ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಹಾಗೂ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದ ಬಳಿ ನಡೆಯುತ್ತಿದ್ದ ಧರಣಿ ವೇಳೆ ಸ್ಥಳದಿಂದ ತೆರಳಲು ನಿರಾಕರಿಸಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ರಸ್ತೆಯ ಮೇಲೆಯೇ ಮಲಗಿ ಪೊಲೀಸರ ಕಾರ್ಯಾಚರಣೆಗೆ ತೀವ್ರ ಪ್ರತಿರೋಧ ಒಡ್ಡಿದ್ದಾರೆ. ಇಂದು ಸಂಜೆ ಸುಮಾರು 6.40ರ ವೇಳೆಗೆ ದೆಹಲಿ ಪೊಲೀಸರು ಪ್ರಧಾನಿ ನಿವಾಸದ ಸಮೀಪವಿರುವ ಲೋಕ್ ಕಲ್ಯಾಣ್ ಮಾರ್ಗದಿಂದ ಪ್ರತಿಭಟನಾಕಾರರನ್ನು ತೆರವುಗೊಳಿಸಲು ಆರಂಭಿಸಿದರು. ಈ ವೇಳೆ ಪೊಲೀಸರು ಸ್ಥಳದಿಂದ ತೆರಳುವಂತೆ ಮನವಿ ಮಾಡಿದರೂ ರಾಹುಲ್ ಗಾಂಧಿ ಆ ಜಾಗದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಪೊಲೀಸರು ಅವರನ್ನು ಎಬ್ಬಿಸಲು ಯತ್ನಿಸಿದಾಗ, ಅವರು ನೇರವಾಗಿ ರಸ್ತೆಯ ನೆಲದ ಮೇಲೆಯೇ ಮಲಗಿ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು.