ಭುವಿಯಲ್ಲಿನ ಸಾಗರಗಳಿಗೆ ನೀರು ಬಂದಿದ್ದು ಎಲ್ಲಿಂದ?; ಇಲ್ಲಿದೆ ಕುತೂಹಲಕರ ಮಾಹಿತಿ
ಭೂಮಿಯಲ್ಲಿನ ಸಮುದ್ರಕ್ಕೆ ನೀರು ಬಂದಿದ್ದು ಎಲ್ಲಿಂದ? ಈ ಕುತೂಹಲಕರ ಪ್ರಶ್ಮೆಯ ಸುತ್ತ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಲೇ ಇದ್ದು, ಹಲವು ವಾದಗಳನ್ನು ಮಂಡಿಸಿದ್ದಾರೆ. ಇತ್ತೀಚೆಗೆ ಸಂಶೋಧಕರ ಗುಂಪೊಂದು ಭೂಮಿಯ ಹೊರಗಿನ ಮೂಲದಿಂದ ಸಾಗರ ಉದ್ಭವವಾಗಿದೆ ಎಂದು ಸ್ಪಷ್ಟಪಡಿಸಿದೆ. ಏನಿದು ಅಧ್ಯಯನ? ಇಲ್ಲಿದೆ ಮಾಹಿತಿ.
ನೀರು ಭೂಮಿಯ ಸುಮಾರು ಮುಕ್ಕಾಲು ಭಾಗವನ್ನು ಆವರಿಸಿದೆ. ಬಾಹ್ಯಾಕಾಶದಿಂದ ನೋಡಿದಾಗ ನಮ್ಮ ಗ್ರಹ ನೀಲಿ ಬಣ್ಣದಿಂದ ವಿಶಿಷ್ಟವಾಗಿ ಕಾಣಿಸುತ್ತದೆ. ಆದರೆ ನಮ್ಮ ಸಮುದ್ರಗಳನ್ನು ಪೋಷಿಸುವ ಈ ನೀರಿನ ಮೂಲ ಯಾವುದು? ಇದು ಎಲ್ಲಿಯವರೆಗೆ ಪ್ರಪಂಚವನ್ನು ಪೋಷಿಸಬಲ್ಲದು? ಎಂಬುದು ಅಧ್ಯಯನಕಾರರಿಗೆ ಆಸಕ್ತಿಯ ವಿಷಯ. ಈ ಕುರಿತು ಹಲವು ಅದ್ಯಯನಗಳು ನಡೆದಿವೆ ಮತ್ತು ಸಂಶೋಧಕರು ಭಿನ್ನ ರೀತಿಯಲ್ಲಿ ವಾದ ಮಂಡಿಸಿದ್ದಾರೆ. ಕೆಲವು ಸಂಶೋಧಕರು 4.5 ಶತಕೋಟಿ ವರ್ಷಗಳ ಹಿಂದೆ ಧೂಳು ಮತ್ತು ಅನಿಲದ ಮೋಡಗಳು ಸುತ್ತುತ್ತಾ ಒಗ್ಗೂಡಿ ನಮ್ಮ ಪ್ರಪಂಚದ ಮೇಲೆ ಕೆಲವು ರೂಪದಲ್ಲಿ ನೀರು ಬಂದಿದೆ ಎಂದು ವಾದಿಸುತ್ತಾರೆ. ಇತರ ವಿಜ್ಞಾನಿಗಳು ವಿಭಿನ್ನ ದೃಷ್ಟಿಕೋನದಲ್ಲಿ ಇದಕ್ಕೆ ಉತ್ತರಿಸುತ್ತಾರೆ. ಆರಂಭದಲ್ಲಿ ಭೂಮಿಯು ಒಣಗಿತ್ತು ಮತ್ತು ನೀರಿಲ್ಲದೆ ಮತ್ತು ನಮ್ಮ ಸಾಗರಗಳು ಬಹಳ ನಂತರ ಕಾಣಿಸಿಕೊಂಡವು. ಭೂಮ್ಯತೀತ ಮೂಲಗಳಿಂದ ನಮ್ಮ ಪ್ರಪಂಚದ ಮೇಲೆ ಮಂಜುಗಡ್ಡೆ ಮತ್ತು ನೀರು ಮಳೆಯಾದಾಗ ನೀರಿನ ಮೂಲಗಳು ಹುಟ್ಟಿಕೊಂಡವು. ಈಗಿನ ನಮ್ಮ ಗ್ರಹವನ್ನು ಆವರಿಸಿರುವ 332,500,000 ಘನ ಮೈಲುಗಳಷ್ಟು ನೀರಿಗೆ ಇವು ಕಾರಣವಾಗಿವೆ ಎಂದು ವಾದಿಸಲಾಗಿದೆ. ಪ್ರಸ್ತುತ ಈ ವಾದಕ್ಕೆ ಬ್ರಿಟಿಷ್ ವಿಜ್ಞಾನಿಗಳ ಗುಂಪು ಬೆಂಬಲ ನೀಡಿದೆ.
