ಉಪ್ಪನ್ನು ಕಾಲಿನಿಂದ ತುಳಿಯಬಾರದು ಏಕೆ? ಈ ಬಗ್ಗೆ ಆಧ್ಯಾತ್ಮ ಹೇಳೋದೇನು?

ಉಪ್ಪು ನಮಗೆಲ್ಲಾ ಅಗತ್ಯವಾದ ವಸ್ತು. ನಾವು ದಿನನಿತ್ಯ ಬಳಸುವ ಆಹಾರದ ವಸ್ತುಗಳಲ್ಲಿ ಉಪ್ಪಿಗೆ ಪ್ರಮುಖ ಸ್ಥಾನ ನೀಡಲಾಗಿದೆ. ಉಪ್ಪಿನಲ್ಲಿರುವ ಸೋಡಿಯಂ ಮತ್ತು ಕ್ಲೋರಿನ್​ಗಳು ಮಾನವ ಸೇರಿದಂತೆ ಎಲ್ಲಾ ಜೀವಿಗಳ ಉಳಿವಿಗೂ ಅತ್ಯಗತ್ಯವಾಗಿದೆ.

ಇನ್ನು ಆಹಾರದ ಮೂಲ ರುಚಿಯಲ್ಲಿ ಉಪ್ಪು ಕೂಡ ಒಂದು. ಹೀಗಾಗೇ ಉಪ್ಪನ್ನು ಕುರಿತು, ಉಪ್ಪಿಗಿಂತ ರುಚಿ ಬೇರೆ ಇಲ್ಲ ಅನ್ನೋ ನಾಣ್ಣುಡಿ ಇದೆ. ಉಪ್ಪಿನ ಸಹಾಯದಿಂದ ಕೆಲವು ಆಹಾರ ಪದಾರ್ಥಗಳನ್ನು ವರ್ಷಗಳ ಕಾಲ ಸಂರಕ್ಷಿಸಿ ಇಡಬಹುದು. ಇಂತಹ ಉಪ್ಪಿಗೆ ಹಿಂದೂಧರ್ಮದಲ್ಲಿ ವಿಶೇಷ ಸ್ಥಾನವನ್ನು ನೀಡಲಾಗಿದೆ.

ಉಪ್ಪನ್ನು ಲಕ್ಷ್ಮೀದೇವಿಯ ಪ್ರತಿರೂಪ ಅಂತಾ ಹೇಳಲಾಗುತ್ತೆ. ಲಕ್ಷ್ಮಿದೇವಿಯು ಸಾಮಾನ್ಯವಾಗಿ ಸಂಜೆಯ ವೇಳೆ ಮನೆಯನ್ನು ಪ್ರವೇಶ ಮಾಡ್ತಾಳೆ. ಹೀಗಾಗೇ ಲಕ್ಷ್ಮೀದೇವಿ ಬರುವ ಹಾಗೂ ಇರುವ ಸಮಯವನ್ನು ಅತ್ಯಂತ ಪವಿತ್ರ ಅಂತಾ ಭಾವಿಸಲಾಗುತ್ತೆ. ಲಕ್ಷ್ಮೀ ಆಗಮಿಸುವ ಸಮಯದಲ್ಲಿ ಧನಾತ್ಮಕ ಹಾಗೂ ಸಕಾರಾತ್ಮಕ ವಾತಾವರಣವು ಮನೆಯಲ್ಲಿ ನೆಲೆಸಿರಬೇಕು. ಆದ್ದರಿಂದ ನಮ್ಮ ಶಾಸ್ತ್ರಗಳಲ್ಲಿ ಸಂಜೆಯ ಸಮಯದಲ್ಲಿ ಉಪ್ಪನ್ನು ಇತರರಿಗೆ ನೀಡಬಾರದು ಅನ್ನೋ ನಿಯಮವಿದೆ.

