TV9 ಫಲಶ್ರುತಿ: ಕುಡಿಯುವ ನೀರಿಗೆ ಪರದಾಡುತ್ತಿದ್ದ ಗ್ರಾಮಸ್ಥರ ದಾಹ ತೀರಿಸಲು.. ಮತ್ತೆ ಹರಿದುಬಂದಳು ಗಂಗೆ!

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ತನ್ನ ಪತ್ನಿಗೆ ಮತ ಹಾಕದೇ ಇದ್ದಿದ್ದಕ್ಕೆ ವ್ಯಕ್ತಿಯೊಬ್ಬರು ಗ್ರಾಮದ ಜನರಿಗೆ ಉಚಿತವಾಗಿ ನೀಡುತ್ತಿದ್ದ ಕುಡಿಯುವ ನೀರಿನ ಪೂರೈಕೆ ಸ್ಥಗಿತಗೊಳಿಸಿದ್ದರು. ಈ ಬಗ್ಗೆ ಟಿವಿ9 ಕನ್ನಡ ಡಿಜಿಟಲ್​ ವಿಸ್ತೃತ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ತಾಲೂಕು ಆಡಳಿತ ಇದೀಗ ವ್ಯಕ್ತಿಯ ಮನವೊಲಿಸಿದ್ದು, ನೀರು ಪೂರೈಕೆ ಮತ್ತೆ ಪ್ರಾರಂಭವಾಗಿದೆ. ಟಿವಿ9 ಕನ್ನಡ ಡಿಜಿಟಲ್​ ವರದಿಗೆ ಫಲ ಸಿಕ್ಕಿದೆ.

  • ಸಂಜಯ್ ಚಿಕ್ಕಮಠ
  • Published On - 22:00 PM, 14 Jan 2021
ಸಮಸ್ಯೆ ಬಗೆಹರಿಸಲು ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು

ಕಲಬುರಗಿ: ಕಳೆದ ಅನೇಕ ವರ್ಷಗಳಿಂದ ಗ್ರಾಮಸ್ಥರೆಲ್ಲರಿಗೂ ತನ್ನ ಜಮೀನಿನಲ್ಲಿದ್ದ ಕೊಳವೆ ಬಾವಿಯಿಂದ ಉಚಿತವಾಗಿ ಕುಡಿಯುವ ನೀರು ನೀಡ್ತಾಯಿದ್ದ ಜಿಲ್ಲೆಯ ಜೇವರ್ಗಿ ತಾಲೂಕಿನ ಕೋಳಕೂರು ಗ್ರಾಮದಲ್ಲಿ ರಮೇಶ್​ ಗೌಡ ಎನ್ನುವವರು ಈ ಬಾರಿಯ ಗ್ರಾ.ಪಂ ಚುನಾವಣೆಯಲ್ಲಿ ಜನ ತಮ್ಮನ್ನು ಬೆಂಬಲಿಸಲಿಲ್ಲ ಎಂಬ ಕಾರಣಕ್ಕೆ ನೀರು ನೀಡುವುದನ್ನು ನಿಲ್ಲಿಸಿದ್ದರು.

ತನ್ನ ಪತ್ನಿಗೆ ಮತ ನೀಡದ ಗ್ರಾಮದ ಜನರಿಗೆ ಉಪಕಾರ ಮಾಡಬಾರದು ಎಂದು ನೀರು ಪೂರೈಕೆಗೆ ಬ್ರೇಕ್ ಹಾಕಿದ್ದರು. ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿದ್ದ ತನ್ನ ಪತ್ನಿ ಸೋಲು ಕಂಡ ಹಿನ್ನೆಲೆಯಲ್ಲೇ ಇಂತಹ ನಿರ್ಧಾರ ತೆಗೆದುಕೊಂಡಿದ್ದರು. ಇದರಿಂದ ಗ್ರಾಮದ ಜನರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಈ ಬಗ್ಗೆ ಇದೇ ಜನವರಿ 8 ರಂದು ಟಿವಿ9 ಕನ್ನಡ ಡಿಜಿಟಲ್ ವಿಸ್ತೃತ ವರದಿ ಪ್ರಕಟಿಸಿತ್ತು. ಈ ಸುದ್ದಿ ಇಡೀ ರಾಜ್ಯದ ಗಮನ ಸೆಳೆದು ಸಂಚಲನ ಸೃಷ್ಟಿಸಿತ್ತು. ಇದೀಗ ಟಿವಿ9 ವರದಿಯಿಂದ ಎಚ್ಚೆತ್ತುಕೊಂಡ ಜೇವರ್ಗಿ ತಾಲೂಕು ಆಡಳಿತ ಅನೇಕ ದಿನಗಳ ಹಗ್ಗಜಗ್ಗಾಟಕ್ಕೆ ತೆರೆ ಎಳೆಯುವ ಕೆಲಸ ಪ್ರಾರಂಭಿಸಿದೆ. ನೀರು ನಿಲ್ಲಿಸಿದ್ದ ವ್ಯಕ್ತಿಯೊಂದಿಗೆ ಮಾತನಾಡಿರುವ ಅಧಿಕಾರಿಗಳು ಕುಡಿಯುವ ನೀರಿಗೆ ತೊಂದರೆ ಮಾಡದಂತೆ ಹೇಳಿದ್ದಾರೆ. ಅಧಿಕಾರಿಗಳ ಮಾತಿಗೆ ಮಣಿದ ರಮೇಶ್​ ಗೌಡ ತಮ್ಮ ಕೊಳವೆ ಬಾವಿಯಿಂದ ನೀರು ಬಿಡಲು ಆರಂಭಿಸಿದ್ದಾರೆ.

ಏನಿದು ಪ್ರಕರಣ?
ಜಿಲ್ಲೆಯ ಜೇವರ್ಗಿ ತಾಲೂಕಿನ ಕೋಳಕೂರು ಗ್ರಾಮದ ನಿವಾಸಿ ರಮೇಶಗೌಡ ಅವರ ಪತ್ನಿ ಸುಧಾ ರಮೇಶಗೌಡ ಪಾಟೀಲ್ ಗ್ರಾಮದ ವಾರ್ಡ್ ನಂಬರ್ ನಾಲ್ಕರಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ವಾರ್ಡ್​ನಲ್ಲಿ ಸುಧಾ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಸುಲಭವಾಗಿ ಜಯಗಳಿಸುತ್ತೇವೆ ಅನ್ನೋ ವಿಶ್ವಾಸವನ್ನೂ ಹೊಂದಿದ್ದರು.

ಆದರೆ ಮತದಾನ ನಡೆದು, ಚುನಾವಣೆಯ ಫಲಿತಾಂಶ ಬಂದಾಗ ಅಚ್ಚರಿ ಕಾದಿತ್ತು. ಏಕೆಂದರೆ, ಗೆಲುವಿನ ವಿಶ್ವಾಸ ಹೊಂದಿದ್ದ ಸುಧಾ ರಮೇಶ್​ ಗೌಡ ಪಾಟೀಲ್ ಕೇವಲ 8 ಮತಗಳ ಅಂತರದಿಂದ ವಿಜಯಲಕ್ಷ್ಮಿ ಎಂಬುವವರ ವಿರುದ್ಧ ಪರಾಜಿತರಾಗಿದ್ದರು. ಸುಧಾ ಪರವಾಗಿ 285 ಮತಗಳ ಬಿದ್ದರೆ, ಎದುರಾಳಿ ಅಭ್ಯರ್ಥಿ ವಿಜಯಲಕ್ಷ್ಮಿಗೆ 293 ಮತಗಳು ಬಂದಿದ್ದವು. ಇದರಿಂದ ಕುಪಿತಗೊಂಡಿದ್ದ ರಮೇಶಗೌಡ ತನ್ನ ಜಮೀನಿನಲ್ಲಿದ್ದ ಕೊಳವೆ ಬಾವಿಯಿಂದ ಗ್ರಾಮದ ಜನರಿಗೆ ನೀಡುತ್ತಿದ್ದ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿದ್ದರು.

ಅನೇಕ ವರ್ಷಗಳಿಂದ ಕೋಳಕೂರು ಗ್ರಾಮಸ್ಥರು ಗ್ರಾಮದ ಹೊರವಲಯದಲ್ಲಿರುವ ರಮೇಶ್​ ಗೌಡ ಪಾಟೀಲ್ ಜಮೀನಿನಲ್ಲಿದ್ದ ಕೊಳವೆಬಾವಿಯಿಂದಲೇ ನೀರು ಪಡೆಯುತ್ತಿದ್ದರು. ರಮೇಶ್​ ಗೌಡ ಕೂಡಾ ತನ್ನ ಜಮೀನಿನಲ್ಲಿದ್ದ ಕೊಳವೆಬಾವಿ ನೀರನ್ನು ಉದಾರವಾಗಿ ನೀಡುತ್ತಾ ಬಂದಿದ್ದರು. ಇದೇ ಕಾರಣಕ್ಕೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ತಾನು ನೀರು ಕೊಡ್ತಾ ಇದ್ದ ವಾರ್ಡ್ ಜನರು ತನ್ನ ಪತ್ನಿಯನ್ನು ಅವಿರೋಧವಾಗಿ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸ ಹೊಂದಿದ್ದರು. ಆದ್ರೆ, ವಾರ್ಡ್​ ಜನರು ಅವಿರೋಧ ಆಯ್ಕೆ ಮಾಡದ ಕಾರಣ ಪತ್ನಿ ಸುಧಾ ವಾರ್ಡ್ ನಂಬರ್ 4ರಿಂದ ಸ್ಪರ್ಧಿಸಿದ್ದರು.

