ವಾಟ್ಸಪ್​ನಲ್ಲಿ ಅಭಿವೃದ್ಧಿ ಮಂತ್ರ: ಭಾವನಾತ್ಮಕ ಕರೆಗೆ ಕೈಜೋಡಿಸಿದ ಗ್ರಾಮಸ್ಥರು!

ಕೊಡಗು: ಮಹಾ ಮಳೆಗೆ ಮನೆಗಳು, ಸಂಪರ್ಕ ರಸ್ತೆಗಳು ಹಾಗೆಯೇ ಗ್ರಾಮದ ಎಲ್ಲೆಯನ್ನೇ ಕಳೆದುಕೊಂಡ ನಿರಾಶ್ರಿತರಿಗೆ ಸರ್ಕಾರವೂ ಸಾಕಷ್ಟು ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುತ್ತಿದೆ. ಸಂತ್ರಸ್ತರಿಗೆ ಸುರಕ್ಷಿತವಾದ ಸರ್ಕಾರಿ ಜಾಗದಲ್ಲಿ ಆಶ್ರಯ ಮನೆಗಳನ್ನು ನಿರ್ಮಿಸುತ್ತಿದೆ. ಇನ್ಫೋಸಿಸ್, ರೋಟರಿ ಮತ್ತು ರಿ ಬಿಲ್ಡ್ ಕೊಡಗು ಹೀಗೆ ಹಲವು ಖಾಸಗಿ ಸಂಸ್ಥೆಗಳು ಮಾನವೀಯ ನೆಲೆಗಟ್ಟಿನ ಮೇಲೆ ನೆರವು ನೀಡುತ್ತಿವೆ.

ಆದರೆ ಇವೆಲ್ಲವುದಕ್ಕೂ ಮೀರಿ ಹುಟ್ಟೂರು ಎನ್ನುವ ಅಭಿಮಾನದಿಂದ ಗ್ರಾಮಸ್ಥರೇ ಗ್ರೂಪ್ ಮಾಡಿಕೊಂಡು ಪ್ರವಾಹದಿಂದ ಅಸ್ತವ್ಯಸ್ತವಾಗಿರುವ ಗ್ರಾಮದ ರಸ್ತೆಗಳು, ಹಳೆ ಕಾಲದ ಸೇತುವೆಗಳನ್ನು ಪುನರ್ ನವೀಕರಣಕ್ಕೆ ಕೈ ಜೋಡಿಸಿರುವ ಅಪರೂಪದ ಘಟನೆ ಮಡಿಕೇರಿ ತಾಲೂಕಿನ 2 ನೇ ಮೊಣ್ಣಂಗೇರಿ ಗ್ರಾಮದಲ್ಲಿ ಕಂಡು ಬಂದಿದೆ.

ನಮ್ಮ ಗ್ರಾಮ 2022:
2018 ಹಾಗೂ 19 ರಲ್ಲಿ ಸುರಿದ ಧಾರಾಕಾರ ಮಳೆಗೆ 2ನೇ ಮೊಣ್ಣಂಗೇರಿಯೂ ನಲುಗಿತ್ತು. ಈ ಹಿನ್ನೆಲೆಯಲ್ಲಿ ‌ಊರಿನ ಅಭಿವೃದ್ಧಿಯ ದೃಷ್ಟಿಯಿಂದ ಸಮಾನ ಮನಸ್ಕರು ಸೇರಿ ‘ನಮ್ಮ ಗ್ರಾಮ 2022′ ಎಂದು ವಾಟ್ಸಾಪ್ ಗ್ರೂಪ್ ಮಾಡಿಕೊಂಡು ಪ್ರವಾಹದಿಂದ ಹಾನಿಗೆ ಒಳಗಾಗಿರುವ ಸ್ಥಳಗಳನ್ನು ಪುನರ್ ನಿರ್ಮಿಸುತ್ತಿದ್ದಾರೆ. ಗ್ರಾಮದ ವಿವೇಕ ಗಿರಿ ಬಸ್ ನಿಲ್ದಾಣದ ಬಳಿಯ ಸೇತುವೆ 2018 ರಲ್ಲಿ ಸುರಿದ ಮಳೆಯ ರಭಸಕ್ಕೆ ಕೊಚ್ಚಿ ಹೋಗಿತ್ತು.

