KR Market ನೈಟ್​ ಬೀಟ್​ ಪೊಲೀಸರಿಗೆ ಸಿಕ್ತು ರಾಶಿ ರಾಶಿ ಚಿನ್ನ, ಎಲ್ಲಿ.. ಎಲ್ಲಿ? ನೀವೂ ನೋಡಿ..

  • pruthvi Shankar
  • Published On - 12:07 PM, 21 Nov 2020

ಬೆಂಗಳೂರು: ಜನಸಾಮಾನ್ಯರು ಕೇವಲ ಒಂದು ಗ್ರಾಂ ಚಿನ್ನ ಖರೀದಿ ಮಾಡಲು ಕಷ್ಟಕರವಾಗಿರುವ ಈ ದಿನಗಳಲ್ಲಿ, ಯಾರೇ ಆಗಲಿ ದಿಗ್ಬ್ರಮೆಗೊಳ್ಳುವಂತೆ ರಾಶಿ ರಾಶಿ ಚಿನ್ನ ಹೊಂದಿದ್ದ ವ್ಯಕ್ತಿಯೊಬ್ಬ ಪೊಲೀಸರಿಗೆ ಸಿಕ್ಕಿಬಿದಿದ್ದಾನೆ.


ನಡುರಾತ್ರಿ ತಣ್ಣಗೆ ಗಸ್ತಿನಲ್ಲಿದ್ದ ಪೊಲೀಸರು ಈ ಚಿನ್ನದ ರಾಶಿಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಸಾವರಿಸಿಕೊಂಡು ಏನಪ್ಪಾ ಇದು ಚಿನ್ನದ ಅಂಗಡಿ ಇಡಕ್ಕೆ ಹೋಗುತ್ತಿದ್ದೀಯಾ ಅಥವಾ ಚಿನ್ನದ ಅಗಡಿಯನ್ನೇ ದೋಚಿಕೊಂಡು ಹೋಗುತ್ತಿದ್ದೀಯಾ? ಎಂದು ಆಸಾಮಿಯನ್ನು ಕೇಳಿದ್ದಾರೆ. ಏಕೆಂದ್ರೆ ಅವನ ಬಳಿಯಿದ್ದ ಚಿನ್ನದ ರಾಶಿ ಹಾಗಿತ್ತು. ನೀಟಾಗಿ ಅದನ್ನು ಜೋಡಿಸಿಟ್ಟರೆ ಒಂದು ಸಾಮಾನ್ಯ ಸೈಜಿನ ಚಿನ್ನಾಭರಣ ಅಂಗಡಿಯನ್ನೇ ತೆರೆಯಬಹುದು. ಬಹುಶಃ ರಾಜಧಾನಿ ಬೆಂಗಳೂರಿನ ಇತಿಹಾಸದಲ್ಲಿಯೇ ಪೊಲೀಸರಿಗೆ ಒಮ್ಮೆಗೇ ಸಿಕ್ಕಿ ಬಿದ್ದಿರುವ ಭಾರೀ ಪ್ರಮಾಣದ ಚಿನ್ನ ಇದಾಗಿರಬಹುದು.

ಹೌದು.. ಸರಿಯಾದ ದಾಖಲೆಗಳು ಇಲ್ಲದೆ ದೊಡ್ಡ ಪ್ರಮಾಣದಲ್ಲಿ ಚಿನ್ನದ ಆಭರಣ ಸಾಗಿಸುತಿದ್ದ ವ್ಯಕ್ತಿಯನ್ನು ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನೈಟ್ ಬೀಟ್ ಪೊಲೀಸರು ಚೆಕ್​ ಪೋಸ್ಟ್​ನಲ್ಲಿ ವಾಹನ ತಡೆದು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ವಾಹನದಲ್ಲಿದ್ದ ಭಾರಿ ಪ್ರಮಾಣದ ಬಂಗಾರದ ಅಭರಣಗಳನ್ನು ಕಂಡ ಕೆ ಆರ್ ಮಾರ್ಕೆಟ್ ಪೊಲೀಸರು ಅರೆ ಕ್ಷಣ ದಂಗಾಗಿ ಹೋಗಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡು, ಆಭರಣಗಳ ಜೊತೆಗೆ, ಸದರಿ ವ್ಯಕ್ತಿಯನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಇನ್ನು.. ಪೊಲೀಸರು ವಶಕ್ಕೆ ಪಡೆದ ವ್ಯಕ್ತಿ, ಪೊಲೀಸರು ಕೇಳಿದ ಯಾವೊಂದು ಪ್ರಶ್ನೆಗೂ ಸರಿಯಾದ ಉತ್ತರ ನೀಡಿಲ್ಲ. ಜೊತೆಗೆ ಪತ್ತೆಯಾದ ಬಂಗಾರದ ಬಗ್ಗೆ ದಾಖಲಾತಿ ಕೇಳಿದ್ರೆ ಆ ವ್ಯಕ್ತಿ ದಾಖಲೆ ನೀಡಿಲ್ಲ. ಹೀಗಾಗಿ ಪೊಲೀಸರು ವಶಕ್ಕೆ ಪಡೆದಿರುವ ಬಂಗಾರದ ಮೌಲ್ಯಮಾಪನ ಮಾಡುತ್ತಿದ್ದಾರೆ. ಅಲ್ಲದೆ ಈ ಚಿನ್ನ ಯಾರಿಗೆ ಸೇರಿದ್ದು, ತಡರಾತ್ರಿಯಲ್ಲಿ ಎಲ್ಲಿಗೆ ಸಾಗಿಸಲಾಗುತ್ತಿತ್ತು? ಎಂಬ ಪ್ರಶ್ನೆಗಳ ರಾಶಿಯನ್ನು ಚಿನ್ನದ ಗುಡ್ಡೆ ಎದುರು ಹಾಕಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

ಪೊಲೀಸರಿಗೆ ಸಿಕ್ಕಿರುವುದು ಚಿನ್ನವಾ.. ಇಲ್ಲಾವಾ ಎಂದು ಅನುಮಾನ
ರಾತ್ರಿ ಪಾಳಿಯಲ್ಲಿದ್ದ ಆನಂದ್ ಮತ್ತು ಹನುಮಂತ ಎಂಬ ಪೊಲೀಸರು ಅಕ್ಟಿವ್ ಹೋಂಡ ಸ್ಕೂಟರ್​ನಲ್ಲಿ ಸಾಗಿಸುತಿದ್ದ ಬಂಗಾರವನ್ನು ವಶಕ್ಕೆ ಪಡೆದಿದ್ದರು. ಜೊತೆಗೆ ಚಿನ್ನ ಸಾಗಿಸುತ್ತಿದ್ದ ದಲ್ಪತ್ ಸಿಂಗ್ ಮತ್ತು ವಿಕಾಸ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇನ್ನೂ ಪತ್ತಿಯಾಗಿರುವ ಚಿನ್ನ ನಗರತ್ ಪೇಟೆಯ ಎಸ್ ಎಸ್ ಜ್ಯುವೆಲರಿ ಶಾಪ್​ಗೆ ಸೇರಿದ್ದ ಚಿನ್ನ ಎಂಬುದು ತಿಳಿದುಬಂದಿದೆ. ಆದರೆ ಪೊಲೀಸರಿಗೆ ಸಿಕ್ಕಿರುವ ಚಿನ್ನಕ್ಕೆ ಯಾವುದೆ ದಾಖಲಾತಿ ಸಿಕ್ಕಿಲ್ಲಾ. ಜೊತೆಗೆ ವಶಕ್ಕೆ ಪಡೆದಿರುವ ಚಿನ್ನದ ಆಭರಣಗಳಲ್ಲಿ ಕೇವಲ ಒನ್ ಗ್ರಾಂ ಗೋಲ್ಡ್ ಇರಬಹುದು ಎಂದು ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಇದರ ಬಗ್ಗೆ ಸದ್ಯ ಪರಿಶೀಲನೆ ನಡೆಸಲು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.