ಅಧ್ಯಯನ ಹೇಳಿದ್ದೇನು? ನಮ್ಮ ಸಮುದ್ರಗಳ ಮೂಲವು ಈ ಪ್ರಪಂಚದಿಂದ ಹೊರಗಿದೆ ಎಂಬ ಕಲ್ಪನೆಗೆ ಬ್ರಿಟಿಷ್ ವಿಜ್ಞಾನಿಗಳ ಗುಂಪು ಪ್ರಮುಖ ಬೆಂಬಲವನ್ನು ನೀಡಿದೆ. ಅಲ್ಲದೇ ಜಪಾನ್ ರೊಬೋಟ್ ಮೂಲಕ 25143 ಇಟೊಕಾವಾ ಎಂಬ ಕ್ಷುದ್ರಗ್ರಹದ ಧೂಳನ್ನು ತರಿಸಿ ಅಧ್ಯಯನ ನಡೆಸಲಾಗಿದ್ದು, ಬಾಹ್ಯಾಕಾಶವೇ ಸಾಗರದ ಸೃಷ್ಟಿಗೆ ಕಾರಣ ಎಂಬ ಕಲ್ಪನೆಯನ್ನು ಈ ಅಧ್ಯಯನ ಬೆಂಬಲಿಸಿದೆ.
“ನಾವು ಅಧ್ಯಯನ ಮಾಡಿದ ಧೂಳು ಸೌರವ್ಯೂಹದ ಇತರ ಭಾಗಗಳಿಂದ ಬಂದ ನೀರಿನಿಂದ ನಮ್ಮ ಸಾಗರಗಳನ್ನು ರಚಿಸಲಾಗಿದೆ ಎಂಬುದಕ್ಕೆ ಉತ್ತಮ ಪುರಾವೆಗಳನ್ನು ಒದಗಿಸುತ್ತದೆ” ಎಂದು ಗ್ಲಾಸ್ಗೋ ವಿಶ್ವವಿದ್ಯಾಲಯದ ಲ್ಯೂಕ್ ಡಾಲಿ ಹೇಳಿದ್ದಾರೆ. “ಭೂಮಿಯ ಮೇಲೆ ನಾವು ಹೊಂದಿರುವ ಕನಿಷ್ಠ ಅರ್ಧದಷ್ಟು ನೀರು ಅಂತರಗ್ರಹ ಧೂಳಿನಿಂದ ಫಿಲ್ಟರ್ ಆಗಿದೆ ಎಂದು ಇದು ಸೂಚಿಸುತ್ತದೆ” ಎಂದೂ ಅವರು ಹೇಳಿದ್ದಾರೆ.
25143 ಇಟೊಕಾವಾದಿಂದ ತರಲಾದ ಧೂಳಿನ ಕಣಗಳನ್ನು ಅಧ್ಯಯನ ಮಾಡಲು ಲ್ಯೂಕ್ ಡಾಲಿ ಮತ್ತು ಅವರ ಸಹೋದ್ಯೋಗಿಗಳು ಆಟಮ್-ಪ್ರೋಬ್ ಟೊಮೊಗ್ರಫಿಯನ್ನು ಬಳಸಿದರು. ಈ ತಂತ್ರಜ್ಞಾನವು ವಿಜ್ಞಾನಿಗಳಿಗೆ ಪರಮಾಣುಗಳನ್ನು ಮಾದರಿಗಳನ್ನು ಒಂದೊಂದಾಗಿ ಎಣಿಸಲು ಅನುವು ಮಾಡಿಕೊಡುತ್ತದೆ. ಈ ರೀತಿಯಾಗಿ, ಕ್ಷುದ್ರಗ್ರಹದಿಂದ ಮರಳಿ ತಂದ ಧಾನ್ಯಗಳಲ್ಲಿ ಗಮನಾರ್ಹ ಪ್ರಮಾಣದ ನೀರು ಇದೆ ಎಂದು ತಿಳಿದುಬಂದಿದೆ ಎಂದು ವಿಜ್ಞಾನಿಗಳು ನೇಚರ್ ಆಸ್ಟ್ರಾನಮಿ ಜರ್ನಲ್‌ನಲ್ಲಿ ಪ್ರಕಟವಾದ ಪತ್ರಿಕೆಯಲ್ಲಿ ತಿಳಿಸಿದ್ದಾರೆ.
