ಕೋಟಿ ಕೋಟಿ ಖರ್ಚು ಮಾಡಿ ಅದ್ಧೂರಿ ಮದುವೆ ಮಾಡಿಕೊಳ್ಳುವವರ ನಡುವೆ, ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಬಹದ್ದೂರ್ಪುರ ಗ್ರಾಮದ ಪೆತ್ಕರ್ ಕುಟುಂಬ ಹೊಸ ಸಂಸ್ಕಾರಕ್ಕೆ ಮುನ್ನುಡಿ ಬರೆದಿದೆ. ಇತ್ತೀಚೆಗೆ ನಡೆದ ಸಿದ್ಧೇಶ್ವರ್ ಪೆತ್ಕರ್ ಮತ್ತು ಮಂಜುಷಾ ಪೆತ್ಕರ್ ಅವರ ವಿವಾಹ ಮಹೋತ್ಸವದಲ್ಲಿ, ವರನ ಕುಟುಂಬಸ್ಥರು ಮದುವೆಗೆ ಬಂದ ನೆಂಟರಿಷ್ಟರು ಹಾಗೂ ಇಡೀ ಗ್ರಾಮದ ಸುಮಾರು 3,500 ನಿವಾಸಿಗಳಿಗೆ ತಲಾ ಒಂದು ವರ್ಷದ ಉಚಿತ ಅಪಘಾತ ವಿಮೆಯನ್ನು 'ರಿಟರ್ನ್ ಗಿಫ್ಟ್' ಆಗಿ ನೀಡಿದ್ದಾರೆ. ವರನ ಹಿರಿಯ ಸಹೋದರ ಹಾಗೂ ಸಮಾಜಸೇವಕ ಅನೂಪ್ ಪೆತ್ಕರ್ ಅವರ ಪರಿಕಲ್ಪನೆಯಂತೆ ಮೂಡಿಬಂದ ಈ ಯೋಜನೆಯಡಿ, ಗ್ರಾಮದ ಬಹುತೇಕ ಅರ್ಹರೆಲ್ಲರಿಗೂ ವಿಮಾ ರಕ್ಷಣೆ ಕಲ್ಪಿಸಲಾಗಿದೆ.