ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಮೊರಟಗಿ ಗ್ರಾಮದಲ್ಲಿ ಭಾರಿ ಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ, ಪತಿ-ಪತ್ನಿ ಹಾಗೂ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗುರುನಾಥ ಬಡಿಗೇರ (35), ಜ್ಯೋತಿ ಬಡಿಗೇರ (28), ಕಾಳಮ್ಮ ಬಡಿಗೇರ (13) ಹಾಗೂ ಕೀರ್ತಿ ಬಡಿಗೇರ (9) ಮೃತಪಟ್ಟ ದುರ್ದೈವಿಗಳು. ಗುರುನಾಥ್ ಅವರು ತಮ್ಮ ಸ್ವಂತ ಮನೆಯನ್ನು ದುರಸ್ತಿ ಮಾಡುತ್ತಿದ್ದ ಕಾರಣ, ಈ ಕುಟುಂಬವು ಹಳೆಯ ಮನೆಯೊಂದರಲ್ಲಿ ಬಾಡಿಗೆಗೆ ಇತ್ತು. ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಮನೆಯ ಹಳೆಯ ಮೇಲ್ಛಾವಣಿ ಏಕಾಏಕಿ ಕುಸಿದು ಬಿದ್ದಿದ್ದರಿಂದ ಮನೆಯೊಳಗೆ ಮಲಗಿದ್ದ ನಾಲ್ವರು ಅವಶೇಷಗಳ ಅಡಿಯಲ್ಲಿ ಸಿಲುಕಿ ಜೀವಂತ ಸಮಾಧಿಯಾಗಿದ್ದಾರೆ.