ಸೌತ್ ಸಿನಿ ರಂಗದಲ್ಲಿ ಬಹು ಬೇಡಿಕೆಯ ಮತ್ತು ಸಹಜ ನಟ ವಿಜಯ್ ಸೇತುಪತಿ. ಒಂದರ ನಂತರ ಮತ್ತೊಂದು ಸಿನಿಮಾ ಆಫರ್ ಗಳನ್ನು ಬಾಚಿಕೊಳ್ಳುತ್ತಿರುವ ಈ ನಟನಿಗೆ, ಈಗ ಮತ್ತೊಂದು ದೊಡ್ಡ ಬಜೆಟ್ ಚಿತ್ರದಲ್ಲಿ ನಟಿಸುವ ಅವಕಾಶ ಬಂದಿದೆಯಂತೆ. ಹೌದು, ತಮಿಳಿನ ಸೂಪರ್ ಸ್ಟಾರ್ ಕಮಲ್ ಹಾಸನ್ ನಟಿಸುತ್ತಿರುವ 'ವಿಕ್ರಂ' ಚಿತ್ರದಲ್ಲಿ ಪ್ರಮುಖ ಪಾತ್ರವೊಂದಕ್ಕೆ ನಟ ವಿಜಯ್ ಸೇತುಪತಿ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ. ವಿಜಯ್ ನಟನೆಯ 'ಮಾಸ್ಟರ್' ಸಿನಿಮಾದ ನಿರ್ದೇಶಕ ಲೋಕೇಶ್ ಕನಕರಾಜ್ ಈ 'ವಿಕ್ರಂ' ಚಿತ್ರಕ್ಕೆ ಸಹ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತಮಿಳು ನಾಡಿನಲ್ಲಿ ಚುನಾವಣೆ ಮುಗಿಯುತ್ತಿದ್ದಂತೆ ಈ ಸಿನಿಮಾದ ಕೆಲಸ ಆರಂಭಿಸಿದ್ದಾರೆ ಲೋಕೇಶ್ ಕನಕರಾಜ್.