ಸಂಜೆಯ ಸಮಯದಲ್ಲಿ ಉಪ್ಪನ್ನು ಇತರರಿಗೆ ನೀಡಿದರೆ ಲಕ್ಷ್ಮೀಯನ್ನೇ ಮನೆಯಿಂದ ಆಚೆ ಕಳಿಸಿದ ಹಾಗೆ ಅನ್ನೋ ನಂಬಿಕೆ ಇದೆ. ಇನ್ನು ಸಂಜೆಯ ವೇಳೆ ಸೂರ್ಯನ ಕಿರಣವು ಇರುವುದಿಲ್ಲ. ಅಂತಹ ಸಮಯದಲ್ಲಿ ಸಾಕಷ್ಟು ಋಣಾತ್ಮಕ ಶಕ್ತಿ ಪ್ರವೇಶ ಪಡೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಸಂಜೆಯ ವೇಳೆ ಆದಷ್ಟು ಧನಾತ್ಮಕ ಕೆಲಸಗಳನ್ನು ಮಾಡಬೇಕು ಅಂತಾ ಹೇಳಲಾಗುತ್ತೆ.

ಈ ಹಿನ್ನೆಲೆಯಿಂದ ಪುರಾತನ ಕಾಲದಿಂದಲೂ ಸಂಜೆ ವೇಳೆ ಉಪ್ಪನ್ನು ನೀಡುವುದು ಮತ್ತು ಪಡೆದುಕೊಳ್ಳುವುದನ್ನು ನಿಷೇಧಿಸಲಾಗಿದೆ. ಸೂರ್ಯಾಸ್ತದ ನಂತರ ಉಪ್ಪನ್ನು ನೀಡುವುದು ಮತ್ತು ಪಡೆದುಕೊಳ್ಳುವುದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ ಎನ್ನಲಾಗುತ್ತೆ. ಅಲ್ಲದೇ ಉಪ್ಪಿನೊಂದಿಗೆ ಕೆಲವು ನಂಬಿಕೆಗಳು ಸಹ ಬೆಸೆದುಕೊಂಡಿವೆ. ಹಾಗಾದರೆ ಉಪ್ಪಿನೊಂದಿಗೆ ಇರುವ ಧಾರ್ಮಿಕ ನಂಬಿಕೆಗಳು ಯಾವುವು?

ಉಪ್ಪು ಹಾಗೂ ಧಾರ್ಮಿಕ ನಂಬಿಕೆಗಳು:
-ಉಪ್ಪನ್ನು ಚೆಲ್ಲುವುದು ದುರಾದೃಷ್ಟದ ಪ್ರತೀಕ. ಉಪ್ಪನ್ನು ಚೆಲ್ಲಿದರೆ ಅದರಲ್ಲಿ ಇರುವ ಕಣಗಳಷ್ಟೇ ಕಣ್ಣೀರು ಹಾಕಬೇಕಾಗುತ್ತೆ. ಹಾಗಾಗಿ ಅನಿರೀಕ್ಷಿತವಾಗಿ ಅಥವಾ ಅಚಾನಕ್ಕಾಗಿ ಉಪ್ಪು ನಮ್ಮಿಂದ ನೆಲಕ್ಕೆ ಬಿದ್ದರೆ, ಅದನ್ನು ತಕ್ಷಣ ಎತ್ತಿ ಯಾರೂ ತುಳಿಯದ ಜಾಗಕ್ಕೆ ಹಾಕಬೇಕು. ಇದ್ರಿಂದ ದಾರಿದ್ರ್ಯ ಉಂಟಾಗಲ್ಲ ಅನ್ನೋ ನಂಬಿಕೆ ಇದೆ.

-ಉಪ್ಪು ದುಷ್ಟಶಕ್ತಿಗಳ ವಿರುದ್ಧ ಹೋರಾಡುವಂತಹ ವಿಶೇಷ ಶಕ್ತಿಯನ್ನು ಹೊಂದಿದೆ. ಹಾಗಾಗಿ ದೂರ ಪ್ರಯಾಣ ಮಾಡುವಾಗ ಜೇಬಿನಲ್ಲಿ ಸ್ವಲ್ಪ ಸಮುದ್ರದ ಉಪ್ಪನ್ನು ಕೊಂಡೊಯ್ಯಬೇಕು. ಹೀಗೆ ಮಾಡುವುದರಿಂದ ಪ್ರಯಾಣದಲ್ಲಿ ಉಂಟಾಗುವ ತೊಂದರೆ ಹಾಗೂ ಅಪಘಾತಗಳನ್ನು ತಡೆಯಬಹುದೆಂಬ ನಂಬಿಕೆ ಇದೆ.

