ಮನನೊಂದ ಮಹಿಳೆ ಸಾಬರಮತಿ ನದಿಗೆ ಹಾರಿ ಆತ್ಮಹತ್ಯೆ; ಸಾವಿಗೂ ಮುನ್ನ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಇದು ಬಹಳ ಸುಂದರ ನದಿಯಾಗಿದೆ. ಈ ನದಿ ನನ್ನನ್ನು ಸ್ವೀಕರಿಸುತ್ತದೆ ಎಂದು ನಾನು ನಂಬುತ್ತೇನೆ. ನಾನು ಗಾಳಿಯಂತೆ ತೇಲಲು ಬಯಸುತ್ತೇನೆ. ಇಂದು ಖುಷಿಯಾಗಿದ್ದೇನೆ. ಸ್ವರ್ಗಕ್ಕೆ ಹೋಗುತ್ತೇನೋ ಇಲ್ಲವೋ ಗೊತ್ತಿಲ್ಲ. ನಿಮ್ಮ ಪ್ರಾರ್ಥನೆಗಳಲ್ಲಿ ನನ್ನನ್ನು ನೆನೆದುಕೊಳ್ಳಿ ಎಂದು ಆಯೆಷಾ ಹೇಳಿದ್ದಾರೆ.

  • TV9 Web Team
  • Published On - 12:49 PM, 1 Mar 2021
ಮನನೊಂದ ಮಹಿಳೆ ಸಾಬರಮತಿ ನದಿಗೆ ಹಾರಿ ಆತ್ಮಹತ್ಯೆ; ಸಾವಿಗೂ ಮುನ್ನ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಆತ್ಮಹತ್ಯೆ ಮಾಡಿಕೊಂಡ ಆಯೆಷಾ

ಆಯೆಷಾ ಆರಿಫ್ ಖಾನ್ ಎಂಬ ಮಹಿಳೆ ತಾನು ಯಾಕೆ ಸಾಯುತ್ತಿದ್ದೇನೆ ಎಂದು ತಿಳಿಸಿ, ಬಳಿಕ ಸಾಬರಮತಿ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಗುಜರಾತ್​ನಲ್ಲಿ ನಡೆದಿದೆ. ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಆಯೆಷಾ ತನ್ನ ಮೊಬೈಲ್​ನಲ್ಲಿ ವೀಡಿಯೋ ಮಾಡಿಕೊಂಡಿದ್ದಾಳೆ. ತಾನು ತನ್ನಿಚ್ಛೆಯಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಯಾರು ಕೂಡ ಯಾವುದೇ ಕಾರಣಕ್ಕೆ ನನಗೆ ಒತ್ತಡ ಹೇರಿಲ್ಲ ಎಂದು ತಿಳಿಸಿದ್ದಾಳೆ.

ಜೀವ ಕಳೆದುಕೊಳ್ಳುವ ನಿರ್ಧಾರ ಮಾಡಿಕೊಂಡು, ನದಿಗೆ ಜಿಗಿಯುವ ಮುನ್ನ ಆಯೆಷಾ ವೀಡಿಯೋ ಮಾಡಿ, ಮಾತನಾಡಿದ್ದಾಳೆ. ತನ್ನ ಇಚ್ಚೆಯಂತೆ ಹೀಗೆ ಮಾಡಿಕೊಳ್ಳುತ್ತಿದ್ದೇನೆ. ಜತೆಗೆ ತಂದೆಗೂ ಒಂದು ಸಂದೇಶವನ್ನು ಹೇಳಿ ಆತ್ಮಹತ್ಯೆ ಮಾಡಿದ್ದಾಳೆ. ನಾನು ಸಂತೋಷವಾಗಿದ್ದೇನೆ. ನನಗೆ ಶಾಂತವಾಗಿ ಸಾಯಬೇಕು ಎಂದು ಅನಿಸಿದೆ. ನನಗೆ ಬದುಕಿಗಾಗಿ ಹೋರಾಡುವುದು ಬೇಕಿಲ್ಲ ಎಂದು ಹೇಳಿದ್ದಾಳೆ. ನಾನು ನಿಮ್ಮನ್ನು ಪ್ರೀತಿಸುತ್ತೇನೆ ಆರಿಫ್ (I love Arif) ಎಂದು ಗಂಡನಿಗೆ ತಿಳಿಸಿದ್ದಾಳೆ. ಸಾವಿನ ನಿರ್ಧಾರ ಕೈಗೊಳ್ಳುವ ಮೊದಲು ತನ್ನ ಗಂಡನಿಗೆ ಆಯೆಷಾ ಕರೆ ಮಾಡಿದ್ದಾಳೆ.

ಘಟನೆಯ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಯೆಷಾ ಗಂಡನ ವಿರುದ್ಧ ಕ್ರಿಮಿನಲ್ ಪ್ರಕರಣವನ್ನೂ ದಾಖಲಿಸಿಕೊಂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಯೆಷಾ ಮೃತದೇಹವನ್ನು ನದಿಯಿಂದ ಹೊರತೆಗೆದಿದ್ದಾರೆ. ಬಳಿಕ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಮೂಲಗಳ ಮಾಹಿತಿ ಪ್ರಕಾರ, ಆಯೆಷಾ 2018ರಲ್ಲಿ, ರಾಜಸ್ಥಾನದಲ್ಲಿ ವಾಸವಿರುವ ಆರಿಫ್ ಖಾನ್ ಎಂಬಾತನನ್ನು ವರಿಸಿದ್ದರು. ಆ ಬಳಿಕ ಆಯೆಷಾಗೆ ಗಂಡ ಮತ್ತು ಗಂಡನ ಮನೆಯವರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂದು ತಿಳಿದುಬಂದಿದೆ. ಆಯೆಷಾ ತನ್ನ ಗಂಡನ ಸಹಿತ ಕಿರುಕುಳ ನೀಡಿದ್ದವರ ವಿರುದ್ಧ ಪ್ರಕರಣ ದಾಖಲಿಸಿದ್ದಳು. ಅತ್ತೆ, ಮಾವನ ವಿರುದ್ಧ ವಾತ್ವಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಳು. ಹಿಂಸೆ ನೀಡಿರುವ ಬಗ್ಗೆ ಕೋರ್ಟ್​ನಲ್ಲೂ ದಾವೆ ಹೂಡಿದ್ದರು. ನಂತರ ಆಯೆಷಾ ಬ್ಯಾಂಕ್ ಒಂದರ ಮ್ಯೂಚುವಲ್ ಫಂಡ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.

