World AIDS Vaccine Day 2022 : ವೇಷ ಮರೆಸಿಕೊಂಡು ಓಡಾಡುವ ಏಡ್ಸ್ ಎಂಬ ಕಳ್ಳನಿಗೆ ಲಸಿಕೆ ಕಂಡುಹಿಡಿಯುವುದು ಸುಲಭವೆ?
AIDS : ಏಡ್ಸ್ಗೆ ಔಷಧಿಗಳು ಲಭ್ಯವಿರುವ ಕಾರಣ, ಜನರಲ್ಲಿ ಸೋಮಾರಿತನ ಉಂಟಾಗಿದೆ. ಆಯಸ್ಸಿಗನುಗುಣವಾಗಿ ಬದುಕುವುದು ಸಾಧ್ಯವಾಗುತ್ತಿದೆ. ಆದರೆ ಒಂದೊಮ್ಮೆ ಏಡ್ಸ್ ವೈರಸ್ ಉಗ್ರರೂಪದಲ್ಲಿ ಉತ್ಪರಿವರ್ತನೆಯಾದರೆ?
World AIDS Vaccine Day 2022 | ವಿಶ್ವ ಏಡ್ಸ್ ಲಸಿಕಾ ದಿನ : ಏಡ್ಸ್ ನಿರ್ಮೂಲನೆಗೆ ಈತನಕ ಲಸಿಕೆ ಲಭ್ಯವಿಲ್ಲದಿದ್ದರೂ ನಾವು ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಕಾರಣ, ಜನರಲ್ಲಿ ಜಾಗೃತಿ ಮೂಡಿಸುವುದಕ್ಕೋಸ್ಕರ. ಎಚ್ಐವಿ ಏಡ್ಸ್ ಆರಂಭದ ದಿನಗಳಲ್ಲಿ ಹೇಗೆ ಬಿರುಗಾಳಿ ಉಂಟುಮಾಡಿತ್ತೋ ಅಂಥ ಭಯಂಕರ ಸ್ವರೂಪ ಈವತ್ತು ಇಲ್ಲ. ಸಾವಿನ ಪ್ರಮಾಣ ಕಡಿಮೆಯಾಗಿದೆ. ಔಷಧಿಯ ಸಹಾಯದಿಂದ ರೋಗಿಗಳು ಸಹಜ ಆಯಸ್ಸಿಗೆ ತಕ್ಕಂತೆ ಬದುಕುವ ಸಾಧ್ಯತೆ ಸೃಷ್ಟಿಯಾಗಿದೆ. ಇನ್ನು ಎಚ್ಐವಿ ಲಸಿಕೆ ತಯಾರಿಸಬೇಕೆಂದರೆ ಸಾಕಷ್ಟು ಪ್ರಮಾಣದಲ್ಲಿ ಬಂಡವಾಳ ಬೇಕು. ಇದನ್ನು ಪೂರೈಸುವವರು ಯಾರು? ಹೂಡಿಕೆಗಾಗಿ ಔಷಧಿ ಕಂಪೆನಿಗಳು ಹಿಂದೇಟು ಹಾಕುತ್ತವೆ. ಸರಕಾರವೂ ಇಂಥ ಪ್ರಯೋಗಗಳಿಗೆ ಮುಂದೆ ಬಾರದೇ ಇರಲು ಇದೂ ಒಂದು ಕಾರಣ. ಅಮೆರಿಕದಲ್ಲಿ ಮೂರು ಬೇರೆ ಬೇರೆ ಲಸಿಕೆಗಳ ಪ್ರಾಯೋಗಿಕ ಪ್ರಯೋಗಗಳಿವೆ. MRNA ಬಳಸಿಕೊಂಡು ಲಸಿಕೆ ತಯಾರಿ ಮಾಡಲಾಗಿದೆ. ಇದನ್ನೂ ಪ್ರಾಥಮಿಕ ಪ್ರಾಯೋಗಿಕ ಹಂತದಲ್ಲಿದ್ದು ಮುಂದುವರಿಕೆಗಾಗಿ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಡಾ. ನಾ ಸೋಮೇಶ್ವರ, ವೈದ್ಯ (Dr. Na Someshwar)
ಏಡ್ಸ್ ನಿರ್ಮೂಲನೆಗೆ ಸಂಬಂಧಿಸಿ ಈಗಾಗಲೇ ಮಾರುಕಟ್ಟೆಗೆ ಬಂದಿರುವ ಲಸಿಕೆಗಳು ಏಕರೂಪವಾಗಿಲ್ಲ. ಸುಮಾರು 60-70 ಜನಕ್ಕೆ ರಕ್ಷಣೆ ಕೊಡುತ್ತವೆ ಎಂದರೆ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು. ಆದರೆ ಇದು ಜನರ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ಕೊವಿಡ್ ಲಸಿಕಾ ಸಂದರ್ಭವನ್ನೇ ತೆಗೆದುಕೊಳ್ಳಿ. ನಾನು ಲಸಿಕೆ ಹಾಕಿಸಿಕೊಂಡಿದ್ದೇನೆ ನನಗೆ ಕೊವಿಡ್ ಬಾರದು ಎಂಬ ಅಶಿಸ್ತಿನಲ್ಲಿ ಓಡಾಡುತ್ತಿದ್ದರೆ ಪರಿಣಾಮ ಏನಾಗುತ್ತದೆ? ಹಾಗಾಗಿ ಲಸಿಕೆ ಹಾಕಿಸಿಕೊಂಡರೂ ಶಿಸ್ತಿನ ನಿಯಮ ಮುರಿದಾಗ ಮತ್ತೆ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಏಡ್ಸ್ ರೋಗಿಯಲ್ಲಿಯೂ ಇದೆ. ಆದ್ದರಿಂದ ಲಸಿಕೆಯನ್ನು ಬಿಡುಗಡೆ ಮಾಡಲಾಗುತ್ತಿಲ್ಲ.
ಇದನ್ನೂ ಓದಿ : HIV: ಸ್ಟೆಮ್ ಸೆಲ್ ಕಸಿ ಮೂಲಕ ಏಡ್ಸ್ನಿಂದ ಗುಣಮುಖರಾದ ಮೊಟ್ಟ ಮೊದಲ ಮಹಿಳೆ
ಇದಕ್ಕೊಂದು ಮುಖ್ಯ ತಾಂತ್ರಿಕ ಸಮಸ್ಯೆ ಇದೆ. ಈ ವೈರಸ್ ಅನ್ನು ಕಳ್ಳನೆಂದು ಭಾವಿಸೋಣ. ಅವನನ್ನು ಹಿಡಿಯಬೇಕೆಂದರೆ ಪತ್ತೆ ಹಚ್ಚಬೇಕು. ಹೇಗೆ? ಅವನ ಗುಣಲಕ್ಷಣಗಳಿಂದ. ಆದರೆ ಕಳ್ಳ ವೇಷ ಬದಲಾಯಿಸಿಕೊಂಡು ಚಲಿಸುತ್ತಿದ್ದರೆ ಹೇಗೆ ಪತ್ತೆ ಹಚ್ಚುವಿರಿ? ಅದೇ ಪರಿಸ್ಥಿತಿಯೂ ಏಡ್ಸ್ ವೈರಸ್ಸಿಗೂ ಆಗಿರುವುದು. ಈ ವೈರಸ್ಸಿಗೆ ನಿಖರ ಗುಣಲಕ್ಷಣಗಳಿಲ್ಲ. ಪ್ರತೀ ತಲೆಮಾರಿನಿಂದ ತಲೆಮಾರಿಗೆ ಇದು ಉತ್ಪರಿವರ್ತನೆಗೆ (Mutation) ಒಳಗಾಗುತ್ತಿದೆ. ಈಗ ಕಂಡುಹಿಡಿದಿರುವ ಲಸಿಕೆ ಮುಂದಿನ ತಲೆಮಾರಿನ ಹೊತ್ತಿಗೆ ನಿಷ್ಪ್ರಯೋಜಕ. ಬಿಪಿ, ಶುಗರ್ ಕಾಯಿಲೆಗೆ ಎಷ್ಟು ದಿನ ಔಷಧಿ ತೆಗೆದುಕೊಳ್ಳುತ್ತೇವೋ ಹಾಗೆಯೇ ಏಡ್ಸ್ಗೂ ಥರಾವರಿ, ಗುಣಮಟ್ಟದ ಔಷಧಿಗಳು ಲಭ್ಯ. ಒಳ್ಳೆಯ ಔಷಧಿ ಇರುವ ಕಾರಣ ಬದುಕನ್ನು ತಳ್ಳಿಕೊಂಡು ಹೋಗಬಹುದು ಎನ್ನುವ ಸೋಮಾರಿತನವೂ ಜನರಲ್ಲಿ ಉಂಟಾಗಿದೆ. ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಯೋಗ ನಿಧಾನಗತಿಯಲ್ಲಿ ಸಾಗುತ್ತಿದೆ. ಒಂದೊಮ್ಮೆ ಏಡ್ಸ್ ವೈರಸ್ ಉಗ್ರರೂಪದಲ್ಲಿ ಉತ್ಪರಿವರ್ತನೆಯಾದರೆ? ಯೋಚಿಸಬೇಕಲ್ಲವೆ.
ಇದನ್ನೂ ಓದಿ : World AIDS Day: ಏಡ್ಸ್ನ ರೋಗಲಕ್ಷಣ, ಹರಡುವಿಕೆ ಮತ್ತು ಚಿಕಿತ್ಸೆಯ ಕುರಿತು ಇಲ್ಲಿದೆ ಮಾಹಿತಿ
ಸಿಡುಬು, ಪೊಲಿಯೋದಂಥ ಕಾಯಿಲೆಗಳು ನಿರ್ನಾಮಗೊಂಡಿವೆ. ಆದರೆ ಏಡ್ಸ್ನಂಥ ಕಾಯಿಲೆ ನಿರ್ಮೂಲನವಾಗಲು ಸಾಧ್ಯವಿಲ್ಲ. ನಮ್ಮ ವರ್ತನೆಗಳಿಗೆ ಶಿಸ್ತನ್ನು ರೂಢಿಸಿಕೊಂಡರೆ ಎಚ್ ಐವಿ ಸಾಧ್ಯತೆ ಕಡಿಮೆ.