ಸಂಪತ್ ​ರಾಜ್​ಗೆ ನಾಳೆ ಕೈದಿ ನಂಬರ್ ಅಲಾಟ್​ ಆಗಲಿದೆ

  • Arun Belly
  • Published On - 22:06 PM, 20 Nov 2020

ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗಲಭೆ, ದೊಂಬಿ ಮತ್ತು ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಕಿಚ್ಚು ಹಚ್ಚಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬೆಂಗಳೂರಿನ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರೀಯ ಜೈಲಿಗೆ ಸ್ಥಳಾಂತರಿಸಲಾಗಿದ್ದು, ನಾಳೆ ಅವರಿಗೆ ವಿಚಾರಣಾಧೀನ ಕೈದಿ ನಂಬರ್ ಸಿಗಲಿದೆಯೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಕರಣದಲ್ಲಿ ತಮ್ಮ ಹೆಸರು ತೇಲಿ ಬಂದ ನಂತರ ನಾನಾ ಕಾರಣಗಳನ್ನು ನೀಡಿ ಪೊಲೀಸರ ವಿಚಾರಣೆಯನ್ನು ತಪ್ಪಿಸಿಕೊಳ್ಳುತ್ತಿದ್ದ ಸಂಪತ್​ ರಾಜ್ ಕೊನೆಗೆ, ಕೊವಿಡ್-19 ಸೋಂಕು ತಗುಲಿಸಿಕೋಡಿರುವ ನೆಪ ಹೇಳಿ ಬೆಂಗಳೂರಿನ ಪ್ರಮುಖ ಆಸ್ಪತ್ರೆಯೋದರಲ್ಲಿ ದಾಖಲಾಗಿದ್ದರು. ಆದರೆ, ಪೊಲೀಸರ ಗಮನಕ್ಕೆ ಬಾರದಂತೆ ಅಲ್ಲಿಂದ ತಪ್ಪಿಸಿಕೊಂಡಿದ್ದರು.

ಆದರೆ, ಅವರ ಆಪ್ತನೊಬ್ಬನನ್ನು ಬಂಧಿಸಿದ ಪೊಲೀಸರು ಕಾಂಗ್ರೆಸ್ ಧುರೀಣನ ಪತ್ತೆ ಹಚ್ಚಿ ನವೆಂಬರ್ 17ರಂದು ಬಂಧಿಸುವಲ್ಲಿ ಸಫಲರಾಗಿದ್ದರು. ನ್ಯಾಯಾಲಯ ಅವರನ್ನು 14 ದಿನಗಳ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದೆ.

ಸಂಪತ್​ ರಾಜ್​ರನ್ನು ಇಂದು ಜೈಲಿಗೆ ಕರೆತರುವಷ್ಟರಲ್ಲಿ ಜೈಲಿನ ಅಧಿಕಾರಿಗಳು ತಮ್ಮ ಡ್ಯೂಟಿ ಮುಗಿಸಿಕೊಂಡು ಮನೆಗಳಿಗೆ ತೆರಳಿದ್ದರಿಂದ ಕೈದಿ ಸಂಖ್ಯೆಯನ್ನು ನೀಡಲಾಗಲಿಲ್ಲ. ಶನಿವಾರದಂದು ಬೆಳಗ್ಗೆ ಅದು ಅವರಿಗೆ ಸಿಗಲಿದೆಯೆಂದು ಪೊಲೀಸ್ ಮೂಲಗಳು ತಿಳಿಸಿವೆ.