ದೇಗುಲಗಳಲ್ಲಿ ಘಂಟೆ ಬಾರಿಸುವುದೇಕೆ, ಘಂಟಾನಾದದ ಮಹತ್ವವೇನು?

ಅನಾದಿಕಾಲದಿಂದಲೂ ದೇವಾಲಯಗಳಲ್ಲಿ ಘಂಟಾನಾದ ಮೊಳಗಿಸುವ ಪದ್ಧತಿ ಇದೆ. ದೇವರ ದರ್ಶನ ಪಡೆಯುವ ಮೊದಲು ಗರ್ಭಗುಡಿಯ ಮುಂಭಾಗದಲ್ಲಿರುವ ಘಂಟೆಯನ್ನು ಹೊಡೆದು ದೇವರಿಗೆ ಕೈಮುಗಿಯುವುದು ಹಿಂದೂಗಳು ಆಚರಿಸುತ್ತಾ ಬಂದಿರುವ ಆಚರಣೆ.

ದೇವಾಲಯ ಪ್ರವೇಶಿಸುವ ಭಕ್ತರು ಘಂಟೆ ಬಾರಿಸಿದಾಗ ಅವರಲ್ಲಿ ಭಕ್ತಿಭಾವ ಮೂಡುತ್ತದೆಯಲ್ಲದೇ, ಭಕ್ತರ ಮನಸ್ಸಿನಲ್ಲಿ ಒಂದು ರೀತಿಯ ಶಾಂತತೆ ನೆಲೆಸುವಂತೆ ಮಾಡಲು ಇದು ಸಹಕಾರಿಯಾಗುತ್ತೆ. ಹೀಗಾಗೇ ದೇವಾಲಯಗಳಲ್ಲಿ ಘಂಟೆ ಮೊಳಗಿಸುವುದರ ಹಿಂದೆಯೂ ಅದರದ್ದೇ ಆದ ಮಹತ್ವ ಇದೆ ಎನ್ನಲಾಗುತ್ತೆ.

ಘಂಟಾನಾದದ ಪ್ರಾಮುಖ್ಯತೆ:
-ದೇವಾಲಯಕ್ಕೆ ಹೋದಾಗ ಗಂಟೆ ಹೊಡೆದರೆ ಮನಸ್ಸಿಗೆ ಆಧ್ಯಾತ್ಮಿಕ ಆನಂದ ಸಿಗುವುದಷ್ಟೇ ಅಲ್ಲದೇ ಸಕಲ ಶುಭಗಳು ಸಿದ್ಧಿಸುತ್ತವೆ ಎನ್ನುವ ನಂಬಿಕೆ ಇದೆ.
-ಶಾಸ್ತ್ರದ ಪ್ರಕಾರ, ಘಂಟೆಯ ಸದ್ದು ಎಲ್ಲಾ ರೀತಿಯ ದುಷ್ಟಶಕ್ತಿಗಳಿಂದ ನಮ್ಮನ್ನು ಕಾಪಾಡುತ್ತದೆಯಂತೆ. ಜೊತೆಗೆ ಇದು ದೇವರಿಗೆ ಅಪ್ಯಾಯಮಾನಕರವಾದ ಸದ್ದಾಗಿರುತ್ತೆ. ವೈಜ್ಞಾನಿಕವಾಗಿ ಇದನ್ನು ವಿವರಿಸಬೇಕೆಂದರೆ ಘಂಟಾನಾದ ನಮ್ಮ ಏಕಾಗ್ರತೆಯನ್ನು ದೇವರ ಕ್ರಿಯೆಯಲ್ಲಿ ತಲ್ಲೀನಗೊಳ್ಳುವಂತೆ ಮಾಡುತ್ತೆ.
-ಘಂಟೆಯನ್ನು ಸಾಮಾನ್ಯವಾಗಿ ಹಿತ್ತಾಳೆಯಿಂದ ತಯಾರಿಸ್ತಾರೆ. ದೇವಾಲಯ ಪ್ರವೇಶಿಸುವ ಭಕ್ತರು ಘಂಟೆ ಬಾರಿಸಿದಾಗ ಅವರಲ್ಲಿ ಭಕ್ತಿಭಾವ ಮೂಡುತ್ತೆ. ಜೊತೆಗೆ ಆರತಿ ವೇಳೆ ನಿರಂತರವಾಗಿ ಘಂಟೆ ಬಾರಿಸುವುದರಿಂದ ಏಕಾಗ್ರತೆ ಮೂಡುತ್ತೆ ಎಂಬ ಕಾರಣಕ್ಕೆ ಘಂಟಾನಾದವನ್ನು ಮೊಳಗಿಸಲಾಗುತ್ತೆ.
-ಘಂಟೆ ನಮ್ಮ ಬಲ ಮತ್ತು ಎಡ ಮೆದುಳಿನ ನಡುವೆ ಅನ್ಯೋನ್ಯತೆಯನ್ನು ತರಲು ಸಾಧ್ಯವಾಗುತ್ತದೆಯಂತೆ. ಅದು ಹೇಗೆ ಅಂದ್ರೆ ನಾವು ಘಂಟೆಯನ್ನು ಹೊಡೆದಾಗ, ಅದು ಕನಿಷ್ಟ 7 ಸೆಕೆಂಡ್‍ಗಳ ಕಾಲ ಪ್ರತಿಧ್ವನಿಸುತ್ತೆ. ಇದು ಮೆದುಳಿನ ಮೇಲೆ ಪರಿಣಾಮ ಬೀರುತ್ತೆ.

