ಟಿವಿ9 ಕನ್ನಡ ಡಿಜಿಟಲ್ ಲೈವ್ ಬ್ಲಾಗ್ 13-01-2021

  • TV9 Web Team
  • Published On - 8:47 AM, 14 Jan 2021
ಪ್ರಮಾಣವಚನ ಸ್ವೀಕರಿಸಿದ ಸಚಿವರು

ಜಗತ್ತಿನೆಲ್ಲೆಡೆಯ ಸುದ್ದಿ ಕ್ಷಣಾರ್ಧದಲ್ಲಿ ಹರಿದು ಬಂದು ಅಂಗೈ ಸೇರುವಾಗ ಯಾವುದರತ್ತ ಕಣ್ಣು ಹಾಯಿಸಬೇಕು ಎಂಬ ಗೊಂದಲ ಸಹಜ.. ಎಷ್ಟೋ ಬಾರಿ ಸುದ್ದಿಯ ಹೆಸರಿನಲ್ಲಿ ಅಸಂಗತ ಸಂಗತಿಗಳೂ ತೇಲಿ ಬರುತ್ತವೆ. ಅವುಗಳನ್ನು ಸೋಸುವುದೇ ಹರಸಾಹಸ. ನಮ್ಮ ಓದುಗರನ್ನು ಇಂತಹ ಗೊಂದಲಗಳಿಂದ ಪಾರು ಮಾಡಲೆಂದೇ ಪ್ರತಿನಿತ್ಯ Live Blog ಮೂಲಕ ಆಯಾ ಕ್ಷಣದ ಮುಖ್ಯಾಂಶಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಇದು ನಿಮಗಿಷ್ಟವಾಗಿದೆ ಎನ್ನುವ ನಂಬಿಕೆ ನಮ್ಮದು.. ಬನ್ನಿ ಇಂದಿನ ಸುದ್ದಿಯ ಹರಿವನ್ನು ನೋಡೋಣ. ಸುದ್ದಿಯ ಸಂಪೂರ್ಣ ವಿವರ ವೆಬ್​ಸೈಟ್​ನ  ವಿವಿಧ ವಿಭಾಗಗಳಲ್ಲಿ ಲಭ್ಯವಿರುತ್ತವೆ. ಓದಲು ಮರೆಯದಿರಿ.

LIVE NEWS & UPDATES

  • 14 Jan 2021 08:47 AM (IST)

    ಲಾಲ್​ಬಾಗ್​ನಲ್ಲಿ ಜನವರಿ 22ರಿಂದ ಪುಷ್ಪ ಪ್ರದರ್ಶನ

    ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿರ್ದೇಶನದ ಹಿನ್ನೆಲೆಯಲ್ಲಿ ಲಾಲ್​ಬಾಗ್​ನಲ್ಲಿ ಈ ಭಾರಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಜೊತೆಗೆ, ಫಲಪುಷ್ಪಗಳಿಂದ ರೂಪ ತಳೆಯಲಿರುವ ಕೊರೊನಾ ವೈರಸ್​ಗಳೇ ಈ ಬಾರಿಯ ಪ್ರದರ್ಶನದ ಕೇಂದ್ರಬಿಂದುವಾಗಲಿದೆ.

  • 13 Jan 2021 22:44 PM (IST)

    ನಾಳೆ ಬೆಳಗ್ಗೆ 8.20ಕ್ಕೆ ದೆಹಲಿಗೆ ತೆರಳಲಿರುವ ರೇಣುಕಾಚಾರ್ಯ

    ಬಿಜೆಪಿ ಪಕ್ಷದಲ್ಲಿ ಭಿನ್ನಮತ ಸ್ಫೋಟ

    ಸಚಿವ ಸಂಪುಟ ವಿಸ್ತರಣೆ ಆಗುತ್ತಿದ್ದಂತೆ ಬಿಜೆಪಿ ಪಕ್ಷದಲ್ಲಿ ಭಿನ್ನಮತ ಸ್ಫೋಟವಾಗಿದೆ. ನಾಳೆ ಬೆಳಗ್ಗೆ 8.20ಕ್ಕೆ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ದೆಹಲಿಗೆ ತೆರಳಲಿದ್ದಾರೆ. ಸಚಿವ ಸ್ಥಾನ ಸಿಗದಿದ್ದಕ್ಕೆ ರೇಣುಕಾಚಾರ್ಯ ಬೇಸರ ವ್ಯಕ್ತಪಡಿಸಿದ್ದರು. ಸಚಿವ ಸಂಪುಟ ವಿಸ್ತರಣೆಯ ಅಸಮಾಧಾನದ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಚರ್ಚಿಸುವುದಾಗಿ ಇಂದು ಸಂಜೆಯಷ್ಟೇ ರೇಣುಕಾಚಾರ್ಯ ತಿಳಿಸಿದ್ದರು.

  • 13 Jan 2021 22:40 PM (IST)

    ದಿವ್ಯಾಂಗ ಬಾಲಕಿಯ ಕೊಲೆ ಪ್ರಕರಣ: ಆರೋಪಿ ಸೆರೆ

    ಅಂಗರೇಖನಹಳ್ಳಿಯಲ್ಲಿ ದಿವ್ಯಾಂಗ ಬಾಲಕಿಯ ಕೊಲೆ ಪ್ರಕರಣದ ಆರೋಪಿ ಶಂಕರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರಿಂದ ಆರೋಪಿ ಸೆರೆಯಾಗಿದ್ದಾನೆ. ದಿವ್ಯಾಂಗ ಮಗಳು ಮನೆಗೆ ಶಾಪ ಎಂದು ಚಿಕ್ಕಪ್ಪ ಶಂಕರ್ ಕೊಲೆಮಾಡಿದ್ದ. ಚಿಕ್ಕಬಳ್ಳಾಪುರ ತಾಲೂಕಿನ ಅಂಗರೇಖನಹಳ್ಳಿ ಬಳಿ ಬಾಲಕಿಯ ಹತ್ಯೆಯ ಅಮಾನುಷ ಘಟನೆ ನಡೆದಿತ್ತು.

  • 13 Jan 2021 22:37 PM (IST)

    ಚಿಕ್ಕಬಳ್ಳಾಪುರಕ್ಕೆ ಕೊರೊನಾ ಲಸಿಕೆ ವಾಹನ ಆಗಮನ

    ಚಿಕ್ಕಬಳ್ಳಾಪುರಕ್ಕೆ ಕೊರೊನಾ ವ್ಯಾಕ್ಸಿನ್​ ವಾಹನ ಆಗಮನವಾಗಿದೆ. ಡಿಸಿ ಲತಾ ಹಾಗೂ ಎಸ್​ಪಿ ಮಿಥುನ್ ಕುಮಾರ್​ ಲಸಿಕೆ ಸ್ವಾಗತಿಸಿದ್ದಾರೆ. ಡಿಹೆಚ್​​ಒ ಕಚೇರಿಯ ಉಗ್ರಾಣದಲ್ಲಿ ಲಸಿಕೆ​​​ ಸಂಗ್ರಹವಾಗಲಿದೆ. ಬಳಿಕ, ಜ.16ರಿಂದ ಜಿಲ್ಲೆಯಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತದೆ.

  • 13 Jan 2021 22:35 PM (IST)

    ರಾಜ್ಯ ಸರ್ಕಾರ ಕೇವಲ 2 ಜಿಲ್ಲೆಗಳಿಗೆ ಸೀಮಿತವಾಗಬಾರದು

    ಟ್ವೀಟ್​ ಮಾಡಿ ಆಕ್ರೋಶ ಹೊರಹಾಕಿದ ರೇಣುಕಾಚಾರ್ಯ

    ರಾಜ್ಯ ಸರ್ಕಾರ ಕೇವಲ 2 ಜಿಲ್ಲೆಗಳಿಗೆ ಸೀಮಿತವಾಗಬಾರದು ಎಂದು ಎಂ.ಪಿ.ರೇಣುಕಾಚಾರ್ಯ ಟ್ವೀಟ್​ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಸೋತವರಿಗೆ ಹಾಗೂ ಬ್ಲ್ಯಾಕ್​ಮೇಲ್​ ಮಾಡಿದವರಿಗೆ ಸಚಿವ ಸ್ಥಾನ ನೀಡಲಾಗಿದೆ. ಈ ಕುರಿತು ವರಿಷ್ಠರ ಜೊತೆ ಕೂಲಂಕಷವಾಗಿ ಚರ್ಚಿಸುತ್ತೇನೆ ಎಂದು ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ರೇಣುಕಾಚಾರ್ಯ ತಿಳಿಸಿದ್ದಾರೆ.

  • 13 Jan 2021 22:33 PM (IST)

    ಕುರುಡುಮಲೆ ಗಣೇಶ ದೇಗುಲಕ್ಕೆ ಸಚಿವ ಆರ್.ಶಂಕರ್ ಭೇಟಿ

    ಕುರುಡುಮಲೆ ಗಣೇಶ ದೇಗುಲಕ್ಕೆ ಸಚಿವ ಆರ್.ಶಂಕರ್ ಭೇಟಿ ನೀಡಿದ್ದಾರೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನಲ್ಲಿರುವ ದೇವಾಲಯಕ್ಕೆ ಆರ್. ಶಂಕರ್ ಕುಟುಂಬ ಸಮೇತ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

  • 13 Jan 2021 22:30 PM (IST)

    ಬೆಳಗಾವಿಯಿಂದ ಹಾವೇರಿಗೆ ಆಗಮಿಸಿದ ಲಸಿಕೆ​ ವಾಹನ

    ಕೊರೊನಾ ವಿರುದ್ಧದ ಲಸಿಕೆ ಹೊತ್ತ ವಾಹನ ಬೆಳಗಾವಿಯಿಂದ ಹಾವೇರಿಗೆ ಆಗಮಿಸಿದೆ. ಮೊದಲ ಹಂತದಲ್ಲಿ ಜಿಲ್ಲೆಗೆ 4 ಸಾವಿರ ಡೋಸ್ ಲಸಿಕೆ ಆಗಮಿಸಿದೆ. ಜಿಲ್ಲಾಡಳಿತ ಭವನದಲ್ಲಿ ಲಸಿಕೆ ಸಂಗ್ರಹವಾಗಿದೆ. ನಾಳೆ ಜಿಲ್ಲಾಸ್ಪತ್ರೆ ಸೇರಿ 19 ಕೇಂದ್ರಗಳಿಗೆ ಲಸಿಕೆ ರವಾನೆಯಾಗಲಿದೆ. ಬಳಿಕ, ಜನವರಿ 16ರಂದು ಕೊರೊನಾ ಲಸಿಕೆ ವಿತರಣೆಯಾಗಲಿದೆ.

  • 13 Jan 2021 20:39 PM (IST)

    ಕಾಂಗ್ರೆಸ್​ ಪಕ್ಷದ ಅಂತ್ಯಯಾತ್ರೆ ಆರಂಭವಾಗಿದೆ

    ಕೊಪ್ಪಳದಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿಕೆ

    ಕಾಂಗ್ರೆಸ್​ ಪಕ್ಷದ ಅಂತ್ಯಯಾತ್ರೆ ಆರಂಭವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಸಂಕಲ್ಪ ಯಾತ್ರೆ ಕುರಿತು ಶೆಟ್ಟರ್ ವ್ಯಂಗ್ಯವಾಡಿದ್ದಾರೆ. ಏನು ಸಂಕಲ್ಪನೋ ಗೊತ್ತಿಲ್ಲ, ಬಹುಶಃ ಅದು ಅಂತ್ಯ ಯಾತ್ರೆ ಎಂದು ಕೊಪ್ಪಳದಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿದ್ದಾರೆ.

  • 13 Jan 2021 20:35 PM (IST)

    ಅಂಬೇಡ್ಕರ್​ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಹೆಚ್. ನಾಗೇಶ್

    ಅಂಬೇಡ್ಕರ್​ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಹೆಚ್.ನಾಗೇಶ್ ನೇಮಕರಾಗಿದ್ದಾರೆ. ಹೆಚ್. ನಾಗೇಶ್ ನೇಮಿಸಿ, ಸಂಪುಟ ದರ್ಜೆ ಸ್ಥಾನಮಾನ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

  • 13 Jan 2021 20:23 PM (IST)

    ಮುನಿರತ್ನಗೆ ಸಚಿವ ಸ್ಥಾನ ಕೈತಪ್ಪಿದ್ದು ನನಗೂ ಬೇಸರವಿದೆ

    ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನಗೆ ಸಚಿವ ಸ್ಥಾನ ಕೈತಪ್ಪಿದ್ದು ನನಗೂ ಬೇಸರವಿದೆ ಎಂದು ಸಚಿವ ಎಂಟಿಬಿ ನಾಗರಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುನಿರತ್ನಗೂ ಸಚಿವ ಸ್ಥಾನ ಸಿಗಬೇಕಿತ್ತು ಎಂದು ಮುಖ್ಯಮಂತ್ರಿ ಭೇಟಿ ಬಳಿಕ ಸಚಿವ ಎಂಟಿಬಿ ನಾಗರಾಜ್ ಹೇಳಿಕೆ ನೀಡಿದ್ದಾರೆ.

  • 13 Jan 2021 19:39 PM (IST)

    ನಾನು ರೊಕ್ಕವೂ ಕೊಡಲಿಲ್ಲ, ಬೇರೆ ಏನೂ ಕೊಡಲಿಲ್ಲ: ಎಸ್. ಅಂಗಾರ

    ಸಂಘಟನೆ ನನ್ನನ್ನು ಆಯ್ಕೆ ಮಾಡಿದೆ ಎಂದ ನೂತನ ಸಚಿವ

    ನನಗೆ ಸಚಿವ ಸ್ಥಾನ ಸಿಕ್ಕಿರುವುದಕ್ಕೆ ಕ್ಷೇತ್ರ, ಜಿಲ್ಲೆ ಮತ್ತು ರಾಜ್ಯದ ಜನರು ಖುಷಿಯಾಗಿದ್ದಾರೆ. ಕೆಲಸ ಮಾಡುವ ವ್ಯಕ್ತಿಗಳಿಗೆ ಯಾವ ಖಾತೆ ಕೊಟ್ಟರೂ ಒಂದೇ. ಯಾವ ಖಾತೆ ಕೊಟ್ಟರೂ ನಾನು ಕೆಲಸ ಮಾಡುತ್ತೇನೆ. ನನಗೆ ಸಿಡಿ, ರೊಕ್ಕ ಯಾವ ವಿಷಯಗಳೂ ಗೊತ್ತಿಲ್ಲ. ನಾನು ರೊಕ್ಕವೂ ಕೊಡಲಿಲ್ಲ, ಬೇರೆ ಯಾವುದನ್ನೂ ಕೊಡಲಿಲ್ಲ. ಸಂಘಟನೆ ನನ್ನನ್ನು ಆಯ್ಕೆ ಮಾಡಿದೆ ಎಂದು ನೂತನ ಸಚಿವ ಎಸ್.ಅಂಗಾರ ಹೇಳಿಕೆ ನೀಡಿದ್ದಾರೆ.

