ಪುಟ್ಟ ಅಭಿಮಾನಿಯ ಮಹದಾಸೆ ಈಡೇರಿಸಿದ ಪವರ್​ಸ್ಟಾರ್!

ಈ ಬಾಲಕ ಕಳೆದ ಕೆಲವು ವರ್ಷಗಳಿಂದ ಗಂಭೀರ ಕಾಯಿಲೆಗೆ ತುತ್ತಾಗಿ ಹಾಸಿಗೆ ಹಿಡಿದಿದ್ದಾನೆ. ಈ ಹುಡುಗನಿಗೆ ನಿಲ್ಲೋಕೂ ಆಗಲ್ಲ, ಸರಿಯಾಗಿ ಕೂರೋಕೂ ಆಗಲ್ಲ. ಇಂತಹ ಬಾಲಕನಿಗೆ ಅಪ್ಪು ಅಂದ್ರೆ ಪಂಚ ಪ್ರಾಣ. ಜೀವನದಲ್ಲಿ ಒಮ್ಮೆಯಾದ್ರೂ ಪವರ್​​ಸ್ಟಾರ್ ಭೇಟಿ ಮಾಡ್ಬೇಕು. ಹತ್ತಿರದಿಂದ ಅವ್ರನ್ನ ಮಾತಾಡಿಸ್ಬೇಕು ಅಂತ ಆಸೆ ಕಂಡಿದ್ದ. ಆತನ ಆಸೆಯನ್ನ ಅಪ್ಪು ಈಗ ಈಡೇರಿಸಿದ್ದಾರೆ.

ಕೆಲವೊಮ್ಮೆ ಆ ದೇವರಿಗೆ ಕರುಣೆನೇ ಇಲ್ವೇನೋ ಅಂತ ಅನಿಸುತ್ತೆ. ಯಾಕಂದ್ರೆ ಈ ಪುಟ್ಟ ಬಾಲಕನ ಕೈ-ಕಾಲುಗಳಲ್ಲಿ ಬಲವಿಲ್ಲ. ಈತನ ದೇಹದ ಮಾಂಸ ಖಂಡಗಳ ಬೆಳವಣೆಗೆನೇ ಆಗಿಲ್ಲ. ಕೂತ್ರೆ ನಿಲ್ಲೋಕೆ ಆಗಲ್ಲ. ನಿಂತ್ರೆ ಕೂರೋಕೆ ಆಗೋಲ್ಲ. ತಮ್ಮ ಮಗನ ಈ ಸ್ಥಿತಿಯನ್ನ ನೋಡಿ ಪೋಷಕರೂ ನೋವಿನಲ್ಲೇ ಕಾಲ ಕಳೆಯುವಂತಾಗಿದೆ.

ಹೀಗೆ ಗಂಭೀರ ಕಾಯಿಲೆಗೆ ತುತ್ತಾಗಿ ಹಾಸಿಗೆ ಹಿಡಿದ ಈ ಬಾಲಕನ ಹೆಸರು ಆದರ್ಶ. ಬಳ್ಳಾರಿ ಜಿಲ್ಲೆ ಹೊಸಪೇಟೆಯ ತಳವಾರಕೇರಿ ನಿವಾಸಿ. ತಾಯಿ ರೇಖಾ. ತಂದೆ ಜಿ. ಹನುಮಂತ ಆಟೋ ಚಲಾಯಿಸಿ ಜೀವನ ನಡೆಸ್ತಾರೆ. ಆದರ್ಶ ನೋಡೋಕೆ ಪುಟ್ಟ ಬಾಲಕನಂತೆ ಕಾಣ್ತಾನೆ. ಆದ್ರೆ ಈತನ ಅಸಲಿ ವಯಸ್ಸು 16 ವರ್ಷ. ಈ ಪುಟ್ಟ ಅಭಿಮಾನಿಗೆ ಅಪ್ಪು ಅಂದ್ರೆ ಬಲು ಇಷ್ಟ.

ಪುನೀತ್ ನಟಿಸಿದ ಪ್ರತಿಯೊಂದು ಸಿನಿಮಾವನ್ನೂ ಚಾಚು ತಪ್ಪದೆ ನೋಡಿದ್ದಾನೆ. ಎದ್ದು ಓಡಾಡಲಾಗದ ಸ್ಥಿತಿಯಲ್ಲಿದ್ರೂ ಆದರ್ಶನಿಗೆ ಪುನೀತ್ ರಾಜ್​ಕುಮಾರ್ ಅವ್ರನ್ನ ಭೇಟಿ ಆಗ್ಬೇಕು, ಅವ್ರನ್ನ ನೋಡ್ಬೇಕು. ಅಪ್ಪು ಜೊತೆ ಒಂದು ಫೋಟೋ ತೆಗೆಸಿಕೊಳ್ಬೇಕು ಅನ್ನೋ ಆಸೆ. ಇಷ್ಟೇ ಅಲ್ಲ. ಪುನೀತ್ ನಮ್ಮ ಮನೆಗೆ ಬರ್ಬೇಕು. ಅವರು ಇಷ್ಟ ಪಡುವ ಚಿಕನ್ ಬಿರಿಯಾನಿ ಮಾಡಿ ತಿನ್ನಿಸ್ಬೇಕು ಅನ್ನೋದು ಬಾಲಕನ ಆಸೆಯಾಗಿತ್ತು.

ಪುಟ್ಟ ಅಭಿಮಾನಿಯ ಮಹಾದಾಸೆ ಈಡೇರಿಸಿದ ಪವರ್​ಸ್ಟಾರ್!
ಆದರ್ಶ ಅದೆಷ್ಟೋ ಬಾರಿ ಪುನೀತ್ ರನ್ನ ಭೇಟಿ ಆಗೋಕೆ ಪ್ರಯತ್ನ ಪಟ್ಟಿದ್ದ. ಅಪ್ಪು ದೊಡ್ಮನೆ ಹುಡುಗ ಚಿತ್ರದ ಚಿತ್ರೀಕರಣಕ್ಕೆ ಅಂತ ಬಳ್ಳಾರಿಗೆ ಹೋಗಿದ್ದಾಗ ಭೇಟಿ ಮಾಡಲು ಯತ್ನಿಸಿದ್ದ. ಆದ್ರೆ ಜನರ ನೂಕು ನುಗ್ಗಲು ಇದ್ದಿದ್ದರಿಂದ ಅಂದು ಅಪ್ಪು ಭೇಟಿ ಸಾಧ್ಯನೇ ಆಗಿರಲಿಲ್ಲ. ಇನ್ನೂ ಸಿನಿಮಾ ಚಿತ್ರೀಕರಣ ಸಂಬಂಧ 2-3 ಬಾರಿ ಹೊಸಪೇಟೆಗೆ ಪುನಿತ್ ರಾಜ್​ಕುಮಾರ್ ಬಂದು ಹೋಗಿದ್ದಾರೆ. ಈ ವೇಳೆ ಅಪ್ಪು ಜೊತೆ ಮಗನನ್ನ ಭೇಟಿ ಮಾಡಿಸಲು ಪೋಷಕರು ಪ್ರಯತ್ನ ಪಟ್ಟರೂ ಆಗಿಲ್ಲ.

ಕಳೆದ ಒಂದು ವಾರದ ಹಿಂದೆ ಮತ್ತೆ ಈ ಪುಟ್ಟ ಅಭಿಮಾನಿ ಪುನೀತ್ ರಾಜ್​ಕುಮಾರ್ ಅನ್ನ ಭೇಟಿ ಆಗ್ಬೇಕು. ಅವ್ರೊಂದಿಗೆ ಒಂದು ಫೋಟೋ ತೆಗೆಸಿಕೊಳ್ಬೇಕು ಅನ್ನೋ ಆಸೆ ವ್ಯಕ್ತಪಡಿಸಿದ್ದ. ಇದು ಪುನೀತ್ ಗಮನಕ್ಕೆ ಬರುತ್ತಿದ್ದಂತೆ ಆದರ್ಶನ ಆಸೆಯನ್ನ ಈಡೇರಿಸಲು ಮುಂದಾಗಿದ್ದಾರೆ. ತಮ್ಮ ಬಿಡುವಿನ ವೇಳೆಯಲ್ಲಿ ತಮ್ಮ ಮನೆಗೆ ಕರೆಸಿಕೊಂಡು ಯೋಗಕ್ಷೇಮ ವಿಚಾರಿಸಿದ್ದಾರೆ. ಆದರ್ಶನ ಜೊತೆ ಕೂತು ಕ್ಯಾಮಾರಾಗೆ ಪೋಸ್ ಕೊಟ್ಟಿದ್ದಾರೆ.

ತನ್ನದೇ ಕಾರಿನಲ್ಲಿ ಕರೆಸಿಕೊಂಡು ಅಪ್ಪು ಕೊಟ್ಟ ಭರವಸೆಯೇನು?
ಆದರ್ಶನ ಬಗ್ಗೆ ವಿಷಯ ತಲುಪುತ್ತಿದ್ದಂತೆ ತಮ್ಮ ಕಾರನ್ನ ಬಳ್ಳಾರಿಗೆ ಕಳುಹಿಸಿದ್ರು. ಅದೇ ಕಾರಿನಲ್ಲಿ ಆದರ್ಶ ಹಾಗೂ ಆತನ ಪೋಷಕರನ್ನ ಸದಾಶಿವನಗರದ ತಮ್ಮ ಮನೆಗೆ ಕರೆಸಿಕೊಂಡ್ರು. ಆದರ್ಶನೊಂದಿಗೆ ಕೆಲಕಾಲ ಮಾತಾಡಿದ್ರು. ಆದರ್ಶನ ತಂದೆ ತಾಯಿಯಿಂದ ಬಾಲಕನ ಆರೋಗ್ಯದ ಬಗ್ಗೆ ಮಾಹಿತಿ ಪಡೆದ್ರು.

ಆದರ್ಶನ ಪೋಷಕರು ಪುನೀತ್ ಭೇಟಿ ಮಾಡೋಕೆ ಸಾಕಷ್ಟು ಪ್ರಯತ್ನ ಪಟ್ಟಿದ್ರು. ಆದ್ರೆ ಆದರ್ಶ ಎದ್ದು ಓಡಾಡದ ಸ್ಥಿತಿಯಲ್ಲಿ ಇರೋದ್ರಿಂದ ಬೇರೆ ಕಡೆ ಕರೆದುಕೊಂಡು ಹೋಗಿ ಪುನಿತ್ ಅವರನ್ನ ಭೇಟಿ ಮಾಡಿಸಲು ಪೋಷಕರಿಗೆ ಕಷ್ಟವಾಗುತ್ತಿತ್ತು. ಈಗ ಸ್ವತ: ಅಪ್ಪು ಆದರ್ಶನನ್ನ ತಮ್ಮ ಮನೆಗೆ ಕರೆಸಿಕೊಂಡಿದ್ದಾರೆ. ಅವನ ಆರೋಗ್ಯ ವಿಚಾರಿಸಿದ್ದಾರೆ.

ವೈದ್ಯರ ಸಂಪೂರ್ಣ ವೆಚ್ಚ ಭರಿಸಲಿರೋ ಪುನೀತ್:
ಹೌದು.. ಆದರ್ಶನನ್ನ ಮನೆಗೆ ಕರೆಸಿ ಕೇವಲ ಫೋಟೋ ತೆಗೆಸಿ ಕಳುಹಿಸಿಲ್ಲ. ಬದಲಿಗೆ ಗಂಭೀರ ಆರೋಗ್ಯ ಸಮಸ್ಯೆಯನ್ನ ಎದುರಿಸುತ್ತಿರೋ ಆದರ್ಶನಿಗೆ ಭರವಸೆ ನೀಡಿದ್ದಾರೆ. ಆದರ್ಶನ ಚಿಕಿತ್ಸೆ ಕೊಡಿಸಲು ಸ್ವತ: ಪುನೀತ್ ಅವರೇ ಮುಂದೆ ಬಂದಿದ್ದಾರೆ. ಖುದ್ದಾಗಿ ಅಪ್ಪು ಸ್ಪರ್ಶ್ ಆಸ್ಪತ್ರೆಗೆ ಆದರ್ಶನನ್ನ ಕಳುಹಿಸಿಕೊಟ್ಟಿದ್ರು. ಅದೆಷ್ಟೇ ಖರ್ಚಾದ್ರೂ ಆ ಹಣವನ್ನ ತಾವೇ ಭರಿಸೋದಾಗಿ ಹೇಳಿದ್ದಾರೆ. ಹೀಗಾಗಿ ಆದರ್ಶ ಹಾಗೂ ಆತನ ಪೋಷಕರಲ್ಲಿ ಹೊಸ ಆಶಾಕಿರಣ ಮೂಡಿದೆ. ಮತ್ತೆ ಮಗ ಸರಿಹೋಗ್ಬಹುದು. ಎಲ್ಲರಂತೆ ಓಡಾಡ್ಕೊಂಡು ಇರ್ಬಹುದು ಅನ್ನೋ ಭರವಸೆಯಲ್ಲಿದ್ದಾರೆ.

ಇತ್ತ ಆದರ್ಶ ಕೂಡ ತನ್ನ ನೆಚ್ಚಿನ ನಟನನ್ನ ಭೇಟಿಯಾದ ಖುಷಿಯಲ್ಲಿದ್ದಾನೆ:
ಪುನೀತ್ ರಾಜ್​​ಕುಮಾರ್ ಅವರ ಹೃದಯ ವೈಶಾಲ್ಯತೆ ಕಂಡು ಬಾಲಕನ ಹೆತ್ತವರು ಪುನೀತರಾಗಿದ್ದಾರೆ. ಅಪ್ಪು ಕೂಡ ತನ್ನ ಅಭಿಮಾನಿಯ ಬಹುದಿನಗಳ ಆಸೆಯನ್ನ ಈಡೇರಿಸಿದ್ದಾರೆ. ಹೀಗಾಗಿ ಬಹಳ ದಿನಗಳಿಂದ ಗಂಭೀರ ಕಾಯಿಲೆಯಿಂದ ಬಳಲುತ್ತಿರೋ ಆದರ್ಶನ ಬಾಳಲ್ಲೀಗ ಹೊಸ ಬೆಳಕಿನ ಆಶಾಕಿರಣ ಮೂಡಿದೆ.

Related Posts :

Category:

error: Content is protected !!

This website uses cookies to ensure you get the best experience on our website. Learn more