ಘಂಟೆಯ ಪ್ರತಿ ಭಾಗಕ್ಕೂ ಒಂದು ವಿಶೇಷತೆ ಇದೆ. ಘಂಟೆಯ ನಾಲಗೆಯಲ್ಲಿ ಸರಸ್ವತಿ ಮಾತೆ ನೆಲೆಸಿರುತ್ತಾಳೆ. ಮಹಾರುದ್ರನು ಘಂಟೆಯ ಉದರ ಭಾಗದಲ್ಲಿ ನೆಲೆಸಿದ್ದರೆ, ಮುಖ ಭಾಗದಲ್ಲಿ ಬ್ರಹ್ಮದೇವ ನೆಲೆಸಿರುತ್ತಾನೆ. ಇನ್ನು ಕೊನೆಯ ಭಾಗದಲ್ಲಿ ವಾಸುಕಿ ಹಾಗೆಯೇ ಮೇಲಿರುವ ಹಿಡಿ ಭಾಗದಲ್ಲಿ ಪ್ರಾಣಶಕ್ತಿ ಇರುತ್ತೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಇದಿಷ್ಟೇ ಅಲ್ಲದೇ ಶ್ರೀ ಆಂಜನೇಯ, ಶಂಖ, ಚಕ್ರ, ನಂದಿ ಇವರೆಲ್ಲರೂ ಭಗವಂತನಿಗೆ ಸಂಬಂಧಿಸಿದ ಸೇವಾಕರ್ತರು. ಇವರೆಲ್ಲರೂ ಭಗವಂತನ ಸನ್ನಿಧಿಯಲ್ಲಿ ಇದ್ದುಕೊಂಡು ಆತನನ್ನೇ ನಿರಂತರವಾಗಿ ಸೇವಿಸಿಕೊಂಡಿರುವರು. ಆದ ಕಾರಣ ಘಂಟೆಯ ಮೇಲೆ ಇವರ ಪ್ರತಿರೂಪವಿರುತ್ತೆ.

ಘಂಟೆಯನ್ನು ಮೊಳಗಿಸಲು ಅರಂಭಿಸಿದ ನಂತರ ಇವರು ನಮ್ಮ ಪ್ರತಿನಿಧಿಗಳಂತೆ ನಿಂತು ದೇವತೆಗಳನ್ನು ಆಹ್ವಾನಿಸ್ತಾರೆ. ಅಲ್ಲದೇ ಘಂಟೆ ಹೊಡೆಯುವುದರಿಂದ ನಮಗೆ ಕಷ್ಟಗಳು ಬಂದಾಗ, ಮನಃಶಾಂತಿ ಬೇಕೆಂದುಕೊಂಡಾಗ ನಮ್ಮ ಮನಸ್ಸನ್ನು ಆಧ್ಯಾತ್ಮಿಕ ಭಾವನೆಯಿಂದ ತುಂಬಬೇಕು. ಹೀಗಾಗೇ ಭಗವಂತನ ಮುಂದೆ ಕಂಚಿನಿಂದ ಮಾಡಿದ ಘಂಟೆಯನ್ನು ಬಾರಿಸಬೇಕು ಎನ್ನಲಾಗುತ್ತೆ.

ಆ ಘಂಟೆಯಿಂದ ಹೊರಹೊಮ್ಮುವ ಓಂಕಾರ ಶಬ್ದದಿಂದ ದುಷ್ಟಶಕ್ತಿಗಳ ಕಾಟ ದೂರಾಗುತ್ತೆ. ಕಷ್ಟಗಳು ದೂರವಾಗುತ್ತವೆ ಎಂದು ಕರ್ಮಸಿದ್ಧಾಂತ ತಿಳಿಸುತ್ತೆ. ಇನ್ನು ಆರತಿ ಸಮಯದಲ್ಲಿ ಘಂಟೆ ಹೊಡೆದರೆ, ನಮ್ಮ ಮನೆಯಲ್ಲಿ ಅಥವಾ ದೇವಾಲಯದಲ್ಲಿನ ದೇವತಾ ಮೂರ್ತಿಗಳ ವಿಗ್ರಹಗಳೊಳಗೆ ದೇವತೆಗಳನ್ನು ಆಹ್ವಾನಿಸುತ್ತಿದ್ದೇವೆಂದು ಅರ್ಥ.

ಆದ್ರೆ ಆರತಿ ಸಮಯದಲ್ಲಿ ಘಂಟೆ ಹೊಡೆಯುವಾಗ ಕಣ್ಣುಗಳನ್ನು ಮುಚ್ಚಿಕೊಳ್ಳಬಾರದು. ಈ ನಿಯಮಗಳನ್ನು ಪಾಲಿಸುವ ಮೂಲಕ ಘಂಟಾನಾದ ಮಾಡಿದ್ರೆ ಭಗವಂತನ ಸಂಪೂರ್ಣ ಆಶೀರ್ವಾದ ನಮ್ಮ ಮೇಲಾಗುತ್ತೆ ಎಂಬ ನಂಬಿಕೆ ಇದೆ.

Related Tags:

Related Posts :

Category:

error: Content is protected !!