  • 13 Jan 2021 19:37 PM (IST)

    ಲಂಚ ಸ್ವೀಕರಿಸುತ್ತಿದ್ದ ಗೃಹರಕ್ಷಕ ದಳದ ಅಧಿಕಾರಿ ಎಸಿಬಿ ಬಲೆಗೆ

    ಲಂಚ ಸ್ವೀಕರಿಸುತ್ತಿದ್ದ ಗೃಹರಕ್ಷಕ ದಳದ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕೊಡಗು ಜಿಲ್ಲೆ ಮಡಿಕೇರಿ ಬಸ್​ ನಿಲ್ದಾಣದಲ್ಲಿ ಅಧಿಕಾರಿ ರುದ್ರಪ್ಪ ಎಸಿಬಿ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಗೃಹರಕ್ಷಕ ದಳದ ಸಿಬ್ಬಂದಿ ಸುನಿಲ್ ಎಂಬವರ ಬಳಿ, ರುದ್ರಪ್ಪ 1 ಸಾವಿರ ಲಂಚ ಸ್ವೀಕಾರ ಮಾಡುತ್ತಿದ್ದರು. ಈ ವೇಳೆ ಎಸಿಬಿ ಅಧಿಕಾರಿ ಶ್ರೀಧರ್ ನೇತೃತ್ವದ ತಂಡದಿಂದ ದಾಳಿ ನಡೆಸಲಾಗಿದೆ. ರುದ್ರಪ್ಪ, ಪ್ರತಿ ತಿಂಗಳು ಗೃಹರಕ್ಷಕ ದಳದ ಸಿಬ್ಬಂದಿ ಬಳಿ ಒಂದು ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದರು. ಲಂಚ ನೀಡದಿದ್ದರೆ ಕಿರುಕುಳ, ಬೇರೆಡೆ ಕಳಿಸುವ ಬೆದರಿಕೆ ಹಾಕುತ್ತಿದ್ದರು ಎಂದು ಮಾಹಿತಿ ಲಭ್ಯವಾಗಿದೆ.

  • 13 Jan 2021 19:31 PM (IST)

    ಸಿದ್ದರಾಮಯ್ಯ ಏನು ಬಿಜೆಪಿ ವಕ್ತಾರರಾ?

    ಕೊಪ್ಪಳದಲ್ಲಿ ಸಚಿವ ಜಗದೀಶ್ ಶೆಟ್ಟರ್ ಪ್ರಶ್ನೆ

    ಯಡಿಯೂರಪ್ಪ ಬದಲಾವಣೆ ಆಗುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಕೊಪ್ಪಳದಲ್ಲಿ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಏನು ಬಿಜೆಪಿ ವಕ್ತಾರರಾ ಎಂದು ಜಗದೀಶ್ ಶೆಟ್ಟರ್ ಕೇಳಿದ್ದಾರೆ. ಸಿದ್ದರಾಮಯ್ಯ ನಮ್ಮ ಪಕ್ಷದ ಹೈಕಮಾಂಡ್ ಅಲ್ಲ. ಅರ್ಥವಿಲ್ಲದ ಹೇಳಿಕೆಗೆ ನಾವು ರಿಯಾಕ್ಷನ್ ಮಾಡಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

  • 13 Jan 2021 19:27 PM (IST)

    ಲಸಿಕೆ ಹಂಚಿಕೆ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ

    ಮೊದಲ ಹಂತದಲ್ಲಿ 1.65 ಕೋಟಿ ಡೋಸ್​ ಲಸಿಕೆ ಹಂಚಿಕೆ ಮಾಡಲಾಗಿದೆ. ಎಲ್ಲ ರಾಜ್ಯಗಳಿಗೆ ಕೊವ್ಯಾಕ್ಸಿನ್, ಕೊವಿಶೀಲ್ಡ್​ ಲಸಿಕೆ ಹಂಚಿಕೆಯಾಗಿದೆ. ಲಸಿಕೆ ಹಂಚಿಕೆ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾಹಿತಿ ಲಭ್ಯವಾಗಿದೆ. ಆರೋಗ್ಯ ಕಾರ್ಯಕರ್ತರ ಮಾಹಿತಿ ಮೇರೆಗೆ ಲಸಿಕೆ ಹಂಚಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

  • 13 Jan 2021 19:25 PM (IST)

    ಬೆಂಗಳೂರಿನ ಬಿಜೆಪಿ ಕಚೇರಿಗೆ ನೂತನ ಸಚಿವರ ಭೇಟಿ

    ಬೆಂಗಳೂರಿನ ಬಿಜೆಪಿ ಕಚೇರಿಗೆ ನೂತನ ಸಚಿವರು ಭೇಟಿ ನೀಡಿದ್ದಾರೆ. ಎಸ್​​​.ಅಂಗಾರ, ಸಿ.ಪಿ.ಯೋಗೇಶ್ವರ್, ಎಂಟಿಬಿ ನಾಗರಾಜ್​, ಆರ್.ಶಂಕರ್​, ಉಮೇಶ್​ ಕತ್ತಿ, ಅರವಿಂದ ಲಿಂಬಾವಳಿ ಹಾಗೂ ಮುರುಗೇಶ್ ನಿರಾಣಿ ಬೆಂಗಳೂರಿನ ಬಿಜೆಪಿ ಕಚೇರಿಗೆ ಭೇಟಿ ಕೊಟ್ಟಿದ್ದಾರೆ.

  • 13 Jan 2021 19:10 PM (IST)

    ಬೆಳಗಾವಿಯಿಂದ ಧಾರವಾಡಕ್ಕೆ ಬಂದ ಕೊವಿಡ್ ಲಸಿಕೆ ವಾಹನ

    ಬೆಳಗಾವಿಯಿಂದ ಧಾರವಾಡಕ್ಕೆ ಕೊವಿಡ್ ಲಸಿಕೆ ವಾಹನ ಆಗಮಿಸಿದೆ. ಧಾರವಾಡದ ಆರೋಗ್ಯ ಇಲಾಖೆ ಕಚೇರಿಗೆ ಲಸಿಕೆಯ ವಾಹನ ಆಗಮಿಸಿದೆ. ಆರೋಗ್ಯ ಇಲಾಖೆಯ ಲಸಿಕಾ ಉಗ್ರಾಣದಲ್ಲಿ ವ್ಯಾಕ್ಸಿನ್​ ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗಿದೆ.

  • 13 Jan 2021 19:08 PM (IST)

    ಇನ್ಫೋಸಿಸ್​ಗೆ 3ನೇ ತ್ರೈಮಾಸಿಕದಲ್ಲಿ ರೂಪಾಯಿ 5,197 ಕೋಟಿ ಲಾಭ

    ಇನ್ಫೋಸಿಸ್​ಗೆ 3ನೇ ತ್ರೈಮಾಸಿಕದಲ್ಲಿ 5,197 ಕೋಟಿ ರೂಪಾಯಿ ಲಾಭವಾಗಿದೆ. ಈ ಮೂಲಕ, ಇನ್ಫೋಸಿಸ್​ ದೇಶದ 2ನೇ ಅತಿದೊಡ್ಡ ಐಟಿ ಸೇವಾ ಕಂಪನಿಯಾಗಿ ಹೊರಹೊಮ್ಮಿದೆ. ಸೆಪ್ಟೆಂಬರ್​ನಿಂದ ಡಿಸೆಂಬರ್​ವರೆಗಿನ 3ನೇ ತ್ರೈಮಾಸಿಕದ ವರದಿಯಲ್ಲಿ ಈ ಅಂಶ ದೊರೆತಿದೆ. ಇನ್ಫೋಸಿಸ್​ ತಂಡ ಅತ್ಯುತ್ತಮ ಫಲಿತಾಂಶ ನೀಡಿದೆ ಎಂದು ಕಂಪೆನಿ ಸಿಇಒ ಸಾಲಿಲ್ ಪಾರೀಖ್​ ಮಾಹಿತಿ ನೀಡಿದ್ದಾರೆ.

  • 13 Jan 2021 19:04 PM (IST)

    ರಾಜ್ಯ ಬಿಜೆಪಿ ಕಚೇರಿಗೆ ಸಚಿವ ಸಿ‌.ಪಿ.ಯೋಗೇಶ್ವರ್ ಭೇಟಿ

    ರಾಜ್ಯ ಬಿಜೆಪಿ ಕಚೇರಿಗೆ ಸಚಿವ ಸಿ‌.ಪಿ.ಯೋಗೇಶ್ವರ್ ಭೇಟಿ ನೀಡಿದ್ದಾರೆ. ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಯೋಗೇಶ್ವರ್, ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದಾರೆ.

  • 13 Jan 2021 19:02 PM (IST)

    ಸಿಎಂ ಬಿಎಸ್​ವೈ ನಿವಾಸಕ್ಕೆ ಶಾಸಕರು, ಸಚಿವರ ಭೇಟಿ

    ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ಶಾಸಕರು, ಸಚಿವರು ಭೇಟಿ ನೀಡಿದ್ದಾರೆ. ನೂತನ ಸಚಿವ ಎಂಟಿಬಿ ನಾಗರಾಜ್, ಡಿಸಿಎಂ ಗೋವಿಂದ ಕಾರಜೋಳ, ಸಚಿವ ಹೆಚ್​.ನಾಗೇಶ್, ಶಾಸಕ ಮುನಿರತ್ನ ಭೇಟಿ ನೀಡಿದ್ದಾರೆ.

  • 13 Jan 2021 18:20 PM (IST)

    ಬೆಂಗಳೂರಿನಿಂದ ದೆಹಲಿಗೆ ತೆರಳಿದ ರಾಜ್ಯ ಬಿಜೆಪಿ ಉಸ್ತುವಾರಿ

    ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ, ಅರುಣ್ ಸಿಂಗ್ ಬೆಂಗಳೂರಿನಿಂದ ದೆಹಲಿಗೆ ತೆರಳಿದ್ದಾರೆ. ಬಿಜೆಪಿ ಜನಸೇವಕ್ ಸಮಾವೇಶ, ನೂತನ ಸಚಿವರ ಪದಗ್ರಹಣ ಸಮಾರಂಭ ಬಳಿಕ ದೆಹಲಿಗೆ ವಾಪಾಸಾಗಿದ್ದಾರೆ.

  • 13 Jan 2021 18:18 PM (IST)

    ಯಾರೆಲ್ಲ ಅರ್ಹರಿದ್ದರೋ ಅವರನ್ನೆಲ್ಲಾ ಮಂತ್ರಿ ಮಾಡಿದ್ದೇವೆ

    ಯಾರೆಲ್ಲ ಅರ್ಹರಿದ್ದರೋ ಅವರನ್ನೆಲ್ಲಾ ಮಂತ್ರಿ ಮಾಡಿದ್ದೇವೆ ಎಂದು ಕುಮಾರಕೃಪಾ ಅತಿಥಿಗೃಹದಲ್ಲಿ ಅರುಣ್ ಸಿಂಗ್ ಹೇಳಿಕೆ ನೀಡಿದ್ದಾರೆ. ಉಳಿದವರಿಗೆ ಮುಂದಿನ ದಿನಗಳಲ್ಲಿ ಅವಕಾಶ ನೀಡ್ತೇವೆ. ಶಾಸಕ ಮುನಿರತ್ನ ಪರಿಸ್ಥಿತಿ ಅರ್ಥ ಮಾಡಿಕೊಂಡಿದ್ದಾರೆ. ಮಂತ್ರಿಗಿರಿ ಬೇಕೆಬೇಕೆಂದು ಮುನಿರತ್ನ ಬೇಡಿಕೆ ಇಟ್ಟಿಲ್ಲ ಎಂದು ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮಾತನಾಡಿದ್ದಾರೆ.

  • 13 Jan 2021 18:10 PM (IST)

    ಎಚ್​ಎಎಲ್​ ನಿರ್ಮಿತ ತೇಜಸ್​ ಲಘು ಯುದ್ಧ ವಿಮಾನ ಖರೀದಿ

    ಎಚ್​ಎಎಲ್​ ನಿರ್ಮಿತ ತೇಜಸ್​ ಲಘು ಯುದ್ಧ ವಿಮಾನ ಖರೀದಿ ಸಂಬಂಧ 48,000 ಸಾವಿರ ಕೋಟಿ ರೂಪಾಯಿ ಒಪ್ಪಂದಕ್ಕೆ ಇಂದು ಪ್ರಧಾನಿ ಮೋದಿ ನೇತೃತ್ವದ ಭದ್ರತೆ ಕುರಿತ ಸಂಪುಟ ಸಮಿತಿ ಅನುಮೋದನೆ ನೀಡಿದೆ. ಸದ್ಯದಲ್ಲೇ ಇದನ್ನು ಕೇಂದ್ರ ಸರ್ಕಾರ ಏರ್​ಫೋರ್ಸ್​ಗೆ ಹಸ್ತಾಂತರ ಮಾಡಲಿದ್ದು, ಇದೊಂದು ದೊಡ್ಡ ಮೈಲಿಗಲ್ಲಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

  • 13 Jan 2021 18:06 PM (IST)

    ಕೋವ್ಯಾಕ್ಸಿನ್ ನ ಒಂದು ವೈಲ್ ನಿಂದ 20 ಮಂದಿಗೆ ಲಸಿಕೆ ನೀಡಬಹುದು: ಡಾ.ಕೆ.ಸುಧಾಕರ್

    ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೋವ್ಯಾಕ್ಸಿನ್ ನ ಒಂದು ವೈಲ್ ನಲ್ಲಿ 10 ಎಂಎಲ್ ಲಸಿಕೆ ಇದೆ. ಕೋವಿಶೀಲ್ಡ್ ನ ಒಂದು ವೈಲ್ ನಲ್ಲಿ 5 ಎಂಎಲ್ ಇದೆ. ಕೋವ್ಯಾಕ್ಸಿನ್ ನ ಒಂದು ವೈಲ್ ನಿಂದ 20 ಮಂದಿಗೆ ಲಸಿಕೆ ನೀಡಬಹುದು. ಎರಡು ಲಸಿಕೆಗಳ ನಡುವೆ ಇರುವ ವ್ಯತ್ಯಾಸ ಇಷ್ಟೇ. ರಾಜ್ಯದಲ್ಲಿ ಇವೆರಡೂ ಲಸಿಕೆಗಳನ್ನು ನೀಡಲಾಗುವುದು. ಆದರೆ ಲಸಿಕೆ ಪಡೆಯುವವರು ಯಾವ ಲಸಿಕೆ ಬೇಕೆಂದು ಕೇಳುವಂತಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

  • 13 Jan 2021 18:03 PM (IST)

    ನೋಟಿಸ್ ಅಲ್ಲ, ಮನವಿ: ಡಾ.ಕೆ ಸುಧಾಕರ್

    ಚಿತ್ರನಟ ಯಶ್ ಬಹಳ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು, ಅವರ ಮೇಲೆ ನನಗೂ ಅಭಿಮಾನವಿದೆ. ಯಶ್ ಅವರ ಹೊಸ ಸಿನಿಮಾ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯಿಂದ ಯಶ್ ಅವರಿಗೆ ಮನವಿ ಮಾಡಲಾಗಿದೆ. ಆದರೆ ಇದು ನೋಟಿಸ್ ಅಲ್ಲ. ಚಿತ್ರದಲ್ಲಿ ಸಿಗರೇಟು ಸೇದುವ ದೃಶ್ಯ ಇದೆ ಎಂದು ಕೇಳಿದ್ದೇನೆ. ಈ ದೃಶ್ಯವನ್ನು ತೆಗೆದುಹಾಕಿದರೆ ಸಮಾಜಕ್ಕೆ ಅನುಕೂಲ ಎಂದು ಮನವಿ ಮಾಡಲಾಗಿದೆ. ಯಶ್ ಅವರ ಅಭಿಮಾನಿಗಳಲ್ಲಿ ಅನೇಕ ಯುವಜನರು ಇದ್ದಾರೆ. ಇದು ಎಲ್ಲ ಚಿತ್ರಗಳಿಗೂ ಅನ್ವಯವಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

  • 13 Jan 2021 17:58 PM (IST)

    ಚಾಮುಂಡೇಶ್ವರಿ ಕ್ಷೇತ್ರದ ಸೋಲು ಮತ್ತೆ ನೆನಪಿಸಿಕೊಂಡ ಸಿದ್ದರಾಮಯ್ಯ

    ಮೈಸೂರು ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ನೋವಿಂದ ಇನ್ನು ನಾನು ಹೊರ ಬರಲು ಸಾಧ್ಯವಾಗಿಲ್ಲ.ಇದೀಗ ಗ್ರಾಮ ಪಂಚಾಯತಿಯಲ್ಲಿ ಹೆಚ್ಚು ಸ್ಥಾನ ಕಾಂಗ್ರೆಸ್ ಗೆದ್ದಿದ್ದು, ಇಲ್ಲಿ ಇಷ್ಟೊಂದು ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ತಿಳಿದಿರಲಿಲ್ಲ. ನಾನು ಸೋತಿದ್ದ ಕಾರಣದಿಂದ ಗೆಲ್ಲಲ್ಲು ಸಾಧ್ಯವಿಲ್ಲ ಎಂದು ಕೊಂಡಿದ್ದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ‌ ನೀಡಿದ್ದಾರೆ.

  • 13 Jan 2021 17:52 PM (IST)

    ಅರುಣ್​ ಸಿಂಗ್​ ಭೇಟಿಯಾದ ಸಚಿವ ಮುರುಗೇಶ್ ನಿರಾಣಿ

    ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ನೂತನ ಸಚಿವ ಮುರುಗೇಶ್ ನಿರಾಣಿ ಭೇಟಿ ಮಾಡಿದ್ದಾರೆ.

  • 13 Jan 2021 17:46 PM (IST)

    ಸಿಂಗು ಗಡಿಯಲ್ಲಿ ರೈತರ ಪ್ರತಿಭಟನೆ

    ನೂತನ ಕೃಷಿ ಕಾಯ್ದೆಯ ಪ್ರತಿಗಳನ್ನು ಸುಟ್ಟು ಸಿಂಗು ಗಡಿಯಲ್ಲಿ ದೆಹಲಿಯ ಪ್ರತಿಭಟನಾನಿರತ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

  • 13 Jan 2021 17:40 PM (IST)

    ನೂತನ 7ಸಚಿವರಿಗೆ ವಿಧಾನಸೌಧದಲ್ಲಿ ಕೊಠಡಿಗಳ ಹಂಚಿಕೆ

    ಎಲ್ಲಾ 7 ಸಚಿವರಿಗೂ ವಿಧಾನಸೌಧದಲ್ಲೇ ಕೊಠಡಿ ಹಂಚಿಕೆ ಮಾಡಲಾಗಿದ್ದು, ಸಚಿವ ಉಮೇಶ್​ ಕತ್ತಿ-ಕೊಠಡಿ ಸಂಖ್ಯೆ 329, 329(ಎ), ಅರವಿಂದ​ ಲಿಂಬಾವಳಿ-ಕೊಠಡಿ ಸಂಖ್ಯೆ 344, 344(ಎ), ಎಂಟಿಬಿ ನಾಗರಾಜ್- ಕೊಠಡಿ ಸಂಖ್ಯೆ 330, 330(ಎ), ಮುರುಗೇಶ್​ ನಿರಾಣಿ-ಕೊಠಡಿ ಸಂಖ್ಯೆ 307, 307(ಎ), ಸಿ.ಪಿ.ಯೋಗೇಶ್ವರ್-ಕೊಠಡಿ ಸಂಖ್ಯೆ 336, 336(ಎ), ಎಸ್​.ಅಂಗಾರ-ಕೊಠಡಿ ಸಂಖ್ಯೆ 252, 253(ಎ), ಆರ್.ಶಂಕರ್-ಕೊಠಡಿ ಸಂಖ್ಯೆ 305, 305(ಎ).

  • 13 Jan 2021 17:36 PM (IST)

    ಸಾವಿಗೀಡಾದ ಪಕ್ಷಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ: ಪಶು ಸಂಗೋಪನಾ ಇಲಾಖೆ

    ಮಹಾರಾಷ್ಟ್ರದಲ್ಲಿ ಇಂದು 238 ಪಕ್ಷಿಗಳು ಸಾವನ್ನಪ್ಪಿದ್ದು, ಸಾವಿಗೀಡಾದ ಪಕ್ಷಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಜನವರಿ 8 ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 2096 ಪಕ್ಷಿಗಳ ಸಾವು ವರದಿಯಾಗಿದೆ ಎಂದು ಮಹಾರಾಷ್ಟ್ರದ ಪಶು ಸಂಗೋಪನಾ ಇಲಾಖೆ ತಿಳಿಸಿದೆ.

  • 13 Jan 2021 17:31 PM (IST)

    ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ವಿಶ್ವನಾಥ ಅಸಮಾಧಾನ

    ದೇವರು ಒಳ್ಳೆಯದು ಮಾಡುವುದಿಲ್ಲ ಎಂದು ವಿಶ್ವನಾಥ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

  • 13 Jan 2021 17:24 PM (IST)

    ಹೈಕೋರ್ಟ್​ನ ಮೊರೆ ಹೋದ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ

    ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ತಮ್ಮ ರಾಜಕೀಯ ಮೆರವಣಿಗೆಗಳನ್ನು ನಡೆಸುವಾಗ ಪೊಲೀಸ್ ಭದ್ರತೆಯ ಅವಶ್ಯಕತೆ ಇದೆ ಎಂದು ಕೋರಿ ಕಲ್ಕತ್ತಾ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

  • 13 Jan 2021 17:16 PM (IST)

    ಚಿಕ್ಕಬಳ್ಳಾಪುರದ ಜನಸೇವಕ ಸಮಾವೇಶಕ್ಕೆ ನಾಯಕರ ಗೈರು

    ಸಂಪುಟ ವಿಸ್ತರಣೆಯ ಟೆನ್ಷನ್ ಹಿನ್ನೆಲೆಯಲ್ಲಿ ಜನಸೇವಕ ಸಮಾವೇಶಕ್ಕೆ ಡಿಸಿಎಂಗಳಾದ ಅಶ್ವಥನಾರಾಯಣ, ಲಕ್ಷ್ಮಣ್ ಸವದಿ, ಗೃಹಸಚಿವ ಬಸವರಾಜ ಬೊಮ್ಮಾಯಿ ಗೈರಾಗಿದ್ದು, ಸಮಾವೇಶದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾತ್ರ ಭಾಗಿಯಾಗಿದ್ದರು.

  • 13 Jan 2021 17:05 PM (IST)

    ಬಿಜೆಪಿ ಅಶಿಸ್ತಿನಿಂದ ಕೂಡಿದೆ ಎಂಬುದಕ್ಕೆ ಇದು ಉದಾಹರಣೆ: ವಿ.ಎಸ್.ಉಗ್ರಪ್ಪ ಹೇಳಿಕೆ

    ಬಿಜೆಪಿ ಒಂದು ಕಡೆ ಮತದಾರರಿಗೆ ಮೋಸ ಮಾಡಿದೆ, ಮತ್ತೊಂದೆಡೆ ಪಕ್ಷಕ್ಕೆ ಸೇರಿಸಿಕೊಂಡವರಿಗೂ ಮೋಸ ಮಾಡಿದೆ ಎಂದು ಶಾಸಕ ಯತ್ನಾಳ್ ಗಂಭೀರವಾದ ಆರೋಪ ಮಾಡಿದ್ದಾರೆ. ಬಿಜೆಪಿ ಯವರಿಗೆ ಪ್ರಾಮಾಣಿಕತೆ ಇದ್ರೆ ಸತ್ಯಾಸತ್ಯತೆ ತಿಳಿಯಲಿ. ಯತ್ನಾಳ್ ಏನೇ ಹೇಳಿದ್ದರೂ ಸತ್ಯಾಂಶ ಹೊರಬರಬೇಕು. ಯಾವುದೇ ತನಿಖೆ ಮಾಡಿದರೂ ಅದಕ್ಕೆ ನಾವು ಸಿದ್ಧ ಎಂದು ಟಿವಿ9ಗೆ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಹೇಳಿಕೆ ನೀಡಿದ್ದಾರೆ.

  • 13 Jan 2021 16:55 PM (IST)

    BBMPಗೆ 1 ಲಕ್ಷದ 5 ಸಾವಿರ ಕೊವಿಶೀಲ್ಡ್ ಲಸಿಕೆ ಹಸ್ತಾಂತರ

    BBMPಗೆ 1 ಲಕ್ಷದ 5 ಸಾವಿರ ಕೊವಿಶೀಲ್ಡ್ ಲಸಿಕೆ ಹಸ್ತಾಂತರವಾಗಿದೆ. ರಾಜ್ಯ ಆರೋಗ್ಯ ಇಲಾಖೆಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕೊರೊನಾ ಲಸಿಕೆ ಹಸ್ತಾಂತರವಾಗಿದ್ದು, ನಗರದ ದಾಸಪ್ಪ ಆಸ್ಪತ್ರೆಗೆ ಕೊವಿಶೀಲ್ಡ್ ಲಸಿಕೆ ಸ್ಥಳಾಂತರವಾಗಿದೆ.

  • 13 Jan 2021 16:54 PM (IST)

    ಉಮೇಶ್​ ಕತ್ತಿ ಪ್ರಮಾಣ ವಚನ ಸ್ವೀಕಾರಕ್ಕೆ ಬೆಳಗಾವಿಯಲ್ಲಿ ಸಂಭ್ರಮಾಚರಣೆ

    ಸಚಿವರಾಗಿ ಉಮೇಶ್​ ಕತ್ತಿ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಹಳೆ ಬಸ್ ನಿಲ್ದಾಣ ಹಾಗೂ ಕೋರ್ಟ್ ವೃತ್ತದಲ್ಲಿ ಪಟಾಕಿ ಸಿಡಿಸಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ.

  • 13 Jan 2021 16:44 PM (IST)

    ಪಕ್ಷನಿಷ್ಠ ದೌರ್ಬಲ್ಯವಲ್ಲ: ಅಭಯ್​ ಪಾಟೀಲ

    ಸ್ಥಾನ‌ಮಾನ ಪಡೆಯಲು ಅನ್ಯ ಮಾರ್ಗಗಳನ್ನು ಅನುಸರಿಸದೆ ಪಕ್ಷಕ್ಕೆ ನಿಷ್ಟೆ ಮತ್ತು ವಿಚಾರಕ್ಕೆ ಬದ್ಧತೆ ಇರುವ ಕಾರ್ಯಕರ್ತರಿಗೆ ಇಂದಿನ ದಿನಮಾನಗಳಲ್ಲಿ ಸ್ಥಾನವಿಲ್ಲ ಅನ್ನುವ ಇಂದಿನ‌ ಈ ನಡೆ ವಿಷಾದಕರ ಸಂಗತಿ. ವಿಚಾರಕ್ಕೆ ಮತ್ತು ಪಕ್ಷಕ್ಕೆ ನಿಷ್ಠೆ ಇದು ದೌರ್ಬಲ್ಯ ಅಲ್ಲ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಅಭಯ ಪಾಟೀಲ ಟ್ವೀಟ್ ಮಾಡಿದ್ದಾರೆ.

  • 13 Jan 2021 16:39 PM (IST)

    ವಿಜಯಪುರದಲ್ಲಿ ಶಾಸಕ ಬಸವನಗೌಡ ಯತ್ನಾಳ್​ರಿಂದ ಬ್ಲಾಕ್​ಮೇಲ್​ ಆರೋಪ

    ಮೂವರು ಸಿಡಿ ತೋರಿಸಿ ಬ್ಲಾಕ್​ಮೇಲ್ ಮೂಲಕ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ ಎಂದು ವಿಜಯಪುರದ ಶಾಸಕ ಬಸವನಗೌಡ ಯತ್ನಾಳ್ ಆರೋಪಿಸಿದ್ದಾರೆ. ಪ್ರಾಮಾಣಿಕತೆಯನ್ನು ಪರಿಗಣಿಸಿಲ್ಲ. ಮುಖ್ಯಮಂತ್ರಿಗಳು ಬ್ಲಾಕ್​ಮೇಲ್ ಮಾಡಿದವರನ್ನು ರಾಜಕೀಯ ಕಾರ್ಯದರ್ಶಿ, ಸಚಿವರನ್ನು ಮಾಡಿದ್ದಾರೆ. ಮೂರೂ ಜನ, ಕಳೆದ ಕೆಲ ತಿಂಗಳಿನಿಂದ ಯಡಿಯೂರಪ್ಪನವರ ಸಿಡಿ ಹಿಡಿದುಕೊಂಡು ಬ್ಲಾಕ್​ಮೇಲ್ ಮಾಡ್ತಿದ್ದರು. ಸಿಡಿ ಜೊತೆಗೆ ಯಡಿಯೂರಪ್ಪ ಮಗ ಬಿ.ವೈ.ವಿಜಯೇಂದ್ರ ಅವರಿಗೂ ಒಬ್ಬರು ಹಣ ಸಂದಾಯ ಮಾಡಿದ್ದಾರೆ. ಲಿಂಗಾಯತ ಸಮದಾಯಕ್ಕೂ ಕೂಡ ಅಪಮಾನವಾಗಿದೆ ಎಂದು ಬಸವನಗೌಡ ಯತ್ನಾಳ್​ ಆರೋಪಿಸಿದ್ದಾರೆ.

  • 13 Jan 2021 16:36 PM (IST)

    ಅರವಿಂದ ಬೆಲ್ಲದ್ ಅಸಮಾಧಾನ

    ಮುಂದಿನ ವಿಸ್ತರಣೆಯಲ್ಲಿ ಅವಕಾಶ ಕೊಡ್ತೀವಿ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದರು. ಒತ್ತಡ ತಂತ್ರ ಮಾಡದವರಿಗೆ ಅವಕಾಶ ಕೊಟ್ಟಿಲ್ಲ. ನನ್ನ ತಂದೆಗೂ ಅನ್ಯಾಯವಾಗಿತ್ತು. ಈಗ ನನಗೂ ಅದೇ ಪರಿಸ್ಥಿತಿ ಬಂದಿದೆ. ಐವರು ಎಂಎಲ್​ಸಿಗಳಿಗೆ ಸಚಿವ ಸ್ಥಾನ ಕೊಡಲು ಏನು ಅವಶ್ಯಕತೆಯಿತ್ತು? ಪಕ್ಷ ನಿಷ್ಠರಿಗೆ ಅವಕಾಶ ಸಿಕ್ಕಿಲ್ಲ.

  • 13 Jan 2021 16:35 PM (IST)

    ಸಚಿವ ಸ್ಥಾನ ಸಿಗದ ಸುನಿಲ್ ಕುಮಾರ್ ಟ್ವೀಟ್​

    ಪಕ್ಷ ನಿಷ್ಠೆ, ಕ್ಷೇತ್ರದ ಅಭಿವೃದ್ಧಿ, ಹಿಂದುತ್ವ ನನ್ನ ಅಜೆಂಡಾ. ನನಗೆ ಅನ್ಯ ಮಾರ್ಗ ತಿಳಿದಿಲ್ಲ. ಜಾತಿ ರಾಜಕೀಯದ ವೈಭವೀಕರಣ ಅರಿತಿಲ್ಲ. ಸ್ಥಾನಮಾನಕ್ಕೆ ಬ್ಲಾಕ್ ಮೇಲ್ ಮಾಡಿದವನಲ್ಲ. ಮುಂದೆಯು ಈ ಮಾರ್ಗ ಹಿಡಿಯುವುದಿಲ್ಲ ಎಂದು ಕಾರ್ಕಳ ಕ್ಷೇತ್ರದ ಶಾಸಕ ಸುನಿಲ್​ಕುಮಾರ್ ಟ್ವೀಟ್ ಮಾಡಿದ್ದಾರೆ.

  • 13 Jan 2021 16:34 PM (IST)

    ಸಚಿವ ಸ್ಥಾನ ಸಿಗದ ಎಸ್​.ಎ.ರಾಮದಾಸ್​ ಟ್ವೀಟ್​

    ನಾನೊಬ್ಬ ನಿಜವಾದ ಸ್ವಯಂಸೇವಕ, ಅನ್ಯ ಮಾರ್ಗದಲ್ಲಿ ಸಚಿವನಾಗುವುದು ನನ್ನ ಆತ್ಮ ಸಾಕ್ಷಿಗೆ ವಿರುದ್ಧವಾದುದು. ಮೈಸೂರು ಜಿಲ್ಲೆಯ ಬೇರೆ ಯಾರನ್ನಾದರೂ ಮಂತ್ರಿ ಮಾಡಬಹುದಿತ್ತು. ರಾಜ್ಯದ ಬಿಜೆಪಿ ಯುವಮೋರ್ಚಾ ಅಧ್ಯಕ್ಷನಾಗಿ ಸತತ 2 ಬಾರಿ ಕೆಲಸ ಮಾಡಿದವನು. ಸತತ 28 ವರ್ಷಗಳಿಂದ ಸಾಕಷ್ಟು ನಿಷ್ಠೆಯಿಂದ ಪಕ್ಷದ ಕೆಲಸ ಮಾಡುತ್ತಿದ್ದೇನೆ ಎಂದು ಸಚಿವ ಸ್ಥಾನ ಸಿಗದ ಎಸ್​.ಎ.ರಾಮದಾಸ್​ ಟ್ವೀಟ್​ ಮಾಡಿದ್ದಾರೆ.

  • 13 Jan 2021 16:33 PM (IST)

    ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ ಮುರುಗೇಶ್ ನಿರಾಣಿ ಪತ್ನಿ

    ಪತಿ ಸಚಿವರಾಗಿದ್ದು ಸಂತೋಷದ ವಿಚಾರ.ಯಾವುದೇ ಖಾತೆ ನೀಡಿದರೂ ಅವರು ಸಮರ್ಥವಾಗಿ ನಿಭಾಯಿಸುತ್ತಾರೆ. ಬಹುದಿನಗಳ ಹಿಂದೆಯೇ ಅವರಿಗೆ ಸಚಿವ ಸ್ಥಾನ ಸಿಗಬೇಕಿತ್ತು ಎಂದು ಟಿವಿ9ಗೆ ಮುರುಗೇಶ್ ನಿರಾಣಿ ಪತ್ನಿ ಪ್ರತಿಕ್ರಿಯೆ

  • 13 Jan 2021 16:23 PM (IST)

    ಆರ್​. ಶಂಕರ್​ ಮನೆ ಮುಂದೆ ಸಂಭ್ರಮಿಸಿದ ಬೆಂಬಲಿಗರು

    ಸಚಿವರಾಗಿ ಆರ್​.ಶಂಕರ್​ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ರಾಣೆಬೆನ್ನೂರಿನ‌ ಶಂಕರ್​ ಮನೆ ಮುಂದೆ ಬೆಂಬಲಿಗರು ಜೈಕಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದ್ದಾರೆ.

  • 13 Jan 2021 16:16 PM (IST)

    ಪ್ರಮಾಣವಚನ ಸ್ವೀಕಾರ ಸಮಾರಂಭ ಮುಕ್ತಾಯ

    ಏಳು ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಕ್ತಾಯವಾಗಿದ್ದು, ಅಂತಿಮವಾಗಿ ರಾಷ್ಟ್ರಗೀತೆ ಹಾಡಲಾಯಿತು.

  • 13 Jan 2021 16:14 PM (IST)

    ಸಚಿವ ಸ್ಥಾನಕ್ಕೇರಿದ ಎಸ್​.ಅಂಗಾರ

    ದಕ್ಷಿಣ ಕನ್ನಡದ ಸುಳ್ಯ ಕ್ಷೇತ್ರದ ಶಾಸಕ ಎಸ್​.ಅಂಗಾರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರು. ಇವರು ಬಿಜೆಪಿಯಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾದವರು.

  • 13 Jan 2021 16:11 PM (IST)

    ಸಿ.ಪಿ.ಯೋಗೇಶ್ವರ್​ರಿಂದ ಪ್ರಮಾಣ ವಚನ ಸ್ವೀಕಾರ

    ರಾಮನಗರ ಜಿಲ್ಲೆಯ ಪ್ರಮುಖ ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್​ 2ನೇ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಮೈತ್ರಿ ಸರ್ಕಾರ ಕೆಡವಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಯೋಗೇಶ್ವರ್ ಶ್ರಮಿಸಿದ್ದರು. ಅದಾದ ಮೇಲೆ ತಮಗೆ ಮೊದಲ ಹಂತದಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಬೇಸರವನ್ನೂ ವ್ಯಕ್ತಪಡಿಸಿದ್ದರು. ಇವರೂ ಸಹ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗೆ ಕಾಲ್ಮುಟ್ಟಿ ನಮಸ್ಕಾರ ಮಾಡಿದರು.

  • 13 Jan 2021 16:08 PM (IST)

    ಆರ್.ಶಂಕರ್​ ಪ್ರಮಾಣ ವಚನ ಸ್ವೀಕಾರ

    ಕೊನೇ ಕ್ಷಣದವರೆಗೂ ವೇಟಿಂಗ್​ ಲಿಸ್ಟ್​ನಲ್ಲೇ ಇದ್ದ ಹಾವೇರಿ ಜಿಲ್ಲೆ ರಾಣೆಬೆನ್ನೂರು ಶಾಸಕ ಆರ್​.ಶಂಕರ್​ 2ನೇ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಕಾಲಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆದರು.

  • 13 Jan 2021 16:07 PM (IST)

    2ನೇ ಬಾರಿಗೆ ಸಚಿವರಾದ ಮುರುಗೇಶ್​ ನಿರಾಣಿ

    ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ಷೇತ್ರದ ಶಾಸಕ ಮುರುಗೇಶ್​ ನಿರಾಣಿ ಎರಡನೇ ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ದೇವರು ಮತ್ತು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಮನಸೆಳೆದರು. ರಾಜ್ಯಪಾಲರು ಮತ್ತು ಸಿಎಂಗೆ ಕಾಲು ಮುಟ್ಟಿ ನಮಸ್ಕರಿಸಿದರು.

  • 13 Jan 2021 16:02 PM (IST)

    ಅಂತೂ ಸಚಿವರಾದ್ರು ಎಂಟಿಬಿ!

    ಬಹುದಿನಗಳಿಂದ ಸಚಿವ ಸ್ಥಾನಕ್ಕಾಗಿ ಕಾಯುತ್ತಿದ್ದ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್​ ಸಚಿವರಾಗಿ ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು. ವಿಧಾನಸಭೆಯಲ್ಲಿ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ನಂತರದ ದಿನಗಳಲ್ಲಿ ಸಚಿವ ಸ್ಥಾನಕ್ಕಾಗಿ ಹಲವು ಕಸರತ್ತು ಮಾಡಿದ್ದರು. ರಾಜ್ಯಪಾಲರು ಮತ್ತು ಯಡಿಯೂರಪ್ಪ ಹೂಗುಚ್ಛ ನೀಡಿ ಅಭಿನಂದಿಸಿದರು. ಯಡಿಯೂರಪ್ಪನವರಿಗೆ ತಲೆಬಾಗಿ ನಮಿಸಿದರು.

  • 13 Jan 2021 15:58 PM (IST)

    ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿದ ಅರವಿಂದ್ ಲಿಂಬಾವಳಿ

    ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಇವರು ಮೂಲ ಬಿಜೆಪಿಯ ಪ್ರಮುಖ ನಾಯಕ. ಐಟಿ ಸೆಲ್​ ಉಸ್ತುವಾರಿ ಹೊತ್ತಿದ್ದರು.

  • 13 Jan 2021 15:56 PM (IST)

    ಉಮೇಶ್​ ಕತ್ತಿ ಪ್ರಮಾಣ ವಚನ ಸ್ವೀಕಾರ

    ಮೊದಲಿಗೆ ಉಮೇಶ್ ಕತ್ತಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲರು ಪ್ರಮಾಣ ವಚನ ಬೋಧಿಸಿದರು. ಯಡಿಯೂರಪ್ಪ ಹೂಗುಚ್ಛ ಕೊಟ್ಟು ಅಭಿನಂದಿಸಿದರು.

  • 13 Jan 2021 15:52 PM (IST)

    ಪ್ರತಿಕ್ರಿಯೇ ನೀಡದೇ ಮುಂದೆ ತೆರಳಿದ ಮುನಿರತ್ನ

    ರಾಜರಾಜೇಶ್ವರಿ ನಗರ ಶಾಸಕ, ಮುನಿರತ್ನಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಬೇಸರದಲ್ಲಿದ್ದಾರೆ. ಯಾವುದೇ ಪ್ರತಿಕ್ರಿಯೇ ನೀಡಲ್ಲ ಎಂದು, ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡದೆ ಮುನಿರತ್ನ ತೆರಳಿದ್ದಾರೆ.

  • 13 Jan 2021 15:43 PM (IST)

    ಸಚಿವ ಸಂಪುಟ ವಿಸ್ತರಣೆಗೆ ಅಸಮಾಧಾನವಿದೆ: ಅರವಿಂದ ಬೆಲ್ಲದ್

    ರಾಜಭವನದ ಬಳಿ ಶಾಸಕ ಅರವಿಂದ ಬೆಲ್ಲದ್ ಹೇಳಿಕೆ ನೀಡಿದ್ದು, ಒತ್ತಡ ಹೇರುವವರಿಗೆ ಮಂತ್ರಿ ಸ್ಥಾನ ನೀಡುತ್ತಿದ್ದಾರೆ. ಈ ಹಿಂದೆ ಸಿಎಂ ಭೇಟಿಯಾಗಿ ಚರ್ಚೆ ಮಾಡಿದ್ದೆ, ಸಚಿವ ಸ್ಥಾನ ನೀಡುವುದಾಗಿ ಸಿಎಂ ಭರವಸೆ ನೀಡಿದ್ದರು. ಆದರೆ ಯಾವುದೇ ಸಚಿವ ಸ್ಥಾನ ನೀಡಿಲ್ಲ. ಐವರು ಎಂಎಲ್‌ಸಿಗಳಿಗೆ ಸಚಿವ ಸ್ಥಾನ ನೀಡಿದ್ದಾರೆ.ಅಂತಹ ಅವಕಾಶ ಏನಿತ್ತು? ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ಬೆಲ್ಲದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • 13 Jan 2021 15:39 PM (IST)

    ನೂತನ ಸಚಿವರ ಪ್ರಮಾಣವಚನ ಸ್ವೀಕಾರಕ್ಕೆ ಕೆಲವೇ ಕ್ಷಣ ಬಾಕಿ: ರಾಜಭವನಕ್ಕೆ ಸಿಎಂ ಆಗಮನ

    ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವ ಎಂ.ಟಿ.ಬಿ.ನಾಗರಾಜ್​, ಅರವಿಂದ್​ ಲಿಂಬಾವಳಿ, ಸಿ.ಪಿ.ಯೋಗೀಶ್ವರ್​,ಉಮೇಶ್ ಕತ್ತಿ, ಎಸ್​.ಅಂಗಾರ ರಾಜಭವನಕ್ಕೆ ಆಗಮಿಸಿದ್ದಾರೆ. ಮುರುಗೇಶ್​ ನಿರಾಣಿ ಮತ್ತು ಆರ್​.ಶಂಕರ್​ ಕುಟುಂಬ ಸಮೇತ ಆಗಮಿಸಿದ್ದಾರೆ.ಮುಖ್ಯಮಂತ್ರಿ ಯಡಿಯೂರಪ್ಪನವರೂ ರಾಜಭವನಕ್ಕೆ ಬಂದಿದ್ದಾರೆ.

  • 13 Jan 2021 15:33 PM (IST)

    ಇವರನ್ನ ಪ್ರಧಾನಿ ಮಾಡಿದ್ದು ಪಕೋಡ ಮಾರುವುದಕ್ಕಾ: ಸಿದ್ದರಾಮಯ್ಯ

    ಬಿಜೆಪಿಯವರು ಹಿಂದುಳಿದವರು, ಮಹಿಳೆಯರ ವಿರೋಧಿಗಳು. ನಾನು 7 ಕೆ.ಜಿ ಅಕ್ಕಿ ಕೊಟ್ಟೆ, ಅದನ್ನ 5 ಕೆ.ಜಿಗೆ ಇಳಿಸಿದ್ದಾರೆ. ಏನು ಇವರಪ್ಪನ ಮನೆಯಿಂದ ತಂದು ಅಕ್ಕಿ ಕೊಡ್ತಿದ್ರಾ? ಉದ್ಯೋಗ ಕೇಳಿದರೆ ಪಕೋಡ ಮಾರಿ ಎನ್ನುತ್ತಾರೆ. ಇವರನ್ನ ಪ್ರಧಾನಿ ಮಾಡಿದ್ದು ಪಕೋಡ ಮಾರೋಕಾ? ಇವರು ಉದ್ಯೋಗ ಸೃಷ್ಟಿ ಮಾಡೋದಿರಲಿ ಇರುವ ಉದ್ಯೋಗಗಳೇ ಕಿತ್ತುಕೊಂಡು ಹೋಗಿವೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • 13 Jan 2021 15:27 PM (IST)

    ಪ್ರಧಾನಿ ರೈತರನ್ನು ಮಾತನಾಡಿಸುವ ಗೋಜಿಗೆ ಹೋಗಿಲ್ಲ: ಸಿದ್ದರಾಮಯ್ಯ

    48 ದಿನದಿಂದ ದೆಹಲಿಯಲ್ಲಿ ರೈತರು ಹೋರಾಟ ಮಾಡುತ್ತಿದ್ದು, ಚಳಿಯಲ್ಲಿ ರಸ್ತೆಯಲ್ಲಿ ಕುಳಿತಿದ್ದಾರೆ. ಆದರೆ ಪ್ರಧಾನಿ ಅವರನ್ನು ಮಾತನಾಡಿಸುವ ಗೋಜಿಗೆ ಹೋಗಿಲ್ಲ. ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದರೂ ಬುದ್ಧಿ ಕಲಿಯಲಿಲ್ಲ ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

  • 13 Jan 2021 15:23 PM (IST)

    ಭಾರತ್​ ಮಾತಾಕೀ ಜೈ ಎಂದರೆ ಕಾಂಗ್ರೆಸ್​ನಲ್ಲಿ ನಡುಕ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ

    ಭಾರತ್​ ಮಾತಾಕೀ ಜೈ ಎಂದರೆ ಕಾಂಗ್ರೆಸ್​ನಲ್ಲಿ ನಡುಕ ಉಂಟಾಗಬೇಕು. ಮುಂದಿನ ಎಲೆಕ್ಷನ್​ನಲ್ಲಿ ಬಿಜೆಪಿ 150 ಸ್ಥಾನಗಳಲ್ಲಿ ಗೆಲ್ಲಬೇಕು. ಕರ್ನಾಟಕ ಕಾಂಗ್ರೆಸ್ ಮುಕ್ತವಾಗಬೇಕು, ಆ ಮೂಲಕ ಗ್ರಾಮ ಪಂಚಾಯಿತಿ ಅಧಿಕಾರ ಸದುಪಯೋಗವಾಗಬೇಕು ಎಂದು ಜನಸೇವಕ ಸಮಾವೇಶದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

  • 13 Jan 2021 15:15 PM (IST)

    ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಸಿ ನೆಟ್ಟಿದ್ದೇ ಜೆಡಿಎಸ್: ಹೆಚ್.ಡಿ.ರೇವಣ್ಣ

    2006, 2008ರಲ್ಲಿ ನಮ್ಮ ಹೆಸರು ಹೇಳಿಕೊಂಡೇ ಅಧಿಕಾರ ಹಿಡಿದಿದ್ದಿರಿ, 1985ರಿಂದಲೂ ಚುನಾವಣೆ ಮೂಲಕವೇ ನಾವು ಅಧಿಕಾರ ಗಳಿಸಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಸಿ ನೆಟ್ಟಿದ್ದೇ ಜೆಡಿಎಸ್, ಹಾಸನ ಜಿಲ್ಲೆಯ ಎಲ್ಲಾ ಕೆಲಸಗಳು ಕೇಂದ್ರ ಸರ್ಕಾರದ ಯೋಜನೆ ಎಂದಿದ್ದ ಸಂಸದ ಪ್ರತಾಪ್ ಸಿಂಹಗೆ ವಿರುದ್ಧವಾಗಿ ಹೇಳಿಕೆ ನೀಡಿದ ರೇವಣ್ಣ, ಪ್ರತಾಪ್ ಸಿಂಹ ಮೈಸೂರು ಸಂಸದರು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಆಲೋಚಿಸಲಿ ಎಂದು ಹಾಸನ ನಗರದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದಾರೆ.

  • 13 Jan 2021 15:10 PM (IST)

    ಅಪ್ಪ ಮಕ್ಕಳ ಪಕ್ಷ ಇಲ್ಲದಿದ್ದರೆ ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ: ಹೆಚ್.ಡಿ.ರೇವಣ್ಣ

    ರಾಜ್ಯದಲ್ಲಿ ಅಪ್ಪ ಮಕ್ಕಳ ಪಕ್ಷದಿಂದಾಗಿ ಬಿಜೆಪಿ ಅಧಿಕಾರಕ್ಕೆ ಬಂತು, ಹೆಚ್.ಡಿ.ದೇವೇಗೌಡರ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ವಿರುದ್ಧ ಹಾಸನ ನಗರದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

  • 13 Jan 2021 15:06 PM (IST)

    ಕಾಂಗ್ರೆಸ್ ಸತ್ತಿದೆ: ಶಾಸಕ ಯತ್ನಾಳ್

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ವಿಜಯೇಂದ್ರ ಕಾಂಗ್ರೆಸ್‌ನವರನ್ನ ಖರೀದಿಸಿದ್ದಾರೆ. ಕಾಂಗ್ರೆಸ್ ಸತ್ತಿದೆ. ವಿಪಕ್ಷ ಅಡ್ಜಸ್ಟ್‌ಮೆಂಟ್ ಮಾಡಿಕೊಂಡಿದ್ದು, ಸಿದ್ದರಾಮಯ್ಯ, ಡಿಕೆಶಿ, ಜಮೀರ್‌, ಬಿಎಸ್‌ವೈ ಜೊತೆಗಿದ್ದಾರೆ ಎಂದು ವಿಜಯಪುರದಲ್ಲಿ ಶಾಸಕ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.

  • 13 Jan 2021 15:01 PM (IST)

    ಅರುಣ್​ ಸಿಂಗ್ ಜೊತೆ ಜನಸೇವಕ್​ ಸಮಾವೇಶಕ್ಕೆ ತೆರಳಿದ ಬಿಎಸ್​ವೈ

    ಕುಮಾರಕೃಪಾ ಅತಿಥಿಗೃಹದಿಂದ ಒಂದೇ ಕಾರಿನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜನಸೇವಕ್​ ಸಮಾವೇಶಕ್ಕೆ ಬಿಜೆಪಿ ಕರ್ನಾಟಕ ಉಸ್ತುವಾರಿ ಸಚಿವ ಅರುಣ್ ‌ಸಿಂಗ್ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಯಾಣ ನಡೆಸಿದ್ದಾರೆ.

  • 13 Jan 2021 14:54 PM (IST)

    ರಾಜಭವನಕ್ಕೆ ಭೇಟಿ ನೀಡಿದ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ

    ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ರಾಜಭವನಕ್ಕೆ ಭೇಟಿ ನೀಡಿದ್ದು, ಈ ಹಿನ್ನೆಲಿಯಲ್ಲಿ ಪೊಲೀಸ್ ಆಯುಕ್ತರಿಂದ ಭದ್ರತಾ ಪರಿಶೀಲನೆ ನಡೆಸಲಾಗಿದೆ. ರಾಜಭವನಕ್ಕೆ ಬರುತ್ತಿರುವ ಪ್ರತಿಯೊಬ್ಬರನ್ನು ತಪಾಸಣೆ ಮಾಡಲಾಗುತ್ತಿದ್ದು, ಪಾಸ್ ಇದ್ದವರಿಗೆ ಮಾತ್ರ ರಾಜಭವನಕ್ಕೆ ಪ್ರವೇಶಿಸಲು ಅವಕಾಶವಿದೆ. ಗೇಟ್​ನಲ್ಲಿ ಸ್ಯಾನಿಟೈಜರ್, ಸ್ಕ್ರೀನಿಂಗ್ ಮಾಡಿಯೇ ಸಿಬ್ಬಂದಿಗಳು ಒಳಗೆ ಬಿಡುತ್ತಿದ್ದಾರೆ.

  • 13 Jan 2021 14:47 PM (IST)

    60 ಜನ ರೈತರು ಹೋರಟದಲ್ಲಿ ಪ್ರಾಣ ಕಳೆದುಕೊಂಡಿರುವುದು ನಿಮಗೆ ಮುಜುಗರ ತಂದಿಲ್ಲ: ರಾಹುಲ್ ಗಾಂಧಿ

    60 ಜನ ರೈತರು ಹೋರಟದಲ್ಲಿ ಪ್ರಾಣ ಕಳೆದುಕೊಂಡಿರುವುದು ನಿಮಗೆ ಮುಜುಗರ ತಂದಿಲ್ಲ, ಟ್ರ್ಯಾಕ್ಟರ್ ಮೆರವಣಿಗೆ ನಿಮಗೆ ಮುಜುಗರ ತಂದುಕೊಡುತ್ತದೆಯೇ ಎಂದು ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

  • 13 Jan 2021 14:34 PM (IST)

    ರೈತರಿಗೆ ಏನು ಬೇಕು ಎಂದು ತಿಳಿದಿಲ್ಲ: ಹೇಮಾಮಾಲಿನಿ

    ರೈತರಿಗೆ ಏನು ಬೇಕು ಎಂದು ತಿಳಿದಿಲ್ಲ, ನೂತನ ಕೃಷಿ ಕಾನೂನುಗಳಲ್ಲಿ ಏನು ತಪ್ಪಿದೆ? ಎಂದು ಬಿಜೆಪಿ ಸಂಸದೆ ಹೇಮಾಮಾಲಿನಿ ದೆಹಲಿಯ ಹೋರಾಟದಲ್ಲಿ ನಿರತರಾಗಿರುವ ರೈತರ ಕುರಿತು ಹೇಳಿಕೆ ನೀಡಿದ್ದಾರೆ.

  • 13 Jan 2021 14:27 PM (IST)

    ಅರುಣ್ ಸಿಂಗ್ ಭೇಟಿಯಾದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ

    ಕುಮಾರಕೃಪಾ ಅತಿಥಿಗೃಹದಲ್ಲಿ ಬಿಜೆಪಿ ಕರ್ನಾಟಕ ಉಸ್ತುವಾರಿ ಸಚಿವ ಅರುಣ್ ‌ಸಿಂಗ್ ಅನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭೇಟಿ ಮಾಡಿದ್ದು, ಮಾತುಕತೆ ನಡೆಸಿದ್ದಾರೆ.

  • 13 Jan 2021 14:22 PM (IST)

    ಸಂಕ್ರಾಂತಿಗೆ ಸಾರಿಗೆ ನೌಕರರಿಗೆ ಬೇವು, ಬೆಲ್ಲದ ಸಿಹಿಕಹಿ

    ಕೆಎಸ್​ಆರ್​ಟಿಸಿ, ಬಿಎಂಟಿಸಿ ,ವಾಯುವ್ಯ ಮತ್ತು ಈಶಾನ್ಯ ಸಾರಿಗೆ ನೌಕರಿಗೆ ಅರ್ಧ ಸಂಬಳವನ್ನು ನೀಡಿದ್ದು, ಆರ್ಥಿಕ ಸಂಕಷ್ಟದಿಂದಾಗಿ ಅರ್ಧ ಸಂಬಳ ಹಾಕಲಾಗಿದೆ ಎಂದು 4 ನಿಗಮಗಳು ಹೇಳಿವೆ. ಒಟ್ಟು ರಾಜ್ಯದಲ್ಲಿ 1.30 ಲಕ್ಷ ಸಾರಿಗೆ ನೌಕರಿದ್ದಾರೆ. ಸಂಬಳ ಕೊಡಲು ಹಣವಿಲ್ಲ ಎನ್ನುತ್ತೀರಿ, ಹೊಸ ಬಸ್ ಖರೀದಿ ಟೆಂಡರ್ ಹೇಗೆ ಮಾಡುತ್ತಿರಾ ಎಂದು ಸಾರಿಗೆ ಮುಖಂಡರು ಆಕ್ಷೇಪ ಎತ್ತಿದ್ದರು. ಸದ್ಯ ಇದೀಗ ಅರ್ಧ ಸಂಬಳ ಹಾಕಿದ್ದರಿಂದ ಸಿಬ್ಬಂದಿಗಳು ಬೇವು ಬೆಲ್ಲದ ಸ್ಥಿತಿಗೆ ಬಂದು ತಲುಪಿದ್ದಾರೆ.

  • 13 Jan 2021 13:51 PM (IST)

    ಮಾಜಿ ಟಿಎಂಸಿ ಸಂಸದ ಕೆ.ಡಿ ಸಿಂಗ್ ಅನ್ನು ಬಂಧಿಸಿದ ED

    ದೆಹಲಿಯಲ್ಲಿ ಹಣದ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಮಾಜಿ ಟಿಎಂಸಿ ಸಂಸದ ಕೆ.ಡಿ ಸಿಂಗ್ ಅವರನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿದೆ.

  • 13 Jan 2021 13:45 PM (IST)

    ಕೇಂದ್ರ ಸಚಿವ ಶ್ರೀಪಾದ್ ಅವರ ಆರೋಗ್ಯದಲ್ಲಿ ಚೆತರಿಕೆ

    ಇತ್ತೀಚೆಗೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕೇಂದ್ರ ಸಚಿವ ಶ್ರೀಪಾದ್ ಅವರ ಆರೋಗ್ಯ ಸ್ಥತಿಯಲ್ಲಿ ಚೆತರಿಕೆ ಕಂಡಿದ್ದು, ಕೃತಕ ಉಸಿರಾಟ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದ್ದ ಶ್ರೀಪಾದ್ ಅವರಿಗೆ ಈಗ ಮೂಗಿನ ಮೂಲಕ ಆಮ್ಲಜನಕವನ್ನು ಪೂರೈಸಲಾಗುತ್ತಿದೆ.

  • 13 Jan 2021 13:34 PM (IST)

    ಸ್ವ ಇಚ್ಚೆಯಿಂದ ನಾನು ರಾಜೀನಾಮೆ ಕೊಡುತ್ತಿದ್ದೇನೆ: ಸಚಿವ ಹೆಚ್. ನಾಗೇಶ್

    ಬಹಿರಂಗ ಅಸಮಾಧಾನ ತೋರಿಸಲು ಹಿಂಜರಿದ ಹೆಚ್​.ನಾಗೇಶ್, ಸಮಾನಾಂತರ ಹುದ್ದೆ ಕೊಡುತ್ತಾರೆ ಎನ್ನುವ ಭರವಸೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೀಡಿದ್ದಾರೆ. ಸ್ವ ಇಚ್ಚೆಯಿಂದ ನಾನು ರಾಜೀನಾಮೆ ನೀಡಿದ್ದೇನೆ. ತಪ್ಪು ಯಾರೂ ಮಾಡಿಲ್ಲ, ಇದು ಶಿಕ್ಷೆಯೂ ಅಲ್ಲ, ಕಾರಣ ಏನು ಹೇಳಿಲ್ಲ ಎಂದು ಹೆಚ್. ನಾಗೇಶ್ ಹೇಳಿಕೆ ನೀಡಿದ್ದು, ವಿಧಾನಸೌಧದಿಂದ ತೆರಳಿದ್ದಾರೆ.

  • 13 Jan 2021 13:29 PM (IST)

    ರೇಷ್ಮೆ ಬೆಳೆಗಾರರಿಗೆ ಅನುದಾನ

    ರೇಷ್ಮೆ ಗೂಡಿನ ಧಾರಣೆ ಕಡಿಮೆಯಾಗಿದ್ದ ಕಾರಣ  ಕೊವಿಡ್ ಸಮಯದಲ್ಲಿ ಸಬ್ಸಿಡಿ ನೀಡಲಾಗಿತ್ತು. ಈ ನಿಟ್ಟಿನಲ್ಲಿ ರೇಷ್ಮೆ  ಬೆಳೆಗಾರರಿಗೆ ಒಟ್ಟು 15 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ  ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

  • 13 Jan 2021 13:22 PM (IST)

    ಯಮುನಾ ನದಿ ಮಾಲಿನ್ಯಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್

    ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತರಾಗಿ ಯಮುನಾ ನದಿಯಲ್ಲಿನ ಮಾಲಿನ್ಯಕ್ಕೆ ಸಂಬಂಧಿಸಿದ ವಿಷಯವನ್ನು ಗಮನಕ್ಕೆ ತೆಗೆದುಕೊಂಡಿದೆ. ಇದರ ಜೊತೆಗೆ ಹರಿಯಾಣದಿಂದ ಹೆಚ್ಚು ಮಾಲಿನ್ಯಕಾರಕ ನೀರನ್ನು ನದಿಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ದೆಹಲಿ ಜಲ ಮಂಡಳಿಯ ಮನವಿಯ ಮೇರೆಗೆ ಹರಿಯಾಣ ಸರ್ಕಾರಕ್ಕೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ.

  • 13 Jan 2021 13:10 PM (IST)

    ರಾಜೀನಾಮೆ ನೀಡುವುದಕ್ಕೆ ಹೆಚ್.ನಾಗೇಶ್ ಸಮ್ಮತಿ

    ಇಂದು ಸಂಜೆ ಅಥವಾ ನಾಳೆ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಹೆಚ್​. ನಾಗೇಶ್ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

  • 13 Jan 2021 13:07 PM (IST)

    ಮುರುಗ ರಾಜೇಂದ್ರ ಮಠದಲ್ಲಿ ಬಸವೇಶ್ವರ ಪ್ರತಿಮೆ ನಿರ್ಮಾಣ

    ಚಿತ್ರದುರ್ಗ ಮುರುಗ ರಾಜೇಂದ್ರ ಮಠದಲ್ಲಿ ಬಸವೇಶ್ವರ ಪ್ರತಿಮೆ ನಿರ್ಮಾಣಕ್ಕೆ ಐದು ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು,ಒಟ್ಟು 20 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

  • 13 Jan 2021 12:59 PM (IST)

    ಪೊಲೀಸ್ ಗೃಹ ನಿರ್ಮಾಣ ಯೋಜನೆ

    ಪೊಲೀಸ್ ಗೃಹ ನಿರ್ಮಾಣ ಯೋಜನೆಯಡಿ 10,034 ವಸತಿ ಗೃಹಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಯೋಜನೆಗೆ ಎರಡು ಸಾವಿರ ಕೋಟಿ ಅನುಮೋದನೆ ನೀಡಲಾಗಿದೆ ಎಂದು ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.

  • 13 Jan 2021 12:54 PM (IST)

    ಮೊರೆನಾದ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಯನ್ನು ಅಮಾನತ್ತು ಮಾಡಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್

    ನಿನ್ನೆ ಮೊರೆನಾದದಲ್ಲಿ ಕಳ್ಳಬಟ್ಟಿ ಮದ್ಯ ಸೇವಿಸಿ 20 ಮಂದಿ ಸಾವಿಗೀಡಾದ ಘಟನೆ ನಡೆದಿದ್ದು, ಈ ಕುರಿತು ವಿಚಾರಣೆ ನಡೆಸುವ ನಿಟ್ಟಿನಲ್ಲಿ ಇಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಮೊರೆನಾದ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ (ಎಸ್​ಪಿ)ಯನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅಮಾನತ್ತು ಮಾಡಿದ್ದಾರೆ.

  • 13 Jan 2021 12:53 PM (IST)

    ಸಿಗ್ನಲ್ ಆ್ಯಪ್​ ಬಳಕೆಯತ್ತ ಮುಖ ಮಾಡಿದ ಭಾರತದ ಜನತೆ

    ವಾಟ್ಸಾಪ್ ತ್ಯಜಿಸಿ ಸಿಗ್ನಲ್ ಆ್ಯಪ್​ ಬಳಕೆಯತ್ತ ಭಾರತದಲ್ಲೂ ಒಲವು ಹೆಚ್ಚುತ್ತ ಸಾಗಿದೆ. ವಾಟ್ಸ್​ಆ್ಯಪ್​ ಖಾಸಗಿತನಕ್ಕೆ ಧಕ್ಕೆ ತರುವುದಿಲ್ಲವೆಂದು ಸ್ಪಷ್ಟನೆ ನೀಡಿದ ಬಳಿಕವೂ ಭಾರತದಲ್ಲಿ ವಾಟ್ಸ್​ಆ್ಯಪ್​ಗೆ ಹಿನ್ನೆಡೆ ತಪ್ಪಿಲ್ಲ. ಈವರೆಗೆ ಭಾರತದಲ್ಲೇ 40 ಲಕ್ಷ ಡೌನ್​ಲೋಡ್​ಗಳನ್ನು ಕಂಡಿರುವ ಸಿಗ್ನಲ್​ ಜನವರಿ 6 ರಿಂದ 10 ರವರೆಗೆ 23 ಲಕ್ಷ ಸಲ ಡೌನ್​ಲೋಡ್ ಆಗಿದೆ. ಇದೇ ವೇಳೆ ಟೆಲಿಗ್ರಾಂ 15 ಲಕ್ಷ ಡೌನ್​ಗಳನ್ನು ಕಂಡಿದೆ.

  • 13 Jan 2021 12:41 PM (IST)

    ಸಂಕ್ರಾತಿ ಹಬ್ಬದ ಶುಭಾಶಯ ಕೋರಿ ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ

    ಪ್ರಧಾನಿ ನರೇಂದ್ರ ಮೋದಿಯವರು ಎಲ್ಲರಿಗೂ ಟ್ವೀಟರ್​ನಲ್ಲಿ ಸಂಕ್ರಾತಿ ಹಬ್ಬದ ಶುಭಾಶಯ ಕೋರಿದ್ದು, ಈ ವಿಶೇಷ ದಿನವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ತುಂಬಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

  • 13 Jan 2021 12:32 PM (IST)

    ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ 5 ವರ್ಷ ಪೂರೈಸಿದೆ: ನರೇಂದ್ರ ಮೋದಿ

    ಕಷ್ಟಪಟ್ಟು ದುಡಿಯುವ ರೈತರನ್ನು ಪ್ರಕೃತಿಯ ಬದಲಾವಣೆಗಳಿಂದ ಅಥವಾ ಪರಿಣಾಮಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಜಾರಿಗೆ ತಂದ ಪ್ರಮುಖ ಉಪಕ್ರಮ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಇಂದು 5 ವರ್ಷಗಳನ್ನು ಪೂರೈಸಿದೆ. ಈ ಯೋಜನೆ ಕೃಷಿ ವ್ಯಾಪ್ತಿಯನ್ನು  ಹೆಚ್ಚಿಸಿದ್ದು, ಅಪಾಯವನ್ನು ತಗ್ಗಿಸಿದೆ ಮತ್ತು ಕೋಟ್ಯಂತರ ರೈತರಿಗೆ ಪ್ರಯೋಜನವನ್ನು ನೀಡಿದೆ. ಈ ಮೂಲಕ ಯೋಜನೆಯ ಎಲ್ಲಾ ಫಲಾನುಭವಿಗಳನ್ನು ನಾನು ಅಭಿನಂದಿಸುತ್ತೇನೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

  • 13 Jan 2021 12:18 PM (IST)

    ಭೋಪಾಲ್ ವಿಮಾನ ನಿಲ್ದಾಣ ತಲುಪಿದ ಕೋವಿಶೀಲ್ಡ್ ಲಸಿಕೆ

    ಪುಣೆಯ ಸಿರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಬಂದ ಕೊವಿಡ್ 19 ರ ವಿರುದ್ಧದ ಲಸಿಕೆ ಕೋವಿಶೀಲ್ಡ್ ಇಂದು ಭೋಪಾಲ್ ವಿಮಾನ ನಿಲ್ದಾಣಕ್ಕೆ ಬಂದಿದೆ.

  • 13 Jan 2021 12:11 PM (IST)

    ರಾಜೀನಾಮೆ ನೀಡುವಂತೆ ಹೆಚ್.ನಾಗೇಶ್‌ಗೆ ಸಿಎಂ ಸೂಚನೆ

    ಕ್ಯಾಬಿನೆಟ್ ಪ್ರಾರಂಭವಾದ ಕೂಡಲೇ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಯವರು ಸಂಪುಟಕ್ಕೆ ಯಾರು ಸೇರುತ್ತಾರೆ ಎಂದು ಸಭೆಗೆ ಮಾಹಿತಿ ನೀಡಿದ್ದಾರೆ. ಹೆಚ್​.ನಾಗೇಶ್ ರಾಜೀನಾಮೆ ನೀಡುವಂತೆ ಸಿಎಂ ಸೂಚನೆ ನೀಡಿದ್ದು, ಮುಂದೆ ನಿಮಗೆ ಅವಕಾಶ ಇದೆ. ಸದ್ಯಕ್ಕೆ ರಾಜೀನಾಮೆ ಕೊಟ್ಟು ಸಹಕರಿಸಿ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.

  • 13 Jan 2021 12:06 PM (IST)

    ರಾಜ್ಯ ಸಚಿವ ಧನಂಜಯ ಮುಂಡೆ ವಿರುದ್ಧ ಅತ್ಯಾಚಾರ ಆರೋಪ ಮಾಡಿದ ಗಾಯಕಿ ರೇಣು ಶರ್ಮಾ

    ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಕ್ಷದ  (Nationalist Congress Party) ಹಿರಿಯ ನಾಯಕ ಮತ್ತು ರಾಜ್ಯ ಸಚಿವ ಧನಂಜಯ ಮುಂಡೆ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದ್ದು, ತನ್ನ ಮೇಲೆ ಮಹಾರಾಷ್ಟ್ರ ರಾಜ್ಯ ಸಚಿವ ಧನುಂಜಯ ಮುಂಡೆ ಅತ್ಯಾಚಾರ ಎಸಗಿದ್ದು, ಈ ಬಗ್ಗೆ ದೂರನ್ನು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್​ಗೆ ಬರೆದಿರುವ ಪತ್ರದಲ್ಲಿ ಗಾಯಕಿ ರೇಣು ಶರ್ಮಾ ತಿಳಿಸಿದ್ದಾರೆ. ತನಗಾದ ಅನ್ಯಾಯಕ್ಕೆ ಸೂಕ್ತ ನ್ಯಾಯ ಒದಗಿಸಬೇಕು. ಧನಂಜಯ ಮುಂಡೆ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಪತ್ರದಲ್ಲಿ ಹೇಳಿದ್ದಾರೆ.

  • 13 Jan 2021 12:04 PM (IST)

    ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ ಎಸ್.ಅಂಗಾರ

    ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಅಂಗಾರ ಸಚಿವ ಸ್ಥಾನ ಘೋಷಣೆ ಮಾಡಿದ ಹಿನ್ನಲೆಯಲ್ಲಿ ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದು, ಸುಳ್ಯ-ಕಡಬದ ಬಿಜೆಪಿ ಪ್ರಮುಖರ ಜೊತೆ ಹೋಗಿ ಪೂಜೆ ಸಲ್ಲಿಸಿದ್ದಾರೆ.

  • 13 Jan 2021 11:58 AM (IST)

    ರಾಜ್ಯದಲ್ಲಿ ಇಂದು ಮತ್ತೆ 6 ರೂಪಾಂತರಿ ಕೊರೊನಾ ಪತ್ತೆ

    ದೇಶದಲ್ಲಿ ಇಂದು 6 ಜನರಿಗೆ ರೂಪಾಂತರಿ ಕೊರೊನಾ ದೃಢಪಟ್ಟಿದ್ದು, ದೇಶದಲ್ಲಿ ರೂಪಾಂತರಿ ಸೋಂಕಿತರ ಸಂಖ್ಯೆ 102ಕ್ಕೆ ಏರಿಕೆಯಾಗಿದೆ.

  • 13 Jan 2021 11:55 AM (IST)

    ಪಂಜಾಬ್ ಮತ್ತು ಹರಿಯಾಣದಲ್ಲಿ ಹೆಚ್ಚಿದ ಚಳಿ

    ಪಂಜಾಬ್ ಮತ್ತು ಹರಿಯಾಣದ ಹೆಚ್ಚಿನ ಭಾಗಗಳಲ್ಲಿ ಬುಧವಾರ ತೀವ್ರ ಶೀತಲ ಪರಿಸ್ಥಿತಿ ನಿರ್ಮಾಣವಾಗಿದ್ದು, ಎರಡೂ ರಾಜ್ಯಗಳಲ್ಲಿ 1.4 ಡಿಗ್ರಿ ಸೆಲ್ಸಿಯಸ್‌ ಇದ್ದು, ಇದರಲ್ಲಿ ನರ್ನಾಲ್ ಅತ್ಯಂತ ಅತೀ ಶೀತಲ ವಾತಾವರಣ ಸೃಷ್ಟಿಯಾಗಿದೆ.

  • 13 Jan 2021 11:50 AM (IST)

    ಬೆಳಗಾವಿಯಲ್ಲಿ ಒಟ್ಟು 1,47,000 ಡೋಸ್ ವ್ಯಾಕ್ಸಿನ್ ವಿತರಣೆ

    ಬೆಳಗಾವಿ ಸ್ಟೇಟ್ ವ್ಯಾಕ್ಸಿನ್ ಸ್ಟೋರೇಜ್‌ನಿಂದ 8 ಜಿಲ್ಲೆಗಳಿಗೆ ವ್ಯಾಕ್ಸಿನ್ ವಿತರಣೆ ಮಾಡಲಾಗುತ್ತಿದ್ದು, ಬಾಗಲಕೋಟೆ – 16,730 ಡೋಸ್, ಬೆಳಗಾವಿ – 35,960 ಡೋಸ್, ಧಾರವಾಡ – 28,380 ಡೋಸ್, ಗದಗ – 10,870 ಡೋಸ್, ಹಾವೇರಿ – 8270 ಡೋಸ್, ಕೊಪ್ಪಳ – 12,720 ಡೋಸ್, ಉತ್ತರ ಕನ್ನಡ – 15,090 ಡೋಸ್, ವಿಜಯಪುರ – 18,720 ಡೋಸ್ ನೀಡಲಾಗುತ್ತಿದೆ.

  • 13 Jan 2021 11:48 AM (IST)

    ರಾಜ್ಯದಲ್ಲಿ ಯಾವ್ಯಾವ ಜಿಲ್ಲೆಗೆ ಎಷ್ಟು ವ್ಯಾಕ್ಸಿನ್ ಅಂತಿಮ ಪಟ್ಟಿ ಬಿಡುಗಡೆ

    ಆರೋಗ್ಯ ಇಲಾಖೆಯಿಂದ ವ್ಯಾಕ್ಸಿನ್ ಹಂಚಿಕೆ ಫೈನಲ್ ಪಟ್ಟಿ ಸಿದ್ಧವಾಗಿದ್ದು, ಬೆಂಗಳೂರಿನ ವ್ಯಾಕ್ಸಿನ್ ಸ್ಟೋರೇಜ್‌ನಿಂದ 23 ಜಿಲ್ಲೆಗಳಿಗೆ ವ್ಯಾಕ್ಸಿನ್ ಪೂರೈಕೆ ಮಾಡಲಾಗುತ್ತಿದೆ.ಬೆಂಗಳೂರು ನಗರ – 37,610 ಡೋಸ್, ಬೆಂಗಳೂರು ಗ್ರಾಮಾಂತರ -11,390 ಡೋಸ್, ಬಿಬಿಎಂಪಿ ವ್ಯಾಪ್ತಿ – 2,10,080 ಡೋಸ್, ಬಳ್ಳಾರಿ – 22,160 ಡೋಸ್, ಬೀದರ್ – 11,180 ಡೋಸ್, ಚಾಮರಾಜನಗರ – 7,770 ಡೋಸ್, ಚಿಕ್ಕಮಗಳೂರು 12,470 ಡೋಸ್, ಚಿಕ್ಕಬಳ್ಳಾಪುರ – 9,980 ಡೋಸ್, ಚಿತ್ರದುರ್ಗ – 19,330 ಡೋಸ್, ದಕ್ಷಿಣ ಕನ್ನಡ – 48,450 ಡೋಸ್, ದಾವಣಗೆರೆ – 21,810 ಡೋಸ್, ಕಲಬುರಗಿ – 23,110 ಡೋಸ್, ಹಾಸನ – 21,560 ಡೋಸ್, ಕೊಡಗು – 7,960 ಡೋಸ್, ಕೋಲಾರ – 15,540 ಡೋಸ್, ಮಂಡ್ಯ – 16,160 ಡೋಸ್, ಮೈಸೂರು – 41,460 ಡೋಸ್, ರಾಯಚೂರು – 18,310 ಡೋಸ್,ರಾಮನಗರ – 10,450 ಡೋಸ್, ಶಿವಮೊಗ್ಗ – 26,470 ಡೋಸ್, ತುಮಕೂರು – 23,810 ಡೋಸ್, ಉಡುಪಿ – 23, 900 ಡೋಸ್, ಯಾದಗಿರಿ – 6,000 ಡೋಸ್. ಒಟ್ಟು ಬೆಂಗಳೂರಿನಿಂದ 6,47,500 ಡೋಸ್ ಬೆಂಗಳೂರು ಸ್ಟೋರೇಜ್‌ನಿಂದ ವಿತರಣೆ ಮಾಡಲಾಗುತ್ತಿದೆ.

  • 13 Jan 2021 11:41 AM (IST)

    ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ: ಹೆಚ್.ವಿಶ್ವನಾಥ್

    ಯಡಿಯೂರಪ್ಪ ನಾಲಿಗೆ, ಮಾತು ಕಳೆದುಕೊಂಡಿದ್ದಾರೆ. ರಾಜಕೀಯ ನಾಯಕರು ಸಮಯಕ್ಕೆ ಅಷ್ಟೇ, ಅವರಲ್ಲಿ ಕೃತಜ್ಞತೆ ಇಲ್ಲ. ಯೋಗೇಶ್ವರ್‌ಗೆ ಏಕೆ ಸಚಿವ ಸ್ಥಾನ ಕೊಡುತ್ತಿದ್ದೀರಿ? ಯೋಗೇಶ್ವರ್ ಫ್ರಾಡ್ ಹಲವರಿಗೆ ವಂಚನೆ ಮಾಡಿದ್ದಾನೆ. ಆತನ ಮೇಲೆ 420 ಕೇಸ್ ಇದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ ಎಂದು ಮೈಸೂರಿನಲ್ಲಿ ಬಿಜೆಪಿ ಎಂಎಲ್‌ಸಿ ಹೆಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.

  • 13 Jan 2021 11:37 AM (IST)

    ಅಂಗನವಾಡಿ ತೆರೆಯುವಂತೆ ಸುಪ್ರೀಂಕೋರ್ಟ್ ಸೂಚನೆ

    ಜನವರಿ 31ರೊಳಗೆ ಅಂಗನವಾಡಿ ತೆರೆಯುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸುಪ್ರೀಂಕೋರ್ಟ್ ಸೂಚನೆ ನೀಡಿದ್ದು, ಎಲ್ಲಾ ರಾಜ್ಯಗಳಿಗೆ ಅಂಗನವಾಡಿ ತೆರೆಯುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.

  • 13 Jan 2021 11:30 AM (IST)

    ಸ್ಯಾಂಡಲ್ ವುಡ್ ನಿರ್ಮಾಪಕರ ಮಹತ್ವದ ಸಭೆ

    ಇಂದು 12.30 ಕ್ಕೆ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿರುವ ಸಭೆಯಲ್ಲಿ 30 ಕ್ಕೂ ಹೆಚ್ಚು ನಿರ್ಮಾಪಕರು ಭಾಗಿಯಾಗಲಿದ್ದು, ಗಿರೀಶ್ ಕಾಸರವಳ್ಳಿ, ರಾಜೇಂದ್ರಸಿಂಗ್ ಬಾಬು, ಜೈ ಜಗದೀಶ್ ,ವಿಜಯ ಲಕ್ಷ್ಮಿ ಸಿಂಗ್ ಸೇರಿದಂತೆ ಹಲವು ನಿರ್ಮಾಪಕರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿಯ ಅವ್ಯವಹಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಾ ಎನ್ನುವ ಬಗ್ಗೆ ಕುತೂಹಲ ಹೆಚ್ಚಾಗಿದೆ.

  • 13 Jan 2021 11:27 AM (IST)

    ಕೆಜಿಎಫ್ 2 ಟೀಸರ್ ಬಗ್ಗೆ ಸಚಿವ ಕೆ.ಸುಧಾಕರ್ ಪ್ರತಿಕ್ರಿಯೆ

    ಯಶ್‌ ಸೇರಿ ಇತರ ನಟರಿಗೂ ಆರೋಗ್ಯ ಇಲಾಖೆ ಮನವಿ ಸಲ್ಲಿಸಿದ್ದು, ಸಾವಿರಾರು ಅಭಿಮಾನಿಗಳು ನಟರನ್ನು ಫಾಲೋ ಮಾಡುತ್ತಾರೆ. ಹೀಗಾಗಿ ಸಿಗರೇಟ್ ಸೇದುವಂತಹ ದೃಶ್ಯ ತೋರಿಸಬಾರದು. ದೇಶದಲ್ಲಿ ಕ್ಯಾನ್ಸರ್ ಪೀಡಿತರು ಹೆಚ್ಚುತ್ತಿದ್ದಾರೆ.ನಟರು ಈ ಕುರಿತು ಜಾಗೃತಿ ಮೂಡಿಸುವಂತಹ ಕೆಲಸ ಮಾಡಬೇಕು ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದ್ದಾರೆ.

  • 13 Jan 2021 11:24 AM (IST)

    ನಾಳೆಯೊಳಗೆ ಎಲ್ಲಾ ಜಿಲ್ಲೆಗಳಿಗೆ ಕೊವಿಡ್ ಲಸಿಕೆ ಹಂಚಿಕೆ: ಸಚಿವ ಡಾ.ಕೆ.ಸುಧಾಕರ್

    ಇಂದು ಸಹ ರಾಜ್ಯಕ್ಕೆ ಕೊವಿಡ್ ಲಸಿಕೆ ಬರುತ್ತಿದೆ. ನಾಳೆಯೊಳಗೆ ಎಲ್ಲಾ ಜಿಲ್ಲೆಗಳಿಗೆ ಕೊವಿಡ್ ಲಸಿಕೆ ಹಂಚಿಕೆ ಮಾಡಲಾಗುತ್ತದೆ. 20000 ಡೋಸ್ ಕೊವ್ಯಾಕ್ಸಿನ್ ಲಸಿಕೆ ಬರುತ್ತಿದ್ದು, ಕೊವ್ಯಾಕ್ಸಿನ್, ಕೊವಿಶೀಲ್ಡ್ 2 ಲಸಿಕೆ ಕೊಡುತ್ತೇವೆ. ಕೇಂದ್ರ ಸರ್ಕಾರದ ಪಟ್ಟಿ ಪ್ರಕಾರ ಜಿಲ್ಲೆಗಳಿಗೆ ಲಸಿಕೆ ಹಂಚಿಕೆ ಮಾಡಲಾಗುತ್ತದೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದ್ದಾರೆ.

  • 13 Jan 2021 11:19 AM (IST)

    ಕಾಂಗ್ರೆಸ್ ನವರಿಗೆ ಜಿಲ್ಲಾವಾರು ಸಮಾವೇಶ ಮಾಡಲು ತಾಕತ್ತು ಇಲ್ಲ: ಜಗದೀಶ್ ಶೆಟ್ಟರ್

    ಜನಸೇವಕ ಸಮಾವೇಶ ಮೂಲಕ ಗ್ರಾಮ ಪಂಚಾಯತಿ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ್ದು, ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಜನಸೇವಕ ಸಮಾವೇಶವಾಗಬೇಕು. ಗ್ರಾಮ ಪಂಚಾಯತಿಯಲ್ಲಿ ಶೇ 50 ಕ್ಕಿಂತಲೂ ಅಧಿಕ ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದ ಶಕ್ತಿ ಗ್ರಾಮ ಪಂಚಾಯತಿಯಲ್ಲಿ ಸಿಕ್ಕಿದೆ. ಆದರೆ ಕಾಂಗ್ರೆಸ್ ಇದನ್ನ ಸುಳ್ಳು ಎಂದು ಆರೋಪ ಮಾಡುತ್ತಿದೆ. ಕಾಂಗ್ರೆಸ್ ನವರಿಗೆ ಜಿಲ್ಲಾವಾರು ಸಮಾವೇಶ ಮಾಡಲು ತಾಕತ್ತು ಇಲ್ಲ. 5ವರ್ಷ ಸಿಎಂ ಆಗಿದ್ದ ಸಿದ್ದರಾಮಯ್ಯಗೆ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಹೊಸಪೇಟೆಯಲ್ಲಿ ಸಚಿವ ಜಗದೀಶ್ ಶೆಟ್ಟರ್ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.

  • 13 Jan 2021 11:14 AM (IST)

    ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ: ಸಚಿವ ಜಗದೀಶ್ ಶೆಟ್ಟರ್

    ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ವೇಳೆ ಸಾಕಷ್ಟು ಆಕಾಂಕ್ಷಿಗಳು ಇರುತ್ತಾರೆ. ಪ್ರತಿಯೊಬ್ಬರಿಗೆ ಸಚಿವರು ಆಗಬೇಕು ಎನ್ನುವುದು ಇರುತ್ತದೆ. ಕೆಲವರಿಗೆ ಅಸಮಾಧಾನ ಇರುವುದು ಸಹಜ, ಪಕ್ಷ ಇದನ್ನು ಸರಿ ಪಡಿಸುತ್ತಿದೆ. ಯಾರೂ ಕೂಡ ಬಹಿರಂಗ ಹೇಳಿಕೆ ಕೊಡಬಾರದು. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ. ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. ಮುಂದಿನ ಅವಧಿ ಮುಗಿಯವರೆಗೂ ಬಿಎಸ್​ವೈ ಮುಖ್ಯಮಂತ್ರಿಯಾಗಿ ಇರಲಿದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.

  • 13 Jan 2021 11:11 AM (IST)

    ಕೃಷಿ ಕಾಯ್ದೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​ನಲ್ಲಿ ಇಂದು ವಿಚಾರಣೆ

    ಪ್ರತಿಭಟನೆಯಲ್ಲಿ ಭಾಗಿಯಾಗಿರುವ 41 ರೈತ ಸಂಘಟನೆಯಲ್ಲಿ 1 ಖಲಿಸ್ತಾನಿ ಸಂಘಟನೆ ಭಾಗಿಯಾಗಿದೆ ಎಂದು ಆರೋಪಗಳು ಕೇಳಿ ಬಂದಿದ್ದು, ಇದು ನಿಜವೋ ಅಥವಾ ಸುಳ್ಳೋ ಎನ್ನುವ ಬಗ್ಗೆ ಇಂದು ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ ನಡೆಸಲಾಗುತ್ತದೆ.

  • 13 Jan 2021 11:07 AM (IST)

    ಪಂಚಮಸಾಲಿ ಲಿಂಗಾಯತರ ಪಾದಯಾತ್ರೆ ರದ್ದಾಗಿಲ್ಲ: ಬಸವಜಯ ಮೃತ್ಯುಂಜಯ ಸ್ವಾಮೀಜಿ

    ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರವಾಗಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪಾದಯಾತ್ರೆ ನಡೆಸುತ್ತಿದ್ದು, ಸಂಜೆಯೊಳಗೆ ಮೀಸಲಾತಿ ನೀಡಿದರೆ ಮಾತ್ರ ಪಾದಯಾತ್ರೆ ವಾಪಸ್​ ಪಡೆಯುತ್ತೇನೆ ಇಲ್ಲವಾದಲ್ಲಿ ಕನಿಷ್ಠ 2 ಲಕ್ಷ ಜನರನ್ನು ಸೇರಿಸಿ ಪಾದಯಾತ್ರೆ ಮಾಡುತ್ತೇವೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

  • 13 Jan 2021 11:01 AM (IST)

    ಹೈದರಾಬಾದ್‌ನ ಕೂಕಟಪಲ್ಲಿಯಲ್ಲಿ ಭೂಕಂಪದ ಅನುಭವ

    ಬೆಳಗ್ಗೆ 9.25 ರ ವೇಳೆಗೆ ಭಾರಿ ಶಬ್ದದೊಂದಿಗೆ ಹೈದರಾಬಾದ್‌ನ ಕೂಕಟಪಲ್ಲಿಯಲ್ಲಿ ಲಘು ಭೂಕಂಪದ ಅನುಭವವಾಗಿದ್ದು, 2-3 ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿದೆ. ಈ ವೇಳೆಗೆ ಭಯದಿಂದ‌ ಜನರು ಮನೆಯಿಂದ ಹೊರ ಬಂದಿದ್ದಾರೆ.

  • 13 Jan 2021 10:57 AM (IST)

    ಶರದ್ ಪವಾರ್ ನಿವಾಸಕ್ಕೆ ನಟ ಸೋನು ಸೂದ್ ಭೇಟಿ

    ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ನಿವಾಸಕ್ಕೆ ಇಂದು ಬಾಲಿವುಡ್ ನಟ ಸೋನು ಸೂದ್ ಭೇಟಿ ನೀಡಿದ್ದಾರೆ.

  • 13 Jan 2021 10:50 AM (IST)

    ಜನವರಿ 20ರೊಳಗೆ ಉಪಚುನಾವಣೆ ಘೋಷಿಸುವ ಸಾಧ್ಯತೆ

    ಉಪಚುನಾವಣೆ ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದು, ಜನವರಿ 15ರಿಂದ ಮತ್ತೆ ಗ್ರಾಮಗಳಿಗೆ ಭೇಟಿ ನೀಡಿ ಪ್ರಚಾರ ನಡೆಸಲಾಗುತ್ತದೆ.ಮುಖ್ಯಮಂತ್ರಿ ನೇತೃತ್ವದ ಮಸ್ಕಿ ಪಟ್ಟಣದಲ್ಲಿ ಸಮಾವೇಶಕ್ಕೆ ಸಿದ್ಧತೆ ನಡೆಸಿದ್ದಾರೆ. ಬಿಎಸ್‌ವೈ ನನಗೆ ಸಚಿವ ಸ್ಥಾನ ಕೊಡುವ ಭರವಸೆ ಇದೆ ಎಂದು ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಪ್ರತಾಪಗೌಡ ಪಾಟೀಲ್ ಹೇಳಿಕೆ ನೀಡಿದ್ದಾರೆ.

  • 13 Jan 2021 10:38 AM (IST)

    ಡೊನಾಲ್ಡ್ ಟ್ರಂಪ್ ಅಪ್​ಲೋಡ್ ಮಾಡಿದ ಪೋಸ್ಟ್ ತೆಗೆದುಹಾಕಿದ ಯೂಟ್ಯೂಬ್ ಚಾನಲ್

    ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯೂಟ್ಯೂಬ್ ಚಾನಲ್‌ಗೆ ಅಪ್‌ಲೋಡ್ ಮಾಡಲಾದ ಹೊಸ ವಿಷಯವನ್ನು ಯೂಟ್ಯೂಬ್ ಸಂಸ್ಥೆ ತೆಗೆದುಹಾಕಿದ್ದು,, ಹಿಂಸಾಚಾರವನ್ನು ಪ್ರಚೋದಿಸುವ ನೀತಿಯನ್ನು ಇದು ಉಲ್ಲಂಘಿಸಿದ್ದಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

  • 13 Jan 2021 10:31 AM (IST)

    ಕರುನಾಡಿಗೆ ಇಂದು ಬರಲಿದೆ 1000 ಕೊವ್ಯಾಕ್ಸಿನ್

    ಹೈದರಾಬಾದ್‌ನಿಂದ ಬೆಂಗಳೂರಿಗೆ ಇಂದು 1000 ವಯಲ್ ಕೊವ್ಯಾಕ್ಸಿನ್ ಲಸಿಕೆ ಬರಲಿದ್ದು, 1 ವಯಲ್‌ನಲ್ಲಿ 20 ಡೋಸ್‌ ಕೊವ್ಯಾಕ್ಸಿನ್ ಲಸಿಕೆ ಇರಲಿದೆ. 10 ಎಂಎಲ್‌ನ 1000 ಕೊವ್ಯಾಕ್ಸಿನ್ ಬಾಟಲ್ ಇಂದು ಬರಲಿದ್ದು, ಆ ಮೂಲಕ ಇಂದಿನಿಂದ ವಿವಿಧ ಜಿಲ್ಲೆಗಳಿಗೆ ಕೊವ್ಯಾಕ್ಸಿನ್ ಲಸಿಕೆ ಪೂರೈಕೆ ಮಾಡಲಾಗುತ್ತದೆ.

  • 13 Jan 2021 10:28 AM (IST)

    ಯಾವ ಪ್ರದೇಶದಲ್ಲಿ ಕನಿಷ್ಠ ತಾಪಮಾನ ಇದೆ ಗೊತ್ತಾ?

    ದೆಹಲಿಯಲ್ಲಿ ಇಂದು (ಲೋಧಿ ರಸ್ತೆ) ಕನಿಷ್ಠ ತಾಪಮಾನ 3 ಡಿಗ್ರಿ ಸೆಲ್ಸಿಯಸ್, ಹರಿಯಾಣದಲ್ಲಿ (ನರ್ನಾಲ್)1.4 ಡಿಗ್ರಿ ಸೆಲ್ಸಿಯಸ್, ಪಂಜಾಬ್‌ನಲ್ಲಿ (ಅಮೃತಸರ)3.5 ಡಿಗ್ರಿ ಸೆಲ್ಸಿಯಸ್, ರಾಜಸ್ಥಾನದಲ್ಲಿ (ಗಂಗನಗರ) 0.2 ಡಿಗ್ರಿ ಸೆಲ್ಸಿಯಸ್, ಉತ್ತರ ಪ್ರದೇಶದಲ್ಲಿ (ಬರೇಲಿ) 3.8 ಡಿಗ್ರಿ ಸೆಲ್ಸಿಯಸ್, ಮಧ್ಯಪ್ರದೇಶದಲ್ಲಿ (ಉಮರಿಯಾ) 3.8 ಡಿಗ್ರಿ ಸೆಲ್ಸಿಯಸ್ ಮತ್ತು ಇಂದು ಬಿಹಾರದಲ್ಲಿ (ಪಾಟ್ನಾ) 1.6 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ.

  • 13 Jan 2021 10:16 AM (IST)

    ಪೋಲಿಯೊ ಎನ್​ಐಡಿಯನ್ನು ಮುಂದೂಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

    ಅನಿರೀಕ್ಷಿತ ಚಟುವಟಿಕೆಗಳಿಂದಾಗಿ 2021ರ ಜನವರಿ 17ರಿಂದ ನಿಗದಿಯಾಗಿದ್ದ ಪೋಲಿಯೊ ಎನ್​ಐಡಿ ( ರಾಷ್ಟ್ರೀಯ ರೋಗನಿರೋಧಕ ದಿನ) ಅನ್ನು ಮುಂದಿನ ಸೂಚನೆವರೆಗೆ ಮುಂದೂಡಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

  • 13 Jan 2021 10:09 AM (IST)

    ಸಚಿವ ಸ್ಥಾನ ಕೊಟ್ಟರೆ ಪ್ರಮಾಣವಚನ ಸ್ವಿಕರಿಸುತ್ತೇನೆ: ಉಮೇಶ್ ಕತ್ತಿ

    ಸಿಎಂ ಬೆಂಗಳೂರಿಗೆ ಬರುವಂತೆ ಸೂಚನೆ ನೀಡಿದ್ದರು, ಹೀಗಾಗಿ ಬೆಂಗಳೂರಿಗೆ ಬಂದಿದ್ದೇನೆ. ಸಚಿವ ಸ್ಥಾನ ಕೊಟ್ಟರೆ ಪ್ರಮಾಣವಚನ ಸ್ವಿಕರಿಸುತ್ತೇನೆ. ನನಗೆ ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದು ಉಮೇಶ್ ಕತ್ತಿ ಹೇಳಿಕೆ ನೀಡಿದ್ದಾರೆ.

  • 13 Jan 2021 09:57 AM (IST)

    ಇಂದು ರಾಜ್ಯಪಾಲರಾದ ವಜುಭಾಯಿ ವಾಲಾ ಹುಟ್ಟುಹಬ್ಬ

    ಹುಟ್ಟುಹಬ್ಬದ ದಿನದಂದೇ ರಾಜಭವನದ ಗಾಜಿನ‌ ಮನೆಯಲ್ಲಿ ನೂತನ ಸಚಿವರಿಗೆ ಪ್ರಮಾಣವಚನದ ಪ್ರತಿಜ್ಞಾವಿಧಿಯನ್ನು ರಾಜ್ಯಪಾಲರಾದ ವಜುಭಾಯ್ ವಾಲಾ ಅವರು ಬೋಧಿಸಲಿದ್ದಾರೆ.

  • 13 Jan 2021 09:53 AM (IST)

    ಸಚಿವ ಸ್ಥಾನ ನೀಡುವುದು, ಬಿಡುವುದು ಸಿಎಂ ಪರಮಾಧಿಕಾರ: ಕೆ.ಜಿ.ಬೋಪಯ್ಯ

    ನನಗೆ ಸಚಿವ ಸ್ಥಾನ ನೀಡದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ, ಸಚಿವ ಸ್ಥಾನ ನೀಡುವುದು, ಬಿಡುವುದು ಸಿಎಂ ಪರಮಾಧಿಕಾರ. ನಾನು ಯಾವತ್ತೂ ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿಲ್ಲ. ಮಂತ್ರಿ ಆಗಿಯೇ ಜಿಲ್ಲೆಯ ಅಭಿವೃದ್ಧಿ ಮಾಡಬೇಕು ಎಂದಿಲ್ಲ, ಸಚಿವನಾಗದಿದ್ದರೂ ನಾನು ನನ್ನ ಕ್ಷೇತ್ರ ಅಭಿವೃದ್ಧಿ ಮಾಡುತ್ತೇನೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಹೇಳಿಕೆ ನೀಡಿದ್ದಾರೆ.

  • 13 Jan 2021 09:50 AM (IST)

    ರಾಧಿಕಾ ಮತ್ತು ಕುಮಾರಸ್ವಾಮಿ ಜೊತೆಯಲ್ಲಿ ಓಡಾಡಿರುವುದನ್ನು ನೋಡಿದ್ದೀರಾ: ಸಚಿವ ಚಲುವರಾಯಸ್ವಾಮಿ ಟಾಂಗ್

    ರಾಧಿಕಾ ಯಾರು ಎಂಬ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಮಾಜಿ ಸಚಿವ ಚಲುವರಾಯಸ್ವಾಮಿ ಟಾಂಗ್ ನೀಡಿದ್ದು, ರಾಧಿಕಾ ಮತ್ತು ಕುಮಾರಸ್ವಾಮಿ ಜೊತೆಯಲ್ಲಿ ಓಡಾಡಿರುವುದನ್ನು ನೋಡಿದ್ದೀರಾ. ಅವರಿಬ್ಬರು ಜೊತೆಯಲ್ಲಿ ಹೋಗಿರುವುದನ್ನು ನೋಡಿದ್ದೀರಾ. ಇಬ್ಬರ ಜೊತೆಯ ವಿಡಿಯೋವನ್ನೂ ನೋಡಿದ್ದೀರಾ. ಈಗ ಅವರು ಯಾರು ಗೋತ್ತಿಲ್ಲ ಎಂದರೆ ಏನು? ಈ ಬಗ್ಗೆ ನನ್ನ ಕೇಳಿದರೆ ಏನು ಪ್ರಯೋಜನ ಅವರಿಬ್ಬರ ಬಳಿಯೇ ಇದನ್ನು ಕೇಳಬೇಕು. ಅವರ ವೈಯಕ್ತಿಕ ಜೀವನದ ಬಗ್ಗೆ ನಾನು ಕಮೆಂಟ್ ಮಾಡಲ್ಲ ಎಂದು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಚಲುವರಾಯಸ್ವಾಮಿ ಹೇಳಿಕೆ ನೀಡಿದ್ದಾರೆ.

  • 13 Jan 2021 09:43 AM (IST)

    ರಾಜೀನಾಮೆ‌ ನೀಡದಿರುವ ಬಗ್ಗೆ ಸಚಿವ ನಾಗೇಶ್ ಚಿಂತನೆ

    ಸಿಎಂ ಸೂಚಿಸಿದ್ದರೂ ರಾಜೀನಾಮೆ ಕೊಡದಿರಲು ನಾಗೇಶ್‌ ನಿರ್ಧಾರ ಮಾಡಿರುವುದಾಗಿ ಮೂಲಗಳು ತಿಳಿಸಿದ್ದು, ಸಂಪುಟ ಸಭೆಯಲ್ಲಿ ಸಚಿವ ಸ್ಥಾನ ಉಳಿಸಿಕೊಳ್ಳಲು ಕಡೆಯ ಪ್ರಯತ್ನವನ್ನು ಮಾಡಿದ್ದು, ಈಗಲೂ ತನ್ನನ್ನು ಕೈಬಿಡಲ್ಲ ಎಂಬ ವಿಶ್ವಾಸವನ್ನು ಅಬಕಾರಿ ಸಚಿವ ನಾಗೇಶ್ ಹೊಂದಿದ್ದಾರೆ. ನಾಗೇಶ್‌ ಬೆಂಬಲಕ್ಕೆ ನಿಲ್ಲುವ ಭರವಸೆ ನೀಡಿರುವ ಹಿರಿಯ ಸಚಿವರನ್ನು ನೆಚ್ಚಿಕೊಂಡು ರಾಜೀನಾಮೆ ಸಲ್ಲಿಸದಿರಲು ತೀರ್ಮಾನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

  • 13 Jan 2021 09:38 AM (IST)

    ಗೊಂದಲಗಳನ್ನು ನಾವೆಲ್ಲಾ ಅರ್ಥ ಮಾಡಿಕೊಳ್ಳಬೇಕು: ಎಸ್.ಅಂಗಾರ

    ನನಗೆ ಕೊಟ್ಟ ಖಾತೆಯನ್ನು ನಿಭಾಯಿಕೊಂಡು ಹೋಗುತ್ತೇನೆ. ಗೊಂದಲಗಳನ್ನು ನಾವೆಲ್ಲಾ ಅರ್ಥ ಮಾಡಿಕೊಳ್ಳಬೇಕು. ಆ ಮೂಲಕ ಸಂಘಟನೆ ಕೆಲಸ ಮಾಡಬೇಕು. ನನಗೆ ಯಾವುದೇ ಲೆಫ್ಟ್, ರೈಟ್ ಎನ್ನುವುದು ಇಲ್ಲ. ನಾನು ಕೇವಲ ಸಂಘಟನೆ ಕೆಲಸ ಮಾಡುತ್ತೇನೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಎಸ್.ಅಂಗಾರ ಹೇಳಿಕೆ ನೀಡಿದ್ದಾರೆ.

  • 13 Jan 2021 09:34 AM (IST)

    ನೂತನ ಕೃಷಿ ಕಾಯ್ದೆಗಳ ಪ್ರತಿಯನ್ನು ಸುಟ್ಟು ಲೋಹರಿ ಆಚರಣೆ

    ದೆಹಲಿಯ ಗಡಿ ಭಾಗದಲ್ಲಿ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರು ಮೂರು ಕೃಷಿ ಕಾಯ್ದೆಗಳ ಪ್ರತಿಗಳನ್ನು ಸುಟ್ಟು ಲೋಹರಿ ಹಬ್ಬವನ್ನು ಆಚರಿಸುವುದಾಗಿ ಹೇಳಿದರು.

  • 13 Jan 2021 09:28 AM (IST)

    ಸಂಪುಟದಲ್ಲಿ ಸ್ಥಾನ ಸಿಗದ್ದಕ್ಕೆ ಭಾವುಕರಾದ ರೇಣುಕಾಚಾರ್ಯ

    ಸಚಿವ ಸ್ಥಾನಕ್ಕೆ ಲಾಬಿ ಮಾಡದಿರುವುದೇ ನನ್ನ ತಪ್ಪು. ನಾನು ಕೂಡ ಲಾಬಿ ಮಾಡಬೇಕಿತ್ತು. ಸಚಿವರಾಗಲು ಅರ್ಹತೆ ಬೇಕಲ್ವಾ, ಅದು ನನ್ನಲ್ಲಿ ಇಲ್ಲ. ನನ್ನದು ಜನರಲ್ ಕೋಟಾ ಹಾಗಾಗಿ ನಾನು ಮಂತ್ರಿ ಆಗಿಲ್ಲ. ಸೋತವರಿಗೆ ಮಂತ್ರಿ ಸ್ಥಾನ ವಿಚಾರ ನನಗೆ ಗೊತ್ತಿರಲಿಲ್ಲ. ಸಂದರ್ಭ ಬಂದಾಗ ನಾನು ಎಲ್ಲರಿಗೂ ಉತ್ತರ ಕೊಡುತ್ತೇನೆ ಎಂದು ಬೆಂಗಳೂರಿನಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಭಾವುಕರಾಗಿ ಹೇಳಿಕೆ ನೀಡಿದ್ದಾರೆ.

  • 13 Jan 2021 09:25 AM (IST)

    ಬೆಂಗಳೂರಿನತ್ತ ತೆರಳಿದ ಸಚಿವ ಶ್ರೀಮಂತ ಪಾಟೀಲ್

    ಇಂದು ಮಧ್ಯಾಹ್ನ ನೂತನ ಸಚಿವರ ಪದಗ್ರಹಣ ಸಮಾರಂಭ ಹಿನ್ನಲೆಯಲ್ಲಿ ಸಚಿವ ಸ್ಥಾನ ಕೈತಪ್ಪುವ ಭೀತಿಯಿಂದ ಬೆಳಗಾವಿಯಿಂದ ಬೆಂಗಳೂರಿಗೆ ಸಚಿವ ಶ್ರೀಮಂತ ಪಾಟೀಲ್ ಹೊರಟಿದ್ದು, ಧಾರ್ಮಿಕ ಕ್ಷೇತ್ರದ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.

  • 13 Jan 2021 09:22 AM (IST)

    ರಾಕಿಂಗ್ ಸ್ಟಾರ್ ಯಶ್‌ಗೆ ಆರೋಗ್ಯ ಇಲಾಖೆ ನೋಟಿಸ್

    ಕೆಜಿಎಫ್-2 ಟೀಸರ್ ವಿಚಾರವಾಗಿ ನಟ ಯಶ್‌ಗೆ ಆರೋಗ್ಯ ಇಲಾಖೆ ನೋಟಿಸ್ ನೀಡಿದ್ದು, ಸಿಗರೇಟ್ ಸೇದುವ ದೃಶ್ಯಕ್ಕೆ ಕತ್ತರಿ ಹಾಕುವಂತೆ ಸೂಚನೆ ನೀಡಿದೆ. ಕೆಜಿಎಫ್-2 ಸಿನಿಮಾದ ಟೀಸರ್​ನಲ್ಲಿನ ಸಿಗರೇಟ್ ಸೇದುವ ದೃಶ್ಯ ಯುವಕರನ್ನು ಪ್ರಚೋದಿಸುತ್ತದೆ. ಹೀಗಾಗಿ ಈ ದೃಶ್ಯಕ್ಕೆ ಕತ್ತರಿ ಹಾಕುವಂತೆ ನಟ ಯಶ್‌ಗೆ ಸೂಚನೆ ನೀಡಲಾಗಿದೆ. ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಕಾಯ್ದೆ-2003 ಅಡಿಯಲ್ಲಿ ನಟ ಯಶ್​ಗೆ ನೋಟಿಸ್ ನೀಡಲಾಗಿದೆ.

  • 13 Jan 2021 09:16 AM (IST)

    ಕುಂದಾನಗರಿಯತ್ತ ಕೊರೊನಾ ಸಂಜೀವಿನಿ ಹೊತ್ತ ವಾಹನ

    ಪುಣೆಯಿಂದ ಬೆಳಗಾವಿಗೆ ಕೊರೊನಾ ವ್ಯಾಕ್ಸಿನ್ ತುಂಬಿರುವ ಕಂಟೇನರ್ ಆಗಮಿಸಿದ್ದು, ಬೆಳಗಿನಜಾವ 3 ಗಂಟೆಗೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್ ಪೋಸ್ಟ್​ಗೆ ಎಂಟ್ರಿಯಾಗಿದೆ.
    ಪೊಲೀಸ್ ಎಸ್ಕಾರ್ಟ್​ನಲ್ಲಿ ವ್ಯಾಕ್ಸಿನ್ ಬಂದಿದ್ದು, ಸುಮಾರು 2 ಲಕ್ಷ ಕೋವಿಶೀಲ್ಡ್ ಲಸಿಕೆಗಳು ಆಗಮಿಸುವ ನಿರೀಕ್ಷೆ ಇದೆ. ರಾಜ್ಯಕ್ಕೆ ಲಸಿಕೆ ಬರುತ್ತಿದ್ದಂತೆ ಬೆಳಗಾವಿ ಪೊಲೀಸರಿಗೆ ಹಸ್ತಾಂತರ ಮಾಡಿದ ಮಹಾರಾಷ್ಟ್ರ ಪೊಲೀಸರು.

  • 13 Jan 2021 09:07 AM (IST)

    ತಡರಾತ್ರಿ ವರೆಗೂ ಸಿಎಂ ನಿವಾಸದಲ್ಲಿ ನಡೆದ ನಾಯಕರ ಸಭೆ

    ಇಂದು ಮಧ್ಯಾಹ್ನ 3.50ಕ್ಕೆ ನೂತನ ಸಚಿವರ ಪ್ರಮಾಣ ವಚನ ಇರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಅಧಿಕೃತ ನಿವಾಸದಲ್ಲಿ ನಿನ್ನೆ ತಡರಾತ್ರಿ 12.30ರವರೆಗೂ ಸಭೆ ನಡೆದಿದ್ದು, ಬಿಎಸ್​ವೈ ನಿವಾಸ ‘ಕಾವೇರಿ’ಯಿಂದ ಯಾವುದೇ ಪ್ರತಿಕ್ರಿಯೆ ನೀಡದೇ ಸಚಿವರಾದ ಬೊಮ್ಮಾಯಿ, ಆರ್.ಅಶೋಕ್, ಮುನಿರತ್ನ, ಲಕ್ಷಣ್ ಸವದಿ ವಾಪಸ್ ಆಗಿದ್ದಾರೆ.