ಗಣಿನಾಡಿನಲ್ಲಿ ದೇವರ ಹೆಸರಲ್ಲಿ ಹೊಡೆದಾಟ, ಬಡಿದಾಟ.. ಜೀವ ಹೋದರೂ ಲೆಕ್ಕಕ್ಕಿಲ್ಲ!

  • KUSHAL V
  • Published On - 18:27 PM, 28 Oct 2020

ಬಳ್ಳಾರಿ: ಪ್ರತಿಯೊಬ್ಬರ ಕೈಯಲ್ಲಿ ಬಡಿಗೆಗಳು. ಈ ಬಡಿಗೆಗಳ ಮೂಲಕವೇ ಹೊಡೆದಾಟ. ತಲೆ ಹೊಡೆದು, ಮೈತುಂಬ ರಕ್ತ. ಜೀವವನ್ನೇ ಲೆಕ್ಕಿಸದೆ ಹೊಡೆದಾಟ. ಅಂದ ಹಾಗೆ, ಪೊಲೀಸರ ಸಮ್ಮುಖದಲ್ಲೇ ಹೊಡೆದಾಟ ನಡೆಯುತ್ತದೆ.ಈ ಹೊಡೆದಾಟದಲ್ಲಿ ಜೀವ ಹೋದರೂ ಲೆಕ್ಕಕ್ಕಿಲ್ಲ. ಇಂತಹ ವಿಶಿಷ್ಟ ಆಚರಣೆ ನಡೆಯುವುದು ದಸರಾ ಹಬ್ಬದ ಸಮಯದಲ್ಲಿ ನಡೆಯುವ ದೇವರ ಉತ್ಸವದಲ್ಲಿ.
ಹೌದು, ಜಿಲ್ಲೆಯ ಸಿರುಗುಪ್ಪ ತಾಲೂಕಿನ ಗಡಿ ಭಾಗದ ಅಲೂರು ಮಂಡಲದ ನೇರಣಕಿಯ ದೇವರಗುಡ್ಡದ ಮಾಳ ಮಲ್ಲೇಶ್ವರ ಸ್ವಾಮಿಯ ಕಾರಣಿಕದ ದಸರಾ ಬನ್ನಿ ಮಹೋತ್ಸವದಲ್ಲಿ ಪ್ರತಿವರ್ಷವೂ ಬನ್ನಿ ಹಬ್ಬದ ದಿನದಂದು ರಾತ್ರಿಯಿಡಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ದೇವರ ಉತ್ಸವ ಜರುಗುವುದು ಪದ್ಧತಿ. ದೇವರ ರಕ್ಷಣೆಗಾಗಿ ಇಲ್ಲಿ ಬಡಿದಾಟವೂ ನಡೆಯುತ್ತದೆ.

ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಸೋಂಕು ಹರಡುವ ಸಾಧ್ಯತೆಯಿದ್ದು ಆಂಧ್ರ ಸರ್ಕಾರ ಕಳೆದ ವಾರದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳವ ಮೂಲಕ ಸಂಪೂರ್ಣ ನಿಷೇಧಾಜ್ಞೆಯನ್ನು ಹಾಕಿ ಈ ಬಾರಿಯ ಬನ್ನಿ ಉತ್ಸವವನ್ನು ರದ್ದುಗೊಳಿಸಿರುವುದಾಗಿ ಪ್ರಚಾರವನ್ನು ಸಹ ಮಾಡಿತ್ತು. ಆದರೆ, ಉತ್ಸವ ನಡೆಸಲು ಭಕ್ತರು ರಾತ್ರೋರಾತ್ರಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಹಿನ್ನೆಲೆಯಲ್ಲಿ ಅವರನ್ನು ನಿಯಂತ್ರಿಸುವಲ್ಲಿ ಸಾಧ್ಯವಾಗದ ಪೊಲೀಸರು ಪ್ರತಿ ವರ್ಷದಂತೆ ಈ ವರ್ಷವೂ ಮೂಖ ಪ್ರೇಕ್ಷಕರಾಗಿದ್ದು ಮಾತ್ರ ಸತ್ಯ.

ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ದೇವರಗುಡ್ಡದ ಬನ್ನಿ ಉತ್ಸವ ಎಂದೂ ಸ್ಥಗಿತಗೊಂಡಿಲ್ಲ. ದೇವರ ಪಲ್ಲಕ್ಕಿಯನ್ನು ದೇವಸ್ಥಾನದಿಂದ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ನಡೆಯುವ ಬಡಿಗೆ ಆಟದ ಸಂದರ್ಭದಲ್ಲಿ ಜನರು ಗಾಯಗೊಳ್ಳುತ್ತಾರೆ. ಅನೇಕ ಬಾರಿ ಹಲವರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ವರ್ಷ ಕೊವಿಡ್ ಹಿನ್ನೆಲೆಯಲ್ಲಿ ಹಬ್ಬವನ್ನು ಆಚರಿಸಬಾರದೆಂದು ಸರ್ಕಾರ ಬಹಳಷ್ಟು ಪ್ರಚಾರ ಮಾಡಿತ್ತು. ಬಿಗಿ ಪೊಲೀಸ್ ಬಂದೋಬಸ್ತ್​ ಸಹ ಒದಗಿಸಿತ್ತು. ದೇವರಗುಡ್ಡಕ್ಕೆ ಬರುವ ರಸ್ತೆಗಳೆಲ್ಲವನ್ನು ಬಂದ್ ಮಾಡಿತ್ತು. ಸುಮಾರು 7 ಕಿ.ಮೀ. ದೂರದಲ್ಲೇ ವಾಹನಗಳನ್ನು ತಡೆಯುವ ಮೂಲಕ ಕಟ್ಟುನಿಟ್ಟಿನ ಕ್ರಮ ಜರುಗಿಸಿತ್ತು. ಇನ್ನೂ, ಕರ್ನಾಟಕದ ಗಡಿ ಭಾಗದಲ್ಲೇ ಆಂಧ್ರ ಪೊಲೀಸರು ಯಾವುದೇ ವಾಹನಗಳಿಗೆ ಪ್ರವೇಶ ನೀಡದಂತೆ ಕ್ರಮ ವಹಿಸಿದ್ದರು.

ಕಾಲುದಾರಿಯಲ್ಲೇ ದೇವಸ್ಥಾನ ತಲುಪಿದ ಸಾವಿರಾರು ಭಕ್ತರು
ಆದರೆ, ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಜನರು ಕಾಲುದಾರಿಯಲ್ಲಿ ರಾತ್ರಿಯಾಗುತ್ತಿದ್ದಂತೆ ಗುಡ್ಡಕ್ಕೆ ಆಗಮಿಸಿದರು. ಪೊಲೀಸರು ಇದನ್ನು ಕಂಡರೂ ಜಾಣಕುರುಡರಂತೆ ಇದ್ದುಬಿಟ್ಟರು. ಪೊಲೀಸರು ಅಡ್ಡಿ ಪಡಿಸಿದರೆ ಗಲಾಟೆಗಳಾಗಬಹುದು. ಹೀಗಾಗಿ, ಯಾವುದೇ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಾಗದೆ ಈ ವರ್ಷವೂ ಸಹ ಪೊಲೀಸ್ ಇಲಾಖೆ ಮೌನ ವಹಿಸಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.  ಅಂತೂ ಪ್ರತಿ ವರ್ಷದಂತೆ ದೇವರಗುಡ್ಡದ ಮಾಳ ಮಲ್ಲೇಶ್ವರ ಸ್ವಾಮಿಯ ಕಾರಣಿಕದ ದಸರಾ ಮಹೋತ್ಸವ ಪ್ರತಿ ವರ್ಷದಂತೆ ಸಾವಿರಾರು ಜನರ ಮಧ್ಯೆ ಹೊಡೆದಾಟ ನಡೆಯಿತು.

