2019ರ ಟೆಸ್ಟ್ ಕ್ರಿಕೆಟ್​ನಲ್ಲಿ ಟೀಂ ಇಂಡಿಯಾ ಸೃಷ್ಟಿಸಿದ ದಾಖಲೆ

ಟೆಸ್ಟ್ ಕ್ರಿಕೆಟ್​ನಲ್ಲಿ ಟೀಂ ಇಂಡಿಯಾ ಎಷ್ಟು ಬಲಿಷ್ಠ ತಂಡ ಅನ್ನೋದನ್ನ ಪ್ರತಿ ಸರಣಿ, ಪ್ರತಿ ಪಂದ್ಯದಲ್ಲೂ ಸಾಬೀತು ಮಾಡ್ತಾನೇ ಬರ್ತಿದೆ. ಒಂದೇ ಒಂದು ಪಂದ್ಯ ಸೋಲದಂತೆ, ವೈಟ್ ಜೆರ್ಸಿಯಲ್ಲಿ ಗೆಲುವಿನ ನಾಗಾಲೋಟವನ್ನ ಮುಂದುವರೆಸಿರೋ ಕೊಹ್ಲಿ ಸೈನ್ಯ, ವಿಶ್ವ ಕ್ರಿಕೆಟ್​ನ ಸಾಮ್ರಾಟನಾಗಿ ಮೆರೆದಾಡ್ತಿದೆ.

ಹಾಗಾದ್ರೆ ಈ ವರ್ಷದಲ್ಲಿ ವಿಶ್ವದ ನಂಬರ್ 1ಟೆಸ್ಟ್ ತಂಡ ಯಾವ್ಯವ ಸರಣಿಯನ್ನ ಆಡಿದೆ? ಯಾವ್ಯಾವ ದಾಖಲೆಗಳನ್ನ ಸೃಷ್ಟಿಸಿದೆ ಅನ್ನೋದ್ರ ಕಂಪ್ಲೀಟ್ ಡಿಟೆಲ್ಸ್ ಇಲ್ಲಿದೆ ನೋಡಿ

ಆಸಿಸ್ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದ ಕೊಹ್ಲಿ ಪಡೆ!
ಬರೋಬ್ಬರಿ 17ಟೆಸ್ಟ್ ಸರಣಿ ಆಡಿದ್ರೂ ಆಸಿಸ್ ನೆಲದಲ್ಲಿ ಭಾರತ ತಂಡಕ್ಕೆ ಒಂದೇ ಒಂದು ಟೆಸ್ಟ್ ಸರಣಿ ಗೆಲ್ಲೋದಕ್ಕೆ ಸಾಧ್ಯವಾಗಿರಲಿಲ್ಲ. 72ವರ್ಷಗಳಿಂದಲೂ ಕಾಂಗರೂಗಳ ನಾಡಲ್ಲಿ ಆಸ್ಟ್ರೇಲಿಯಾ ತಂಡವನ್ನ ಬೇಟೆಯಾಡಿ, ಇತಿಹಾಸ ಬರೆಯಬೇಕು ಅನ್ನೋದು ಕೋಟ್ಯಂತರ ಭಾರತೀಯರ ಕನಸಾಗಿತ್ತು. ಆದ್ರೆ, ಭಾರತೀಯರ ಈ ಸುದೀರ್ಘ ವರ್ಷಗಳ ಕನಸನ್ನ ನನಸು ಮಾಡಿದ್ದೇ, ಕ್ಯಾಪ್ಟನ್ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ.

2018-19ರಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನ ಕೊಹ್ಲಿ ಪಡೆ, 2-1ಅಂತರದಿಂದ ಗೆದ್ದು ಬೀಗಿತ್ತು. ಅಡಿಲೇಡ್​ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಭಾರತ 31ರನ್​ಗಳ ಅಂತರಿಂದ ವಿಜಯ ಸಾಧಿಸಿದ್ರೆ, ಪರ್ತ್ ಟೆಸ್ಟ್​ನಲ್ಲಿ ಆಸಿಸ್ 146ರನ್​ಗಳ ಜಯ ಸಾಧಿಸಿತ್ತು. ಮೆಲ್ಬರ್ನ್ ಟೆಸ್ಟ್​ನಲ್ಲಿ ಭಾರತ 137ರನ್​ಗಳ ವಿಜಯೋತ್ಸವ ಆಚರಿಸೋದ್ರೊಂದಿಗೆ ಸರಣಿಯಲ್ಲಿ 2-1ಅಂತರದ ಮುನ್ನಡೆ ಸಾಧಿಸಿತ್ತು.

ಸಿಡ್ನಿಯಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದಲ್ಲಿ ಆಸಿಸ್ ಡ್ರಾ ಮಾಡಿಕೊಂಡಿತ್ತು. ಇದ್ರೊಂದಿಗೆ ವಿರಾಟ್ ಸೈನ್ಯ ಆಸಿಸ್ ನೆಲದಲ್ಲಿ ಬರೋಬ್ಬರಿ 72ವರ್ಷಗಳ ಬಳಿಕ, ಚೊಚ್ಚಲ ಟೆಸ್ಟ್ ಸರಣಿ ಗೆದ್ದ ಐತಿಹಾಸಿಕ ಸಾಧನೆ ಮಾಡಿತ್ತು. ಕೊಹ್ಲಿ ಬಾಯ್ಸ್ ದಾಖಲೆಗೆ ಇಡೀ ಕ್ರಿಕೆಟ್ ಜಗತ್ತೇ ಬೆರಗಾಗಿ ಹೋಯ್ತು.

ಭಾರತ ಕೇವಲ ಆಸಿಸ್ ನೆಲದಲ್ಲಿ ಮಾತ್ರವಲ್ಲ, ವೆಸ್ಟ್ ಇಂಡೀಸ್ ನೆಲದಲ್ಲೂ ರಣಭೇರಿ ಬಾರಿಸಿತ್ತು. ಹಾಗಾದ್ರೆ 2019ರಲ್ಲಿ ಭಾರತ ಗೆದ್ದ ನಾಲ್ಕು ಟೆಸ್ಟ್ ಸರಣಿಗಳು ಯಾವುವು ಅನ್ನೋದನ್ನ ಇಲ್ಲಿ ನೋಡಿ.

2019ರಲ್ಲಿ ಭಾರತ ಗೆದ್ದ ಟೆಸ್ಟ್ ಸರಣಿ:
1. ಬಾರ್ಡರ್ ಗಾವಸ್ಕರ್ ಟೆಸ್ಟ್ ಸರಣಿ
ಕಾಂಗರೂಗಳ ನಾಡಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನ ಭಾರತ 2-1ಅಂತರದಿಂದ ಗೆದ್ದು ಬೀಗಿತ್ತು.

2. ವೆಸ್ಟ್ ಇಂಡೀಸ್-ಭಾರತ
ವಿಶ್ವಕಪ್ ನಂತ್ರ ಕೆರಿಬಿಯನ್ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ 2-0ಅಂತರದಿಂದ ವಿಂಡೀಸ್ ತಂಡವನ್ನ ಕ್ಲೀನ್ ಸ್ವೀಪ್ ಮಾಡಿತ್ತು.

ಹ್ಯಾಟ್ರಿಕ್ ವಿಕೆಟ್ ಪಡೆದ ಜಸ್ಪ್ರೀತ್ ಬೂಮ್ರಾ!
ಇದೇ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಯಾರ್ಕರ್ ಕಿಂಗ್ ಜಸ್ಪ್ರೀತ್ ಬೂಮ್ರಾ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ರು.

3. ಭಾರತ-ದಕ್ಷಿಣ ಆಫ್ರಿಕಾ
ದಕ್ಷಿಣ ಆಫ್ರಿಕಾ ಭಾರತ ಪ್ರವಾಸ ಕೈಗೊಂಡಾಗಲು ಕೊಹ್ಲಿ ಪಡೆ ಪರಾಕ್ರಮ ಮೆರೆದಿತ್ತು. 3-0 ಅಂತರದಿಂದ ಸರಣಿ ಕ್ಲೀನ್ ಸ್ವೀಪ್ ಮಾಡಿ ಬೀಗಿತ್ತು.

4. ಭಾರತ-ಬಾಂಗ್ಲಾದೇಶ
ನವೆಂಬರ್​ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ 2ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ಕೊಹ್ಲಿ ಪಡೆ ವಿಜಯೋತ್ಸವ ಆಚರಿಸಿತ್ತು. ಅಷ್ಟೇ ಅಲ್ಲ, ಕೋಲ್ಕತ್ತಾದಲ್ಲಿ ನಡೆದ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲೂ ಕೊಹ್ಲಿ ಪಡೆ ದಿಗ್ವಿಜಯ ಸಾಧಿಸಿದೆ. ಕೇವಲ 3ದಿನದಲ್ಲೇ ಬಾಂಗ್ಲಾ ಹುಲಿಗಳನ್ನ ಬೇಟೆಯಾಡಿದ್ದ ಕೊಹ್ಲಿ ಬಾಯ್ಸ್, ಪಿಂಕ್ ಬಾಲ್​ನಲ್ಲೂ ನಾವು ಬಲಿಷ್ಠ ಅನ್ನೋದನ್ನ ಪ್ರೂವ್ ಮಾಡಿ ತೋರಿಸಿತು.

2019ರಲ್ಲಿ ಭಾರತ ತಂಡದ ಸಾಧನೆ:
2019ರಲ್ಲಿ ಟೀಮ್ ಇಂಡಿಯಾ 8 ಟೆಸ್ಟ್​ ಪಂದ್ಯಗಳನ್ನ ಆಡಿದ್ದು, 7 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಆಸಿಸ್ ವಿರುದ್ಧ ಒಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಭಾರತವೇ ಕಿಂಗ್!
2021ರಲ್ಲಿ ನಡೆಯಲಿರೋ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲೂ ಟೀಂ ಇಂಡಿಯಾವೇ ಮೊದಲ ಸ್ಥಾನವನ್ನ ಅಲಂಕರಿಸಿದೆ. ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಆಡಿರೋ ಏಳು ಪಂದ್ಯಗಳಲ್ಲೂ ಗೆಲುವು ಸಾಧಿಸಿರೋ ಕೊಹ್ಲಿ ಗ್ಯಾಂಗ್, ಬರೋಬ್ಬರಿ 360ಪಾಯಿಂಟ್​ಗಳನ್ನ ಕೆಲಹಾಕಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ ಭಾರತಕ್ಕೆ ಯಾವುದೇ ತಂಡ ಸಾರಿಸಾಟಿಯಿಲ್ಲ ಅನ್ನೋದನ್ನ ಸಾಬೀತು ಮಾಡಿದೆ.

ಒಟ್ನಲ್ಲಿ ಟೆಸ್ಟ್ ಕ್ರಿಕೆಟ್​ನಲ್ಲಿ ದಿನೇ ದಿನೆ ತನ್ನ ಪ್ರಾಬಲ್ಯವನ್ನ ಹೆಚ್ಚಿಸಿಕೊಳ್ತಿರೊ ಟೀಂ ಇಂಡಿಯಾ, ಇದೀಗ ಟೆಸ್ಟ್ ಚಾಂಪಿಯನ್​ಶಿಪ್ ಮೇಲೆ ಕಣ್ಣಿಟ್ಟಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!