ವಿಜ್ಞಾನ ಮತ್ತು ತಂತ್ರಜ್ಞಾನವು ಕೇವಲ ಮನುಷ್ಯನ ಬದುಕನ್ನು ಮಾತ್ರವಲ್ಲದೆ, ಈಗ ಪ್ರಾಣಿ ಸಂಕುಲದ ಅಭಿವೃದ್ಧಿಗೂ ಹೊಸ ಭರವಸೆ ನೀಡಿದೆ. ಮಕ್ಕಳಿಲ್ಲದ ದಂಪತಿಗಳಿಗೆ ವರದಾನವಾಗಿದ್ದ ಐವಿಎಫ್ (IVF - In-Vitro Fertilization) ತಂತ್ರಜ್ಞಾನವು ಈಗ ಪಶುಸಂಗೋಪನಾ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡಿದೆ. ಅಸ್ಸಾಂ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಐವಿಎಫ್ ತಂತ್ರಜ್ಞಾನದ ಮೂಲಕ ಉನ್ನತ ತಳಿಯ ಗಿರ್ ಹಸುವಿನ ಕರು ಜನಿಸಿದೆ. ಅಸ್ಸಾಂನ ಕಾಮರೂಪ್ ಜಿಲ್ಲೆಯ ಸೋನಾಪುರದಲ್ಲಿ ಈ ಐತಿಹಾಸಿಕ ಘಟನೆ ಸಂಭವಿಸಿದೆ. ಮಾರ್ಚ್ 26ರಂದು ಸುಮಾರು 23 ಕೆಜಿ ತೂಕದ ಪುಟಾಣಿ ಹೆಣ್ಣುಕರು ಆರೋಗ್ಯವಾಗಿ ಜನಿಸಿದೆ. ವಿಜ್ಞಾನಿಗಳ ಕಠಿಣ ಪರಿಶ್ರಮದ ಫಲವಾಗಿ ಜನಿಸಿದ ಈ ಕರುವಿಗೆ ಅತ್ಯಂತ ಪ್ರೀತಿಯಿಂದ 'ಲಖಿಮಿ' ಎಂದು ಹೆಸರಿಡಲಾಗಿದೆ.