ಸ್ತ್ರೀ-ಪುರುಷ ಸಮಾನತೆ ಸಾರುವ ಪ್ರಾಚೀನ ಒಕೈ ಮಾಸ್ತಿಕಲ್ಲು ರಾಜ್ಯದಲ್ಲಿ ಪತ್ತೆ

ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಶಂಕರನಾರಾಯಣದ ಸಮೀಪವಿರುವ ಉಳ್ಳೂರು 74 ಗ್ರಾಮದಲ್ಲಿ ಒಂದು ಅಪೂರ್ವ ಶಿಲ್ಪಕಲೆ ಸಿಕ್ಕಿದೆ. ಗರಡಿ ಬೆಟ್ಟು ಶ್ರೀ ಬನಶಂಕರಿ ದೇವಸ್ಥಾನದ ಎದುರಲ್ಲಿ ಈ ಶಿಲ್ಪವು ಒಂದು ಅಪರೂಪದ ಒಕೈ ಮಾಸ್ತಿಕಲ್ಲು ಎಂದು ತಿಳಿದುಬಂದಿದೆ.

ಈ ಒಕೈ ಮಾಸ್ತಿ ಕಲ್ಲನ್ನು ಪ್ರದೀಪ್​ ಕುಮಾರ್ ಬಸ್ರೂರು ಹಾಗೂ ಡಾ. ಶ್ರೀಕಾಂತ್ ಸಿದ್ದಾಪುರ ಅವರ ಮಾಗ೯ದಶ೯ನದಲ್ಲಿ ರೂಪಗೊಂಡ ತಂಡವು ಪತ್ತೆ ಹಚ್ಚಿದೆ. ತಂಡದ ಸಚಿನ್ ಕಕ್ಕುಂಜೆ, ಕಿರಣ್ ಆಚಾಯ೯ ಉಳ್ಳೂರು, ಗಿರೀಶ್ ತೆಕ್ಕಟ್ಟೆ, ಸತೀಶ್ ಆಚಾಯ೯ ಉಳ್ಳೂರು, ಸತೀಶ್ ಶಂಕರನಾರಾಯಣ, ಸನತ್ ಪೂಜಾರಿ ಮತ್ತು ಚಿಟ್ಟೆ ರಾಜಗೋಪಾಲ್ ಹೆಗ್ಡೆ ಈ ಮಾಸ್ತಿಕಲ್ಲನ್ನು ಪತ್ತೆ ಹಚ್ಚುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.

ಈ ಒಕೈ ಮಾಸ್ತಿ ಕಲ್ಲಿನ ವಿಶೇಷತೆ ಏನು..?
ಅಂದ ಹಾಗೆ ಈ ಒಕೈ ಮಾಸ್ತಿ ಕಲ್ಲಿನಲ್ಲಿ ವೀರ ಹಾಗೂ ಆತನ ಸತಿ ಇದ್ದಾರೆ. ಒಂದು ಕೈ ವಿನ್ಯಾಸ ಇರುವ ಕೆತ್ತನೆ ಸಹ ಇದೆ. ಹಸ್ತದ ಪಕ್ಕದಲ್ಲಿ ಲಿಂಬೆಯೊಂದನ್ನು ಕೆತ್ತಲಾಗಿದೆ. ಶಿಲ್ಪಕಲೆಯ ಕೆಳ ಭಾಗದಲ್ಲಿ ಖಡ್ಗ ಹಿಡಿದು ಯುದ್ಧಕ್ಕೆ ಸನ್ನದ್ಧನಾಗಿರುವ ವೀರನ ಶಿಲ್ಪಕಲೆಯೂ ಕಂಡು ಬರುತ್ತದೆ. ಜೊತೆಗೆ ಸೂರ್ಯ ಮತ್ತು ಚಂದ್ರರ ಕೆತ್ತನೆ ಸಹ ಕಾಣ ಸಿಗುತ್ತದೆ. ಸೂರ್ಯ ಹಾಗೂ ಚಂದ್ರ ಇರುವ ತನಕ ಈ ಒಕೈ ಮಾಸ್ತಿಕಲ್ಲು ಅಜರಾಮರವಾಗಿರಲಿ ಎನ್ನುವ ಸಂದೇಶದೊಂದಿಗೆ ಪಕ್ಕದಲ್ಲಿ ಒಂದು ಹಸ್ತವು ಮೇಲ್ಭಾಗವನ್ನು ತೋರಿಸುವಂತೆ ರಚಿಸಲಾಗಿದೆ.

ಅಚ್ಚರಿಯ ಸಂಗತಿಯೆಂದರೆ ಆ ಒಂದು ಕೈಯಲ್ಲಿ ಬಳೆ ಮತ್ತು ತೋಳ್ಪಟ್ಟಿಯ ವಿನ್ಯಾಸವನ್ನು ಕೆತ್ತಲಾಗಿದೆ. ಇದನ್ನು ತೋರಿಸುವುದರ ಮೂಲಕ ಸ್ತ್ರೀ ಮತ್ತು ಪುರುಷರ ಮಧ್ಯೆ ಇರುವ ಸಮಾನತೆಯನ್ನು ಬಣ್ಣಿಸಲಾಗಿದೆ ಎಂದು ತಿಳಿದುಬಂದಿದೆ. ಮಧ್ಯಭಾಗದಲ್ಲಿ ದಂಪತಿ ಪರಸ್ಪರ ನಮನ ಭಾವದಲ್ಲಿ ಕೆತ್ತಲಾಗಿದೆ. ಸತಿಯ ಕೆತ್ತನೆಯಲ್ಲಿ ಆಕೆಯ ಕೇಶರಾಶಿಯನ್ನು ಬಹಳ ಸುಂದರವಾಗಿ ಬಿಡಿಸಲಾಗಿದ್ದು ಶಿಲ್ಪಿಯ ನೈಪುಣ್ಯತೆಯನ್ನು ತೋರಿಸುತ್ತದೆ.

ಹಿಂದಿನ ಕಾಲದಲ್ಲಿ ಸತಿ ಸಹಗಮನ ಪದ್ಧತಿ ಅಂದರೆ ಯುದ್ಧದಲ್ಲಿ ಮಣಿದ ಪತಿಯ ಚಿತೆ ಮೇಲೆ ಸತಿಯೂ ಸಹಗಮನ ಮಾಡುಕೊಳ್ಳುತ್ತಿದ್ದಳು. ಹಾಗಾಗಿ ಆ ಪದ್ಧತಿಯನ್ನು ಈ ಸತಿ ಮತ್ತು ವೀರರು ಪಾಲಿಸಿದ್ದರು ಎಂದು ಒಕೈ ಮಾಸ್ತಿ ಕಲ್ಲಿನಲ್ಲಿ ಬಿಂಬಿಸಲಾಗಿದೆ ಎಂದು ತಿಳಿದುಬಂದಿದೆ.
-ಹರೀಶ್ ಪಾಲೆಚ್ಚಾರ್

Related Tags:

Related Posts :

Category: