ಕೊರೊನಾ ವೈರಸ್ 13ನೇ ರೂಪಾಂತರಿಗೆ ಒಮಿಕ್ರಾನ್ ಹೆಸರು ಯಾಕೆ ಬಂತು, ಅದರ ಹಿನ್ನೆಲೆ ಏನು ಅಂತ ಗೊತ್ತಾ?
ಹೆಸರುಗಳ ಹಿನ್ನೆಲೆಯಲ್ಲಿ ದೇಶಗಳಿಗಾಗಲೀ, ವ್ಯಕ್ತಿಗಳಿಗಾಗಲೀ ಕಳಂಕ ತಾಕುವುದು ಸರಿಯಲ್ಲ ಎಂದು ಭಾವಿಸಿದ ಡಬ್ಲ್ಯೂ ಹೆಚ್ ಒ ಮೇ ತಿಂಗಳಿನಿಂದ ಗ್ರೀಕ್ ಅಕ್ಷರಮಾಲೆಯ ಪ್ರಕಾರ ಸಾರ್ಸ್-ಕೊವ್-2 ವೈರಸ್ಗಳಿಗೆ ಅಲ್ಫಾ, ಬೀಟಾ, ಗಾಮಾ ಅಂತ ಹೆಸರಿಡಲಾರಂಭಿಸಿತು.
ಕೆಲ ವಾರಗಳ ಕಾಲ ಸ್ತಬ್ಧವಾಗಿದ್ದ ಕೊರೊನಾ ವೈರಸ್ ಪುನಃ ಕಾಡಲಾರಂಭಿಸಿದೆ. ಸೃಷ್ಟಿಯಾದಾಗಿನಿಂದ ಹದಿಮೂರನೇ ಬಾರಿಗೆ ತನ್ನ ರೂಪವನ್ನು ಬದಲಾಯಿಸಿ ಒಮೈಕ್ರಾನ್ ಹೆಸರಿನೊಂದಿಗೆ ಲಗ್ಗೆ ಇಡಲಾರಂಭಿಸಿದೆ. ಇದರ ಗುಣಲಕ್ಷಣಗಳ ಬಗ್ಗೆ ಸಂಶೋಧಕರಿಗೆ, ವಿಜ್ಞಾನಿಗಳಿಗೆ ಮತ್ತು ವೈದ್ಯಲೋಕಕ್ಕೆ ಇನ್ನೂ ಸ್ಪಷ್ಟವಾದ ಮಾಹಿತಿ ಸಿಗಬೇಕಿದೆಯಾದರೂ ಈ ಮೊದಲಿನ ರೂಪಾಂತರಿಗಳಿಗಿಂತ ಹೆಚ್ಚು ಶಕ್ತಿಶಾಲಿ ಮತ್ತು ಕ್ಷಿಪ್ರಗತಿಯಲ್ಲಿ ಸೋಂಕು ಹರಡಲಿದೆಯೆಂದು ಹೇಳಲಾಗುತ್ತಿದೆ.
ಗ್ರೀಕ್ ಅಕ್ಷರಮಾಲೆಯ ಆಧಾರದಲ್ಲಿ ನಾಮಕರಣಗೊಂಡಿರುವ ಒಮಿಕ್ರಾನ್ ರೂಪಾಂತರವು ಸಾರ್ಸ್-ಕೋವ್-2 ವೈರಸ್‌ನ 13 ನೇ ರೂಪಾಂತರವಾಗಿದೆ, ಇದು ಆಸಕ್ತಿ ಅಥವಾ ಕಾಳಜಿಯ ರೂಪಾಂತರಗಳಿಗಾಗಿ ವಿಶ್ವ ಆರೋಗ್ಯ ಸಂಸ್ಥೆಯ ವರ್ಗೀಕರಣ ವ್ಯವಸ್ಥೆಯಡಿಯಲ್ಲಿ ಗ್ರೀಕ್ ಹೆಸರನ್ನು ಪಡೆದುಕೊಂಡಿದೆ.
ವೇರಿಯಂಟ್‌ಗಳ ಬಗ್ಗೆ ಸಾಮಾನ್ಯವಾಗಿ ಸಾರ್ವಜನಿಕರಿಗೆ ವ್ಯಾಪಕವಾದ ಕಾಳಜಿ ಉಂಟಾದಾಗ ಅವುಗಳ ವೈಜ್ಞಾನಿಕ ಹೆಸರು ಅವರಿಗೆ ಗೊತ್ತಾಗದೆ, ಅ ವೇರಿಯಂಟ್ ಯಾವ ದೇಶದಲ್ಲಿ ಮೊದಲು ಕಾಣಿಸಿಕೊಂಡಿತೋ ಆ ದೇಶದ ಹೆಸರಿನಲ್ಲಿ ಅದರ ಉಲ್ಲೇಖಿಸಲಾರಂಭಿಸಿದರು. ಆದರೆ ಹಾಗೆ ಯೋಚಿಸುವುದು ಮತ್ತು ದೇಶಗಳ ಹೆಸರಿನಲ್ಲಿ ಉಲ್ಲೇಖಿಸುವುದು ಉಚಿತವಲ್ಲ, ಎಂದು ನ್ಯೂಯಾರ್ಕ್‌ನ ಮೌಂಟ್ ಸಿನಾಯ್ ಆಸ್ಪತ್ರೆಯಲ್ಲಿ ಸಾಂಕ್ರಾಮಿಕ ರೋಗಗಳು ಮತ್ತು ಔಷಧಿಗಳ ಪ್ರಾಧ್ಯಾಪಕ ಮತ್ತು ಸೋಂಕು ನಿಯಂತ್ರಣದ ನಿರ್ದೇಶಕ ಡಾ ವಲೀದ್ ಜಾವೈದ್ ಹೇಳಿದ್ದಾರೆ.