ವೀಡಿಯೋದಲ್ಲಿ ಆಯೆಷಾ ಏನೇನು ಹೇಳಿದ್ದಾಳೆ?
ಸಾವಿಗೂ ಮುನ್ನ ಮಾಡಿದ್ದ ವೀಡಿಯೋದಲ್ಲಿ ಆಯೆಷಾ ಮಾತನಾಡಿದ್ದಾಳೆ. ‘ಪ್ರೀತಿಯ ಅಪ್ಪಾ, ನೀವು ನಿಮಗಾಗಿ ಯಾವಾಗ ಹೋರಾಡುತ್ತೀರಿ? ಆಯೆಷಾಗೆ ಹೋರಾಡುವುದು ಬೇಕಾಗಿಲ್ಲ. ಆರಿಫ್​ಗೆ ಸ್ವಾತಂತ್ರ್ಯ ಬೇಕಿದ್ದರೆ ಈಗ ಅವನು ಸ್ವತಂತ್ರ್ಯವಾಗೇ ಇದ್ದಾನೆ. ನಾವು ನಮ್ಮ ಬದುಕನ್ನು ಬದುಕೋಣ. ಇದೇ ನನಗೆ ಅವಕಾಶ. ನಾನು ಖುಷಿಯಾಗಿದ್ದೇನೆ. ಅಲ್ಲಾನನ್ನು ಭೇಟಿಯಾಗುತ್ತೇನೆ. ನಾನು ಎಲ್ಲಿ ತಪ್ಪಿದೆ ಎಂದು ಅವನಲ್ಲಿ ಹೇಳಿಕೊಳ್ಳುತ್ತೇನೆ’ ಎಂದು ತಿಳಿಸಿದ್ದಾಳೆ.

‘ನನಗೆ ಹೆಚ್ಚೇನೂ ಹೇಳಲು ಉಳಿದಿಲ್ಲ. ಭಗವಂತ ನನಗೆ ಸಣ್ಣ ಜೀವನ ಕೊಟ್ಟಿದ್ದಾನೆ ಎಂದಷ್ಟೇ ಅರ್ಥಮಾಡಿಕೊಳ್ಳಿ’ ಎಂದು ಕೊನೆಯದಾಗಿ ಹೇಳಿಕೊಂಡಿದ್ದಾಳೆ. ‘ನಾವು ಪ್ರೀತಿ ಎಂದು ಸುಖಾಸುಮ್ಮನೆ ಹೋಗಬಾರದು. ದಾರಿ ತಪ್ಪಬಾರದು. ಕೆಲವರ ಹಣೆಬರಹ ಹೇಗಿರುತ್ತದೆ ಎಂದರೆ, ಮದುವೆಯ ಬಳಿಕವೂ ಅವರ ಪ್ರೀತಿ ಪೂರ್ಣವಾಗುವುದಿಲ್ಲ ’ ಎಂದು ಹೇಳಿದ್ದಾರೆ.

ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸಾಬರಮತಿ ನದಿಯ ಬಗ್ಗೆಯೂ ಅವರು ಮಾತನಾಡಿದ್ದಾರೆ. ಇದು ಬಹಳ ಸುಂದರ ನದಿಯಾಗಿದೆ. ಈ ನದಿ ನನ್ನನ್ನು ಸ್ವೀಕರಿಸುತ್ತದೆ ಎಂದು ನಾನು ನಂಬುತ್ತೇನೆ. ನಾನು ಗಾಳಿಯಂತೆ ತೇಲಲು ಬಯಸುತ್ತೇನೆ. ಇಂದು ಖುಷಿಯಾಗಿದ್ದೇನೆ. ಸ್ವರ್ಗಕ್ಕೆ ಹೋಗುತ್ತೇನೋ ಇಲ್ಲವೋ ಗೊತ್ತಿಲ್ಲ. ನಿಮ್ಮ ಪ್ರಾರ್ಥನೆಗಳಲ್ಲಿ ನನ್ನನ್ನು ನೆನೆದುಕೊಳ್ಳಿ ಎಂದು ಆಯೆಷಾ ಹೇಳಿದ್ದಾರೆ.

ಇದನ್ನೂ ಓದಿ: ಎಕ್ಸಾಂ ಗೊಂದಲ? ವಿ.ವಿ.ಪುರಂ ಬಿಐಟಿ ಕಾಲೇಜು ಕಟ್ಟಡದಿಂದ ಜಿಗಿದು ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

Bengaluru Crime: ಫೇಸ್​ಬುಕ್ ಲೈವ್ ವಿಡಿಯೋ ಅಪ್​ಲೋಡ್ ಮಾಡಿದ ನಂತರ ವ್ಯಕ್ತಿ ಆತ್ಮಹತ್ಯೆ