ಕೊರೊನಾ ವೈರಸ್‌ ಎನ್ನುವುದೇ ಒಂದು ಬುರುಡೆ, ಅದೊಂದು ಠುಸ್‌ ಪಟಾಕಿ!

ಕಾರವಾರ: ವಿಶ್ವಾದ್ಯಂತ ಜನರ ಪಾಲಿಗೆ ಯಮದೂತವಾಗಿರುವ ಕೊರೊನಾ ಹೆಮ್ಮಾರಿಯನ್ನು ಉತ್ತರ ಕನ್ನಡದ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಠುಸ್‌ ಪಟಾಕಿಯಂದಿದ್ದಾರೆ.

ಅಂಕೋಲಾದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅನಂತ ಕುಮಾರ್‌ ಹೆಗಡೆ, ಕೊರೊನಾವನ್ನು ದೊಡ್ಡ ಭೂತವನ್ನಾಗಿ ಸೃಷ್ಠಿ ಮಾಡಿ ನಮ್ಮೆದುರಿಗೆ ಬಿಟ್ಟಿದ್ದಾರೆ. ಯಾರು ಏನು ಬೇಕಾದರೂ ಈ ಬಗ್ಗೆ ಚರ್ಚೆ ಮಾಡಲಿ ನಾನು ಕೇರ್ ಮಾಡಲ್ಲ. ಶೀತವಾದವರಲ್ಲಿ ಚೆಕ್ ಮಾಡಿದ್ರೆ ಕೊರೊನಾ ಪಾಸಿಟಿವ್ ಅಂತಲೇ ಕಾಣುತ್ತೆ. ಗಂಟಲು ದ್ರವ ತೆಗೆದು ಕೊರೊನಾ‌ ವೈರಸ್ ಪತ್ತೆ ಹಚ್ಚುತ್ತೇವೆ ಅನ್ನೋದು ಯಾವ ದೇಶಕ್ಕೂ ಸಾಧ್ಯವಾಗಿಲ್ಲ. ಶೀತ ಬಂದರೂ ಅದೇ ವೈರಸ್, ಕೊರನಾ‌ ಬಂದರೂ ಅದೇ ವೈರಸ್, ಜನರು ಪಾಸಿಟಿವ್ ಆಗ್ಬಿಡ್ತಾರೆ ಎಂದು ಕೊರೊನಾ ಕುರಿತು ಲೆವಡಿ ಮಾಡಿದ್ದಾರೆ.

ಕೊರೊನಾದಿಂದಾಗಿ ದೇಶದ ಆರ್ಥಿಕ ಸ್ಥಿತಿ ಸತ್ತುಹೋಗುವ ಸ್ಥಿತಿಗೆ ಬಂದಿದೆ. ಕಾಳಜಿಯ ಹಿನ್ನೆಲೆಯಲ್ಲಿ ಸರಕಾರ ಲಾಕ್‌ಡೌನ್ ಕ್ರಮ ಕೈಗೊಂಡಿತು. ಆದರೆ, ಈಗ ಅರ್ಥವಾಗಿದೆ ಇದೊಂದು ಕೇವಲ ಫ್ಲ್ಯೂ ಅಂತಾ. ನಮ್ಮ ಪಕ್ಕದ ಮನೆಯಲ್ಲಿ, ನಮ್ಮವರಲ್ಲಿ ಯಾರಿಗೇ ಕೊರೊನಾ‌ ಬಂದರೂ ಹೆದರಬೇಕಿಲ್ಲ. ನಮ್ಮ ದೇಶೀಯ ಔಷಧಿಯೇ ಇದಕ್ಕೆ ಸೂಕ್ತ ಮದ್ದು ಎಂದು ಹೇಳಿದ್ದಾರೆ.

ಫಾರ್ಮಾಸ್ಯುಟಿಕಲ್ ಕಂಪೆನಿಗಳು ಲಾಭಿ ಮಾಡಿ ಹಣ ಗಳಿಸಲು ಕೊರೊನಾ ಭೂತ ಎಬ್ಬಿಸುತ್ತಿದ್ದಾರೆ. ಕೊರೊನಾದಿಂದ ಒಂದೂವರೆ ಪರ್ಸಂಟ್‌ನಷ್ಟೂ ಜನರು ಸತ್ತಿಲ್ಲ. ಯಾವುದ್ಯಾವುದೋ ಕಾರಣದಿಂದ ಸತ್ತವರನ್ನು ಕೊರೊನಾದಿಂದ ಸತ್ತರು ಎಂದು ಹಣೆಪಟ್ಟಿ ಕಟ್ಟುತ್ತಿದ್ದಾರೆ. ಸಾಮಾಜಿಕ ಸ್ವಾಸ್ಥ್ಯ ಹಾಗೂ ಶುಚಿತ್ವಕ್ಕೆ ಆದ್ಯತೆ ನೀಡಿ ನಿತ್ಯದ ಜೀವನದಲ್ಲಿ ನಾವು ಇದನ್ನು ಎದುರಿಸಬೇಕು ಎಂದು ತಮ್ಮ ಕ್ಷೇತ್ರದ ಜನರಿಗೆ ಕಿವಿಮಾತು ಹೇಳಿದ್ದಾರೆ.

Related Tags:

Related Posts :

Category: