ಅಮೆರಿಕಾದ ಕನ್ಸುಲ್ ಜನರಲ್ ಜೊತೆ ಯಡಿಯೂರಪ್ಪ ವರ್ಚ್ಯುಯಲ್ ಸಭೆ

ತಮಿಳುನಾಡಿನ ರಾಜಧಾನಿ ಚೆನೈನಲ್ಲಿರುವ ಅಮೆರಿಕಾದ ರಾಯಭಾರಿ ಕಚೇರಿಯಲ್ಲಿ ಸೆಪ್ಟಂಬರ್ 6 ರಂದು ಯು ಎಸ್ ಕನ್ಸುಲ್ ಜನರಲ್ ಆಗಿ ಅಧಿಕಾರ ವಹಿಸಿಕೊಂಡ ಜುಡಿತ್ ರಾವಿನ್ ಅವರಿಂದು ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರೊಂದಿಗೆ ವರ್ಚ್ಯುಯಲ್ ಸಭೆ ನಡೆಸಿದರು.

ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಸಹಯೋಗ, ಭಾರತ ಮತ್ತು ಅಮೆರಿಕ ನಡುವಣ ವಾಣಿಜ್ಯ ಸಂಬಂಧ, ಅವ್ಯಾಹತವಾಗಿ ಹರಡುತ್ತಿರುವ ಕೊವಿಡ್-19 ಪಿಡುಗು ಮತ್ತಷ್ಟು ಪಸರಿಸದಂತೆ ತಡೆಯಲು ಅನುಸರಿಸಬಹುದಾದ ಮಾರ್ಗ ಮೊದಲಾದ ಸಂಗತಿಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.

‘‘ಕೊವಿಡ್-19 ಸೋಂಕು ಉತ್ತುಂಗದಲ್ಲಿರುವ ಸಂಕಷ್ಟದ ಸಮಯದಲ್ಲಿ ನನ್ನ ದೇಶವನ್ನು ದಕ್ಷಿಣ ಭಾರತದಲ್ಲಿ ಪ್ರತಿನಿಧಿಸಲು ದೊರೆತಿರುವ ಅವಕಾಶ ನನ್ನ ಪಾಲಿನ ಸುದೈವವೆಂದೇ ಭಾವಿಸುತ್ತೇನೆ,’’ ಎಂದು ಜುಡಿತ್ ಹೇಳಿದರು. ಇದಕ್ಕೂ ಮೊದಲು ಅವರು ಪೆರುವಿನ ಲಿಮಾದಲ್ಲಿ ಪಬ್ಲಿಕ್ ಅಫೇರ್ಸ್ ಕೌನ್ಸೆಲರ್ ಆಗಿ ಕೆಲಸ ಮಾಡುತ್ತಿದ್ದರು.

ಯುಎಸ್ ರಾಯಭಾರಿ ಕಚೇರಿ ಬೆಂಗಳೂರಿನಲ್ಲಿ ಸ್ಥಾಪನೆಯಾಗಬೇಕೆನ್ನುವುದು ರಾಜ್ಯದ ಬಹುದಿನದ ಬೇಡಿಕೆಯಾಗಿದೆ, ಅದರ ಸ್ಥಾಪನೆಗೆ ಬೇಕಾಗುವ ಎಲ್ಲ ಸವಲತ್ತುಗಳನ್ನು ಒದಗಿಸುವ ಭರವಸೆಯನ್ನು ಯಡಿಯೂರಪ್ಪನವರು ಜುಡಿತ್ ಅವರಿಗೆ ನೀಡಿದರು. ಅಮೆರಿಕಾದ ಹಲವಾರು ಸಂಸ್ಥೆಗಳು ಬೆಂಗಳೂರಿನಲ್ಲಿ ನೆಲೆಗೊಂಡಿವೆ ಎಂದು ಸಹ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಮ್ ವಿಜಯ ಭಾಸ್ಕರ್, ಅಪರ ಮುಖ್ಯ ಕಾರ್ಯದರ್ಶಿ ಇ ವಿ ರಮಣ ರೆಡ್ಡಿ, ಮುಖ್ಯಮಂತ್ರಿಗಳ ಸಲಹೆಗಾರ ಎಮ್ ಲಕ್ಷ್ಮಿನಾರಾಯಣ, ವಾಣಿಜ್ಯ ಮತ್ತು ಕೈಗಾರಿಕಾ ಕಾರ್ಯದರ್ಶಿ ಗೌರವ್ ಗುಪ್ತಾ ಮುಂತಾದವರು ಸಭೆಯಲ್ಲಿ ಹಾಜರಿದ್ದರು.

Related Tags:

Related Posts :

Category: