ಫ್ರಾನ್ಸ್ ರಾಜಧಾನಿ ಪ್ಯಾರಿಸ್ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಅಭೂತಪೂರ್ವ ಸ್ವಾಗತ ನೀಡಿದ್ದಾರೆ. ಭಾರತೀಯ ಸಂಸ್ಕೃತಿಯ ಸಂಭ್ರಮ, ತ್ರಿವರ್ಣ ಧ್ವಜಗಳ ಪ್ರದರ್ಶನ ಮತ್ತು "ಮೋದಿ ಮೋದಿ", "ಭಾರತ್ ಮಾತಾಕಿ ಜೈ" ಎಂಬ ಘೋಷಣೆಗಳ ಮೂಲಕ ಮೋದಿಯನ್ನು ಸ್ವಾಗತಿಸಿದರು. ಪ್ಯಾರಿಸ್ನಲ್ಲಿ ಪ್ರಧಾನಿ ಮೋದಿ ಅವರು ತಂಗಿದ್ದ ಹೋಟೆಲ್ ಮುಂಭಾಗದಲ್ಲಿ ನೂರಾರು ಭಾರತೀಯರು ಒಟ್ಟಾಗಿ ನೆರೆದಿದ್ದರು. ಪ್ರಧಾನಿಯವರನ್ನು ನೋಡುತ್ತಿದ್ದಂತೆ ಇಡೀ ಆವರಣದಲ್ಲಿ ದೇಶಭಕ್ತಿಯ ಘೋಷಣೆಗಳು ಮೊಳಗಿದವು. ಭಾರತೀಯ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ್ದ ಪ್ರವಾಸಿಗರು ಮತ್ತು ಅಲ್ಲಿನ ನಿವಾಸಿಗಳು ತಮಟೆ ಹಾಗೂ ವಾದ್ಯಗಳ ಮೂಲಕ ಮೋದಿಯವರನ್ನು ಬರಮಾಡಿಕೊಂಡರು.