ವಿಧಾನ ಸಭೆಯಲ್ಲಿ ಬಹುಮತ ಪಡೆದ ಪಕ್ಷ ಅಥವಾ ಪಕ್ಷಗಳ ಒಕ್ಕೂಟದ ಶಾಸಕರು ಆರಿಸುತ್ತಾರೆ. ಇವರ ಅಧಿಕಾರಾವಧಿ ಐದು ವರ್ಷ, ಪುನರಾಯ್ಕೆಯಾಗುವ ಅವಕಾಶವಿರುತ್ತದೆ.
ಮುಖ್ಯಮಂತ್ರಿಯ ಸಲಹೆಯ ಮೇರೆಗೆ ರಾಜ್ಯಪಾಲರು ಇತರ ಸಚಿವರನ್ನು ನೇಮಿಸುತ್ತಾರೆ. ಮುಖ್ಯಮಂತ್ರಿಗಳು ತಮ್ಮ ಸಹೋದ್ಯೋಗಿಗಳ ಪಟ್ಟಿಯನ್ನು ಸಿದ್ಧಪಡಿಸುವಲ್ಲಿ ಮುಕ್ತ ಹಸ್ತವನ್ನು ಹೊಂದಿದ್ದಾರೆ. ರಾಜ್ಯಪಾಲರು ಸಚಿವಾಲಯಕ್ಕೆ ಸೇರಿಸಬೇಕಾದ ಶಾಸಕರ ಹೆಸರನ್ನು ಸೂಚಿಸಬಹುದು, ಆದರೆ ಅವರು ಯಾವುದೇ ಶಾಸಕರನ್ನು ಸಚಿವಾಲಯಕ್ಕೆ ಸೇರಿಸಿಕೊಳ್ಳಲು ಒತ್ತಾಯಿಸುವಂತಿಲ್ಲ. ಮುಖ್ಯಮಂತ್ರಿಗಳ ಸಲಹೆಯ ಮೇರೆಗೆ ರಾಜ್ಯಪಾಲರು ಮಂತ್ರಿಗಳಿಗೆ ಇಲಾಖೆಗಳು ಅಥವಾ ಖಾತೆಗಳನ್ನು ನಿಯೋಜಿಸುತ್ತಾರೆ.
ಸರ್ಕಾರ ವಾಸ್ತವವಾಗಿ ಮುಖ್ಯಮಂತ್ರಿಯ ಮೇಲೆ ಅವಲಂಬಿತವಾಗಿದೆ. ಆದ್ದರಿಂದ, ಮುಖ್ಯಮಂತ್ರಿಗಳು ತಮ್ಮ ಸಚಿವ ಸಂಪುಟಕ್ಕೆ ತಮಗೆ ಬೇಕಾದ ಪಕ್ಷದ ಶಾಸಕರುಗಳನ್ನು ಸೇರಿಸಿಕೊಳ್ಳಬಹುದು. ಅಲ್ಲದೇ ಸಚಿವರ ಸಭೆ, ಸಚಿವ ಸಂಪುಟ ಪುನರ್ ರಚನೆ ಮಾಡಿಕೊಳ್ಳಬಹುದು. ಅಲ್ಲದೇ ಸಚಿವರ ರಾಜೀನಾಮೆ ಪಡೆಯುವ ಅಧಿಕಾರ ಸಿಎಂ ಹೊಂದಿರುತ್ತಾರೆ. ಒಂದು ವೇಳೆ ಮಂತ್ರಿ ರಾಜೀನಾಮೆ ನೀಡಲು ನಿರಾಕರಿಸಿದರೆ ಸಿಎಂ, ರಾಜ್ಯಪಾಲರಿಂದ ವಜಾಗೊಳಿಸಬಹುದು.