ಆದರೆ ಅಲ್ಲಿಯೂ ಜನರು ಸುಧಾರನ್ನು ಸೋಲಿಸಿದ ಕಾರಣ ರಮೇಶ್​ ಗೌಡ ಗ್ರಾಮಸ್ಥರಿಗೆ ಕುಡಿಯುವ ನೀರು ಕೊಡುವುದನ್ನು ಬಂದ್ ಮಾಡಿದ್ದರು. ಇದರಿಂದ ಗ್ರಾಮದ ಸಾವಿರಕ್ಕೂ ಅಧಿಕ ಜನರು ಕುಡಿಯುವ ನೀರಿಗಾಗಿ ಪಡಬಾರದ ಕಷ್ಟಪಡಬೇಕಾಗಿ ಬಂದಿತ್ತು. ಈ ಕುರಿತು ಟಿವಿ9 ಕನ್ನಡ ಡಿಜಿಟಲ್ನಲ್ಲಿ ಸುದ್ದಿ ಪ್ರಕಟವಾದ ನಂತರ, ಜೇವರ್ಗಿ ತಾಲೂಕು ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದರು.

ಗ್ರಾಮಕ್ಕೆ ಅನೇಕ ಬಾರಿ ಹೋಗಿ ರಮೇಶಗೌಡ ಅವರ ಮನವೊಲಿಸುವ ಕೆಲಸ ಮಾಡಿದ್ದರು. ಕುಡಿಯುವ ನೀರು ಪೂರೈಕೆ ಮಾಡುವಂತೆ ಜೇವರ್ಗಿ ತಹಶಿಲ್ದಾರ್ ಸಿದ್ದಾರಾಮ್ ಸಹ ಸೂಚನೆ ನೀಡಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ನಿನ್ನೆಯಿಂದ ಗ್ರಾಮದಲ್ಲಿ ಮತ್ತೆ ನೀರು ಪೂರೈಕೆಯಾಗುತ್ತಿದೆ. ರಮೇಶಗೌಡರಿಗೆ ಮೊದಲು ನೀರು ಪೂರೈಕೆ ಮಾಡಿ, ನಂತರ ತಮ್ಮ ಬೇಡಿಕೆ ಮತ್ತು ಸಮಸ್ಯೆಗೆ ಪರಿಹಾರ ಕಲ್ಪಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರಿಂದಾಗಿ ಕಳೆದ ಕೆಲ ದಿನಗಳಿಂದ ನೀರಿಗಾಗಿ ಪರದಾಡಿದ್ದ ಜನರು ಮತ್ತೆ ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತಾಗಿದೆ.

ಇನ್ನೊಂದು ಆಯಾಮ!
ಅಂದ ಹಾಗೆ, ರಮೇಶ್​ ಗೌಡ ತನ್ನದೆಂದು ಹೇಳುತ್ತಿರುವ ಕೊಳವೆಬಾವಿಯನ್ನು 30 ವರ್ಷದ ಹಿಂದೆ ಗ್ರಾಮ ಪಂಚಾಯತಿಯಿಂದಲೇ ಕೊರೆಯಿಸಲಾಗಿತ್ತು. ಆದರೆ ಆ ಜಾಗ ತನ್ನ ಜಮೀನಿನಲ್ಲಿದೆ ಎಂದು ಹೇಳಿದ್ದ ರಮೇಶಗೌಡ ಕೊಳವೆ ಬಾವಿಯನ್ನು ತನ್ನದಾಗಿ ಮಾಡಿಕೊಂಡಿದ್ದಾರೆ. ಹೀಗಾಗಿ, ಇದೀಗ ಗ್ರಾಮ ಪಂಚಾಯತಿ ವತಿಯಿಂದ ನಿರ್ಮಿಸಿದ ಕೊಳವೆಬಾವಿ ಸರ್ಕಾರಿ ಜಾಗದಲ್ಲಿಯೋ ಅಥವಾ ರಮೇಶ್​ ಗೌಡಗೆ ಸೇರಿದ ಹೊಲದಲ್ಲಿದೆಯೋ ಎಂದು ತಿಳಿಯಲು ಅಧಿಕಾರಿಗಳು ಸರ್ವೇ ಕಾರ್ಯಕ್ಕೆ ಮುಂದಾಗಿದ್ದಾರೆ.