-ಉಪ್ಪು ಲಕ್ಷ್ಮೀದೇವಿಯ ಪ್ರತಿರೂಪ. ಹಾಗಾಗಿ ಮನೆಗೆ ಉಪ್ಪನ್ನು ತರಲು ಶುಕ್ರವಾರ ಅತ್ಯಂತ ಶ್ರೇಷ್ಠವಾದ ದಿನ. ಶುಕ್ರವಾರದಂದು ಉಪ್ಪನ್ನು ಖರೀದಿಸಿ ತಂದು, ಉಪ್ಪಿನ ಡಬ್ಬಕ್ಕೆ ಹಾಕಿ. ಹೀಗೆ ಮಾಡುವುದರಿಂದ ಲಕ್ಷ್ಮಿದೇವಿ ಮನೆಗೆ ಆಗಮಿಸ್ತಾಳೆ. ಹಾಗೆಯೇ ಆರ್ಥಿಕ ತೊಂದರೆಗಳು ಸುಧಾರಣೆಯಾಗುತ್ತವೆ. ಸಾಲಬಾಧೆ ನಿವಾರಣೆಯಾಗುತ್ತವೆ ಅನ್ನೋ ನಂಬಿಕೆ ಇದೆ.

-ಧಾರ್ಮಿಕ ನಂಬಿಕೆಯ ಪ್ರಕಾರ, ನಿತ್ಯವೂ ನಾವು ಮನೆಯ ನೆಲ ಒರೆಸುವಾಗ, ನೀರಿಗೆ ಒಂದು ಟೀ ಚಮಚ ಅಥವಾ ಚಿಟಿಕೆ ಉಪ್ಪನ್ನು ಬೆರೆಸಿ. ನಂತರ ಆ ನೀರಿನಿಂದ ಮನೆ ಒರೆಸಬೇಕು. ಹೀಗೆ ಮಾಡುವುದರಿಂದ ಆ ಮನೆಯಲ್ಲಿ ಧನಾತ್ಮಕ ಶಕ್ತಿ ಇರುತ್ತೆ. ರೋಗ ಪೀಡಿತ ಸೂಕ್ಷ್ಮಾಣುಗಳು ನಾಶವಾಗುತ್ತವೆ ಅನ್ನೋ ನಂಬಿಕೆ ಇದೆ.

ಇನ್ನು ಉಪ್ಪನ್ನು ಕೈಯಿಂದ ಕೈಗೆ ಕೊಡಬಾರದು ಎನ್ನಲಾಗುತ್ತೆ. ಯಾಕಂದ್ರೆ ಉಪ್ಪು ಶನೈಶ್ಚರನ ಸಂಕೇತ. ಹಿಂದೆ ಉಪ್ಪು ಅಷ್ಟು ಸುಲಭವಾಗಿ ದೊರೆಯುತ್ತಿರಲಿಲ್ಲ. ಬಹಳ ಕಷ್ಟಪಡಬೇಕಾಗಿತ್ತು. ತುಂಬಾ ಕಷ್ಟಪಟ್ಟು ಸಂಪಾದಿಸಿದ ಉಪ್ಪನ್ನು ರಕ್ಷಿಸಿಕೊಳ್ಳಲು ಉಪ್ಪನ್ನು ಶನೈಶ್ಚರನ ಅಂಶವೆಂದು, ಯಮನ ಸಂಕೇತವೆಂದು ಹೇಳ್ತಿದ್ರು. ಹೀಗಾಗೇ ಉಪ್ಪನ್ನು ಕೈ ಬದಲಾಗಿ ಕೇಳ್ತಿರಲಿಲ್ಲ. ಕಾಲಿನಿಂದ ತುಳಿಯುತ್ತಿರಲಿಲ್ಲ. ಯಾರೂ ಕದಿಯುತ್ತಿರಲಿಲ್ಲ. ಇದೇ ನಂಬಿಕೆಯಿಂದ ಇಂದಿಗೂ ಕಿರಾಣಿ ಅಂಗಡಿಗಳ ಮುಂದೆ ಮೂಟೆಗಟ್ಟಲೇ ಉಪ್ಪನ್ನು ಯಾವುದೇ ಬಂದೋಬಸ್ತ್ ಮಾಡದೇ ಇಟ್ಟುಹೋಗ್ತಾರೆ. ಇಂತಹ ಉಪ್ಪಿಗೆ ಉಪ್ಪೇ ಸರಿಸಾಟಿ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!