ಈ ನೀರು ಹೆಚ್ಚಾಗಿ ಸೌರ ಮಾರುತದಿಂದ ರಚಿತವಾಗಿದೆ ಎಂದು ಲ್ಯೂಕ್ ಡಾಲಿ ಹೇಳಿದ್ದಾರೆ. ಈ ಕಣಗಳು ಸೌರವ್ಯೂಹದಲ್ಲಿ ತೇಲುತ್ತಿರುವ ಧೂಳಿನ ಮೋಡದ ಆಮ್ಲಜನಕ ಪರಮಾಣುಗಳೊಂದಿಗೆ ಸಂವಹನ ನಡೆಸಿ ನೀರಿನ ಅಣುಗಳನ್ನು ಸೃಷ್ಟಿಸುತ್ತವೆ. ನಂತರ, ಭೂಮಿಯು ಸೂರ್ಯನ ಸುತ್ತ ಸುತ್ತುತ್ತಿರುವಾಗ ಅದು ಈ ಮೋಡಗಳ ಮೂಲಕ ಮುನ್ನಡೆದು ಧೂಳಿನ ಕಣಗಳನ್ನು ಮತ್ತು ಅವುಗಳ ನೀರನ್ನು ತೇವಗೊಳಿಸುತ್ತಿತ್ತು. ಈ ರೀತಿಯಾಗಿ, ನೀರು- ‘ಎಲ್ಲಾ ಪ್ರಕೃತಿಯ ಪ್ರೇರಕ ಶಕ್ತಿ’ ಎಂದು ಲಿಯೊನಾರ್ಡೊ ಡಾ ವಿನ್ಸಿ ನುಡಿದಿದ್ದಂತೆ- ಆಕಾಶದಿಂದ ನಮ್ಮ ಗ್ರಹಕ್ಕೆ ಫಿಲ್ಟರ್ ಆಗಿದೆಯೆಂದು ಅಧ್ಯಯನದಲ್ಲಿ ವಾದಿಸಲಾಗಿದೆ.
ಭೂಮಿಯ ಮೇಲಿನ ನೀರೆಲ್ಲವೂ ಇದೇ ಮೂಲದ್ದೇ? ಗ್ಲಾಸ್ಗೋ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಮಾರ್ಟಿನ್ ಲೀ ಅವರನ್ನು ಒಳಗೊಂಡಿರುವ ಗುಂಪು, ನಮ್ಮ ಸಮುದ್ರಗಳಲ್ಲಿನ ಎಲ್ಲಾ ನೀರು ಸೌರ ಧೂಳಿನ ಕಣಗಳಿಂದ ಬಂದಿದೆ ಎಂದು ಭಾವಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಭೂಮಿಯ ಮೇಲೆ ಅಪ್ಪಳಿಸಿದ ಧೂಮಕೇತುಗಳು ಮತ್ತು ಕ್ಷುದ್ರಗ್ರಹಗಳಲ್ಲಿನ ಮಂಜುಗಡ್ಡೆಯಿಂದ ಕೂಡ ಮುಖ್ಯವಾದ ನೀರಿನ ಮೂಲಗಳು ಸೃಷ್ಟಿಯಾಗಿವೆ. ‘ಸೌರ ಧೂಳು ಮತ್ತು ಹಿಮಾವೃತ ಧೂಮಕೇತುಗಳು ನಮಗೆ ಸಾಗರಗಳನ್ನು ಒದಗಿಸಿದವು, ಅದರಲ್ಲಿ ಜೀವನವು ವಿಕಸನಗೊಂಡಿತು’ ಎಂದು ಲೀ ತಿಳಿಸಿದ್ದಾರೆ.
ಈ ಅಧ್ಯಯನದ ಮಹತ್ವವೇನು? ಈ ಆವಿಷ್ಕಾರವು ಬಹಳ ಮುಖ್ಯವಾಗಲು ಕಾರಣ, ಇದು ಭೂಮಿಯ ಮೇಲಿನ ನೀರಿನ ಮೂಲದ ಬಗ್ಗೆ ಬಲವಾದ ಪುರಾವೆಗಳನ್ನು ಒದಗಿಸುತ್ತದೆ. ಜತೆಗೆ ಸೌರವ್ಯೂಹದ ಇತರೆಡೆ ಮಂಜುಗಡ್ಡೆಯ ಸ್ವರೂಪ ನೀರಿರಬಹುದು ಎಂದು ಸೂಚಿಸುತ್ತದೆ. ಈ ಸಂಶೋಧನೆಯ ಮಹತ್ವವನ್ನು ಲ್ಯೂಕ್ ಡಾಲಿ ಮತ್ತಷ್ಟು ವಿವರಿಸಿದ್ದು, ‘‘ಇದು ಮಾನವನ ಬಾಹ್ಯಾಕಾಶ ಪರಿಶೋಧನೆಗೆ ಮುಖ್ಯವಾಗಿದೆ. ಮುಂಬರುವ ವರ್ಷಗಳಲ್ಲಿ, ನಾವು ಚಂದ್ರನ ಮೇಲೆ ನೆಲೆಯನ್ನು ಸ್ಥಾಪಿಸಿದಂತೆ, ಈ ರೀತಿಯ ನೀರಿನ ಮೂಲಗಳು ಅಮೂಲ್ಯವಾದವುಗಳಾಗಬಹುದು. ನಾವು ಸೌರವ್ಯೂಹದ ಮೂಲಕ ಪ್ರಯಾಣಿಸುವಾಗ ನಮ್ಮೊಂದಿಗೆ ನೀರನ್ನು ಸಾಗಿಸಬೇಕಾಗಿಲ್ಲ’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈಗ ಚಂದ್ರನ ದಕ್ಷಿಣ ಧ್ರುವದ ಸಮೀಪವಿರುವ ಶಾಕಲ್ಟನ್ ಕುಳಿಯಲ್ಲಿ ಮಂಜುಗಡ್ಡೆಯ ಒಂದು ನಿಕ್ಷೇಪವು ರೂಪುಗೊಂಡಿದೆ ಎಂದು ನಂಬಲಾಗಿದೆ. ಹಾಗೆಯೇ ಇದು ನಾಸಾದ ಮುಂಬರುವ ಆರ್ಟೆಮಿಸ್ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ. ಇದು ಅಲ್ಲಿ ವಸಾಹತು ಸ್ಥಾಪಿಸಲು ಮತ್ತು ಅದರ ನೀರಿನ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ. ಲ್ಯೂಕ್ ಡಾಲಿ ಈ ಸಂಶೋಧನೆಯ ಮತ್ತೊಂದು ಆಯಾಮವನ್ನೂ ತೆರೆದಿಟ್ಟಿದ್ದಾರೆ. ಭೂಮಿಯಲ್ಲದ ಮತ್ತೊಂದು ಮೂಲದಿಂದ ಭೂಮಿಗೆ ನೀರು ಬಂದಿದೆ ಎಂಬ ಅಧ್ಯಯನ ಬೇರೆ ಗ್ರಹದಲ್ಲಿ ಜೀವಿಗಳಿರಬಹುದು ಎಂಬ ವಾದಕ್ಕೆ ಪುಷ್ಠಿ ನೀಡಿದೆ. ಅಲ್ಲದೇ ಅಂತಹ ಗ್ರಹಗಳ ಹುಟುಕಾಟಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ‘ನಮ್ಮ ನಕ್ಷತ್ರಪುಂಜದಾದ್ಯಂತ, ಗ್ರಹಗಳು ರೂಪುಗೊಳ್ಳುವ ಇತರ ನಕ್ಷತ್ರ ವ್ಯವಸ್ಥೆಗಳಲ್ಲಿ ನಾವು ಧೂಳಿನ ಮೋಡಗಳನ್ನು ವೀಕ್ಷಿಸಬಹುದು. ಈ ಪ್ರಪಂಚಗಳು ನೀರಿನ ಸರಬರಾಜನ್ನು ಹೊಂದಿದ್ದು ಅದು ಸಮುದ್ರಗಳು ಮತ್ತು ಸಾಗರಗಳನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುತ್ತದೆ ಮತ್ತು ನಂತರ, ಬಹುಶಃ, ಕೆಲವು ರೀತಿಯ ಜೀವನದ ಇರುವಿಕೆಯನ್ನು ಸೂಚಿಸುತ್ತದೆ’ ಎಂದು ಅವರು ಹೇಳಿದ್ದಾರೆ. ಈ ಎಲ್ಲಾ ಕಾರಣಗಳಿಂದ ಈ ಅಧ್ಯಯನ ಮಹತ್ವ ಪಡೆದಿದೆ.
ಇದನ್ನೂ ಓದಿ:
ಈ ಗ್ರಹದಲ್ಲಿ ಪ್ರತಿ 16 ಗಂಟೆಗೊಮ್ಮೆ ಹೊಸ ವರ್ಷ!; ವಿಜ್ಞಾನಿಗಳು ಕಂಡುಹಿಡಿದ ಹೊಸ ಗ್ರಹದ ಮಾಹಿತಿ ಇಲ್ಲಿದೆ
ಮಕ್ಕಳ ಹಾಜರಾತಿ ಹೆಚ್ಚಳಕ್ಕೆ ಶಿಕ್ಷಕರಿಂದ ಹೊಸ ಪ್ರಯತ್ನ, ಅಚ್ಚರಿಯಂತೆ ಮಕ್ಕಳ ಹಾಜರಾತಿ ಏರಿಕೆ
Published On - 12:04 pm, Sun, 12 December 21