ಹಿರಿಯರು ಕಟ್ಟಿದ ಸೇತುವೆಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಅನಿವಾರ್ಯ ಇರುವುದರಿಂದ ಸೇತುವೆ ಸುಭದ್ರತೆ ಉಳಿಸಿಕೊಳ್ಳಬೇಕಿದೆ. ಆದ್ದರಿಂದ ತಾವೆಲ್ಲರೂ ಸರಿಯಾದ ಸಮಯಕ್ಕೆ ಶ್ರಮದಾನಕ್ಕೆ ಹಾಜರಾಗಬೇಕು ಅನ್ನುವ ಭಾವನಾತ್ಮಕ ಅಲೆಗೆ ಗ್ರಾಮಸ್ಥರು ಕೈ ಜೋಡಿಸಿದ್ದಾರೆ.ಅಲ್ಲದೆ ವಾಟ್ಸ್‌ಆ್ಯಪ್ ಅಡ್ಮಿನ್ ನೀಡುವ ಸೂಚನೆಗಳನ್ನು ತಪ್ಪದೆ ಸದಸ್ಯರು ಪಾಲಿಸುತ್ತಿದ್ದಾರೆ.

ಕೈಜೋಡಿಸಿದ ಸಮಾನ ಮನಸ್ಕರು:
ಕೆಲಸಕ್ಕೆ ಹಾಜರಾಗುವ ಮೊದಲು ಹೆಸರನ್ನು ನೋಂದಾಯಿಸಿಕೊಂಡು ಕೆಲಸಕ್ಕೆ ಅಗತ್ಯವಿರುವ ಗುದ್ದಲಿ, ಪಿಕಾಸು, ಹಾರೆ, ತೆಗೆದುಕೊಂಡು ಹೋಗುತ್ತಾರೆ. ಗ್ರಾಮದ ಸೇತುವೆ ನಿರ್ಮಾಣಕ್ಕೆ ಟೆಂಡರ್ ಆಗಿದ್ದರೂ ಲಾಕ್‌ಡೌನ್‌ನಿಂದ ಕೆಲಸ ಸ್ಥಗಿತವಾಗಿದೆ. ಮಳೆಗಾಲ ಸಮೀಪ ಇರುವುದರಿಂದ ಸ್ಥಳೀಯರ ಅನುಕೂಲಕ್ಕೆ ತಾತ್ಕಾಲಿಕವಾಗಿ ಸೇತುವೆ ಪೂರ್ಣಗೊಳಿಸಬೇಕು ಅಂದುಕೊಂಡು ಸಮಾನ ಮನಸ್ಕರೇ ಕೈ ಜೋಡಿಸಿದ್ದಾರೆ.

ಕೊವಿಡ್-19 ಮಧ್ಯೆಯೂ ಸಾಮಾಜಿಕ ಅಂತರ ಕಾಯ್ದುಕೊಂಡು ಜವಾವ್ದಾರಿ ವಹಿಸಿಕೊಂಡು ಪರಿಪೂರ್ಣ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಗ್ರಾಮದ ಚಂದ್ರಗಿರಿಯ ಕೃಷ್ಣರಾವ್‌ರ ಜಾಗದಲ್ಲಿ ಹಾದು ಹೋಗುವ ನದಿಗೆ ಅಡ್ಡಲಾಗಿ ತಾತ್ಕಾಲಿಕ ಸೇತುವೆ, ವಿವೇಕಗಿರಿ ಬಳಿಯ ಸೇತುವೆ, ತಡೆಗೋಡೆ ಸೇರಿದಂತೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ದುರಸ್ಥಿ ಮಾಡಲಾಗಿದೆ ಎನ್ನುತ್ತಾರೆ ಗ್ರೂಪ್ ಅಡ್ಮಿನ್ ಧನಂಜಯ್. ಹೀಗಾಗಿಯೇ ಗ್ರಾಮದ ಅಭಿವೃದ್ಧಿಗೆ ಕೈ ಜೊಡಿಸಿದ ಗ್ರಾಮಸ್ಥರು ಇತರೆ ಜನ್ರಿಗೆ ಮಾದರಿಯಾಗಿದ್ದಾರೆ.

Related Posts :

Category:

error: Content is protected !!

This website uses cookies to ensure you get the best experience on our website. Learn more