ಶಾಸಕ, ಕಾರ್ಪೊರೇಟರ್​ಗಳ ನಡುವಿನ ಅಘೋಷಿತ ತಿಕ್ಕಾಟವೇ ಗಲಭೆಗೆ ಕಾರಣ: ಅಶೋಕ

ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಗಳಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಆರ್ ಆಶೋಕ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಶಾಸಕ, ಕಾರ್ಪೊರೇಟರ್​ಗಳ ನಡುವೆ ನಡೆಯುತ್ತಿರುವ ಶೀತಲ ಸಮರವೇ ಗಲಭೆಗೆ ಕಾರಣ ಎಂದರು.

ಮೊದಲಿನಿಂದಲೂ ಪುಲಕೇಶಿ ನಗರದಲ್ಲಿ ಕ್ಷೇತ್ರದಲ್ಲಿ ಮುಸುಕಿನ ಗುದ್ದಾಟವಿತ್ತು, ಮಂಗಳವಾರದಂದು ನಡೆದ ಘಟನೆಯಿಂದ ಅದು ಬಹಿರಂಗಗೊಂಡಿದೆ, ಅವತ್ತು ನಡೆದ ಗಲಭೆದೊಂಬಿಗಳಿಗೆ ಕೋಮುದಳ್ಳುರಿಯ ಲೇಪ ಮೆತ್ತುವ ಪ್ರಯತ್ನ ಬೇಡ, ಅದು ಪೂರ್ವನಿಯೋಜಿತ ಕೃತ್ಯವೇ ಹೊರತು ಧರ್ಮಗಳಿಗೆ ಸಂಬಂಧಿಸಿದ ವಿಚಾರವೇ ಅಲ್ಲ,” ಎಂದು ಅಶೋಕ ಹೇಳಿದರು.

ಕಾಂಗ್ರೆಸ್ ಮತ್ತು ಎಸ್ ಡಿ ಪಿ ಐ ಮಧ್ಯೆ ನಡೆಯುತ್ತಿರುವ ಸಂಘರ್ಷ ಇದು, ಇದಕ್ಕೆ ಮೊದಲು ಗುರಿಯಾದವರು ಶಾಸಕ ತನ್ವೀರ್ ಸೇಠ್. ಎರಡನೇ ಸಲದ ದಾಳಿಗೆ ಆಯ್ಕೆ ಮಾಡಿಕೊಂಡಿದ್ದು ದಲಿತ ನಾಯಕ ಅಖಂಡ ಶ್ರೀನಿವಾಸ ಮೂರ್ತಿ ಮತ್ತು ಅವರ ಕುಟುಂಬವನ್ನು. ಅಂದು ಸ್ವಲ್ಪವೇ ತಡವಾಗಿದ್ದರೂ ಮೂರ್ತಿಯ ಇಡೀ ಕುಟುಂಬ ಬೆಂಕಿಗಾಹುತಿಯಾಗುತಿತ್ತು, ಎಂದು ಅಶೋಕ ಹೇಳಿದರು.

ಎಸ್ ಡಿ ಪಿ ಐ ಸಂಘಟನೆಯನ್ನು ನಿಷೇಧಿಸುವ ಬಗ್ಗೆ ಮಾತಾಡಿದ ಅಶೋಕ, ಈ ನಿಟ್ಟಿನಲ್ಲಿ ಅವರ ಸರಕಾರ ಒಂದು ಹೆಜ್ಜೆ ಮುಂದೆ ಸಾಗಿದೆ ಎಂದರು. ” ಎಸ್ ಡಿ ಪಿ ಐ ದೇಶಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ, ಇದರಿಂದ ಸಮಾಜಕ್ಕೆ ಒಳಿತೇನೂ ಇಲ್ಲ. ನಿಷೇಧ ಹೇರುವ ಮೊದಲು ಸಂಘಟನೆಯ ಬಗ್ಗೆ ಸಮಗ್ರ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ, ಮುಖ್ಯಮಂತ್ರಿಗಳ ಸೂಚನೆಗಾಗಿ ಕಾಯುತ್ತಿದ್ದೇವೆ, ಅದು ದೊರೆತ ಕೂಡಲೇ ಮುಂದುವರಿಯುತ್ತೇವೆ,” ಎಂದು ಸಚಿವರು ಹೇಳಿದರು.

ಮುಂದುವರಿದು ಹೇಳಿದ ಕಂದಾಯ ಮಂತ್ರಿಗಳು, “ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳಲು ಸಜ್ಜಾಗಿದೆ, ಈ ಪ್ರಕರಣವನ್ನು ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು ಸರಕಾರದ ಅಚಲ ನಿರ್ಧಾರವಾಗಿದೆ. ಕಾನೂನು ಮೀರಿ ನಡೆಯುವವರನ್ನು ಸರ್ಕಾರ ಬಿಡಲ್ಲ, ಸಂವಿಧಾನ ಎಲ್ಲರಿಗೂ ಒಂದೇ, ಸಂವಿಧಾನ ದೇವರ ಹೆಸರಲ್ಲಿ ರಚನೆಯಾಗಿಲ್ಲ ಹಾಗೂ ಧರ್ಮದ ಹೆಸರಲ್ಲಿ ಕಾನೂನು ರಚನೆ ಮಾಡುವುದಕ್ಕೆ ಇದು ಪಾಕಿಸ್ತಾನ ಅಲ್ಲ, ಭಾರತ,” ಎಂದರು

ಪೊಲೀಸ್ ಗುಂಡಿಗೆ ಸತ್ತವರು ಅಮಾಯಕರು ಎಂದು ಹೇಳುತ್ತಿರುವ ಕಾಂಗ್ರೆಸ್ ಪಕ್ಷದ ವಾದವನ್ನು ತಳ್ಳಿಹಾಕಿದ ಅಶೋಕ, ಅಮಾಯಕರು ರಾತ್ರಿ ೧೨ ಗಂಟೆಗೆ ಹೊರಬಂದು ಬೀದಿಗಳಲ್ಲಿ ಸುತ್ತಾಡುತ್ತಾರೆಯೇ ಅಂತ ಪ್ರಶ್ನಿಸಿದರು. ಮಾಜಿ ಮೇಯರ್ ಸಂಪತ್​ರಾಜು ಅವರ ಹೆಸರು ಪ್ರಕರಣದಲ್ಲಿ ಕೇಳಿಬರುತ್ತಿದೆ. ಮಾಧ್ಯಮಗಳಲ್ಲಿ ಒಬ್ಬ ಹಿರಿಯ ಕಾಂಗ್ರೆಸ್ ನಾಯಕನ ಹೆಸರು ಸಹ ಹರಿದಾಡುತ್ತಿದೆ, ತನಿಖೆಯ ನಂತರ ಎಲ್ಲವೂ ಹೊರಬೀಳುತ್ತದೆ ಎಂದು ಅವರು ಹೇಳಿದರು.

Related Tags:

Related Posts :

Category: