ಜಗತ್ತಿನೆಲ್ಲೆಡೆಯ ಸುದ್ದಿ ಕ್ಷಣಾರ್ಧದಲ್ಲಿ ಹರಿದು ಬಂದು ಅಂಗೈ ಸೇರುವಾಗ ಯಾವುದರತ್ತ ಕಣ್ಣು ಹಾಯಿಸಬೇಕು ಎಂಬ ಗೊಂದಲ ಸಹಜ.. ಎಷ್ಟೋ ಬಾರಿ ಸುದ್ದಿಯ ಹೆಸರಿನಲ್ಲಿ ಅಸಂಗತ ಸಂಗತಿಗಳೂ ತೇಲಿ ಬರುತ್ತವೆ. ಅವುಗಳನ್ನು ಸೋಸುವುದೇ ಹರಸಾಹಸ. ನಮ್ಮ ಓದುಗರನ್ನು ಇಂತಹ ಗೊಂದಲಗಳಿಂದ ಪಾರು ಮಾಡಲೆಂದೇ ಪ್ರತಿನಿತ್ಯ Live Blog ಮೂಲಕ ಆಯಾ ಕ್ಷಣದ ಮುಖ್ಯಾಂಶಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಇದು ನಿಮಗಿಷ್ಟವಾಗಿದೆ ಎನ್ನುವ ನಂಬಿಕೆ ನಮ್ಮದು.. ಬನ್ನಿ ಇಂದಿನ ಸುದ್ದಿಯ ಹರಿವನ್ನು ನೋಡೋಣ. ಸುದ್ದಿಯ ಸಂಪೂರ್ಣ ವಿವರ ವೆಬ್ಸೈಟ್ನ ವಿವಿಧ ವಿಭಾಗಗಳಲ್ಲಿ ಲಭ್ಯವಿರುತ್ತವೆ. ಓದಲು ಮರೆಯದಿರಿ.
ಶಬರಿಮಲೆ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಮಕರ ಜ್ಯೋತಿ ದರ್ಶನವಾಗಿದೆ. ಸಹಸ್ರ ಸಂಖ್ಯೆಯ ಭಕ್ತರು ಜ್ಯೋತಿಯನ್ನು ಕಂಡು ಭಕ್ತಿಸಾಗರದಲ್ಲಿ ಮಿಂದೆದ್ದಿದ್ದಾರೆ. ಅಯ್ಯಪ್ಪ ಸ್ವಾಮಿಯ ದರ್ಶನವನ್ನೂ ಪಡೆದುಕೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಶಿವಗಂಗೆಯ ಗಿರಿಜಾ ಕಲ್ಯಾಣ ಕಾರ್ಯಕ್ರಮದಲ್ಲಿ ಕೊವಿಡ್ ನಿಯಮ ಉಲ್ಲಂಘನೆಯಾಗಿದ್ದು, ಸಾಮಾಜಿಕ ಅಂತರವಿಲ್ಲದೆ, ಜನರು ಓಡಾಡಿದ್ದಾರೆ. ಈ ನಿಟ್ಟಿನಲ್ಲಿ ಕೊವಿಡ್ ನಿಯಮ ಅನುಸರಿಸಿ ಗಿರಿಜಾ ಕಲ್ಯಾಣ ಕಾರ್ಯಕ್ರಮ ಮಾಡಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಆದರೆ 8 ಸಾವಿರಕ್ಕೂ ಹೆಚ್ಚು ಜನ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಜಿಲ್ಲಾಧಿಕಾರಿ ಆದೇಶವನ್ನು ಧಿಕ್ಕರಿಸಿದ್ದಾರೆ.
ಮಂಗಳೂರಿನಿಂದ ಆಗಮಿಸಿದ ಕೊವಿಡ್ ವ್ಯಾಕ್ಸಿನ್ ವಾಹನ ಚಿಕ್ಕಮಗಳೂರಿಗೆ ಆಗಮಿಸಿದ್ದು, 6000 ಕೊವಿಡ್ ವ್ಯಾಕ್ಸಿನ್ ಹೊತ್ತು ತಂದ ವಾಹನಕ್ಕೆ ಪೂಜೆ ಮಾಡಿ ಆರೋಗ್ಯ ಸಿಬ್ಬಂದಿಗಳು ಬರ ಮಾಡಿಕೊಂಡಿದ್ದಾರೆ. ಮೊದಲ ಹಂತದಲ್ಲಿ 10,579 ಮಂದಿ ಲಸಿಕೆ ಪಡೆಯಲಿದ್ದಾರೆ.
ಸಿದ್ದಲಿಂಗಪುರದಲ್ಲಿ ಸಾಂಪ್ರದಾಯಿಕ ಕಿಚ್ಚು ಹಾಯಿಸುವ ಕಾರ್ಯಕ್ರಮಕ್ಕೆ ಕೆಲ ಕಾಲ ಪೊಲೀಸರು ತಡೆ ನೀಡಿದ್ದು,ನಂತರದಲ್ಲಿ ಹಬ್ಬದ ಆಚರಣೆಗೆ ಅವಕಾಶ ನೀಡಿದ್ದಾರೆ. ವಿವಿಧ ಬಣ್ಣಗಳಿಂದ ಹಸುಗಳನ್ನು ಸಿಂಗಾರಗೊಳಿಸಿ, ಪ್ರತಿ ವರ್ಷದಂತೆ ಹಸುಗಳಿಗೆ ಪೂಜೆ ಸಲ್ಲಿಸಿದ ಗ್ರಾಮಸ್ಥರು ಹುಲ್ಲಿಗೆ ಬೆಂಕಿ ಹಚ್ಚಿ ಮಕರ ಸಂಕ್ರಾತಿ ಹಬ್ಬವನ್ನು ಸಂಭ್ರಮಿಸಿದ್ದಾರೆ.
ಫೆಬ್ರವರಿ 1 ರಂದು ಬೆಳಗ್ಗೆ 11 ಗಂಟೆಗೆ ಕೇಂದ್ರದ ಬಜೆಟ್ ಮಂಡನೆಯಾಗಲಿದೆ. ಜನವರಿ 29 ರಿಂದ ಫೆಬ್ರವರಿ 15 ರವರೆಗೆ ಮೊದಲ ಹಂತದ ಚರ್ಚೆ ನಡೆಯಲಿದ್ದು, ಮಾರ್ಚ್ 8 ರಿಂದ ಏಪ್ರಿಲ್ 8 ರವರೆಗೆ ಬಜೆಟ್ ಮೇಲಿನ ಎರಡನೇ ಹಂತದ ಚರ್ಚೆ ನಡೆಯಲಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ತಮಿಳುನಾಡಿನಲ್ಲಿ ನಡೆದ ಪೊಂಗಲ್ ಹಬ್ಬದ ಆಚರಣೆಯಲ್ಲಿ ಭಾಗಿಯಾಗಿದ್ದು, ಮಧುರೈನ ಸ್ಥಳಿಯರೊಂದಿಗೆ ಊಟ ಮಾಡಿದ್ದಾರೆ.
ಬೆಂಗಳೂರು ನಗರದ ಗವಿಗಂಗಾಧರೇಶ್ವರನ ದೇಗುಲಕ್ಕೆ ಸಂಜೆ 5.25 ರಿಂದ 5.27ಕ್ಕೆ ಸೂರ್ಯ ರಶ್ಮಿ ಸ್ಪರ್ಶಿಸಬೇಕಿತ್ತು, ಆದರೆ ಮೋಡ ಅಡ್ಡ ಬಂದ ಹಿನ್ನೆಲೆ ಸೂರ್ಯರಶ್ಮಿ ಸ್ಪರ್ಶ ಅಗೋಚರವಾಗಿದ್ದು, ಗವಿಗಂಗಾದರನನ್ನು ಸ್ಪರ್ಶಿಸದೆ ತನ್ನ ಪತವನ್ನು ಭಾಸ್ಕರ ಬದಲಿಸಿ ಮುಂದೆ ಸಾಗಿದ್ದಾನೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅಹಮದಾಬಾದ್ನಲ್ಲಿ ನಡೆದ ಮಕರ ಸಂಕ್ರಾತಿ ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಗಾಳಿಪಾಟ ಹಾರಿಸಿ ಸಂಭ್ರಮ ಪಟ್ಟಿದ್ದಾರೆ.
ಹಸಿರು ಮಾರ್ಗ ಮೆಟ್ರೋ ಉದ್ಘಾಟನೆಯಲ್ಲಿ ನಾಗಸಂದ್ರದ ಬಳಿ ಪಾದಚಾರಿಗಳ ಮೇಲ್ಸೇತುವೆ ಮತ್ತು ಮಹಾತ್ಮ ಗಾಂಧಿ ರಸ್ತೆಯ ಪಾದಚಾರಿಗಳ ಮೇಲ್ಸೇತುವೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಲೆಕ್ಟ್ರಿಕ್ ಚಾಲನೆ ಮಾಡಿದ್ದಾರೆ.
ಮೋದಿ ಜೀ, ಬಿಎಸ್ವೈ, ಅಜಯ್ ಸೇಠ್ ಹಾಗೂ ತಂಡಕ್ಕೆ ನಾನು ಮೊದಲು ಶುಭ ಹಾರೈಸುತ್ತೇನೆ. 2011 ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಮೆಟ್ರೋ ಕಾಮಗಾರಿಗೆ ಚಾಲನೆ ನೀಡಿದ್ದೆ,ಮೊದಲ ಹಂತದ ಕಾಮಗಾರಿಗೆ ನಾನೇ ಚಾಲನೆ ಕೊಟ್ಟಿದ್ದೆ. 30 ಲಕ್ಷ ಮಂದಿ ಈ ಮೆಟ್ರೋದಲ್ಲಿ ಸಂಚಾರ ಮಾಡುತ್ತಿದ್ದು,ದೆಹಲಿಯಲ್ಲಿ ಮಾಲಿನ್ಯ ಕಡಿಮೆ ಆಗಲು ಇದೇ ಕಾರಣ. ಸಬ್ ಅರ್ಬನ್ ಮೆಟ್ರೋಗಾಗಿಯೂ ಬಿಎಸ್ವೈ ದುಡಿದಿದ್ದಾರೆ. ಬಿಎಂಆರ್ಸಿಎಲ್ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಹಸಿರು ಮಾರ್ಗ ಮೆಟ್ರೋ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಹೇಳಿದ್ದಾರೆ.
ಇಂದು ತಮಿಳುನಾಡಿನ ಪೊಂಗಲ್ ಹಬ್ಬದಲ್ಲಿ ಭಾಗವಹಿಸಲು ಬಿಜೆಪಿ ಪಕ್ಷದ ಅಧ್ಯಕ್ಷ ಜೆ.ಪಿ ನಡ್ಡಾ ಚೆನ್ನೈಗೆ ಭೇಟಿ ನೀಡಿದ್ದಾರೆ.
ಮೆಟ್ರೋದ ಹಸಿರು ಮಾರ್ಗಕ್ಕೆ 6 ಕಿ.ಲೋ ಮೀಟರ್ ಉದ್ದದ ನೂತನ ಮಾರ್ಗ ಸೇರ್ಪಡೆ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹಸಿರು ಬಾವುಟ ಹಾರಿಸುವ ಮೂಲಕ ವಿಡಿಯೋ ಕಾನ್ಫರೆನ್ಸಿಂಗ್ನಲ್ಲಿ ಚಾಲನೆ ನೀಡಿದ್ದು, ನಾಡಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಸಿಎಂ ಬಿ.ಎಸ್ ಯಡಿಯೂರಪ್ಪ, ಸಚಿವ ಆರ್. ಅಶೋಕ್, ಸದಾನಂದ ಗೌಡ, ಗೋವಿಂದ ಕಾರಜೋಳ, ಭೈರತಿ ಬಸವರಾಜ್, ಎಸ್. ಆರ್. ವಿಶ್ವನಾಥ್, ಪಿಸಿ ಮೋಹನ್ ಸೇರಿದಂತೆ ಅನೇಕ ಗಣ್ಯರ ಸಾಥ್ ನೀಡಿದ್ದಾರೆ. ತುಮಕೂರು ರಸ್ತೆ ನಾಗಸಂದ್ರದಿಂದ ಕನಕಪುರ ರಸ್ತೆಯ ಯಲಚೇನಹಳ್ಳಿ ವರೆಗೂ ಇದ್ದ ಈ ಮಾರ್ಗವನ್ನು ಯಲಚೇನಹಳ್ಳಿ ನಿಲ್ದಾಣದಿಂದ ಕನಕಪುರ ರಸ್ತೆಯಲ್ಲಿ 6 ಕಿ.ಮೀ ವಿಸ್ತರಿಸಲಾಗಿದೆ. ಈಗ ಒಟ್ಟು ಇಲ್ಲಿ 5 ನಿಲ್ದಾಣ ಇರಲಿದ್ದು, ಕೋಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ವಾಜರಹಳ್ಳಿ, ತಲಘಟ್ಟಪುರ, ರೇಷ್ಮೆ ಸಂಸ್ಥೆ ( ಅಂಜನಾಪುರ ).
ತಮಿಳುನಾಡಿನ ಮಧುರೈನಲ್ಲಿ ಪೊಂಗಲ್ ಹಬ್ಬದ ಪ್ರಯುಕ್ತ ನಡೆದ ಜಲ್ಲಿಕಟ್ಟು ಆಚರಣೆಯ ವೇಳೆ ಕಪ್ಪು ಬಾವುಟವನ್ನು ಹಿಡಿದು ಕೇಂದ್ರದ ನೂತನ ಕೃಷಿ ಕಾಯ್ದೆಯ ವಿರುದ್ಧ ಘೋಷಣೆ ಕೂಗುತ್ತಿದ್ದ ಇಬ್ಬರು ಹೋರಿ ಪಳಗಿಸುವವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
0-5 ವರ್ಷದೊಳಗಿನ ಮಕ್ಕಳಿಗೆ ಪೊಲಿಯೋ ಲಸಿಕೆ ನೀಡಲು, ಜನವರಿ 31ಕ್ಕೆ ದಿನಾಂಕವನ್ನು ಮರುನಿಗದಿ ಮಾಡಲಾಗಿದೆ. ಜನವರಿ 16 ರಿಂದ ಕೊರೊನಾ ವೈರಸ್ ವಿರುದ್ಧದ ಲಸಿಕೆ ವಿತರಣೆ ಇರುವ ಕಾರಣ ಪೊಲಿಯೋ ಲಸಿಕೆ ನೀಡುವಿಕೆಯನ್ನು ಮುಂದೂಡಲಾಗಿದೆ.
ಯಲಚೇನಹಳ್ಳಿ ಮೆಟ್ರೋ ಸ್ಟೇಷನ್ನಿಂದ ಅಂಜನಾಪುರ ಮೆಟ್ರೋ ಸ್ಟೇಷನ್ ವರೆಗೆ ನಿರ್ಮಾಣವಾದ ಹಸಿರು ಮಾರ್ಗಕ್ಕೆ ಇಂದು ಚಾಲನೆ ನೀಡಲಿದ್ದು, ಮೆಟ್ರೋ ಪಿಲ್ಲರ್ಗಳ ಮೇಲೆ ಬಿಜೆಪಿ ಬಾವುಟ ರಾರಾಜೀಸುತ್ತಿದೆ. ಈ ನಿಟ್ಟಿನಲ್ಲಿ ಮೆಟ್ರೋ ಉದ್ಘಾಟನೆ ಚಾಲನೆಗೆ ಪಕ್ಷದ ಪ್ರಚಾರ ಬೇಕಿತ್ತಾ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.
ಮಕರ ಸಂಕ್ರಾತಿಯ ಈ ದಿನದಂದು ಸಂಜೆ ಗವಿಗಂಗಾಧರರೇಶ್ವರ ದೇವಾಲಯದ ಶಿವಲಿಂಗವನ್ನು ಸೂರ್ಯರಶ್ಮಿ ಸ್ಪರ್ಶಿಸಲಿದ್ದು, 5:25 ರಿಂದ 27 ರ ನಡುವೆ ಈಶ್ವರನಿಗೆ ನಮಿಸಿ ಸೂರ್ಯದೇವ ಪಥ ಬದಲಿಸಲಿದ್ದಾನೆ. ಸೂರ್ಯ ರಶ್ಮಿ ಕಣ್ತುಂಬಿಕೊಳ್ಳಲು ಎಲ್ಇಡಿ ವ್ಯವಸ್ಥೆ ಮಾಡಲಾಗಿದ್ದು, ಸೂರ್ಯರಶ್ಮಿ ಸ್ಪರ್ಷದ ಬಳಿಕ ಶಿವನಿಗೆ ವಿಶೇಷ ಅಭಿಷೇಕ ಮಾಡಿ ನಂತರ ಭಕ್ತರ ದರ್ಶನಕ್ಕೆ ಅವಕಾಶ ಮಾಡಲಾಗುತ್ತದೆ.
ಸಿಡಿ ಇಟ್ಟುಕೊಂಡು ಕಾಂಗ್ರೆಸ್ ನವರು ಯಡಿಯೂರಪ್ಪ ನವರಿಂದ ಹೆಚ್ಚು ಅನುದಾನ ಪಡೆಯುತ್ತಿದ್ದಾರೆ.ಆದರೆ ನಾವು ಕೇಳಿದರೆ ವಿಷ ಕುಡಿಯಲು ಹಣವಿಲ್ಲ ಎನ್ನುತ್ತೀರಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಯತ್ನಾಳ್ ಬಳಿ ಸಿಡಿ ಇದೆ ಎಂಬ ಹೆಚ್. ವಿಶ್ವನಾಥ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಸನಗೌಡ ಪಾಟೀಲ್ ಯತ್ನಾಳ್ ನನ್ನ ಬಳಿ ಮೂರು ಜನರು ಬಂದು ಸಿಡಿಯಲ್ಲಿ ಯಡಿಯೂರಪ್ಪ ಅವರ ಭ್ರಷ್ಟಾಚಾರದ ಸಿಡಿ ಅಷ್ಟೇ ಇಲ್ಲ. ನೋಡಲಾರದಂತಹ ಸಿಡಿಗಳು ಇವೆ ಎಂದು ತೀಳಿಸಿದ್ದರು ಆದರೆ ನಾನು ಇಂತಹ ಹೊಲಸು ಕೆಲಸ ಮಾಡುವುದಿಲ್ಲ. ನಾನು ಮೌಲ್ಯಾಧಾರಿತ ಆಧಾರದ ಮೇಲೆ ರಾಜಕಾರಣ ಮಾಡುತ್ತೇನೆ ಎಂದು ಯಾತ್ನಾಳ್ ತಿಳಿಸಿದ್ದಾರೆ.
ನೂತನ ಕೃಷಿ ಕಾಯ್ದೆಯ ವಿಚಾರವಾಗಿ ಚರ್ಚೆ ನಡೆಸಲು ಸುಪ್ರೀಂ ಕೋರ್ಟ್ ರಚಿಸಿದ ನಾಲ್ವರ ಸಮಿತಿಯಿಂದ ಮಾಜಿ ಎಂಪಿ ಮತ್ತು ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ಅಧ್ಯಕ್ಷ ಭೂಪಿಂದರ್ ಸಿಂಗ್ ಮಾನ್ ಹಿಂದೆ ಸರಿದಿದ್ದಾರೆ. ನಾನು ಯಾವಾಗಲೂ ರೈತರ ಜೊತೆಗೆ ಇರುತ್ತೇನೆ. ರೈತರು, ಪಂಜಾಬ್ ಹಿತಾಸಕ್ತಿಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಭೂಪಿಂದರ್ ಸಿಂಗ್ ಮಾನ್ ಹೇಳಿದ್ದಾರೆ.
ಪಾದಯಾತ್ರೆ ಹತ್ತಿಕ್ಕಲು ಹೊರಗಿನ ಮಲ್ಲಪ್ಪ ಶೆಟ್ಟಿಗಳು ಬೇಡ, ನಮ್ಮಲ್ಲೇ ಮಲ್ಲಪ್ಪ ಶೆಟ್ಟಿಗಳಿದಾರೆ. ಸ್ವಾಮೀಜಿಗಳು ಸಮುದಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಪಾದಯಾತ್ರೆ ನೋಡಿ ತಕ್ಷಣ ಮೀಸಲಾತಿ ಘೋಷಿಸಬೇಕು. ಸಿಎಂ ಬಿ.ಎಸ್ ಯಡಿಯೂರಪ್ಪ ಹಲವು ಭಾಷಣಗಳಲ್ಲಿ ಪಂಚಮಸಾಲಿ ಸಮುದಾಯಕ್ಕೆ ಸಹಾಯ ಮಾಡಿದ್ದೇನೆ ಎಂದಿದ್ದಾರೆ. ಅದು ಕೇವಲ ಭಾಷಣ ಆಗಬಾರದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಜಿಲ್ಲೆಗೆ ಮೊದಲ ಹಂತದಲ್ಲಿ 8000 ಡೋಸ್ ವ್ಯಾಕ್ಸಿನ್ ಬಂದಿದ್ದು, ಡಿಎಚ್ಒ ಮಂಚೇಗೌಡರ ನೇತೃತ್ವದಲ್ಲಿ ವಾಹನಕ್ಕೆ ಪೂಜೆ ಸಲ್ಲಿಸಿ ಮಂಡ್ಯ ಜಿಲ್ಲಾ ಆರೋಗ್ಯ ಅಧಿಕಾರಿಗಳು ಕೋಲ್ಡ್ ಸ್ಟೋರೇಜ್ನಲ್ಲಿ ವ್ಯಾಕ್ಸಿನ್ ಸಂಗ್ರಹಿಸಿದ್ದಾರೆ.
ಸಿಡಿ ಒಳಗೆ ಏನು ಇದೆ ಎಂದು ಅವರಿಗೆ ಗೊತ್ತಿದೆ. ಭ್ರಷ್ಟಾಚಾರ ಎಷ್ಟು ನಡೆದಿದೆ ಎಂದು ಅವರಿಗೆ ಗೊತ್ತಿದೆ. ಇಡಿ, ಎಸಿಬಿ, ಸೂಮೋಟೊ ಕೇಸ್ ಏಕೆ ಹಾಕುತ್ತಿಲ್ಲ? ಎಲ್ಲಾ ಯಾಕೆ ಸುಮ್ಮನ್ನಿದ್ದಾರೆ?ಈ ಕುರಿತು ಹೈ ಕೋರ್ಟ್ ನ್ಯಾಯಾಧೀಶರ ನೇತ್ರತ್ವದಲ್ಲಿ ತನಿಖೆ ಆಗಬೇಕಿದೆ. ಇದಕ್ಕೆ ಸೂಮೋಟೊ ಕೇಸ್ ದಾಖಲಿಸಬೇಕು ಇದು ಕಾಂಗ್ರೆಸ್ ಒತ್ತಾಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಯಡಿಯೂರಪ್ಪ ಅವರು ಕಾಂಗ್ರೆಸ್ ದೇಶಕ್ಕೆ ಮಾರಾಕ ಎಂದು ಹೇಳಿದ್ದಾರೆ. ಆದರೆ ಯಡಿಯೂರಪ್ಪ ಅವರೇ ಕಾಂಗ್ರೆಸ್ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಅಧಿಕಾರ ನಿಮಗೆ ಇರಬಹುದು, ನಿಮಗೆ ಮಾತಾಡುವುದಕ್ಕೆ ಅವಕಾಶ ಕೊಟ್ಟಿರುವುದು ನಾವು ತಯಾರು ಮಾಡಿದ ನಾಯಕರು ನಿಮಗೆ ಕೊಟ್ಟ ಶಕ್ತಿ. ನಿಮ್ಮ ತಲೆಯಲ್ಲಿ ಭ್ರಮೆ ಇದೆ ಅದನ್ನು ತೆಗೆದುಹಾಕಿ. ನಿಮ್ಮಲ್ಲಿ ಸಂಪುಟ ರಚನೆ ನಡೆದಿದೆ ಅದು ನಿಮ್ಮ ವಿಚಾರ, ನಿಮ್ಮ ಪಕ್ಷದವರೇ ಹೇಳಿದ್ದಾರೆ ಬ್ಲಾಕ್ಮೇಲೆ ಜನತಾ ಪಾರ್ಟಿ ಎಂದು ಇದಕ್ಕೆ ನಾನು ಹೇಳುತ್ತೇನೆ ನಿಮ್ಮ ಪಕ್ಷ ಬ್ಲಾಕ್ಮೇಲ್ ಜನತಾ ಪಾರ್ಟಿ ಎಂದು ಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಇಡೀ ವರ್ಷ ಎಲ್ಲಾ ವ್ಯಾಪಾರಿಗಳಿಗೆ ಕೊರೊನಾ ಕಾರಣದಿಂದಾಗಿ ನಷ್ಟವಾಗಿದೆ.ಯಾರಿಗೂ ಸಹಾಯ ಆಗದ ರೀತಿಯಲ್ಲಿ ಸರ್ಕಾರ ನೆಡೆದುಕೊಂಡಿದ್ದು, ರೈತರು, ವರ್ತಕರ ವಿರುದ್ಧ ಸರ್ಕಾರ ಕೆಲಸ ಮಾಡುತ್ತಿದೆ. ರೈತರಿಗೆ ಸಬ್ಸಿಡಿ, ಶುಲ್ಕ, ಸ್ಕಾಲರ್ಶಿಪ್ , ವೃತ್ತಿ ಮಾಡುವವರಿಗೆ 5 ಸಾವಿರ ಕೊಡುವುದಕ್ಕೆ ತೀರ್ಮಾನ ಮಾಡಿದ್ದರು ಇವುಗಳನ್ನು ನಿಲ್ಲಿಸಿದ್ದಾರೆ . ಇದರ ಜೊತೆಗೆ ಕಳೆದ ತಿಂಗಳಲ್ಲಿ ಮೂರು ಬಾರಿ ಬೆಲೆ ಏರಿಕೆ ಮಾಡಿದ್ದು, ವಿದ್ಯುತ್ ಬೆಲೆ ಕೂಡ ಹೆಚ್ಚು ಮಾಡಿದ್ದಾರೆ. ಗ್ಯಾಸ್ ಬೆಲೆ ಕೂಡ ಹೆಚ್ಚಾಗಿದೆ. ಇದೆಲ್ಲವನ್ನೂ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಒತ್ತಡ ಇಲ್ಲದೇ ಬಿಎಸ್ವೈ ಕೈಬಲಪಡಿಸಲು ರಾಜೀನಾಮೆ ನೀಡಿದ್ದೇನೆ. ಸಚಿವ ಸ್ಥಾನಕ್ಕೆ ಹೆಚ್ಚಿನ ಆಕಾಂಕ್ಷಿಗಳಿರುವ ಹಿನ್ನೆಲೆಯಲ್ಲಿ ಒತ್ತಡ ಅರಿತು ನಾನೇ ರಾಜೀನಾಮೆ ನೀಡಿದ್ದೇನೆ ಎಂದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೋಲಾರ ನಗರದಲ್ಲಿ ಹೆಚ್. ನಾಗೇಶ್ ಹೇಳಿದ್ದಾರೆ.
ಕರ್ನಾಟಕದಲ್ಲಿ 20ನೇ ತಾರೀಖಿನಂದು ಬೃಹತ್ ಚಳುವಳಿ ಮಾಡುತ್ತೇವೆ. ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಹಿಡಿದು ಎಲ್ಲಾ ಕಡೆಯಿಂದ ಬಂದು ರಾಜ ಭವನಕ್ಕೆ ಮುತ್ತಿಗೆ ಹಾಕುತ್ತೇವೆ. ಕೃಷಿ ಕಾಯ್ದೆ ಏನು ತಂದಿದ್ದಾರೆ ಅದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಇಡೀ ದೇಶದ ರೈತರು, ಹೊರ ದೇಶವು ನೋಡುವ ರೀತಿಯಲ್ಲಿ ಹೋರಾಟ ಮಾಡುತ್ತಿದ್ದಾರೆ . ಮಾಧ್ಯಮಗಳು ಹೋರಾಟದ ವಿಚಾರ ತಿಳಿಸುತ್ತಿದ್ದೀರಿ, ಸುಪ್ರೀಂ ಕೋರ್ಟ್ಗೂ ಅವರ ನೋವು ಅರಿವಾಗಿದೆ. ಆದರೆ ಸ್ಟೇ ಕೊಟ್ರು ಕೂಡ , ರೈತರಿಗೆ ಸಮಾಧಾನ ತಂದಿಲ್ಲ. ಹೀಗಾಗಿ 15ನೇ ತಾರೀಖಿನಂದು ರಾಷ್ಟ್ರದ ವ್ಯಾಪ್ತಿಯಲ್ಲಿ ಆಂದೋಲನ ಮಾಡುತ್ತಿದ್ದಾರೆ . ಈಗಾಗಲೇ ರಾಷ್ಟ್ರಪತಿಗೆ ಮನವಿ ಕೊಡುತಿದ್ದು, ರಾಜ್ಯಪಾಲರಿಗೂ ಮನವಿ ಕೊಡುತ್ತೇವೆ. ರೈತರ ಪರವಾಗಿ ಕಾಂಗ್ರೆಸ್ ಪಕ್ಷ ಯಾವಾಗಲೂ ನಿಂತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಬಿಜೆಪಿ ಬ್ಲ್ಯಾಕ್ಮೇಲರ್ಸ್,ಭ್ರಷ್ಟಾಚಾರಿಗಳ ಪಕ್ಷವಾಗಿದೆ. ಹೀಗೆಂದು ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಈ ಹೋರಾಟ ಹತ್ತಿಕ್ಕಲು ದೊಡ್ಡ ಷಡ್ಯಂತ್ರ ನಡೆದಿದೆ. ಇದಕ್ಕೆ ಯಾರೂ ಬಗ್ಗಬಾರದು. ನಿಮ್ಮ ಭವಿಷ್ಯದ ಸಲುವಾಗಿ ಈ ಹೋರಾಟ ಮಾಡುತ್ತಿದ್ದಾರೆ. ಎಂದು ಪರೋಕ್ಷವಾಗಿ ಮುರುಗೇಶ್ ನಿರಾಣಿಗೆ, ಯಾತ್ನಾಳ್ ವಾಗ್ದಾಳಿ ನಡೆಸಿದ್ದು, ಈ ಹೋರಾಟಕ್ಕೆ ನಾನು ವೈಯಕ್ತಿಕವಾಗಿ 5 ಲಕ್ಷ ಹಣ ಕೊಡುತ್ತೇನೆ. ನಾನು ಏನು ಬಡವ ಅಲ್ಲ ಎಂದು ಬಸನಗೌಡ ಪಾಟೀಲ್ ಯಾತ್ನಾಳ್ ಹೇಳಿದ್ದಾರೆ.
ರಾಜ್ಯದಲ್ಲಿ ರೈತರಿಗೆ ಶಕ್ತಿ ತುಂಬಲು ಜನವರಿ 20ರಂದು ಚಳವಳಿ ನಡೆಸಲಾಗುತ್ತದೆ. ರೈಲ್ವೆ ನಿಲ್ದಾಣದಿಂದ ರಾಜಭವನದವರೆಗೆ ಈ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ರಾಜಭವನಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಮೆಟ್ರೋ ಹಸಿರು ಮಾರ್ಗ ತುಮಕೂರು ರಸ್ತೆ ನಾಗಸಂದ್ರದಿಂದ ಕನಕಪುರ ರಸ್ತೆಯ ಯಲಚೇನಹಳ್ಳಿ ವರೆಗೂ ಇದ್ದ ಈ ಮಾರ್ಗವನ್ನು ಯಲಚೇನಹಳ್ಳಿ ನಿಲ್ದಾಣದಿಂದ ಕನಕಪುರ ರಸ್ತೆಯಲ್ಲಿ 6 ಕಿ.ಮೀ ವಿಸ್ತರಿಸಲಾಗಿದೆ. ಈಗ ಒಟ್ಟು ಇಲ್ಲಿ 5 ನಿಲ್ದಾಣ ಇರಲಿದ್ದು, ಕೋಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ವಾಜರಹಳ್ಳಿ, ತಲಘಟ್ಟಪುರ, ರೇಷ್ಮೆ ಸಂಸ್ಥೆ ( ಅಂಜನಾಪುರ ).ಈಗಾಗಲೇ ಮೂರು ತಿಂಗಳಿನಿಂದ ಟ್ರಯಲ್ ರನ್ ನಡೆಸಿರುವ ಮೆಟ್ರೋ. ಕಳೆದ ತಿಂಗಳು ರೈಲ್ವೇ ಸೇಫ್ಟಿ ಸರ್ಟಿಫಿಕೇಟ್ ಪಡೆದಿದ್ದು, ಈ ಹಿನ್ನಲೆಯಲ್ಲಿ ಇಂದು ಲೋಕಾರ್ಪಣೆಗೊಳ್ಳಲಿದೆ.
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿರುವ ಶಾರದಾಂಬೆ ಪೀಠಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಭೇಟಿ ನೀಡಿದ್ದು, ವಿಶೇಷ ಪೂಜೆ ಸಲ್ಲಿಸಿ ಜಗದ್ಗುರುಗಳನ್ನ ಭೇಟಿ ಮಾಡಿದ್ದಾರೆ.
ಮೆಟ್ರೋದ ಹಸಿರು ಮಾರ್ಗಕ್ಕೆ 6 ಕಿ.ಲೋ ಮೀಟರ್ ಉದ್ದದ ನೂತನ ಮಾರ್ಗ ಸೇರ್ಪಡೆ ಕಾರ್ಯಕ್ರಮಕ್ಕೆ ಇಂದು ಸಂಜೆ 4.30ಕ್ಕೆ ಸಿಎಂ ಬಿ.ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಲಿದ್ದು, ನೂತನ ಕೊಣನಕುಂಟೆ ಕ್ರಾಸ್ ಮೆಟ್ರೋ ನಿಲ್ದಾಣದಿಂದ ಸಿಎಂ ಬಿ.ಎಸ್ ಯಡಿಯೂರಪ್ಪ ಉದ್ಘಾಟನೆ ಮಾಡಲಿದ್ದಾರೆ.
ಬೆಂಗಳೂರಿನ ಆರ್.ಆರ್.ನಗರ ಪೊಲೀಸರು ಗಾಂಜಾ ಎಣ್ಣೆ ಮಾರಾಟ ಮಾಡುತ್ತಿದ್ದ ಶರತ್, ವರುಣ್, ಸಾಗರ್ ಅನ್ನು ಬಂಧಿಸಿದ್ದು, ಆರೋಪಿಗಳಿಂದ 199 ಗ್ರಾಂ ಗಾಂಜಾ ಆಯಿಲ್ ಜಪ್ತಿ ಮಾಡಿದ್ದಾರೆ.
ಮೈಸೂರು ಜಿಲ್ಲೆ ನಂಜನಗೂಡಿನ ನಂಜುಂಡೇಶ್ವರ ದೇಗುಲಕ್ಕೆ ನೂತನ ಸಚಿವ ಆರ್.ಶಂಕರ್ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದು, ಶ್ರೀಕಂಠೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕಳೆದ ವರ್ಷ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಕೋಮು ಗಲಭೆಗೆ ಸಂಬಂಧಿಸಿದಂತೆ 400 ಕ್ಕೂ ಹೆಚ್ಚಿನ ಮುಸ್ಲಿಮ್ ಸಮಾಜದ ಯುವಕರನ್ನು ಬಂಧಿಸಿದ್ದನ್ನು ಪ್ರತಿಭಟಿಸಿ ಇದೇ 22 ರಂದು ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಮತ್ತು ಸುತ್ತ ಮತ್ತಲಿನ ಅಂಗಡಿ ಮುಗ್ಗಟ್ಟುಗಳು ಬಂದ್ ಮಾಡಲು ಕೋರಲಾಗಿದೆ. ಈ ಕುರಿತು ಕರ್ನಾಟಕ ಮುಸ್ಲಿಮ್ ಮುತ್ತೇಹಾದ್ ಮಹಝ್ ಮತ್ತು ಇನ್ನಿತರೆ ಮುಸ್ಲಿಮ್ ಸಂಘಟನೆಗಳ ಪ್ರತಿನಿಧಿ ಮಸೂದ್ ಅಬ್ದುಲ್ ಖಾದರ್ ಮಾಹಿತಿ ನೀಡಿದ್ದಾರೆ. ಯಾರು ಆರೋಪದಲ್ಲಿ ಭಾಗಿಯಾಗಿದ್ದಾರೋ ಅವರಿಗೆ ಶಿಕ್ಷೆ ಆಗಲಿ. ಆದರೆ ಮುಗ್ಧ ಯುವಕರನ್ನು ಬಿಡಬೇಕು. ಇದೇ ಕಾರಣಕ್ಕೆ ನಾವು ಸ್ವಯಂ ಪ್ರೇರಿತರಾಗಿ ಬಂದ್ ಮಾಡುವಂತೆ ಕೋರಿದ್ದೇವೆ. ಆ ದಿನ ಬೇರೆ ಯಾವ ಸಭೆ ಅಥವಾ ಭಾಷಣ ಇರುವುದಿಲ್ಲ. ನಮ್ಮ ಪ್ರತಿರೋಧ ತೋರಿಸಲು ಆ ದಿನ ಬಂದ್ ಮಾಡಿ ಎಂದು ಕೇಳಿದ್ದೇವೆ.
ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿಗೆ ಹೋರಾಟ ಮಾಡುವುದು ಬಿಟ್ಟು ಮಂತ್ರಿ ಆಗಲು ಓಡುತ್ತಿದ್ದಾರೆ. ಪಂಚಮಸಾಲಿ ಸಮುದಾಯದಲ್ಲಿ 22 ಜನ ಶಾಸಕರಿದ್ದಾರೆ. ಈ 22 ಶಾಸಕರು ರಾಜೀನಾಮೆ ಕೊಟ್ಟು ಸರ್ಕಾಎವನ್ನು ಬೀಳಿಸಿ, ಹೇಗೆ ಮೀಸಲಾತಿ ಕೊಡಲ್ಲ ನೋಡೋಣ ಎಂದು ಸಚಿವ ಮುರುಗೇಶ್ ನಿರಾಣಿ ವಿರುದ್ಧ ಪರೋಕ್ಷವಾಗಿ ಕೂಡಲಸಂಗಮದಲ್ಲಿ ಮಾಜಿ ಶಾಸಕ ರವಿಕಾಂತ್ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ಭಾರತದಲ್ಲಿ ಒಟ್ಟು 109 ಜನರಿಗೆ ರೂಪಾಂತರಿ ಕೊವಿಡ್ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಜನವರಿ 16 ರಿಂದ ದೇಶಾದ್ಯಂತ ಲಸಿಕೆ ನೀಡುವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದು, ಲಸಿಕಾ ಅಭಿಯಾನಕ್ಕೆ ದೆಹಲಿಯ ಎರಡು ಆಸ್ಪತ್ರೆ ಆಯ್ಕೆ ಮಾಡಿಕೊಳ್ಳಲಾಗಿದೆ. ಕೊವಿನ್ ಆ್ಯಪ್ಗೆ ಚಾಲನೆ ನೀಡಿದ ಬಳಿಕ ಕೆಲ ಫಲಾನುಭವಿಗಳೊಂದಿಗೆ ಪ್ರಧಾನಿ ಸಂವಾದ ನಡೆಸಲಿದ್ದಾರೆ ಎಮದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ಮಾಹಿತಿ ನೀಡಿದ್ದಾರೆ.
5500 ಡೋಸ್ ವ್ಯಾಕ್ಸಿನ್ ಗದಗದ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ್ದು, ಸಂಜೀವಿನಿ ಹೊತ್ತು ತಂದ ವಾಹನವನ್ನು ಪ್ರಭಾರಿ ಡಿಸಿ ಆನಂದ್ ಕೆ, ಡಿಎಚ್ಓ ಸತೀಶ್ ಬಸರಿಗಿಡದ, ಜಿಲ್ಲಾ RCHO ಡಾ. ಬಿ. ಎಂ. ಗೊಜನೂರ, ಟಿಎಚ್ಓ ಡಾ. ಎಸ್. ಎಸ್. ನೀಲಗುಂದ ಸ್ವಾಗತಿಸಿದ್ದು, ಬಾಗಲಕೋಟೆಯಿಂದ ಆಗಮಿಸಿದ ಲಸಿಕಾ ವಾಹನಕ್ಕೆ ಪೂಜೆ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬ್ಲ್ಯಾಕ್ಮೇಲ್ ವಿಚಾರವಾಗಿ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ ಇಂತಹ ಸಿಡಿಗಳು ಬರುತ್ತವೆ, ಹೋಗುತ್ತವೆ, ನಮ್ಮ ಯಡಿಯೂರಪ್ಪ ಹೆದರುವ ರಾಜಕಾರಣಿ ಅಲ್ಲಾ. ಜೀವನದುದ್ದಕ್ಕೂ ಹೋರಾಟ ಮಾಡಿಕೊಂಡು ಬಂದ ವ್ಯಕ್ತಿ ಅವರು. ಯಾವ ಸಿಡಿನೂ ಇಲ್ಲ, ಎನೂ ಇಲ್ಲ ಎಂದು ತಿಳಿಸಿದ್ದಾರೆ.
ಸಂಪುಟ ವಿಸ್ತರಣೆಯಲ್ಲಿ ಸಿಎಂ ಕೈಗೊಂಡ ನಿರ್ಧಾರಕ್ಕೆ ನಾನು ಬದ್ಧನಾಗಿದ್ದು, ಅವರ ನಿರ್ಧಾರಕ್ಕೆ ಬೆನ್ನೆಲುಬಾಗಿ ನಿಲ್ಲುತ್ತೇನೆ. ದೊಡ್ಡ ಪಕ್ಷದಲ್ಲಿ ಅಸಮಾಧಾನ ಸಹಜ, ಇದೆಲ್ಲವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರಿಪಡಿಸುತ್ತಾರೆ ಎಂದು ಬೆಳಗಾವಿಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ತಮಿಳು ಜನರನ್ನು ಮನಸ್ಸಿಗೆ ಬಂದಂತೆ ನಡೆಸಿಕೊಳ್ಳಬಹುದು, ತಮಿಳು ಸಂಸ್ಕೃತಿ ಮತ್ತು ಭಾಷೆಯನ್ನು ಬದಿಗಿರಿಸಬಹುದು ಎಂದು ಭಾವಿಸುವವರಿಗೆ ತಮಿಳುನಾಡಿನ ಮಹತ್ವವನ್ನು ತಿಳಿಸಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ರಾಹುಲ್ ಗಾಂಧಿ ಎಂದು ಹೇಳಿದ್ದಾರೆ.
