ಮಾನಸಾ ದೇವಿಯನ್ನು ಪೂಜಿಸೋದೇಕೆ? ಇಲ್ಲಿದೆ ಸರ್ಪದೋಷ ನಿವಾರಣೆಗೆ ಸರಳ ಪರಿಹಾರ

ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ಕಷ್ಟ-ಸುಖದ ಅನುಭವ ಆಗಲೇಬೇಕು. ಹಿಂದೂ ಪುರಾಣಗಳ ಪ್ರಕಾರ, ಮನುಷ್ಯನಿಗೆ ಬರುವ ಕಷ್ಟ-ಸುಖಗಳು, ಆತನ ಪೂರ್ವಜನ್ಮದ ಪಾಪ-ಪುಣ್ಯದ ಫಲಗಳು ಅಂತಾ ಹೇಳಲಾಗುತ್ತೆ. ಅದರಲ್ಲೂ ಮನುಷ್ಯನ ಸಂಕಷ್ಟಗಳಿಗೆ ಆತನ ಗ್ರಹಗತಿಗಳು ಹಾಗೂ ಸರ್ಪದೋಷವೇ ಪ್ರಮುಖ ಪಾತ್ರ ವಹಿಸುತ್ತೆ ಎನ್ನಲಾಗುತ್ತೆ.

ಇದೇ ಕಾರಣಕ್ಕೆ, ಪುರಾಣಗಳಲ್ಲಿ ಹಾಗೂ ಆಧ್ಯಾತ್ಮ ಲೋಕದಲ್ಲಿ ಸರ್ಪಕ್ಕೆ ವಿಶೇಷ ಸ್ಥಾನವನ್ನು ನೀಡಿ ಪೂಜಿಸಲಾಗುತ್ತೆ. ಹಿಂದೂ ಸಂಪ್ರದಾಯದಲ್ಲಿ, ಹಾವನ್ನು ಹೊಡೆಯುವುದು, ಹಿಂಸೆ ಮಾಡುವುದು ಹಾಗೂ ಸಾಯಿಸೋದು ಮಹಾಪಾಪ ಅಂತಾ ಹೇಳಲಾಗುತ್ತೆ. ಅಕಸ್ಮಾತ್ ಅಂತಹ ದುಷ್ಕೃತ್ಯ ಎಸಗಿದರೆ ಅದು ಶಾಪವಾಗಿ ಪರಿಣಮಿಸಿ ಜನ್ಮ ಜನ್ಮಗಳವರೆಗೆ ಕಾಡುತ್ತೆ ಎನ್ನಲಾಗುತ್ತೆ. ತಿಳಿಯದೇ ಹಾವನ್ನು ಸಾಯಿಸಿದರೆ ವಿಧಿವತ್ತಾಗಿ ಸರ್ಪಸಂಸ್ಕಾರ ಮಾಡಲೇಬೇಕು ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಮನುಷ್ಯನಿಗೆ ಸರ್ಪದೋಷವಿದ್ರೆ, ಯಾವ ರೀತಿ ಪರಿಣಾಮ ಬೀರುತ್ತೆ ಇಲ್ಲಿ ತಿಳಿಯಿರಿ.

ಸರ್ಪದೋಷದ ಪರಿಣಾಮಗಳು:
1.ಹಣಕಾಸಿನ ಸಮಸ್ಯೆ ಎದುರಾಗುತ್ತೆ.
2.ಸಂಸಾರದಲ್ಲಿ ವಿನಾಕಾರಣ ಕಿರಿಕಿರಿ ಉಂಟಾಗುತ್ತೆ.
3.ಮಕ್ಕಳ ವಿವಾಹ ಮುರಿದು ಬೀಳುತ್ತೆ.
4.ವೃತ್ತಿ ಕ್ಷೇತ್ರದಲ್ಲಿ ಹಿನ್ನಡೆ ಉಂಟಾಗುತ್ತೆ.
5.ಬಂಧು ಬಾಂಧವರಿಂದ ಮೋಸ ಹೋಗುವ ಸಾಧ್ಯತೆ ಇದೆ.
6.ನಂಬಿದವರಿಗೆ ವಂಚನೆಯಾಗಲಿದೆ.
7.ಸಂತಾನಹೀನ ಸಮಸ್ಯೆ ಕಾಡುತ್ತೆ.

ಹೀಗೆ ಸರ್ಪದೋಷದಿಂದ ಅನೇಕ ಸಮಸ್ಯೆಗಳು ಉಂಟಾಗುತ್ತವೆ ಅಂತಾ ಪುರಾಣಗಳಲ್ಲಿ ಹೇಳಲಾಗಿದೆ. ಸರ್ಪದೋಷ ಇರುವವರು ಆ ದೋಷದಿಂದ ಮುಕ್ತಿ ಹೊಂದಲು ಪೂಜೆ ಮಾಡಿಸಬೇಕು ಅಂತಾ ಹಿರಿಯರು ಹೇಳ್ತಾರೆ. ಕೆಲ ಪುರಾಣಗಳ ಪ್ರಕಾರ, ಸರ್ಪ ಶಾಂತಿಗಾಗಿ ಮಾನಸಾದೇವಿಯನ್ನು ಪೂಜಿಸಬೇಕು ಅಂತಲೂ ಹೇಳಲಾಗುತ್ತೆ. ಯಾಕಂದ್ರೆ, ಮಾನಸಾದೇವಿ ಶಿವನ ಆಜ್ಞೆಯ ಮೇರೆಗೆ, ತಪಸ್ಸು ಮಾಡಿದ್ದಳಂತೆ.

ಮಾನಸಾದೇವಿ ಪುಷ್ಕರ ಕ್ಷೇತ್ರದಲ್ಲಿ ಮೂರು ಯುಗಗಳ ಕಾಲ ಶಿವನನ್ನು ಕುರಿತು ತಪಸ್ಸನ್ನು ಆಚರಿಸಿದ್ದಳಂತೆ. ನಂತರ ಭಗವಾನ್ ಶ್ರೀಕೃಷ್ಣನು ಮಾನಸಾದೇವಿಗೆ ಸರ್ವಲೋಕ ಪೂಜಿತಳಾಗೆಂದು ವರ ನೀಡಿ, ತಾನೇ ಮೊದಲು ಪೂಜಿಸಿದ್ದನಂತೆ. ಇದೇ ಕಾರಣಕ್ಕೆ ಮಾನಸಾ ದೇವಿಗೆ ಭಕ್ತಿಯಿಂದ ಪೂಜಿಸಿದ್ರೆ ಸರ್ಪದೋಷಗಳು ನಿವಾರಣೆಯಾಗುತ್ತೆ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

Related Tags:

Related Posts :

Category: