2019ರ ಏಕದಿನ ಕ್ರಿಕೆಟ್​ನಲ್ಲಿ ಕೊಹ್ಲಿ ಪಡೆಯ ಸಾಧನೆ

ಈ ವರ್ಷ ವಿರಾಟ್ ಸೈನ್ಯ ವಿಶ್ವಕಪ್ ಗೆದ್ದಿಲ್ಲ ಅನ್ನೋದು ಬಿಟ್ರೆ, ಇನ್ನೂ ಮುಟ್ಟಿದೆಲ್ಲವೂ ಚಿನ್ನವೇ. ಬಲಿಷ್ಠ ಭಾರತದ ಪರಾಕ್ರಮದ ಮುಂದೆ ಉಳಿದ್ಯಾವ ತಂಡವೂ ಪೈಪೋಟಿ ನೀಡೋದಕ್ಕೆ ಸಾಧ್ಯವಾಗ್ಲಿಲ್ಲ. ಅಷ್ಟೇ ಅಲ್ಲ. ಬ್ಲೂ ಬಾಯ್ಸ್ ಪ್ರದರ್ಶನಕ್ಕೆ ಇಡೀ ಕ್ರಿಕೆಟ್ ಲೋಕವೇ ಉಘೇ ಉಘೇ ಅಂತಾ ಹಾಡಿ ಹೊಗಳಿದೆ.

ಹಾಗಾದ್ರೆ 2019ರಲ್ಲಿ ಭಾರತ ಏಕದಿನ ಕ್ರಿಕೆಟ್​ನಲ್ಲಿ ಕಂಡ ಯಶಸ್ಸೇನು? ಟೀಂ ಇಂಡಿಯಾ ಬರೆದ ದಾಖಲೆಗಳು ಏನೇನು? ಯಾವ್ಯಾವ ಸರಣಿಗಳನ್ನ ಮುಡಿಗೇರಿಸಿಕೊಂಡಿದೆ ಅನ್ನೋದ್ರ ಕಂಪ್ಲೀಟ್ ಚಿತ್ರಣವನ್ನ ಇಲ್ಲಿದೆ.

ಈ ಬಾರಿಯ ವಿಶ್ವಕಪ್ ಅನ್ನ ವಿರಾಟ್ ಕೊಹ್ಲಿಯೇ ಗೆಲ್ಲೋದು ಅನ್ನೋದು ಕ್ರಿಕೆಟ್ ಪಂಡಿತರ ಲೆಕ್ಕಾಚಾರವಾಗಿತ್ತು. ಆದ್ರೆ, ಸೆಮೀ ಫೈನಲ್​ವರೆಗೂ ಗೆಲುವಿನ ನಾಗಾಲೋಟ ಮುಂದುವರೆಸಿದ್ದ ಟೀಂ ಇಂಡಿಯಾ, ಕಿವೀಸ್ ವಿರುದ್ಧ ಸೋತು ವಿಶ್ವಕಪ್​ನಿಂದ ಹೊರಬಿದ್ದಿತ್ತು. ಆದ್ರೂ 2019ರ ಏಕದಿನ ಕ್ರಿಕೆಟ್​ನಲ್ಲಿ ಕೊಹ್ಲಿ ಪಡೆಯೇ ಕಿಂಗ್ ಆಗಿ ಮೆರೆದಾಡಿದೆ. ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್ ಪ್ರವಾಸದಲ್ಲಿ 3-0ಅಂತರದಿಂದ ಸರಣಿ ಗೆದ್ದಿದ್ದ ಕೊಹ್ಲಿ ಪಡೆ, ವರ್ಷಾಂತ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 2-1ಅಂತರದಿಂದ ಸರಣಿ ಗೆಲುವು ಸಾಧಿಸಿ ಇತಿಹಾಸ ಬರೆದಿತ್ತು.

ಧೋನಿ ರೌದ್ರಾವತಾರ.. ತವರು ನೆಲದಲ್ಲೇ ನೆಲಕಚ್ಚಿದ ಕಾಂಗರೂ!
ಏಕದಿನ ಕ್ರಿಕೆಟ್​ನಲ್ಲಿ ಮಹೇಂದ್ರ ಸಿಂಗ್ ಧೋನಿಯ ಕಳಪೆ ಪ್ರದರ್ಶನದ ಬಗ್ಗೆ ಇನ್ನಿಲ್ಲದ ಚರ್ಚೆಯಾಗಿತ್ತು. ಆದರೆ ಈ ವರ್ಷದ ಆರಂಭದಲ್ಲೇ ಕೈಗೊಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿ ಧೋನಿ ಬ್ಯಾಟ್ ರನ್ ಮಳೆಯನ್ನೇ ಹರಿಸಿತು. ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲೂ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ ಮಹೇಂದ್ರ ಕಾಂಗರೂಗಳನ್ನ ಕಂಗಾಲಾಗುವಂತೆ ಮಾಡಿದ್ದ.

ಧೋನಿಯ ಸಮಯೋಚಿತ ಮತ್ತು ಅದ್ದೂರಿ ಬ್ಯಾಟಿಂಗ್​ನಿಂದಲೇ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ನೆಲದಲ್ಲಿ ಚೊಚ್ಚಲ ದ್ವಿಪಕ್ಷೀಯ ಏಕದಿನ ಸರಣಿ ಗೆದ್ದ ಐತಿಹಾಸಿಕ ಸಾಧನೆ ಮಾಡಿತು.

2019ರ ಅಂತ್ಯಕ್ಕೆ ಟೀಂ ಇಂಡಿಯಾ ದಾಖಲೆಗಳನ್ನ ನೋಡಿದಾಗ, ಬಲಾಢ್ಯ ತಂಡವಾಗಿ ಹೊರಹೊಮ್ಮಿದೆ. ಯಾಕಂದ್ರೆ, ಏಕದಿನ ಕ್ರಿಕೆಟ್​ನಲ್ಲಿ ಕೊಹ್ಲಿ ಪಡೆ ಮಾಡಿರೋ ಸಾಧನೆಗಳನ್ನ ಬೇಱವ ತಂಡಗಳು ಮಾಡೋದಕ್ಕೆ ಸಾಧ್ಯವಾಗಿಲ್ಲ. ವಿರಾಟ್ ಸೈನ್ಯ ಒಟ್ಟು 5ಸರಣಿಗಳನ್ನ ಆಡಿದ್ದು 4ರಲ್ಲಿ ಗೆದ್ದು ಬೀಗಿದೆ.

2019ರಲ್ಲಿ ಏಕದಿನ ಸರಣಿ:
ಕಾಂಗರೂಗಳ ನೆಲದಲ್ಲೇ ನಡೆದ ಏಕದಿನ ಸರಣಿಯಲ್ಲಿ ಭಾರತ 2-1ರ ಅಂತರದಿಂದ ಗೆದ್ದು ಬೀಗಿದ್ರೆ, ನ್ಯೂಜಿಲೆಂಡ್​ನಲ್ಲೇ ಕಿವೀಸ್ ತಂಡವನ್ನ ಕ್ಲೀನ್ ಸ್ವೀಪ್ ಮಾಡಿದ್ರು. ಇನ್ನು ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 3-2ರ ಅಂತರದಲ್ಲಿ ಮುಗ್ಗರಿಸಿದ್ರೆ, ವೆಸ್ಟ್ ಇಂಡೀಸ್ ವಿರುದ್ಧ 2-1 ಅಂತರದಲ್ಲಿ ಸರಣಿ ಗೆದ್ದು ಬೀಗಿದ್ರು. ಇದಲ್ಲದೇ ಈ ವರ್ಷ ಅತೀ ಹೆಚ್ಚು ಪಂದ್ಯಗಳನ್ನ ಗೆದ್ದ ಶ್ರೇಯಸ್ಸು ಕೂಡ, ಟೀಂ ಇಂಡಿಯಾಕ್ಕೆ ಸಲ್ಲುತ್ತೆ.