ಕೊಳವೆ ಬಾವಿ ಯಾರ ಜಾಗದಲ್ಲಿ ಇದೆ ಅನ್ನೋದನ್ನು ಖಚಿತಪಡಿಸಿಕೊಂಡು, ಮುುಂದಿನ ಕ್ರಮ ಕೈಗೊಳ್ಳಲು ಜೇವರ್ಗಿ ತಹಶಿಲ್ದಾರ ಸಿದ್ದಾರಾಮ್ ಬೋಸಗಿ ನಿರ್ಧರಿಸಿದ್ದಾರೆ. ಒಂದು ವೇಳೆ ಕೊಳವೆಬಾವಿ, ನಿಜವಾಗಿಯೂ ರಮೇಶಗೌಡರ ಜಮೀನಿನಲ್ಲಿದ್ದರೆ ಪರ್ಯಾಯ ಕ್ರಮವನ್ನು ಕೈಗೊಳ್ಳಲಾಗುವುದು. ಅದು ಸರ್ಕಾರಿ ಜಮೀನಿನಲ್ಲಿದ್ದರೆ, ಜಮೀನನ್ನು ರಮೇಶ್​ ಗೌಡರಿಂದ ವಶಪಡಿಸಿಕೊಳ್ಳಲಾಗುವುದು ಎಂದು ಹೇಳಿರುವ ತಹಶಿಲ್ದಾರ್, ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಈ ಕುರಿತು ಟಿವಿ9 ಕನ್ನಡ ಡಿಜಿಟಲ್​ಗೆ ಪ್ರತಿಕ್ರಿಯೆ ನೀಡಿರುವ ಜೇವರ್ಗಿ ತಹಶಿಲ್ದಾರ್ ಸಿದ್ದಾರಾಮ್ ಬೋಸಗಿ,
ಕೋಳಕೂರು ಗ್ರಾಮದಲ್ಲಿ ನೀರು ಪೂರೈಕೆ ಬಂದ್ ಆಗಿರುವ ಬಗ್ಗೆ ಟಿವಿ9 ನಲ್ಲಿ ಸುದ್ದಿ ಪ್ರಕಟವಾದ ನಂತರ ನನ್ನ ಗಮನಕ್ಕೆ ಬಂತು. ರಮೇಶ್​ ಗೌಡ ಅವರ ಮನವೊಲಿಸುವ ಕೆಲಸ ಮಾಡಿದ್ಧೇವೆ. ಅವರು ಎಂದಿನಂತೆ ನೀರು ಬಿಡಲು ಒಪ್ಪಿಕೊಂಡಿದ್ದಾರೆ. ಕೊಳವೆಬಾವಿ ಇರುವ ಜಾಗದ ಸಮಸ್ಯೆ ಬಗ್ಗೆ ತಕರಾರುಗಳಿದ್ದು, ಅದನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಸ್ವತಃ ರಮೇಶ್​ ಗೌಡ ಸಹ ಟಿವಿ9 ಜೊತೆ ಮಾತನಾಡಿದ್ದು, ಜನರು ನನ್ನ ಪತ್ನಿಯನ್ನು ಸೋಲಿಸಿದ್ದರಿಂದ ಮನನೊಂದು ನೀರು ಪೂರೈಕೆ ಸ್ಥಗಿತಗೊಳಿಸಿದ್ದೆ. ಇದೀಗ ಅಧಿಕಾರಿಗಳು ಕೆಲ ಭರವಸೆ ನೀಡಿದ್ದಾರೆ. ಅದರಂತೆ ಮತ್ತೆ ನೀರು ಪೂರೈಕೆ ಮಾಡುತ್ತಿದ್ದೇನೆ. ಅಧಿಕಾರಿಗಳು ನನಗೆ ನೀಡಿರುವ ಭರವಸೆ ಈಡೇರಿಸುವ ನಂಬಿಕೆ ಇದೆ ಎಂದು ಹೇಳಿದ್ದಾರೆ.

ಪತ್ನಿಗೆ ಸೋಲು: ಕುಡಿಯುವ ನೀರಿಗೆ ಬ್ರೇಕ್, ಪರದಾಡುತ್ತಿರುವ ಸಾವಿರಾರು ಗ್ರಾಮಸ್ಥರು! ಮುಂದೇನು?