ಕೇಂದ್ರ ಸರ್ಕಾರ ಅಬ್ಕಾರಿ ತೆರಿಗೆ ಇಳಿಸಿರುವುದರಿಂದ ದೇಶದೆಲ್ಲೆಡೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗಿದ್ದು ಅದಕ್ಕೆ ಜನರಿಂದ ಮಿಶ್ರ ಪ್ರತಿಕಿಯೆ ಸಿಗುತ್ತಿದೆ. ಕೆಲವರು ದರ ಇಳಿಕೆಯನ್ನು ಕೇಂದ್ರ ಸರ್ಕಾರ ಜನತೆಗೆ ನೀಡಿರುವ ದೀಪಾವಳಿ ಗಿಫ್ಟ್ ಎಂದು ಬಣ್ಣಸಿದರೆ ಮತ್ತೇ ಕೆಲವರು ಜನರ ಕಣ್ಣೊರೆಸುವ ತಂತ್ರ ಅಷ್ಟೆ ಅಂತ ಎನ್ನುತ್ತಿದ್ದಾರೆ. ಟಿವಿ9 ಮೈಸೂರು ಪ್ರತಿನಿಧಿ ರಾಮ್ ಅವರು ಇಂಧನದ ಇಳಿಕೆ ಮತ್ತು ದೈನಂದಿನ ಬದುಕಿನಲ್ಲಿ ಅದು ಬೀರಲಿರುವ ಪರಿಣಾಮದ ಬಗ್ಗೆ ಒಂದು ಕುಟುಂಬದ ಜೊತೆ ಮಾತಾಡಿದ್ದಾರೆ. ಹಾಗಯೇ ಇಂಧನದ ಬೆಲೆಯನ್ನು ದಿಢೀರನೆ ಇಳಿಸಿರುವುದು ಪೆಟ್ರೋಲ್ ಬಂಕ್ ಮಾಲೀಕರ ಮೇಲೆ ಅಗಿರುವ ಪರಿಣಾಮವನ್ನು ಮಾಲೀಕರ ಬಾಯಿಂದಲೇ ಹೇಳಿಸಿದ್ದಾರೆ.
ಕಾರಿನಲ್ಲಿ ಕುಳಿತಿರುವ ಈ ಕುಟುಂಬವು ಪೆಟ್ರೋಲ್ ಇಳಿಕೆ ಬಗ್ಗೆ ಕನ್ವಿನ್ಸ್ ಆದಂತಿಲ್ಲ. ವೀಲ್ ಮೇಲೆ ಕುಳಿತಿರುವ ಯುವಕ ನಮ್ಮ ದೇಶದಲ್ಲಿ ಪೆಟ್ರೋಲ್ ಬೆಲೆಗಿಂತ ತೆರಿಗೆ ರೂಪದಲ್ಲಿ ಹೆಚ್ಚು ಹಣ ನೀಡಬೇಕಾಗುತ್ತದೆ. ದೇಶದಲ್ಲಿ ಲಭ್ಯವಿರುವ ಎಲ್ಲ ವಸ್ತುಗಳನ್ನು ಜಿ ಎಸ್ ಟಿ ವ್ಯಾಪ್ತಿಗೆ ತಂದಿರುವ ಸರ್ಕಾರ ಪೆಟ್ರೋಲಿಯಂ ಪದಾರ್ಥಗಳನ್ನು ಯಾಕೆ ತರುತ್ತಿಲ್ಲ ಅಂತ ಪ್ರಶ್ನಿಸುತ್ತಾರೆ.
ಕಾರಿನ ಹಿಂಭಾಗದಲ್ಲಿರುವ ಗೃಹಿಣಿ, ಕೊವಿಡ್ ಪಿಡುಗುನಿಂದಾಗಿ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿವೆ. ಜನರಿಗೆ ಜೀವನ ಮಾಡುವುದೇ ಕಷ್ಟವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ಮಾಡಿದರೆ, ಇತರ ವಸ್ತುಗಳ ಬೆಲೆ ತಾನಾಗಿಯೇ ಕಮ್ಮಿಯಾಗುತ್ತದೆ ಎಂದು ಹೇಳುತ್ತಾರೆ.
ಅವರ ಪಕ್ಕದಲ್ಲಿ ಕುಳಿತಿರುವ ವ್ಯಕ್ತಿಯು ಜನಪ್ರತಿನಿಧಿಗಳು ಸ್ವಾರ್ಥಿಗಳಾಗದೆ ಜನರ ಅಭ್ಯುದಯ ಕುರಿತು ಯೋಚಿಸಬೇಕು ಅನ್ನುತ್ತಾರೆ.
ಮುಂಭಾಗದಲ್ಲಿ ಕುಳಿತಿರುವ ಯುವತಿಯು, ಕೇವಲ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಮ್ಮಿ ಮಾಡಿದರೆ ಸಾಲದು ಅಡುಗೆ ಅನಿಲ ಸಿಲಿಂಡರಿನ ಬೆಲೆಯನ್ನೂ ಕಡಿಮೆ ಮಾಡಬೇಕು, ಪ್ರತಿ ತಿಂಗಳು ಸಿಲಿಂಡರೊಂದಕ್ಕೆ ಒಂದು ಸಾವಿರ ರೂಪಾಯಿ ತೆರುವುದು ತುಂಬಾ ಹೊರೆಯೆನಿಸುತ್ತದೆ ಎಂದರು.
ಪೆಟ್ರೋಲ್ ಬಂಕಿನ ಮಾಲೀಕರು, ಸರ್ಕಾರ ಇಂಧನದ ಬೆಲೆಯೇರಿಸುವಾಗ 20 ಪೈಸೆ 30 ಪೈಸೆಯಂತೆ ಏರಿಸುತ್ತದೆ. ಆದರೆ, ಇಳಿಸುವಾಗ ಒಂದೇ ಸಲಕ್ಕೆ 10-12 ರೂ. ಗಳನ್ನು ಇಳಿಸುತ್ತದೆ. ಎಲ್ಲ ಬಂಕ್ಗಳಲ್ಲಿ ಕನಿಷ್ಟ 50,000-60,000 ಲೀಟರ್ಗಳಷ್ಟು ದಾಸ್ತಾನು ಇರೋದ್ರಿಂದ ಎಲ್ಲರಿಗೂ 3 ರಿಂದ 5 ಲಕ್ಷ ರೂಪಾಯಿಗಳವರೆಗೆ ನಷ್ಟವಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ರಸ್ತೆಯ ಮೇಲೆ ಗಜರಾಜ ಪ್ರತ್ಯಕ್ಷ, ಮಹಿಳೆ ಮಾಡಿದ 19 ಸೆಕೆಂಡ್ಗಳ ವಿಡಿಯೋ ವೈರಲ್