ಆಹಾ! ಸ್ವೆಟರ್ ಲೋಕ ಅದೆಷ್ಟು ದೊಡ್ಡದು.. ಏನೆಲ್ಲಾ ಇವೆ ಇಲ್ಲಿ?

  • TV9 Web Team
  • Published On - 18:22 PM, 23 Nov 2020

ಚಳಿಗಾಲ ಬಂತೆಂದರೆ ಸಾಕು ಎಲ್ಲರ ಗಮನ ಸೆಳೆಯುತ್ತಾನೆ ಈ ಕಲರ್​ಫುಲ್ ಕಲಾವಿದ. ಎಂತಹ ಚಳಿಯಲ್ಲೂ ಮೈ ಬೆಚ್ಚಗಾಗಿಸ್ತಾನೆ ಕಣ್ರಿ, ಒಂದೊಮ್ಮೆ ಇವನೊಂದಿಗೆ ಸಂಬಂಧ ಬೆಸೆದರೆ ಸಾಕು ಮತ್ತೆ ನಡುಕ ಶುರುವಾಗೋ ಮಾತೇ ಇಲ್ಲ. ಹಾಗಿದ್ರೆ ಯಾರು ಆ ನಿಪುಣ ಅಂತೀರಾ?

ನಾನು ಹೇಳುತ್ತಿರುವ ಚಳಿಗಾಲದ ಜೊತೆಗಾರ ಬೇರೆ ಯಾರು ಅಲ್ಲ; ಅದು ಬೆಚ್ಚಗಿನ ಸ್ವೆಟರ್. ಚಳಿಯನ್ನು ಮೈಯಿಂದ ಓಡಿಸುವ ಸ್ವೆಟರ್​ಗೆ ಶರಣು ಎನ್ನದವರೇ ಇಲ್ಲ. ಚಳಿಗಾಲ ಬಂತೆಂದರೆ ಸಾಕು ಸ್ವೆಟರ್​ನ ಕ್ರೇಜ್ ಶುರುವಾಗುತ್ತೆ. ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ, ವಯಸ್ಸಾದವರಿಗೆ ಹೀಗೆ ಪ್ರತಿಯೊಬ್ಬರಿಗೂ ಒಂದೊಂದು ತರನಾದ ಕಲರ್​ಫುಲ್ ವಿನ್ಯಾಸದ ಸ್ವೆಟರ್​ಗಳಿವೆ.
‘ಈ ಬಾರಿ ಕೊರೊನಾ ಸೋಂಕು ಭಯ ಹುಟ್ಟಿಸಿದ್ದು, ಗಾಳಿ ಮತ್ತು ಶೀತದಿಂದ ದೂರವಿರಲು ಜನರು ಸ್ವೆಟರ್​ಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಸದ್ಯ ಮಾರುಕಟ್ಟೆಗೆ ಚಳಿ ಹೊಡೆದೋಡಿಸುವ ಬೆಚ್ಚನೆಯ ಲೈಟ್​ವೇಟ್ ವುಲ್ಲನ್ ಸ್ವೇಟರ್​ಗಳು ಆಗಮಿಸಿದ್ದು, ಇವುಗಳ ಬಳಕೆಯ ಅನುಭವ ಅತ್ಯುತ್ತಮವಾಗಿದೆ’ ಎಂದು ಸ್ಟೈಲಿಷ್ ಅಮಿತ್ ಹೇಳಿದರು.

ಸ್ವೆಟರ್​ನಲ್ಲಿ ಅದೆಷ್ಟು ವಿಧಗಳು?
ಸ್ವೆಟರ್​ಗಳಲ್ಲೂ ಸಾಕಷ್ಟು ವೈವಿಧ್ಯತೆಯಿದೆ. ಕಾಲರ್​ನ ಭಾಗದಲ್ಲಿ ಮಡಚಿದ ಬಟ್ಟೆಯ ಮೂಲಕ ಜನರನ್ನು ಆಕರ್ಷಿಸುವ ಕಾರ್ಡಿಜನ್ ಸ್ವೆಟರ್​ನ ವಿಶಿಷ್ಟ ವಿನ್ಯಾಸ ಗಮನ ಸೆಳೆಯುತ್ತದೆ. ಇದು ಹೆಚ್ಚು ಉಷ್ಣತೆಯನ್ನು ನೀಡುತ್ತದೆ.
ಗುಂಡಿಗಳಿಲ್ಲದ ಪುಲ್ಲೋವರ್ ಸ್ವೆಟರ್ ಈ ಕಾಲದ ಟ್ರೆಂಡ್. ಇನ್ನು ಕ್ರೊನೆಕ್ ಸ್ವೆಟರ್, ವಿ-ನೆಕ್ ಸ್ವೆಟರ್, ಟ್ಯೂನಿಕ್ ಸ್ವೆಟರ್, ಟರ್ಟಲ್​ನೆಕ್ ಸ್ವೆಟರ್​ಗಳನ್ನು ಧರಿಸಿದವರೂ ಆಗಾಗ ಕಣ್ಣಿಗೆ ಬೀಳುತ್ತಲೇ ಇರುತ್ತಾರೆ.

ಯಾರಿಗೆ ಎಂಥದ್ದು ಚಂದ
ವುಲ್ಲನ್ ಸ್ವೆಟರ್​ಗಳು ಭಾರಿ ತೂಕವಿರುವುದಿಲ್ಲ. ಹವಾಮಾನಕ್ಕೆ ತಕ್ಕಂತೆ ಇವುಗಳನ್ನು ತಯಾರಿಸಲಾಗುತ್ತದೆ. ಟಾಪ್​ನಂತೆ, ಟ್ರೆಂಚ್ ಕೋಟ್​ನಂತೆ, ಡ್ರೆಸ್​ನಂತೆ ಕಾಣುವ ವುಲ್ಲನ್ ಸ್ವೆಟರ್​ಗಳು ಮಹಿಳೆಯರಿಗೆ ಮೆಚ್ಚು. ಪುಲ್​ಓವರ್​ ಹಾಗೂ ಟೀ ಶರ್ಟ್​ನಂತಹ ಫುಲ್ ಸ್ಲೀವ್​, ಸಾದಾ ಡಬ್ಬಲ್ ಶೇಡ್ ವುಲ್ಲನ್ ಸ್ವೆಟರ್​ಗಳನ್ನು ಪುರುಷರು ಇಷ್ಟಪಡುತ್ತಾರೆ.

ಮೃದು ಅನುಭವ ನೀಡುವ ವುಲ್ಲನ್ ಸ್ವೆಟರ್​ಗಳು ವಯಸ್ಸಾದವರಿಗೆ ಹಾಯೆನಿಸುತ್ತದೆ. ಮಕ್ಕಳಿಗಾಗಿ ಛೋಟಾ ಭೀಮ್ ಮತ್ತು ಮಿಕ್ಕಿ ಮೌಸ್​ ವಿನ್ಯಾಸ ಹೊಂದಿರುವ ಕಲರ್​ಫುಲ್ ಸ್ವೆಟರ್​ಗಳು ಮಾರುಕಟ್ಟೆಗೆ ಬಂದಿವೆ.