ನಾನು ತಮಿಳುನಾಡಿನ ಜನರಿಂದ ಅಪಾರ ಪ್ರೀತಿ ಮತ್ತು ವಾತ್ಸಲ್ಯವನ್ನು ಪಡೆದಿದ್ದೇನೆ. ಹೀಗಾಗಿ ಅವರೊಂದಿಗೆ ನಿಂತು ತಮಿಳುನಾಡಿನ ಇತಿಹಾಸ, ಸಂಸ್ಕೃತಿ ಮತ್ತು ಭಾಷೆಯನ್ನು ರಕ್ಷಿಸುವುದು ನನ್ನ ಕರ್ತವ್ಯ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ನಾನು ಪಂಚಮಸಾಲಿ ಸಮಾಜದ ಜೊತೆ ಇದ್ದೇನೆ.ನಾನು ಬೇರೆಯಲ್ಲ ಪಂಚಮಸಾಲಿಗಳು ಬೇರೆಯಲ್ಲ. ಈ ಹಿಂದೆ 3ಬಿ ಮೀಸಲಾತಿಗೆ ನಾನೇ ಶಿಪಾರಸ್ಸು ಮಾಡಿದ್ದೇ. ಪಂಚಮಸಾಲಿ ಮಠದ ಅಭಿವೃದ್ಧಿಗೆ 10 ಕೋಟಿ ಹಣ ನೀಡಲಾಗಿದೆ. ಈ ಹಣ ಪಂಚಮಸಾಲಿ ಮಠದ ಖಾತೆಗೆ ಜಮಾ ಆಗಲಿದೆ ಎಂದು ದಾವಣಗೆರೆಯ ಹರಜಾತ್ರೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ತಮಿಳು ಸಂಸ್ಕೃತಿ ಮತ್ತು ಐತಿಹಾಸಿಕವಾಗಿ ಜಾರಿಯಲ್ಲಿರುವ ಈ ಕಾರ್ಯಕ್ರಮಗಳನ್ನು ನೋಡುವುದು ಸುಂದರ ಅನುಭವವಾಗಿತ್ತು. ಹೋರಿ ಮತ್ತು ಯುವಕರು ಇಬ್ಬರೂ ಸುರಕ್ಷಿತರಾಗಿದ್ದು, ಜಲ್ಲಿಕಟ್ಟನ್ನು ವ್ಯವಸ್ಥಿತ ಮತ್ತು ಸುರಕ್ಷಿತ ರೀತಿಯಲ್ಲಿ ಆಯೋಜಿಸಲಾಗುತ್ತಿದೆ ಎಂಬುವುದು ನನಗೆ ಸಂತೋಷವಾಗಿದೆ ಎಂದು ಮಧುರೈನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
ರೈತರಿಗೆ ಪ್ರತಿ ವರ್ಷ 76000 ಕೋಟಿ ಸಾಲ ಮನ್ನಾ ಮಾಡಿದೆ. ಕೃಷಿ ತಜ್ಞ ಸ್ವಾಮಿನಾಥನ್ ವರದಿಗೆ ಅನುಗುಣವಾಗಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಈ ಬಗ್ಗೆ ಸ್ವಾಮಿನಾಥನ್ ಅವರೇ ಹೇಳಿದ್ದಾರೆ. ಒಂದು ಕಡೆ ದೇಶದ ರಕ್ಷಣೆ ಮತ್ತೊಂದು ಕಡೆ ರೈತರ ರಕ್ಷಣೆಗೆ ಮೋದಿ ಸರ್ಕಾರ ಬದ್ದವಾಗಿದೆ. ಗಂಗಾ ಆರತಿ ಮಾದರಿದಲ್ಲಿ ತುಂಗಭದ್ರಾ ಆರತಿ ಕಾರ್ಯಕ್ರಮ ಆರಂಭಿಸಲು ವಚನಾನಂದ ಸ್ವಾಮೀಜಿ ನಿರ್ಧರಿಸಿದ್ದಾರೆ. ರಾಜ್ಯ ಸರ್ಕಾರದಿಂದ ಸೂಕ್ತ ಪ್ರಸ್ತಾವನೆ ಬಂದರೆ ಕೇಂದ್ರ ಸರ್ಕಾರ ಸ್ಪಂದಿಸಲಿದೆ. ಎಂದು ದಾವಣಗೆರೆ ಜಿಲ್ಲೆಯ ಹರಜಾತ್ರೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಮಂತ್ರಿಗಿರಿ ಸಿಗದಿದ್ದರೆ ನನ್ನ ಹಣೆಯಲ್ಲಿ ಬರೆದಿಲ್ಲ ಎಂದುಕೊಳ್ಳುವೆ. ಸಚಿವ ಸ್ಥಾನ ಸಿಗಬೇಕೆಂದು ಬರೆದಿದ್ದರೆ ಸಿಗುತ್ತೆ, ಇಲ್ಲದಿದ್ದರೆ ಇಲ್ಲ. ನಮ್ಮ ಹಣೆಯಲ್ಲಿ ಬರೆದಿರುವುದನ್ನು ಪಡೆಯಲೇಬೇಕಾಗುತ್ತದೆ. ನಿನ್ನೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಒಂದೂವರೆ, 2 ತಿಂಗಳು ಎಂದು ಹೇಳಿದ್ದಾರೆ. ಸಿಎಂ ಯಡಿಯೂರಪ್ಪ ವಚನಭ್ರಷ್ಟ ಅಲ್ಲ, ಮಾತಿಗೂ ತಪ್ಪಿಲ್ಲ. ಕೆಲವು ಸಂದರ್ಭಗಳಲ್ಲಿ ಈ ರೀತಿಯಾಗಿ ಆಗುವುದು ಸಹಜ. ಯಡಿಯೂರಪ್ಪ ಬಗ್ಗೆ ಆಧಾರ ರಹಿತ ಆರೋಪ ಮಾಡಬೇಡಿ. ಸಿಡಿ ಇದೆ ಎಂದು ಹೇಳುತ್ತಿರುವವರು ತೋರಿಸಿ ಎಂದು ಬೆಂಗಳೂರಲ್ಲಿ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಹೇಳಿದ್ದಾರೆ.
ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೋರಾಟ ನಡೆಸುತ್ತಿರುವ ಕುರಿತು ಮತ್ತು ರಾಜಭವನಕ್ಕೆ ಮುತ್ತಿಗೆ ವಿಚಾರದ ಬಗ್ಗೆ ಮಧ್ಯಾಹ್ನ 2 ಗಂಟೆಗೆ ಡಿ.ಕೆ.ಶಿವಕುಮಾರ್ ನಡೆಸಲಿರುವ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡುವ ಸಾಧ್ಯತೆ ಇದೆ.
ಮಾಜಿ ಐಎಎಸ್ ಅಧಿಕಾರಿ ಎ.ಕೆ.ಶರ್ಮಾ ಅವರು ಲಖನೌನಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಸುಲಭವಾಗಿ ಎಲ್ಲರಿಗೂ ಬ್ಲ್ಯಾಕ್ ಮೇಲ್ ಮಾಡಲು ಸಾಧ್ಯವಿಲ್ಲ. ವೀಕ್ ಸಿಎಂ ಇದ್ದರೆ ಮಾತ್ರ ಈ ರೀತಿ ಮಾಡಲು ಸಾಧ್ಯ. ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಿ, ಯಾವ ಪಕ್ಷದವರಾದರೂ ಸರಿ ದೂರು ನೀಡಲಿ,ಅವರ ಪಕ್ಷದವರೇ ಆರೋಪ ಮಾಡಿರುವುದರಿಂದ ಇದರಲ್ಲಿ ಸತ್ಯ ಇದೆ ಅನಿಸುತ್ತದೆ ಎಂದು ಸಿಡಿ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಚಿತ್ರದುರ್ಗ ನಗರದಲ್ಲಿರುವ ಪ್ರಾದೇಶಿಕ ಲಸಿಕಾ ಕೇಂದ್ರದಿಂದ ಶಿವಮೊಗ್ಗ, ದಾವಣಗೆರೆ, ಬಳ್ಳಾರಿಗೆ ವ್ಯಾಕ್ಸಿನ್ ರವಾನೆಗೆ ಸಿದ್ಧತೆ ನಡೆಸಿದೆ. ದಾವಣಗೆರೆಯತ್ತ ಪೊಲೀಸ್ ಭದ್ರತೆಯಲ್ಲಿ ಕೊವ್ಯಾಕ್ಸಿನ್ ಹೊತ್ತ ವಾಹನ ಹೊರಟಿದ್ದು, ದಾವಣಗೆರೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ 13500 ಡೋಸ್ ವ್ಯಾಕ್ಸಿನ್ ಲಸಿಕೆ ಹಸ್ತಾಂತರ ಮಾಡಲಾಗುತ್ತಿದೆ ಎಂದು ಚಿತ್ರದುರ್ಗ ಡಿಹೆಚ್ಓ ಡಾ.ಪಾಲಾಕ್ಷ ತಿಳಿಸಿದ್ದಾರೆ.
ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಿ ಎಂದು ಕೂಡಲ ಸಂಗಮ ಪಂಚಮಸಾಲಿ ಗುರುಪೀಠದ ಜಯಮೃತ್ಯುಂಜಯ ಸ್ವಾಮೀಜಿ ಪಾದಯಾತ್ರೆ ಆರಂಭಿಸುತ್ತಿದ್ದಾರೆ. ಅವರು ಪಾದಯಾತ್ರೆಯನ್ನ ಕೈಬಿಡಬೇಕು. ಜೊತೆಗೆ ಪಾದಯಾತ್ರೆ ಮಾಡುವುದರಿಂದ ಸಮಸ್ಯೆಗೆ ಪರಿಹಾರ ಸಿಗಲ್ಲ. ಪಾದಯಾತ್ರೆ ಬಿಟ್ಟು ಚರ್ಚೆಗೆ ಬನ್ನಿ ಎಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹಣಗವಾಡಿ ಗ್ರಾಮದಲ್ಲಿನ ಪಂಚಮಸಾಲಿ ಗುರುಪೀಠದ ಹರ ಜಾತ್ರೆ ಯಲ್ಲಿ ನೂತನ ಸಚಿವ ಮುರಗೇಶ್ ನಿರಾಣಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನ ಸದಾನಂದಗೌಡರ ನಿವಾಸದಲ್ಲಿ ರಾಸಾಯನಿಕ & ರಸಗೊಬ್ಬರ ಇಲಾಖೆಯ ಸಚಿವ ಡಿವೈಎಸ್ ಅವರನ್ನು ಸಚಿವ ಸಿ.ಪಿ.ಯೋಗೇಶ್ವರ್ ಭೇಟಿ ಮಾಡಿದ್ದು, ಮಾತುಕತೆ ನಡೆಸಿದ್ದಾರೆ.
ಬೆಳಗಾವಿಗೆ ಜನವರಿ 17ಕ್ಕೆ ಅಮಿತ್ ಶಾ ಭೇಟಿ ವೇಳೆ ಅಸಮಾಧಾನಿತರು ದಾಖಲೆ ಸಮೇತ ದೂರು ನೀಡಲು ನಿರ್ಧರಿಸಿದ್ದು, 10ಕ್ಕೂ ಅಧಿಕ ಬಿಜೆಪಿ ಶಾಸಕರಿಂದ ಅಮಿತ್ ಶಾ ಅವರಿಗೆ ದೂರು ನೀಡಲು ನಿರ್ಧರಿಸಿದ್ದು, ಯೋಗೇಶ್ವರ್ ವಿರುದ್ಧ ಅಭಯ್ ಪಾಟೀಲ್ ಸೇರಿದಂತೆ ಹಲವರು ದೂರು ನೀಡುವ ಸಾಧ್ಯತೆ ಇದೆ.
42,500 ಡೋಸ್ ಕೊವಿಡ್ ಲಸಿಕೆಯನ್ನು ಮಂಗಳೂರಿನ ವೆನ್ ಲಾಕ್ ಜಿಲ್ಲಾಸ್ಪತ್ರೆ ಡ್ರಗ್ ವೇರ್ ಹೌಸ್ನ ಲಸಿಕೆ ಸ್ಟೋರೇಜ್ನಲ್ಲಿ ಇಡಲಾಗಿದ್ದು, ಮಂಗಳೂರಿನಿಂದ, ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗೆ ಲಸಿಕೆ ರವಾನೆ ಮಾಡಲಾಗುತ್ತದೆ. ಮಂಗಳೂರಿಗೆ 24,500, ಉಡುಪಿ 12,000 ಮತ್ತು ಚಿಕ್ಕಮಗಳೂರಿಗೆ 6,000 ಲಸಿಕೆ ನೀಡಲಾಗುತ್ತದೆ.
ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಸದಾಶಿವನಗರದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಿವಾಸದಲ್ಲಿ ಗೋಪೂಜೆ ನಡೆಯುತ್ತಿದ್ದು, ಡಿ.ಕೆ. ಶಿವಕುಮಾರ್ ಹಾಗೂ ಅವರ ಪತ್ನಿ ಉಷಾ ಶಿವಕುಮಾರ್ ಗೋಪೂಜೆ ನಡೆಸಿದ್ದಾರೆ.
ತಮಿಳುನಾಡಿನ ಮಧುರೈಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಮಿಸಿದ್ದು, ಸದ್ಯ ಪೊಂಗಲ್ ಹಬ್ಬದ ಪ್ರಯುಕ್ತ ಅವನೀಯಪುರಂನಲ್ಲಿ ನಡೆಯುತ್ತಿರುವ ಜಲ್ಲಿಕಟ್ಟು ವೀಕ್ಷಿಸುತ್ತಿದ್ದಾರೆ.
ಕಲಬುರಗಿ ಜಿಲ್ಲೆಯ ಆರೋಗ್ಯಾಧಿಕಾರಿ ಕಚೇರಿಗೆ 12000 ವ್ಯಾಕ್ಸಿನ್ ಆಗಮಿಸಿದ್ದು, ಸದ್ಯಕ್ಕೆ ಕೊವಿಶೀಲ್ಡ್ ವ್ಯಾಕ್ಸಿನ್ ಬಂದಿದೆ. ಮುಂದಿನ ದಿನಗಳಲ್ಲಿ ಕೊವ್ಯಾಕ್ಸಿನ್ ಸಹ ಬರಲಿದೆ. ನಾಳೆ ಎಲ್ಲಾ ಪ್ರಾಥಮಿಕ, ತಾಲೂಕು ಆರೋಗ್ಯ ಕೇಂದ್ರಗಳಿಗೆ ಕಳಿಸಲಾಗುವುದು. ಜನವರಿ 16 ಕ್ಕೆ ವ್ಯಾಕ್ಸಿನ್ಗೆ ಚಾಲನೆ ನೀಡಲಾಗುವುದು, ನಂತರ ಜನವರಿ 17 ರಿಂದ ಎಲ್ಲಾ ಕಡೆ ವ್ಯಾಕ್ಸಿನ್ ಕೊಡಲಾಗುವುದು. ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜಶೇಖರ ಮಾಲಿ ಹೇಳಿಕೆ ನೀಡಿದ್ದಾರೆ.
ಮಕರ ಸಂಕ್ರಾತಿ ಹಬ್ಬದ ಪ್ರಯುಕ್ತ ಬಿಹಾರದ ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಚಿತ್ರವನ್ನು ಆಧರಿಸಿದ ಗಾಳಿಪಟಗಳನ್ನು ತಯಾರಿಸಿದ್ದು, ಇದು ಗ್ರಾಹಕರಿಗೆ ವಿಶೇಷವಾದ ಆಕರ್ಷಣೆಯಾಗಿತ್ತು. ಪ್ರಧಾನಿ ಮೋದಿ ಚಿತ್ರವನ್ನೊಳಗೊಂಡ ಗಾಳಿಪಟಗಳಿಗೆ ಗ್ರಾಹಕರಿಂದ ಉತ್ತಮ ಬೇಡಿಕೆ ಇದ್ದು, ನಮ್ಮ ಸ್ಟಾಕ್ಗಳೆಲ್ಲಾ ಬಹುತೇಕ ಮುಗಿದಿದೆ ಎಂದು ಪಾಟ್ನಾದ ಅಂಗಡಿ ಮಾಲೀಕ ರಾಜೀವ್ ರಂಗನ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನು ಎಸ್.ಅಂಗಾರ ಅವರಿಗೆ ನೀಡಲು ಯು.ಟಿ.ಖಾದರ್ ಆಗ್ರಹ ನೀಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯದ ಅಂಗಾರ ಸಚಿವರಾಗಿರುವುದು ಸಂತಸದ ವಿಚಾರ. ಈ ಹಿಂದೆ ಅವರಿಗೆ ಬಹಳಷ್ಟು ಅನ್ಯಾಯವಾಗಿತ್ತು, ಈಗ ಜನರ ಬೇಡಿಕೆಗೆ ಅವರನ್ನು ಸಚಿವರನ್ನಾಗಿ ಮಾಡಿದ್ದಾರೆ. ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಇಲ್ಲಿ ಕೆಲಸ ಮಾಡಲಿ. ಸದ್ಯ ಕೋಟಾ ಶ್ರೀನಿವಾಸ ಪೂಜಾರಿ ಇದ್ದಾರೆ, ಅವರು ಕೂಡ ಒಳ್ಳೆಯವರೇ.ಆದರೆ ಈಗ ನಮ್ಮ ಜಿಲ್ಲೆಯವರೇ ಸಚಿವರಾಗಿದ್ದಾರೆ. ಹಾಗಾಗಿ ಅವರಿಗೆ ಉಸ್ತುವಾರಿ ಕೊಡಲಿ ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಹೇಳಿಕೆ ನೀಡಿದ್ದಾರೆ.
ಮಕರ ಸಂಕ್ರಾತಿ ಹಬ್ಬದ ಪ್ರಯುಕ್ತ ಭೋಪಾಲ್ನಲ್ಲಿ ಗಾಳಿಪಟವನ್ನು ಹಾರಿಸುವ ಮೂಲಕ ವಿಶೇಷವಾಗಿ ಹಬ್ಬವನ್ನು ಆಚರಿಸಿದರು.
Madhya Pradesh: A kite festival organised in Bhopal on #MakarSankranti. pic.twitter.com/PnNcqUwmOW
— ANI (@ANI) January 14, 2021
ಮಕರ ಸಂಕ್ರಾತಿ ಹಬ್ಬದ ಪ್ರಯುಕ್ತ ಅಹಮದಾಬಾದ್ನ ಶ್ರೀ ಜಗನ್ನಾಥಜಿ ದೇವಸ್ಥಾನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಾರ್ಥನೆ ಸಲ್ಲಿಸಿದರು.
ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿಗೆ ಹೋರಾಟ ನಡೆಸುತ್ತಿದ್ದು, ಸಮುದಾಯಕ್ಕೆ ಸಿಎಂ ಸ್ಥಾನ ಕೊಟ್ಟರೂ ಹೋರಾಟ ನಿಲ್ಲಲ್ಲ. ಸಮುದಾಯದ ಎಲ್ಲಾ ನಾಯಕರನ್ನ ಮಂತ್ರಿ ಮಾಡಿದ್ರೂ ನಿಲ್ಲಲ್ಲ. ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ. ಸಚಿವ ನಿರಾಣಿ ಹೇಳಿಕೆಯಿಂದ ನಿನ್ನೆ ಗೊಂದಲವಾಗಿತ್ತು. ಈಗ ಯಾವುದೇ ಗೊಂದಲ ಇಲ್ಲ, ಪಾದಯಾತ್ರೆ ನಡೆಯುತ್ತದೆ. ನಮ್ಮ ಸಮುದಾಯಕ್ಕೆ ಸಚಿವ ಸ್ಥಾನಕ್ಕಿಂತ ಮೀಸಲಾತಿ ಮುಖ್ಯ ಎಂದು ಕೂಡಲಸಂಗಮದಲ್ಲಿ ಬಸವಜಯ ಮೃತ್ಯುಂಜಯ ಶ್ರೀ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಒಬ್ಬೊಬ್ಬರು ಒಂದೊಂದು ಸಿಡಿ ಬಿಡುಗಡೆ ಮಾಡುತ್ತಾರೆ. ಸಂಕ್ರಮಣದ ಬಳಿಕ ಸಿಡಿ ಬ್ಲಾಸ್ಟ್ ಆಗುತ್ತದೆ. ಜನತಾ ಪರಿವಾರ ಸನ್ ಸ್ಟ್ರೋಕ್ನಲ್ಲೇ ಮುಗಿದು ಹೋಯ್ತು, ಕರ್ನಾಟಕದಲ್ಲಿ ಈಗ ಮತ್ತೆ ಸನ್ ಸ್ಟ್ರೋಕ್ ಮುಂದುವರಿದಿದೆ. ಯಡಿಯೂರಪ್ಪರಿಂದಲೇ ಬಿಜೆಪಿ ಹಾಳಾಗುತ್ತದೆ. ಇದಕ್ಕಾ ನಾವು ದಂಗೆ ಎದ್ದು ರಾಜೀನಾಮೆ ನೀಡಿ ಬಂದಿದ್ದು? ಭ್ರಷ್ಟರಿಗೆ ಅಧಿಕಾರ ಕೊಡಲು ನಾವು ರಾಜೀನಾಮೆ ನೀಡಿದ್ದಾ ಎಂದು ರಾಯಚೂರಿನಲ್ಲಿ ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.
ಕೆಲವೇ ದಿನಗಳಲ್ಲಿ ಮುನಿರತ್ನ ಕೂಡ ಮಂತ್ರಿ ಆಗುತ್ತಾರೆ. ಕೋರ್ಟ್ ವ್ಯಾಜ್ಯ ಎಂದು ಮಂತ್ರಿ ಮಾಡದೇ ಇರಬಹುದು.ಆದರೆ ಹೆಚ್.ವಿಶ್ವನಾಥ್, ಶಾಸಕ ಮುನಿರತ್ನ ಕೋರ್ಟ್ ವ್ಯಾಜ್ಯ ಮುಗಿದ ಬಳಿಕ ಮಂತ್ರಿ ಆಗುತ್ತಾರೆ ಎಂದು ವಿಧಾನಸೌಧದಲ್ಲಿ ನೂತನ ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡಿದ್ದಾರೆ.
ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್ ಚಾಲನೆ ನೀಡಿದ್ದು, ಬೈಕ್ ಮೆರವಣಿಗೆ ಮೂಲಕ ಹೆಲ್ಮೆಟ್, ಸೀಟ್ ಬೆಲ್ಟ್ ಬಳಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುವ ಮೂಲಕ ಪೊಲೀಸರು ಜಾಗೃತಿ ಮೂಡಿಸಿದ್ದಾರೆ.
ಕೊವಿಡ್ 19 ಸಾಂಕ್ರಾಮಿಕ ಕಾಯಿಲೆಯ ಮೂಲವನ್ನು ತನಿಖೆ ಮಾಡುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ರಚನೆ ಮಾಡಿದ ಅಂತರರಾಷ್ಟ್ರೀಯ ತಜ್ಞರನ್ನು ಒಳಗೊಂಡ ತಂಡ ಮೊದಲು ಕೊರೊನಾ ಸೋಂಕು ಪತ್ತೆಯಾಗಿದ್ದ ಸ್ಥಳ ಚೀನಾದ ವುಹಾನ್ ಅನ್ನು ತಲುಪಿದೆ.
ವಿಧಾನಸೌಧದ 329, 329(ಎ) ಕೊಠಡಿಯಲ್ಲಿ ಸಚಿವ ಉಮೇಶ್ ಕತ್ತಿ ಮತ್ತು ಕುಟುಂಬಸ್ಥರು ಪೂಜೆ ನಡೆಸಿದ್ದು, ಸಂಕ್ರಾಂತಿ ಶುಭ ದಿನ ಎಂದು ಇಂದೇ ಕೊಠಡಿ ಪೂಜೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹರಜಾತ್ರೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದಾವಣಗೆರೆಗೆ ಆಗಮಿಸಿದ್ದಾರೆ. ಬಿಎಸ್ವೈ ನಗರದ ಜಿಎಂಐಟಿ ಹೆಲಿಪ್ಯಾಡ್ಗೆ ಬಂದಿಳಿದಿದ್ದು, ಸಚಿವ ಭೈರತಿ ಬಸವರಾಜ್, ಸಂಸದ ಜಿ.ಎಂ.ಸಿದ್ದೇಶ್ವರ್ ಬಿ.ಎಸ್.ಯಡಿಯೂರಪ್ಪ ಸ್ವಾಗತಿಸಿದ್ದಾರೆ.
ಇಂದು ಕುಟುಂಬ ಸಮೇತರಾಗಿ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ. ಡಿಕೆಶಿ ಪುತ್ರಿ ಐಶ್ವರ್ಯಾ ವಿವಾಹ ಫೆಬ್ರವರಿ 14 ರಂದು ನಡೆಯಲಿದ್ದು, ವಿವಾಹ ಸಂಬಂಧ ತಯಾರಿಗೆ ದೆಹಲಿಯತ್ತ ಪ್ರಯಾಣ ಮಾಡುತ್ತಿದ್ದಾರೆ.
ಹತ್ತರಿಂದ ಹನ್ನೇರಡು ಜನ ಮಂತ್ರಿ ಮಾಡಲಿಲ್ಲ ಎಂದು ಬೇಸರವಾಗಿದ್ದಾರೆ. ನನ್ನ ಮಿತಿಯಲ್ಲಿ ನಾನು ಮಾಡಿದ್ದೇನೆ. ಕೇಂದ್ರದ ನಾಯಕರ ಆಶಿರ್ವಾದ ಇದೆ. ರಾಜ್ಯದ ಅಭಿವೃದ್ಧಿಗೆ ಗಮನ ಹರಿಸುವೆ. ಜೊತೆಗೆ ಮಂತ್ರಿ ಸ್ಥಾನ ಸಿಗದ ಹಿನ್ನೆಲೆ ಇಲ್ಲ ಸಲ್ಲದ ಹೇಳಿಕೆ ನೀಡುವುದನ್ನ ಬಿಟ್ಟು ನನ್ನ ಜೊತೆ ಚರ್ಚೆ ಮಾಡಿ. ಮಾರ್ಚ್ನಲ್ಲಿ ಬಜೆಟ್ ಮಂಡನೆ ಇದೆ. ಸಚಿವ ಸ್ಥಾನ ವಂಚಿತರು ಹೇಳಿಕೆ ನೀಡಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ.ಸಿಡಿ ವಿಚಾರ, ಯಾರಿಗೆ ಏನು ಹೆದರುವ ಅಗತ್ಯವಿಲ್ಲ ಎಂದು ದಾವಣಗೆರೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಮಾದಾಪುರ ಗ್ರಾಮದಲ್ಲಿ ತಡರಾತ್ರಿ ಭಾರಿ ಮಳೆಯಾಗಿದೆ. ಗ್ರಾಮದ ಹತ್ತಾರು ಮನೆಗಳಿಗೆ ನೀರು ನುಗ್ಗಿದ್ದು, ಜನರು ಪರದಾಟ ನಡೆಸುವಂತಾಗಿದೆ. ಈ ನಿಟ್ಟಿನಲ್ಲಿ ಸ್ಥಳಕ್ಕೆ ಅಧಿಕಾರಿಗಳು ಆಗಮಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸಂಕ್ರಾಂತಿ ಹಬ್ಬದ ನಿಮಿತ್ತ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಹಂಪಿಯ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಶ್ರೀ ವಿರೂಪಾಕ್ಷೇಶ್ವರ ದೇವರ ದರ್ಶನ ಪಡೆಯವ ನಿಟ್ಟಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದಾರೆ. ಈ ನಿಟ್ಟಿನಲ್ಲಿ ಇಂದು ಶ್ರೀ ವಿರೂಪಾಕ್ಷೇಶ್ವರ ದೇವರಿಗೆ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮಕರ ಸಂಕ್ರಾತಿ ಹಬ್ಬದ ಪ್ರಯುಕ್ತ ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಭಾಶಯ ಕೋರಿದ್ದು, ಕರ್ನಾಟಕ ಜನತೆಗೆ ಮಕರ ಸಂಕ್ರಾತಿ ಹಬ್ಬದ ಶುಭಾಶಯಗಳು. ಈ ಪವಿತ್ರ ಹಬ್ಬ ಎಲ್ಲರ ಜೀವನದಲ್ಲೂ ಸುಖ, ಸಮೃದ್ಧಿ ಮತ್ತು ಆರೋಗ್ಯವನ್ನು ಕರುಣಿಸಲಿ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದು, ವಿಶೇಷವೆಂದರೆ ಅವರು ಇದನ್ನು ಕನ್ನಡದಲ್ಲಿ ಬರೆದುಕೊಂಡಿದ್ದಾರೆ.
ಕರ್ನಾಟಕದ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಈ ಪವಿತ್ರ ಹಬ್ಬ ಎಲ್ಲರ ಜೀವನದಲ್ಲೂ ಸುಖ, ಸಮೃದ್ಧಿ ಮತ್ತು ಆರೋಗ್ಯವನ್ನು ಕರುಣಿಸಲಿ. pic.twitter.com/50ScDL9H8H
— Amit Shah (@AmitShah) January 14, 2021
ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಗೋ ಪೂಜೆ ನಡೆಸಿದ್ದಾರೆ. ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಕೂಡ ಈ ಪೂಜೆಯಲ್ಲಿ ಉಪಸ್ಥಿತರಿದ್ದರು.
ಪ್ರಧಾನಿ ನರೇಂದ್ರ ಮೋದಿ ಟ್ವೀಟರ್ ಮೂಲಕ ಪೊಂಗಲ್ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದು, ಈ ವಿಶೇಷ ಹಬ್ಬವು ತಮಿಳು ಸಂಸ್ಕೃತಿಯ ಅತ್ಯುತ್ತಮತೆಯನ್ನು ತೋರಿಸುತ್ತದೆ ಎಂದು ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದಾರೆ.
Pongal greetings to all, especially my Tamil sisters and brothers. This special festival showcases the best of Tamil culture. May we be blessed with good health and success. May this festival also inspire us to live in harmony with nature and further the spirit of compassion.
— Narendra Modi (@narendramodi) January 14, 2021
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಅವರು ತಮ್ಮಕುಟುಂಬದೊಂದಿಗೆ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದು, ನಗರದ ತಮಿಳು ಸಮಾಜದ ಮುಖಂಡರು ಕೂಡ ಕೆ.ಎಸ್.ಈಶ್ವರಪ್ಪ ಅವರ ಜೊತೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪೊಂಗಲ್ ಆಚರಣೆ ಮಾಡಿದರು.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ ಭಾರತವು 16,946 ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿದ್ದು, 17,652 ಜನರು ಗುಣಮುಖರಾಗಿದ್ದಾರೆ ಮತ್ತು 198 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಈವರೆಗೆ 1,05,12,093 ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳು 2,13,603 ಇದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 1,01,46,763 ಆಗಿದೆ. ಆ ಮೂಲಕ ಸಾವಿನ ಸಂಖ್ಯೆ 1,51,727 ರಷ್ಟಾಗಿದೆ.
ಚೀನಾ ತಯಾರಿಸಿದ್ದ ಸಿನೋವಾಕ್ ಕೊರೊನಾ ಲಸಿಕೆ ಕಡಿಮೆ ಪರಿಣಾಮಕಾರಿ ಎಂದು ಸಾಬೀತಾಗಿದೆ. ಕಳೆದ ವಾರ ಶೇ.78ರಷ್ಟು ಚೀನಾ ಲಸಿಕೆ ಪರಿಣಾಮಕಾರಿ ಎಂದಿದ್ದ ಬ್ರೆಜಿಲ್, ಈಗ ಶೇ.50.4ರಷ್ಟು ಪರಿಣಾಮಕಾರಿ ಎಂದು ತಿಳಿಸಿದೆ. ಶೇ.60ಕ್ಕಿಂತ ಹೆಚ್ಚು ಪರಿಣಾಮಕಾರಿ ಲಸಿಕೆ ಬಳಕೆ ಮಾಡುವಂತೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಸಲಹೆ ನೀಡಲಾಗಿದೆ.