‘ಕೊರೊನಾ ವೈರಸ್ ಬೇರೆ ವೈರಸ್ಗಳಂತೆಯೇ ಹಬ್ಬುತ್ತದೆ. ಅದು ಸಾಂಕ್ರಾಮಿಕವಾಗಿದ್ದು ನಮ್ಮಲ್ಲಿ ಸೋಂಕನ್ನು ಉಂಟು ಮಾಡುತ್ತದೆ. ಅದರ ಹರಡುವಿಕೆ ಮತ್ತು ಸ್ಥಳದ ನಡುವೆ ಯಾವುದೇ ನಂಟಿಲ್ಲ, ಇಲ್ಲಿ ಗಣನೆಗೆ ಬರೋದು ಅದರ ಸೋಂಕು ಹರಡುವ ಸ್ವಭಾವ ಮಾತ್ರ’ ಎಂದು ವಲೀದ್ ಹೇಳಿದ್ದಾರೆ.
ಹೆಸರುಗಳ ಹಿನ್ನೆಲೆಯಲ್ಲಿ ದೇಶಗಳಿಗಾಗಲೀ, ವ್ಯಕ್ತಿಗಳಿಗಾಗಲೀ ಕಳಂಕ ತಾಕುವುದು ಸರಿಯಲ್ಲ ಎಂದು ಭಾವಿಸಿದ ಡಬ್ಲ್ಯೂ ಹೆಚ್ ಒ ಮೇ ತಿಂಗಳಿನಿಂದ ಗ್ರೀಕ್ ಅಕ್ಷರಮಾಲೆಯ ಪ್ರಕಾರ ಸಾರ್ಸ್-ಕೊವ್-2 ವೈರಸ್ಗಳಿಗೆ ಅಲ್ಫಾ, ಬೀಟಾ, ಗಾಮಾ ಅಂತ ಹೆಸರಿಡಲಾರಂಭಿಸಿತು.
ಆದರೆ ಇಲ್ಲೂ ಒಂದು ಸಮಸ್ಯೆ ಎದುರಾಯಿತು. ಗ್ರೀಕ್ ಅಕ್ಷರಮಾಲೆಯಲ್ಲಿ 13 ನೇ ಅಕ್ಷರ ಕ್ಸಿ (xi) ಆಗಿದೆ. ಚೀನಾದ ಅಧ್ಯಕ್ಷರ ಹೆಸರು ಕ್ಸಿ ಜಿನ್ಪಿಂಗ್ ಅಗಿದೆ ಈಗಿನದು ಕೊರೊನಾ ವೈರಸ್ 13ನೇ ರೂಪಾಂತರಿ ಆಗಿರುವುದರಿಂದ ಅದನ್ನು ಕ್ಸಿ ಅಂತ ಕರೆಯುವಂತಿರಲಿಲ್ಲ.
ಗ್ರೀಕ್ ಅಕ್ಷರಮಾಲೆಯಲ್ಲಿ 14 ನೇ ಅಕ್ಷರ ನು (nu) ಅಗಿದೆ. ಅದರ ಉಚ್ಛಾರಣೆ ನ್ಯೂ (new) ಅಂತಾಗಿ ಗೊಂದಲ ಸೃಷ್ಟಿಸುತ್ತದೆ ಅಂತ ಭಾವಿಸಿದ ಡಬ್ಲ್ಯೂ ಹೆಚ್ ಒ 15 ನೇ ಅಕ್ಷರ ಒಮೈಕ್ರಾನ್ ಅನ್ನು ಕೊರೊನಾ ವೈರಸ್ನ 13 ನೇ ರೂಪಾಂತರಿಗೆ ಇಟ್ಟಿದೆ.
ಇದನ್ನೂ ಓದಿ: ಪ್ರಸವದ ವೇಳೆ ಕೆಸರಿನಲ್ಲಿ ಜಾರಿ ಬಿದ್ದ ಆನೆ ಮರಿ ಮೇಲೆತ್ತಲು ತಾಯಿ ಆನೆ ಪರದಾಟ, ಮನ ಕಲಕುವಂತ ವಿಡಿಯೋ