ರೈತರೇ ಜೋಡೆತ್ತುಗಳು, ಬೆವರೇ ನೀರು, ಕೃಷಿಯೇ ಜೀವಾಳ ಚಿನ್ನದ ನಾಡಿನ ಈ ಮಣ್ಣಿನ ಮಕ್ಕಳಿಗೆ

ಕೋಲಾರ: ಯಾವಾಗ ಕೊರೊನಾ ಮಾರಿ ಅಪ್ಪಳಿಸಿತೋ, ಹಳ್ಳಿ ಬಿಟ್ಟು ಸಿಟಿ ಸೇರಿದ್ದವರೆಲ್ಲಾ ರಾತ್ರೋ ರಾತ್ರಿ ಹಳ್ಳಿಗಳತ್ತ ಮುಖ ಮಾಡುತ್ತಿದ್ದಾರೆ. ಮತ್ತೇ ಕುಲ ಕಸುಬಾದ ಕೃಷಿಯಲ್ಲಿ ಅನ್ನವನ್ನ ಅರಸುತ್ತಿದ್ದಾರೆ. ಎತ್ತುಗಳಿಲ್ಲದಿದ್ರೂ ಹಠಕ್ಕೆ ಬಿದ್ದು ತಾವೇ ಜೋಡೆತ್ತುಗಳಾಗಿ ನೇಗಿಲು ಹಿಡಿದು ಉಳುಮೆಗೆ ಮುಂದಾಗಿದ್ದಾರೆ. ಇಂಥದ್ದೇ ಒಂದು ಘಟನೆ ಕೋಲಾರದಲ್ಲಿ ನಡೆದಿದೆ.

ಹಠಕ್ಕೆ ಬಿದ್ದು ನೊಗಕ್ಕೆ ಹೆಗಲು ಕೊಟ್ಟ ಕೃಷಿಕರು
ಕೋಲಾರ ತಾಲೂಕಿನ ಕುಂಬಾರಹಳ್ಳಿಯಲ್ಲಿ ಬೇಸಾಯ ಮಾಡಬೇಕೆಂದು ಹಠಕ್ಕೆ ಬಿದ್ದಿರುವ ಕೃಷಿಕರಿಬ್ಬರು ನೇಗಿಲ ನೊಗಕ್ಕೆ ತಾವೇ ಹೆಗಲು ಕೊಟ್ಟು ಜೋಡೆತ್ತುಗಳಾಗಿದ್ದಾರೆ. ಕುಂಬಾರಹಳ್ಳಿ ಗ್ರಾಮದ ರೈತ ಜಯರಾಮ್ ಅವರ ಎರಡು ಎಕರೆ ಭೂಮಿಯಲ್ಲಿ ಉಳುಮೆ ಮಾಡೋದಕ್ಕೆ ಜೋಡೆತ್ತುಗಳಾಗಲಿ ಅಥವಾ ಟ್ರ್ಯಾಕ್ಟರ್ ಆಗಲಿ ಇಲ್ಲ. ಹೀಗಾಗಿ, ಮನುಷ್ಯರನ್ನೇ ಜೋಡೆತ್ತುಗಳನ್ನಾಗಿ ಮಾಡಿಕೊಂಡು ಬೇಸಾಯ ಮಾಡೋ ಸಾಹಸಕ್ಕೆ ಇಳಿದಿದ್ದಾರೆ. ನಾಗರಾಜ್ ನೇಗಿಲು ಹಿಡಿದು ಉಳುಮೆ ಮಾಡಿದ್ರೆ, ರಾಜಣ್ಣ ಹಾಗೂ ರಾಘವ ಎತ್ತುಗಳಂತೆ ನೇಗಿಲನ್ನು ಎಳೆದು ಉಳುಮೆ ಮಾಡಿ ಬಿತ್ತನೆ ಕಾರ್ಯಕ್ಕೆ ಸಿದ್ದವಾಗಿದ್ದಾರೆ.

