ಯಾದಗಿರಿಯ ಕಳೆಬೆಳಗುಂದಿಯಲ್ಲಿರುವ ವೀರಭದ್ರ ದೇವಸ್ಥಾನವನ್ನು ಬನದೇಶ್ವರ ಗುಡಿ ಅಂತ ಕರೆಯಲು ಕಾರಣವಿದೆ
ಪ್ರತಿವರ್ಷ ಸಂಕ್ರಾಂತಿ ಹಬ್ಬದಂದು ಇಲ್ಲಿ ಜಾತ್ರೆ ನಡೆಯುತ್ತದೆ. ಸುತ್ತಮುತ್ತಲ ಊರುಗಳಲ್ಲದೆ ಬೀದರ್, ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಿಂದ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವ ಮತ್ತು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
ಯಾದಗಿರಿ ಜಿಲ್ಲೆಯಲ್ಲಿ ಹಲವಾರು ಇತಿಹಾಸ ಪ್ರಸಿದ್ಧ ಮತ್ತು ಪೌರಾಣಿಕ ಐತಿಹ್ಯವುಳ್ಳ ದೆವಸ್ಥಾನಗಳಿವೆ. ಜಿಲ್ಲಾ ಕೆಂದ್ರದಿಂದ ಸುಮಾರು 15 ಕಿಮೀ ದೂರದ ಕಳೆಬೆಳಗುಂದಿಯಲ್ಲಿರುವ ಬನದೇಶ್ವರ ದೇವಸ್ಥಾನ ಸಹ ಖ್ಯಾತಿ ಹೊಂದಿರುವ ದೇವಸ್ಥಾನಗಳಲ್ಲಿ ಒಂದು. ವೀರಭಧ್ರ ಪ್ರತಿಷ್ಠಾಪಿತಗೊಂಡಿರುವ ಬನದೇಶ್ವರ ಗುಡಿಗೆ ಪ್ರತಿದಿನ ಭಕ್ತಾದಿಗಳು ಬಂದು ಹೋಗುತ್ತಾರೆ. ದಿನಂಪ್ರತಿ ದೇವಸ್ಥಾನದಲ್ಲಿ ಅನ್ನ ದಾಸೋಹ ನಡೆಯುತ್ತದೆ. ಮೊದಲಿಗೆ ದೇವಸ್ಥಾನಕ್ಕೆ ಬನದೇಶ್ವರ ಅಂತ ಹೆಸರು ಯಾಕೆ ಬಂತು ಮತ್ತು ವೀರಭಧ್ರೇಶ್ವರ ಯಾಕೆ ಇಲ್ಲಿ ಉದ್ಭವಮೂರ್ತಿಯಾಗಿ ಪ್ರತಿಷ್ಠಾಪಿಸ್ಪಟ್ಟ ಅನ್ನೋದನ್ನು ತಿಳಿದುಕೊಳ್ಳೋಣ.
ಸಂಗಮಾರ್ಯರ ಜೋಳಿಗೆಯಲ್ಲಿದ್ದ ಹೂವು ಹಾವಾಗಿ ಮಾರ್ಪಟ್ಟ ಪೌರಾಣಿಕ ಐತಿಹ್ಯ ಸದರಿ ದೇವಾಲಯಕ್ಕಿದೆ. ಆರ್ಯರು ತಮ್ಮ ಜೋಳಿಗೆಯನ್ನು ಇಲ್ಲಿನ ಕಾಡು ಪ್ರದೇಶದಲ್ಲಿಟ್ಟದ್ದರಂತೆ. ಅದರಲ್ಲಿದ್ದ ಹೂವು ಹಾವಾಗಿ ಪರಿವರ್ತನೆಗೊಂಡು ಪಕ್ಕದಲ್ಲಿದ್ದ ಹುತ್ತವನ್ನು ಸೇರಿದಾಗ ಪ್ರತಿದಿನ ಗೋವೊಂದು ಬಂದು ಹುತ್ತದ ಮೇಲೆ ನಿಂತು ಹಾವಿಗೆ ಹಾಲುಣಿಸುತ್ತಿತ್ತು. ಅದೊಂದು ದಿನ ಗೋವು ಸಾಕಿದ ಮಾಲೀಕ ಅದು ಹಾವಿಗೆ ಹಾಲೆರೆಯುವುದನ್ನು ಕಂಡು ವ್ಯಗ್ರನಾಗಿ ಅದನ್ನು ಶಿಕ್ಷಿಸಿದನಂತೆ. ಆಗಲೇ ಕೋಪೋದ್ರಿಕ್ತನಾದ ವೀರಭದ್ರ ಉದ್ಭವಮೂರ್ತಿಯಾಗಿ ಹುತ್ತದಿಂದ ಆಚೆ ಬಂದು ಜೋಳಿಗೆ ಇಟ್ಟ ಸ್ಥಳದಲ್ಲಿ ಪ್ರತಿಷ್ಠಾಪನೆಗೊಂಡನಂತೆ. ಅದು ಕಾಡು (ಬನ) ಪ್ರದೇಶವಾಗಿದ್ದರಿಂದ ದೇವಸ್ಥಾನಕ್ಕೆ ಬನದೇಶ್ವರ ಅಂತ ಹೆಸರು ಬಂತು ಎಂದು ಹೇಳಲಾಗುತ್ತದೆ.
ಪ್ರತಿವರ್ಷ ಸಂಕ್ರಾಂತಿ ಹಬ್ಬದಂದು ಇಲ್ಲಿ ಜಾತ್ರೆ ನಡೆಯುತ್ತದೆ. ಸುತ್ತಮುತ್ತಲ ಊರುಗಳಲ್ಲದೆ ಬೀದರ್, ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಿಂದ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವ ಮತ್ತು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
ಇದನ್ನೂ ಓದಿ: ರೈಲಿನಲ್ಲಿ ಡೋಲಕ್ ನುಡಿಸುತ್ತಾ ಪ್ರಯಾಣಿಕರನ್ನು ರಂಜಿಸಿದ ಪುಟ್ಟ ಬಾಲಕ; ನೆಟ್ಟಿಗರು ಮೆಚ್ಚಿದ ವಿಡಿಯೋವಿದು