ವಿಜಯನಗರ ಕಾಲದ ರಾಮ-ಸೀತೆಯ ವಿಗ್ರಹಗಳು ಮರಳಿ ಬಂದವು ಭಾರತಕ್ಕೆ!

ಸುಮಾರು 40 ವರ್ಷಗಳ ಹಿಂದೆ ಅಂದ್ರೆ 1978 ರಲ್ಲಿ ತಮಿಳುನಾಡಿನಿಂದ ಕದಿಯಲ್ಪಟ್ಟ ರಾಮ, ಲಕ್ಷ್ಮಣ ಮತ್ತು ಸೀತೆಯ ಪ್ರಾಚೀನ ವಿಗ್ರಹಗಳನ್ನು ಬ್ರಿಟಿಷ್ ಪೊಲೀಸರು ಮಂಗಳವಾರ ಭಾರತಕ್ಕೆ ಹಸ್ತಾಂತರಿಸಿದ್ದಾರೆ. ಭಾರತದ ಸಾಂಸ್ಕೃತಿಕ ಪರಂಪರೆಯ ಕಲಾಕೃತಿಗಳನ್ನು ವಿಶ್ವದಾದ್ಯಂತ ಹಿಂದಿರುಗಿಸುವ ಪ್ರಯತ್ನ ನಡೆದಿದೆ. ಅದರ ಭಾಗವಾಗಿ ಇಂಡಿಯಾ ಹೌಸ್‌ನಲ್ಲಿ ಹಸ್ತಾಂತರಿಸುವ ಸಮಾರಂಭದಲ್ಲಿ ಮೆಟ್ರೋಪಾಲಿಟನ್ ಪೊಲೀಸ್ ಅಧಿಕಾರಿಗಳು ಮತ್ತು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ನವದೆಹಲಿಯ ಅಧಿಕಾರಿಗಳು ಭಾಗವಹಿಸಿದ್ದರು. ಸದ್ಯ ವಿಗ್ರಹಗಳನ್ನು ತಮಿಳುನಾಡಿಗೆ ವಾಪಸ್ ಕಳುಹಿಸಲಾಗಿದೆ.

ನಾಗಪಟ್ಟಣಂ ಜಿಲ್ಲೆಯಲ್ಲಿ ವಿಜಯನಗರ ಕಾಲದಲ್ಲಿ ನಿರ್ಮಿಸಿದ್ದ ದೇವಾಲಯದಿಂದ ಈ ವಿಗ್ರಹಗಳನ್ನು ಕಳವು ಮಾಡಲಾಗಿತ್ತು. ಆಸ್ತಿ ಕಳ್ಳತನವಾಗಿದೆ ಎಂದು ಮಾಹಿತಿ ನೀಡಿದ ನಂತರ ಯುಕೆ ಮೂಲದ ಅಪರಿಚಿತ ಸಂಗ್ರಾಹಕನೊಬ್ಬ ಸ್ವಯಂಪ್ರೇರಣೆಯಿಂದ ಪೊಲೀಸರಿಗೆ ವಿಗ್ರಹಗಳನ್ನು ಒಪ್ಪಿಸಿದ್ದ. ಇಂಡಿಯಾ ಪ್ರೈಡ್ ಪ್ರಾಜೆಕ್ಟ್‌ನ ಎಸ್ ವಿಜಯ್ ಕುಮಾರ್ ಅವರ ಮಾಹಿತಿಯು ವಿಗ್ರಹಗಳನ್ನು ಪತ್ತೆಹಚ್ಚಲು ಮತ್ತು ಗುರುತಿಸಲು ಸಹಾಯ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು 1947 ಮತ್ತು 2014 ರ ನಡುವೆ ಕೇವಲ 13 ಪುರಾತನ ವಸ್ತುಗಳನ್ನು ಭಾರತಕ್ಕೆ ಹಿಂತಿರುಗಿಸಲಾಗಿದೆ ಎಂದು ಪ್ರಹ್ಲಾದ್ ಸಿಂಗ್ ಪಟೇಲ್ ತಿಳಿಸಿದ್ದಾರೆ. ಆದರೆ ಅದರ ನಂತರ, ಅಂತಹ 40 ಕ್ಕೂ ಹೆಚ್ಚು ಪ್ರಾಚೀನ ವಸ್ತುಗಳು ಮನೆಗೆ ಮರಳಿವೆ. ಬ್ರಿಟಿಷ್ ಮ್ಯೂಸಿಯಂನಿಂದ ಒಂದು ವಿಗ್ರಹವನ್ನು ಹಿಂದಿರುಗಿಸುವ ಪ್ರಯತ್ನ ಸಹ ನಡೆಯುತ್ತಿದೆ. ಒಟ್ಟಿನಲ್ಲಿ ಭಾರತದ ಪ್ರಾಚೀನತೆ ಹಾಗೂ ವಾಸ್ತುಶಿಲ್ಪ ತೋರಿಸುವ ಮೂರು ದೇವರ ವಿಗ್ರಹಗಳು ಭಾತರಕ್ಕೆ ವಾಪಸ್ ಆಗಿವೆ. ಇದು ಒಂದು ರೀತಿಯ ಹೆಮ್ಮೆಯ ವಿಷಯವಾಗಿದೆ.

Related Tags:

Related Posts :

Category: