ಮನುಷ್ಯ ಭೂಮಿಯ ಮೇಲೆ ವಾಸಿಸುವುದಾದರೂ ಆತನಿಗೆ ಬಾಹ್ಯಾಕಾಶದೆಡೆಗಿನ ಆಸಕ್ತಿ ಅತೀವ. ಕಗ್ಗತ್ತಲಲ್ಲಿ ಕಾಣುವ ಉಲ್ಕಾಪಾತದಿಂದ ಹಿಡಿದು, ಧೂಮಕೇತು, ಗ್ರಹಣ, ಸೂರ್ಯ-ಚಂದ್ರರ ಚಲನವಲನ ಎಲ್ಲವೂ ಕುತೂಹಲ ಕೆರಳಿಸುವ ವಿಷಯಗಳೇ. ಕಳೆದ ಮೇ ತಿಂಗಳಿನಲ್ಲಿ ಚಂದ್ರಗ್ರಹಣ ಹಾಗೂ ನಂತರ ಜೂನ್ನಲ್ಲಿ ಸೂರ್ಯಗ್ರಹಣವೊಂದಕ್ಕೆ ಜಗತ್ತಿನ ಕೆಲ ಭಾಗಗಳ ಜನರು ಸಾಕ್ಷಿಯಾಗಿದ್ದಾರೆ. ಜೂನ್ 10ರಂದು ಘಟಿಸಿದ ಸೂರ್ಯಗ್ರಹಣವನ್ನು ಬೆಂಕಿಯ ಉಂಗುರ ಎಂದು ಬಣ್ಣಿಸಲಾಗಿದ್ದ ಕಾರಣ ಅದು ಅನೇಕ ಜನರ ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಆಕಾಶದಲ್ಲಿ ನಡೆಯಲಿರುವ ಮತ್ತೊಂದು ವಿದ್ಯಮಾನ ಎಲ್ಲರ ಗಮನ ಸೆಳೆಯುತ್ತಿದೆ. 2021ನೇ ಇಸವಿಯ ಕಟ್ಟಕಡೆಯ ಸೂಪರ್ಮೂನ್ ಜೂನ್ 24ರಂದು ಸಂಭವಿಸಲಿದ್ದು, ಇದಕ್ಕೆ ಸ್ಟ್ರಾಬೆರಿ ಮೂನ್ ಎಂದು ನಾಮಕರಣ ಮಾಡಲಾಗಿದೆ.
ನಾಸಾ ಸಂಸ್ಥೆಯ ವಿಜ್ಞಾನಿಗಳು ಹೇಳಿರುವ ಪ್ರಕಾರ ಈ ವಿಸ್ಮಯ ಜೂನ್ 24ರಂದು ಘಟಿಸಲಿದೆ. ಸೂಪರ್ಮೂನ್ ಎಂದರೆ ಚಂದ್ರ ತನ್ನ ಕಕ್ಷೆಯಲ್ಲಿ ಸುತ್ತುತ್ತಾ ಭೂಮಿಗೆ ಅತ್ಯಂತ ಸಮೀಪದಲ್ಲಿ ಹಾದುಹೋಗುವ ಪ್ರಕ್ರಿಯೆ. ಹೀಗೆ ಚಂದ್ರ ಭೂಮಿಗೆ ಹತ್ತಿರವಾದಾಗ ಸಹಜವಾಗಿಯೇ ದೊಡ್ಡದಾಗಿ ಹಾಗೂ ಪ್ರಕಾಶಮಾನವಾಗಿ ಕಾಣಿಸಿಕೊಳ್ಳಲಿದೆ. ಭೂಮಿಗೆ ಪರಿಪೂರ್ಣ ಒಂದು ಸುತ್ತು ಬರಲು ಸುಮಾರು 29.5 ದಿನಗಳ ಕಾಲಾವಕಾಶ ತೆಗೆದುಕೊಳ್ಳುವ ಚಂದ್ರನನ್ನು ಈ ಅವಧಿಯಲ್ಲಿ ಅಂದರೆ ಅಮಾವಾಸ್ಯೆಯಿಂದ ಹುಣ್ಣಿಮೆ ತನಕ ವಿವಿಧ ಆಕಾರ, ಗಾತ್ರಗಳಲ್ಲಿ ಭೂಮಿಯ ಮೇಲಿನಿಂದ ಗಮನಿಸಬಹುದು. ಹೀಗೆ ಭೂಮಿಯನ್ನು ಸುತ್ತುವಾಗ ಚಂದ್ರ ಯಾವಾಗಲಾದರೂ ಒಮ್ಮೆ ತೀರಾ ಸನಿಹಕ್ಕೆ ಬಂದು ಹೋಗುವ ವಿಸ್ಮಯ ಘಟಿಸುತ್ತದೆ.
ಸ್ಟ್ರಾಬೆರಿ ಮೂನ್ ಹೆಸರಿನ ಹಿಂದಿರುವ ವಿಶೇಷತೆ ಏನು?
ಜೂನ್ 24 ರಂದು ಗೋಚರಿಸಲಿರುವ ಸೂಪರ್ಮೂನ್ಗೆ ಸ್ಟ್ರಾಬೆರಿ ಮೂನ್ ಎಂಬ ಹೆಸರು ಬರಲು ವಿಶೇಷ ಕಾರಣವಿದೆ. ಅಮೆರಿಕಾದ ಉತ್ತರ ಭಾಗದಲ್ಲಿ ಜೂನ್ ತಿಂಗಳ ಅವಧಿ ಸ್ಟ್ರಾಬೆರಿ ಹಣ್ಣು ಬೆಳೆಯುವ ಸಮಯ. ಈ ಕಾರಣಕ್ಕಾಗಿ ಇದನ್ನು ಸ್ಟ್ರಾಬೆರಿ ಮೂನ್ ಎಂದು ಕರೆಯಲಾಗುತ್ತದೆ. ಆದರೆ, ಹೆಸರಿಗೆ ತಕ್ಕಂತೆ ಚಂದ್ರನ ಬಣ್ಣವೂ ಸ್ಟ್ರಾಬೆರಿ ಹಣ್ಣಿನಂತೆಯೇ ಕಾಣುತ್ತದೆ ಎಂದು ಭಾವಿಸಿದರೆ, ಅದು ಮಾತ್ರ ತಪ್ಪು. ಏಕೆಂದರೆ ಈ ಹೆಸರಿಗೂ ಚಂದ್ರನ ಬಣ್ಣಕ್ಕೂ ಸಂಬಂಧವಿಲ್ಲ.
ಅಂದಹಾಗೆ, ಈ ಸ್ಟ್ರಾಬೆರಿ ಮೂನ್ಗೆ ಇನ್ನೂ ಕೆಲ ಹೆಸರುಗಳಿವೆ. ಇದನ್ನು ಬ್ಲೂಮಿಂಗ್ ಮೂನ್, ಗ್ರೀನ್ ಕಾರ್ನ್ ಮೂನ್, ಆನರ್ ಮೂನ್, ಬರ್ತ್ ಮೂನ್, ಎಗ್ ಲೇಯಿಂಗ್ ಮೂನ್, ಹ್ಯಾಚಿಂಗ್ ಮೂನ್, ಹನಿ ಮೂನ್, ಮೀಡ್ ಮೂನ್ ಎಂದು ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯಲ್ಲಿ ಕರೆಯಲಾಗುತ್ತದೆ. ಜೂನ್ 24ರ ಸ್ಟ್ರಾಬೆರಿ ಮೂನ್ ಭಾರತದಲ್ಲಿ ಕಾಣುವುದಿಲ್ಲವಾದರೂ ಆನ್ಲೈನ್ ಮೂಲಕ ವೀಕ್ಷಿಸಬಹುದು.
ಇದನ್ನೂ ಓದಿ:
Lunar Eclipse 2021: ಮೇ 26ರ ಸೂಪರ್ ಬ್ಲಡ್ ಮೂನ್- ಪೂರ್ಣ ಚಂದ್ರಗ್ರಹಣದ ಬಗ್ಗೆ ನಿಮಗೆ ಗೊತ್ತಿರಬೇಕಾದ ಮಾಹಿತಿಗಳಿವು