ಉತ್ತರ ಪ್ರದೇಶ ಮುಖ್ಯಮಂತ್ರಿ ಹೇಳುವ ಹಾಗೆ ರಾಮಮಂದಿರದ ಲೋಕಾರ್ಪಣೆ 2023 ರಲ್ಲಿ ಆಗುತ್ತದೆಯೇ?
ಐಐಟಿ ದೆಹಲಿ ಮತ್ತು ಗುವಹಾಟಿಯ ಹಿರಿಯ ಹಾಗೂ ಪರಿಣಿತ ಇಂಜಿನೀಯರ್ಗಳ ಸೇವೆಯನ್ನು ಬಳಸಿಕೊಂಡು ಭೂಕಂಪಕ್ಕೂ ಜಗ್ಗದ ರಾಮಮಂದಿರವನ್ನು ನಿರ್ಮಿಸಲಾಗುತ್ತಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ ಅಡಿಪಾಯವೇ 44 ಪದರುಗಳದ್ದಾಗಿದ್ದು ಪ್ರತಿ ಪದರು 8 ಇಂಚು ದಪ್ಪವಿರಲಿದೆ.
ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂಮಿ ಪೂಜೆ ನಡೆದು ನಿನ್ನೆಗೆ ( ಆಗಸ್ಟ್ 5, ಗುರುವಾರ) ಒಂದು ವರ್ಷ ಸಂದಿತು. ಉತ್ತರ ಪ್ರದೇಶ ಸರ್ಕಾರ ಮಂದಿರ ನಿರ್ಮಾಣ ಕಾರ್ಯ 2023 ರ ಹೊತ್ತಿಗೆ ಮುಗಿದು ಲೋಕಾರ್ಪಣೆಯಾಗಲಿದೆ ಎಂದು ಹೇಳುತ್ತಿದೆ. ಆದರೆ ಇದು ಸಾಧ್ಯವೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ನಿನ್ನೆ ಭೂಮಿ ಪೂಜೆಯ ಮೊದಲ ವಾರ್ಷಿಕೋತ್ಸವದ ಅಂಗವಾಗಿ ನಡೆದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಡಿಪಾಯದ ಕೆಲಸ ಶೇಕಡಾ 60 ರಷ್ಟು ಪೂರ್ತಿಗೊಂಡಿದೆ ಎಂದು ಹೇಳಿದ್ದರು. ಒಂದು ವರ್ಷದ ಅವಧಿಯಲ್ಲಿ ಬರೀ ಅಡಿಪಾಯದ ಕೆಲಸ ಅಷ್ಟು ಮಾತ್ರ ಅಗಿದೆ ಎಂದರೆ, 67 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀರಾಮ ಮಂದಿರ ಒಂದು ಭವ್ಯಾವಾದ ರಚನೆಯಾಗಿದ್ದು ಇನ್ನೆರಡು ವರ್ಷಗಳಲ್ಲಿ ನಿರ್ಮಾಣ ಕಾರ್ಯ ಪೂರ್ತಿಗೊಳ್ಳಲಿದೆಯೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜವೇ. ಅಡಿಪಾಯಕ್ಕಿಂತ 161 ಅಡಿ ಮೇಲ್ಭಾಗದಲ್ಲಿ ಮಂದಿರ ರೂಪುಗೊಳ್ಳಲಿದೆ ಎನ್ನವುದು ಸಹ ಇಲ್ಲಿ ನೆನಪಿಡಬೇಕಾದ ಅಂಶವಾಗಿದೆ.
ಗಮನಿಸಬೇಕಿರುವ ಮತ್ತೊಂದು ಸಂಗತಿಯೆಂದರೆ, ಮುಂದಿನ ವರ್ಷ ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿದೆ. ನಿರ್ಮಾಣ ಕೆಲಸ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಉಸ್ತುವಾರಿಯಲ್ಲಿ ನಡೆಯುತ್ತಿದೆಯಾದರೂ ಚುನಾವಣೆ ಸಂದರ್ಭದಲ್ಲಿ ನಿರ್ಮಾಣದ ವೇಗ ಕುಂಠಿತಗೊಳ್ಳವುದರಲ್ಲಿ ಅನುಮಾನವಿಲ್ಲ.
ಐಐಟಿ ದೆಹಲಿ ಮತ್ತು ಗುವಹಾಟಿಯ ಹಿರಿಯ ಹಾಗೂ ಪರಿಣಿತ ಇಂಜಿನೀಯರ್ಗಳ ಸೇವೆಯನ್ನು ಬಳಸಿಕೊಂಡು ಭೂಕಂಪಕ್ಕೂ ಜಗ್ಗದ ರಾಮಮಂದಿರವನ್ನು ನಿರ್ಮಿಸಲಾಗುತ್ತಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ ಅಡಿಪಾಯವೇ 44 ಪದರುಗಳದ್ದಾಗಿದ್ದು ಪ್ರತಿ ಪದರು 8 ಇಂಚು ದಪ್ಪವಿರಲಿದೆ. 175 ಲಕ್ಷ ಕ್ಯೂಬಿಕ್ ಸಾಮಗ್ರಿ ಕೇವಲ ಅಡಿಪಾಯಕ್ಕೆ ಬೇಕಿದೆ ಎಂದು ಹೇಳಲಾಗುತ್ತಿದೆ.
ಈ ಎಲ್ಲ ಅಂಶಗಳ ಆಧಾರದಲ್ಲಿ ಹೇಳುವುದಾದರೆ, ಇನ್ನೆರಡು ವರ್ಷಗಳಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಮುಗಿಯೋದು ಕೊಂಚ ಕಷ್ಟವೆನಿಸುತ್ತದೆ.
ಇದನ್ನೂ ಓದಿ: ದೇವರು ಯಾವ ರೂಪದಲ್ಲಿ ಬೇಕಾದರೂ ಬರಬಹುದು ಎನ್ನುವುದಕ್ಕೆ ಸಾಕ್ಷಿ ಇದು: ವಿಡಿಯೋ ನೋಡಿ