ಭಾರತದಲ್ಲಿ ನಿನ್ನೆ 7,43,191 ಕೊವಿಡ್ ಸ್ಯಾಂಪಲ್ಸ್ ಟೆಸ್ಟ್ ನಡೆದಿದ್ದು, ಒಟ್ಟು ದೇಶದಲ್ಲಿ ಜನವರಿ 13ರವರೆಗೆ 18,42,32,305 ಸ್ಯಾಂಪಲ್ಸ್ ಟೆಸ್ಟ್ಗಳಾಗಿವೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.
ಕೊವಿಡ್ 19 ಸಾಂಕ್ರಾಮಿಕ ಕಾಯಿಲೆಯ ಮೂಲವನ್ನು ತನಿಖೆ ಮಾಡುವ ನಿಟ್ಟಿನಲ್ಲಿ 10 ಅಂತರರಾಷ್ಟ್ರೀಯ ತಜ್ಞರನ್ನು ಒಳಗೊಂಡ ತಂಡವನ್ನು ವಿಶ್ವ ಆರೋಗ್ಯ ಸಂಸ್ಥೆ(WHO)ಸಿದ್ಧಮಾಡಿದ್ದು, ಶೀಘ್ರವೇ ಈ ತಂಡವು ಚೀನಾಗೆ ಭೇಟಿ ನೀಡಲಿದೆ.
ಮುನಿರತ್ನ, ವಿಶ್ವನಾಥ್ಗೆ ಸಚಿವ ಸ್ಥಾನ ಸಿಗಬೇಕೆಂದು ಮನವಿ ಮಾಡಿಒಂಡಿದ್ದಾರೆ. ಶೀಘ್ರವೇ ಮುನಿರತ್ನ, ನಾಗೇಶ್ ಅವರಿಗೆ ಸ್ಥಾನಮಾನ ಸಿಗಲಿದೆ. ಸಿಡಿ ವಿಚಾರವಾಗಿ ನನಗೆ ಏನೂ ಗೊತ್ತಿಲ್ಲ. ಎಲ್ಲಾ ಪಕ್ಷಗಳಲ್ಲೂ ಈ ರೀತಿಯಾಗಿ ಒಬ್ಬೊಬ್ಬರು ಇರುತ್ತಾರೆ. ಇವತ್ತು ಕೂಗಾಡುತ್ತಾರೆ ನಂತರ ಒಳಗೆ ಬಂದು ಸೇರಿಕೊಳ್ಳುತ್ತಾರೆ ಎಂದು ಮಂಡ್ಯದಲ್ಲಿ ಸಚಿವ ಕೆ.ಸಿ.ನಾರಾಯಣ ಗೌಡ ಹೇಳಿಕೆ ನೀಡಿದ್ದಾರೆ.
ಪ್ರಜಾಪ್ರಭುತ್ವ ಇನ್ನು ಜೀವಂತ ವಿದೆ ಎಂದು ಈ ಮೂಲಕ ಸ್ಪಷ್ಟವಾಗಿದೆ ಆದರೆ ಕೇಂದ್ರ ಸರ್ಕಾರ ಮಾಡಿದ ಕಾಯ್ದೆಯನ್ನು ಪ್ರಶ್ನೆ ಮಾಡುವುದು ಸುಪ್ರೀಂ ಕೋರ್ಟ್ಗೆ ಬರಲ್ಲ. ಕೃಷಿ ಕಾಯ್ದೆ ವಿರುದ್ಧ ಹೋರಾಟ ಮಾಡುತ್ತಿರುವ ರೈತರಿಗೆ ಇದು ಶಕ್ತಿ ತುಂಬಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೇಮಕ ಮಾಡಿದ ಸಮಿತಿಯಲ್ಲಿ ರೈತ ಪ್ರತಿನಿಧಿಗಳನ್ನ ಸೇರ್ಪಡೆ ಮಾಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್ ಹೇಳಿಕೆ ನೀಡಿದ್ದಾರೆ.
ಏಪ್ರಿಲ್ನಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆ ಜನರ ಮನವೊಲಿಕೆಗೆ ರಾಜಕೀಯ ಪಕ್ಷಗಳ ಕಸರತ್ತು ಆರಂಭವಾಗಿದ್ದು, ಹಬ್ಬದ ಸಂದರ್ಭ ಬಳಸಿ ಜನರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಮಧುರೈ ಬಳಿ ಜಲ್ಲಿಕಟ್ಟು ವೀಕ್ಷಿಸಲು ರಾಹುಲ್ ಗಾಂಧಿ ಭೇಟಿಯಾಗಲಿದ್ದಾರೆ. ಇತ್ತಕಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಸಹ ತಮಿಳುನಾಡಿಗೆ ಭೇಟಿ ನೀಡಿದ್ದು, ನಮ್ಮ ಊರು ಪೊಂಗಲ್ ಕಾರ್ಯಕ್ರಮದಲ್ಲಿ ನಡ್ಡಾ ಭಾಗಿಯಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್ಪೋರ್ಟ್ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಏರ್ ಌಂಬುಲೆನ್ಸ್ನಲ್ಲಿ ರೋಗಿ ಶಿಫ್ಟ್ ಮಾಡುವ ಹಿನ್ನೆಲೆ ಜಾಮ್ ಆಗಿದೆ. ಮುಂಜಾನೆ 4.55ರ ವಿಮಾನದಲ್ಲಿ ಆಗಮಿಸಿದ್ದ ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡುವಾಗ ಝೀರೋ ಟ್ರಾಫಿಕ್ ವ್ಯವಸ್ಥೆ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ.
ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ನೀಡುವಂತೆ ಹೋರಾಟ ನಡೆಸುತ್ತಿದ್ದು, ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದಿಂದ ಇಂದು ಬೆಳಗ್ಗೆ 10.30ಕ್ಕೆ ಬಸವಜಯ ಮೃತ್ಯುಂಜಯ ಸ್ವಾಮೀಜಿಯ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯಲಿದೆ. ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಯಲಿದ್ದು, ವಿಜಯಾನಂದ, ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷ ಈ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ.
ಅಸ್ಸಾಂನ ದಿಮಾ ಹಸಾವೋದಲ್ಲಿ ಭೂಕಂಪವಾಗಿದ್ದು, ರಿಕ್ಟರ್ ಮಾಪಕದಲ್ಲಿ 4.2 ರಷ್ಟು ತೀವ್ರತೆ ದಾಖಲಾಗಿದೆ.
ದೆಹಲಿಯಲ್ಲಿ ಉಷ್ಣಾಂಶ ತೀವ್ರವಾಗಿ ಕುಸಿದಿದ್ದು, ಈ ಸುದ್ದಿ ಬರೆಯುವ ಹೊತ್ತಿಗೆ (ಜ.14ರ ಬೆಳಿಗ್ಗೆ 8.40ಕ್ಕೆ) 8 ಡಿಗ್ರಿಸೆಲ್ಷಿಯಸ್ ಉಷ್ಣಾಂಶ ದಾಖಲಾಗಿತ್ತು. ದೆಹಲಿಯಲ್ಲಿ ಚಳಿ ಥರಗುಟ್ಟಿಸುತ್ತಿದ್ದರೂ, ರೇಣುಕಾಚಾರ್ಯ ಮಾತ್ರ ಸಿಟ್ಟಿನ ಬಿಸಿಯಲ್ಲಿ ಬುಸುಗುಡುತ್ತಿದ್ದಾರೆ. ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬ್ಲ್ಯಾಕ್ಮೇಲ್ ಮಾಡಿದವರಿಗೆ, ನಾಯಕತ್ವ ಬದಲಾವಣೆ ಮಾಡಲು ಹೊರಟವರಿಗೆ ಮಂತ್ರಿಗಿರಿ ಕೊಟ್ಟಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಮೆರಿಕದ ಕ್ಯಾಪಿಟಲ್ ಬಿಲ್ಡಿಂಗ್ನಲ್ಲಿ ಘರ್ಷಣೆ ಮತ್ತು ಹಿಂಸಾಚಾರಕ್ಕೆ ತನ್ನ ಬೆಂಬಲಿಗರನ್ನು ಪ್ರಚೋದನೆ ಮಾಡಿದ ಹಿನ್ನೆಲೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಮೂವರು ಸಂಸದರು ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣಾ (ಮಹಾಭಿಯೋಗ) ಕರಡನ್ನು ಸಂಸತ್ನಲ್ಲಿ ಮಂಗಳವಾರ ಪರಿಚಯಿಸಿದ್ದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿರ್ದೇಶನದ ಹಿನ್ನೆಲೆಯಲ್ಲಿ ಲಾಲ್ಬಾಗ್ನಲ್ಲಿ ಈ ಭಾರಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಜೊತೆಗೆ, ಫಲಪುಷ್ಪಗಳಿಂದ ರೂಪ ತಳೆಯಲಿರುವ ಕೊರೊನಾ ವೈರಸ್ಗಳೇ ಈ ಬಾರಿಯ ಪ್ರದರ್ಶನದ ಕೇಂದ್ರಬಿಂದುವಾಗಲಿದೆ.
ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್ಗೆ ಸಂಬಂಧಿಸಿ ಆದಿತ್ಯ ಆಳ್ವಾಗೆ ಡ್ರಗ್ಸ್ ಟೆಸ್ಟ್ ಮಾಡಲು ಸ್ಯಾಂಪಲ್ ಅನ್ನು ಕೆಸಿ ಜನರಲ್ ಆಸ್ಪತ್ರೆಗೆ ಕಳಿಸಲಾಗಿದೆ. ಈ ಹಿಂದೆ ಇದೇ ಕೇಸ್ ಸಂಬಂಧ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಗೆ ಡ್ರಗ್ಸ್ ಟೆಸ್ಟ್ ಮಾಡಲಾಗಿತ್ತು. ಈಗ ಅದೇ ಮಾದರಿಯಲ್ಲಿ ಆದಿತ್ಯನ ರಕ್ತ, ತಲೆ ಕೂದಲು, ಉಗುರಿನ ಮಾದರಿಯನ್ನು ಸಿಸಿಬಿ ಸಂಗ್ರಹಿಸಿದೆ.
ಟಿವಿ9 ನೆಟ್ವರ್ಕ್ನ 6ನೇ ಚಾನೆಲ್ ‘ಟಿವಿ9 ಬಾಂಗ್ಲಾ’ ಇಂದು ಲೋಕಾರ್ಪಣೆಯಾಗಿದೆ. ಈ ಮೂಲಕ ಸಂಕ್ರಾಂತಿ ಶುಭದಿನದಂದು ದೇಶದ ಅತಿದೊಡ್ಡ ನ್ಯೂಸ್ ನೆಟ್ವರ್ಕ್ ಟಿವಿ9 ಮುಕುಟಕ್ಕೆ ಮತ್ತೊಂದು ಗರಿ ಬಂದಂತೆ ಆಗಿದೆ.