ಒತ್ತಡವನ್ನು ನಿಯಂತ್ರಿಸಿ ನೆಮ್ಮದಿಯ ಮತ್ತು ಸುಖಮಯ ಬದುಕು ನಡೆಸುವುದು ಹೇಗೆ ಅನ್ನೋದನ್ನು ಡಾ ಸೌಜನ್ಯ ವಶಿಷ್ಠ ವಿವರಿಸುತ್ತಾರೆ
ಬೆಳಗ್ಗೆ ಎದ್ದ ಕೂಡಲೇ ಅರ್ಧ ಲೀಟರ್ನಷ್ಟು ನೀರು ಕುಡಿದು, ಮನಸನ್ನು ಪ್ರಫುಲ್ಲಗೊಳಿಸಿಕೊಳ್ಳಲು 5 ಸಂತೋಷಕರ ಮತ್ತು ಮನಸ್ಸಿಗೆ ಮುದ ನೀಡುವ ಅಂಶಗಳ ಬಗ್ಗೆ ಯೋಚಿಸಬೇಕು ಮತ್ತು ಮನಸ್ಸು ನಿರಾಳವಾಗಿರುವಂತೆ ನೋಡಿಕೊಳ್ಳಬೇಕು.
ನಮ್ಮೆಲ್ಲರಿಗೂ ಒಂದೊಂದು ಬಗೆಯ ಒತ್ತಡಗಳಿರುತ್ತವೆ. ವೃತ್ತಿಬದುಕಿನ ಒತ್ತಡ, ಮಕ್ಕಳ ವಿದ್ಯಾಭ್ಯಾಸದ ಒತ್ತಡ, ಬ್ಯಾಂಕಿಗೆ ಈ ಎಮ್ ಐ ಕಟ್ಟೋದು, ಆರೋಗ್ಯ-ಹೀಗೆ ನಮ್ಮ ಬದುಕಿನಾದ್ಯಂತ ಬರೀ ಒತ್ತಡಗಳೇ. ಒತ್ತಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರ ಅಡ್ಡ ಪರಿಣಾಮಗಳು ಅನೇಕ. ವೈದ್ಯರಲ್ಲಿಗೆ ಹೋಗಿ ಒತ್ತಡ ನಿವಾರಿಸಿಕೊಳ್ಳಲು ಚಿಕಿತ್ಸೆ ಪಡೆಯುವ ಬದಲು ನಾವೇ ಅದನ್ನು ನಿಯಂತ್ರಿಸಿಕೊಂಡು ಸಂತೋಷಮಯ, ಸುಖಕರ ಬದುಕು ಹೇಗೆ ನಡೆಸಬಹುದು ಅನ್ನುವುದನ್ನು ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ಈ ಸಂಚಿಕೆಯಲ್ಲಿ ಹೇಳಿದ್ದಾರೆ. ಸಾಮಾನ್ಯವಾಗಿ ನಮ್ಮ ಬೆಳಗು ಫೋನ್ನಲ್ಲಿ ವಾಟ್ಸ್ಯಾಪ್ ಮತ್ತು ನ್ಯೂಸ್ ವೆಬ್ಸೈಟ್ಗಳಲ್ಲಿ ಸುದ್ದಿಗಳನ್ನು ಓದುವುದರ ಮೂಲಕ ಆಗುತ್ತದೆ. ಇಂದಿನ ದಿನಮಾನಗಳ ಸುದ್ದಿ ಹೇಗಿರುತ್ತವೆ ಅಂತ ನಮ್ಮೆಲ್ಲರಿಗೆ ಗೊತ್ತು. ನಮ್ಮ ಚಿತ್ತಸ್ವಾಸ್ಥ್ಯವನ್ನು ಕದಡುವ ಸುದ್ದಿಗಳೇ. ಹಾಗಾಗಿ ನಿಮ್ಮ ಬೆಳಗನ್ನು ಫೋನ್ ನೋಡುವ ಮೂಲಕ ಆರಂಭಿಸುವ ಬದಲು ವ್ಯಾಯಾಮ, ಯೋಗ ಮತ್ತು ಧ್ಯಾನ ಮೊದಲಾವುಗಳೊಂದಿಗೆ ಆರಂಭಿಸಬೇಕು ಎಂದು ಸೌಜನ್ಯ ಹೇಳುತ್ತಾರೆ.