ನಕ್ಷತ್ರದ ಪ್ರಕಾರ ಬಿತ್ತನೆ
ನೆಲಗಡಲೆ ಹಾಗೂ ತೊಗರಿ ಬಿತ್ತನೆ ಕಾರ್ಯಕ್ಕೆ ಮಳೆಯ ನಕ್ಷತ್ರದ ಪ್ರಕಾರ ಕೊನೆಯ ದಿನ. ಹಾಗಾಗಿ ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಅಲ್ಪ ಸ್ವಲ್ಪ ಮಳೆಯಾಗುತ್ತಿದೆ. ಇದರಿಂದ ಬಿತ್ತನೆ ಮಾಡಲು ಇದು ಸೂಕ್ತ ಕಾಲ. ರಾಗಿ ಸೇರಿದಂತೆ ದ್ವಿದಳ ಧಾನ್ಯಗಳ ಬಿತ್ತನೆಗೆ ಉತ್ತಮ ಸಮಯ. ಹಾಗಾಗಿ ತೊಗರಿ ಬಿತ್ತನೆ ಮಾಡಬೇಕಾಗಿದೆ. ಆದ್ರೆ ಅವರ ಹತ್ತಿರ ಎತ್ತುಗಳಾಗಲಿ ಅಥವಾ ಟ್ರ್ಯಾಕ್ಟರ್ ಆಗಲಿ ಇಲ್ಲ. ಹೀಗಾಗಿ ಇವರೇ ನೇಗಿಲಿಗೆ ಹೆಗಲು ಕೊಟ್ಟು ಎಳೆದು ಬಿತ್ತನೆ ಕಾರ್ಯ ಮುಗಿಸಿದ್ದಾರೆ.

ಭೂಮಿ ಹಸನಾಗಿದ್ದಾಗಲೇ ಬಿತ್ತನೆ ಕಾರ್ಯ
ಇನ್ನು ಭೂಮಿ ಹದ ಮಾಡುವುದು, ನೊಗಕ್ಕೆ ಹೆಗಲು ಕೊಟ್ಟು ಭೂಮಿಯನ್ನ ಉಳುಮೆ ಮಾಡುವುದು ಕಷ್ಟಕರವಾದ ಕೆಲಸ. ಆದ್ರೆ ಕೋಲಾರದಲ್ಲಿ ಸಮಯಕ್ಕೆ ಸರಿಯಾಗಿ ಮಳೆಯಾದ್ರೆ ಕೂಲಿಯವರು ಸಿಗಲ್ಲ. ಕೂಲಿಯವರು ಸಿಕ್ಕರೆ ಮಳೆ ಬರಲ್ಲ. ಇಲ್ಲಾ ಯಂತ್ರಗಳೂ ಸಿಗಲ್ಲ. ಕಾಲಾವಧಿ ಮುಗಿದ್ರೆ ಯಾವುದೆ ಬೆಳೆ ಬೆಳೆಸೋಕೆ ಆಗಲ್ಲ. ಹೀಗಾಗಿ ಅದ್ಯಾವುದಕ್ಕೂ ಕಾಯದೆ ಕೃಷಿ ಮಾಡಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಈ ರೈತರು ನೊಗಕ್ಕೆ ಹೆಗಲು ಕೊಡುವ ಮೂಲಕ ರೈತರು ಶ್ರಮಜೀವಿಗಳು ಅನ್ನೋದನ್ನ ಸಾಬೀತು ಪಡಿಸಿದ್ದಾರೆ.

ಬೆವರನ್ನೇ ನೀರಾಗಿ ಹರಿಸುವ ನೇಗಿಲಯೋಗಿಗಳು
ಒಟ್ಟಾರೆ, ಬೆವರು ಸುರಿಸಿ ಕಷ್ಟಪಟ್ಟು, ಕೃಷಿ ಮಾಡುವ ಮೂಲಕ ರಾಜ್ಯಕ್ಕೆ ಮಾದರಿಯಾಗಿರುವ ಚಿನ್ನದ ನಾಡಿನ ಈ ರೈತರು ಕಷ್ಟ ಜೀವಿಗಳು. ಭೂಗರ್ಭದಲ್ಲಿರುವ ನೀರನ್ನಾದ್ರು ತೆಗೆದು, ಇಲ್ಲವೇ ತಮ್ಮ ಬೆವರನ್ನೇ ನೀರನ್ನಾಗಿ ಹರಿಸಿ ಕೃಷಿಮಾಡಬಲ್ಲರು ಅನ್ನೋದನ್ನ ಸಾಧಿಸಿತೋರಿಸಿದ್ದಾರೆ. -ರಾಜೇಂದ್ರ ಸಿಂಹ

Related Tags:

Related Posts :

Category:

error: Content is protected !!