ಉತ್ತರ ಸಿಕ್ಕಿಂನ ನಾಗಾ ಅರಣ್ಯ ಪ್ರದೇಶದಲ್ಲಿ, ಥೆಂಗ್ ಸುರಂಗದ ಎದುರಿನ ನಾಗಾ-ತೋಸಾ ರಸ್ತೆ ಕಾಮಗಾರಿ ಮಾರ್ಗದಲ್ಲಿ ಸೆಪ್ಟೆಂಬರ್ 5ರ ಮಧ್ಯರಾತ್ರಿ ಭಾರಿ ಭೂಕುಸಿತ ಸಂಭವಿಸಿದೆ. ತೀಸ್ತಾ ಮತ್ತು ಚ್ಯಾಕೂಂಗ್ ನದಿಗಳು ಸಂಧಿಸುವ ಜಾಗದಲ್ಲೇ ಬೆಟ್ಟ ಕುಸಿದಿದ್ದರಿಂದ ಎರಡೂ ನದಿಗಳ ನೀರಿನ ಹರಿವು ಭಾಗಶಃ ಸ್ಥಗಿತಗೊಂಡು ಕೃತಕ ಜಲಾಶಯದಂತೆ ನೀರು ನಿಂತಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮಂಗನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉಂಟಾಗಿರುವ ಆಸ್ತಿಪಾಸ್ತಿ ಹಾನಿಯ ನಿಖರ ಪ್ರಮಾಣವನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದು, ನದಿಯ ನೀರಿನ ಮಟ್ಟದ ಮೇಲೆ ನಿಗಾ ಇರಿಸಲಾಗಿದೆ.