ನಮ್ಮ ದೇಹಕ್ಕೆ ಕಸರತ್ತು ಬೇಕೇಬೇಕು ಅಂತ ಸೌಜನ್ಯ ಹೇಳುತ್ತಾರೆ. ನಮ್ಮ ದೇಹ ಮತ್ತು ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕು. ಬೆಳಗ್ಗೆ ಎದ್ದ ಕೂಡಲೇ ಅರ್ಧ ಲೀಟರ್ನಷ್ಟು ನೀರು ಕುಡಿದು, ಮನಸನ್ನು ಪ್ರಫುಲ್ಲಗೊಳಿಸಿಕೊಳ್ಳಲು 5 ಸಂತೋಷಕರ ಮತ್ತು ಮನಸ್ಸಿಗೆ ಮುದ ನೀಡುವ ಅಂಶಗಳ ಬಗ್ಗೆ ಯೋಚಿಸಬೇಕು ಮತ್ತು ಮನಸ್ಸು ನಿರಾಳವಾಗಿರುವಂತೆ ನೋಡಿಕೊಳ್ಳಬೇಕು.
ಒಂದೈದು ನಿಮಿಷ ಕಾಲ ಧೀರ್ಘವಾಗಿ ಉಸಿರೆಳೆದುಕೊಂಡು ನಿಧಾನವಾಗಿ ಉಸಿರನ್ನು ಹೊರಹಾಕಬೇಕು. ಒತ್ತಡವನ್ನು ಹತೋಟಿಗೆ ತಂದುಕೊಳ್ಳಲು ಇದು ಬಹಳ ನೆರವಾಗುತ್ತದೆ ಎಂದು ಸೌಜನ್ಯ ಹೇಳುತ್ತಾರೆ.
ನಮ್ಮ ಕುಟುಂಬವನ್ನು ಯಾವ ಕಾರಣಕ್ಕೂ ಉದಾಸೀನ ಮಾಡದೆ ಸದಸ್ಯರೊಂದಿಗೆ ಸಮಯ ಕಳೆಯುವ ಪರಿಪಾಠ ಬೆಳೆಸಿಕೊಳ್ಳಬೇಕು. ಕುಟುಂಬದವರೇ ನಮ್ಮ ಬದುಕಿನ ಅತ್ಯಂತ ವಿಶ್ವಸನೀಯ ಸದಸ್ಯರಾಗಿರುತ್ತಾರೆ. ಅವರ ಸಾಂಗತ್ಯವನ್ನು ಕಡೆಗಣಿಸಲೇಬಾರದು ಎಂದು ಸೌಜನ್ಯ ಹೇಳುತ್ತಾರೆ.
ಊಟ-ತಿಂಡಿ-ನಿದ್ರೆ ಸರಿಯಾದ ಸಮಯಕ್ಕೆ ಮಾಡುತ್ತಾ ಬದುಕಿನಲ್ಲಿ ಶಿಸ್ತು ತಂದುಕೊಳ್ಳಬೇಕು. ಬದುಕನ್ನು ವ್ಯವಸ್ಥಿತ ರೀತಿಯಲ್ಲಿ ನಡೆಸಿದರೆ ಒತ್ತಡ ನಮ್ಮನ್ನು ಕಾಡಲಾರದು. ದೇಹಕ್ಕೆ ಕಸರತ್ತು ನೀಡುವುದನ್ನು ಬದುಕಿನ ಒಂದು ಅತ್ಯವಶ್ಯಕ ಭಾಗವಾಗಿಸಬೇಕು ಎಂದು ಡಾ ಸೌಜನ್ಯ ವಶಿಷ್ಠ ಹೇಳುತ್ತಾರೆ.
ಇದನ್ನೂ ಓದಿ: Alia Bhatt: ಮದುವೆಯಲ್ಲಿ ಗೆಳತಿಯರೊಂದಿಗೆ ಕುಣಿದು ಕುಪ್ಪಳಿಸಿದ ಆಲಿಯಾ; ವಿಡಿಯೋ ನೋಡಿ