2019ರಲ್ಲಿ ಭಾರತ ತಂಡದ ಸಾಧನೆ:
2019ರ ಏಕದಿನ ಕ್ರಿಕೆಟ್​ನಲ್ಲಿ ಭಾರತ ಒಟ್ಟು 28ಪಂದ್ಯಗಳನ್ನಾಡಿದ್ದು 19ರಲ್ಲಿ ಗೆಲುವು ಸಾಧಿಸಿದ್ರೆ, 8ಪಂದ್ಯಗಳಲ್ಲಿ ಸೋಲುಕಂಡಿದೆ.. ಇದ್ರೊಂದಿಗೆ ಭಾರತ ನಂಬರ್ 1ಸ್ಥಾನದಲ್ಲಿದೆ. ಹಾಗೇ ಆಸ್ಟ್ರೇಲಿಯಾ ಆಡಿರೋ 23ಪಂದ್ಯಗಳಲ್ಲಿ 16ರಲ್ಲಿ ಜಯ, 7ಪಂದ್ಯಗಳಲ್ಲಿ ಸೋಲು ಕಂಡಿದೆ. ಇಂಗ್ಲೆಂಡ್ ತಂಡ 24ಪಂದ್ಯಗಳಲ್ಲಿ 15ರಲ್ಲಿ ಗೆಲುವು ಸಾಧಿಸಿದ್ರೆ, 5ರಲ್ಲಿ ಸೋಲು ಕಂಡಿದೆ.

ಹ್ಯಾಟ್ರಿಕ್ ವಿಕೆಟ್ ಪಡೆದ ಶಮಿ, ಕುಲ್​ದೀಪ್:
ಈ ವರ್ಷ ಭಾರತದ ಇಬ್ಬರು ಬೌಲರ್​ಗಳು ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ್ರು. ವಿಶ್ವಕಪ್​ನ ಲೀಗ್ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಹ್ಯಾಟ್ರಿಕ್ ವಿಕೆಟ್ ಪಡೆದು ಸೋಲೋ ಪಂದ್ಯವನ್ನ ಗೆಲ್ಲಿಸಿಕೊಟ್ಟಿದ್ರು.

ಇನ್ನು ವಿಶಾಖಪಟ್ಟಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಚೈನಾಮನ್ ಸ್ಪಿನ್ನರ್ ಕುಲ್​ದೀಪ್ ಯಾದವ್ ಹ್ಯಾಟ್ರಿಕ್ ಪಡೆದು ಸಾಧನೆ ಮಾಡಿದ್ರು.

ಒಟ್ನಲ್ಲಿ 2019ರ ವರ್ಷ ಏಕದಿನ ಕ್ರಿಕೆಟ್​ನಲ್ಲಿ ಭಾರತ ತಂಡ ಅಭೂತಪೂರ್ವ ಸಾಧನೆ ಮಾಡಿ, ಐಸಿಸಿ ಏಕದಿನ ರ್ಯಾಂಕಿಂಗ್​ನಲ್ಲಿ ನಂಬರ್ 2 ಪ್ಲೇಸ್​ನಲ್ಲಿದೆ. ಈ ವರ್ಷ ಇದಕ್ಕಿಂತ ಅದ್ಭುತ ಪ್ರದರ್ಶನ ನೀಡಿದ್ರೆ, ಟೆಸ್ಟ್​ನಂತೆ ಏಕದಿನ ಕ್ರಿಕೆಟ್​ನಲ್ಲೂ ಅಗ್ರಸ್ಥಾನಕ್ಕೆ ಎಂಟ್ರಿ ಕೊಡೋದ್ರಲ್ಲಿ ಅನುಮಾನವೇ ಇಲ್ಲ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!