ಮಧ್ಯರಾತ್ರಿ ವೇಳೆ ಮಾಳಮ್ಮ ಮಲ್ಲೇಶ್ವರ ಸ್ವಾಮಿ ವಿಗ್ರಹಗಳನ್ನು ನೆರಣಿಕೆ ಗ್ರಾಮದಿಂದ ತಂದು ಗುಡ್ಡದಲ್ಲಿನ ಮಲ್ಲೇಶ್ವರ ದೇವಸ್ಥನದಲ್ಲಿ ಕಲ್ಯಾಣೋತ್ಸವ ಜರುಗಿದ ಬಳಿಕ ಸುಪರ್ದಿನಲ್ಲಿರುವ ದೇವರ ಉತ್ಸವ ಮೂರ್ತಿಯನ್ನು ತಮ್ಮ ಊರಿಗೆ ತೆಗೆದುಕೊಂಡು ಹೋಗಬೇಕೆಂದು ಅರಕೇರ ಎಳ್ಳಾರ್ಥಿ ಮೊದಲಾದ ಗ್ರಾಮಸ್ಥರು ಬಂಡಾರ ಎರಚುತ್ತ, ಇಲಾಲು ಆಡಿಸುತ್ತ, ಬಡಿಗೆಗಳ ಮೂಲಕ ನೆರಣಿಕೆ ಗ್ರಾಮದವರ ಜೊತೆ ಬಡಿದಾಟಕ್ಕೆ ಸಹ ಇಳಿದರು. ಈ ನಡುವೆ, ಕಳೆದ ವರ್ಷ ಒಂದು ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದರು.ಆದರೆ ಈ ವರ್ಷ 30 ಸಾವಿರ ಭಕ್ತರು ಭಾಗವಹಿಸಿದ್ದು, ಶಾಂತಿಯುತವಾಗಿ ನಡೆದಿದೆ ಎಂದು ಆದೋನಿಯ Dy SP ವಿನೋದ್ ಕುಮಾರ್ ತಿಳಿಸಿದ್ದಾರೆ.

ಈ ವರ್ಷ 100 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದೆ. ಇದನ್ನು ಇಲ್ಲಿನ ಜನತೆ ಒಂದು ರೀತಿ ದೇವರ ಸೇವೆ ಎಂದೇ ಭಾವಿಸುತ್ತಾರೆ. ಬಡಿದಾಟದಲ್ಲಿ ಭಾಗವಹಿಸಿ ಯಾರು ಮಾಳಮಲ್ಲೇಶ್ವರ ಸ್ವಾಮಿಯ ಉತ್ಸವ ಮೂರ್ತಿ ಯನ್ನು ತಮ್ಮ ಊರಿಗೆ ತೆಗೆದುಕೊಂಡು ಹೋಗ್ತಾರೋ ಆ ಊರಿಗೆ ಒಳ್ಳೆಯದಾಗ್ತದೆ ಎನ್ನುವ ನಂಬಿಕೆ ಇಲ್ಲಿ ಪ್ರಚಲಿತವಿದೆ.

ಮಲ್ಲಯ್ಯನ ಕಾರಣಿಕ: ಮೂರು ಆರು ಆರು ಮೂರಾದೀತಾಲೇ ಫರಾಕ್
ಬಳಿರೇ ಗಂಗೆ ಹೊಳೆದಂಡಿಗೆ ನಿಂತಾಳ, ಮಾಳಮ್ಮವ್ವ ಸವಾರಿ ಮಾಡ್ಯಾಳ. ಮುಂದಿನ ಆರು ತಿಂಗಳವರೆಗೆ 4,800 ನಗ ಹಳ್ಳಿ, 1,600 ಒಕ್ಕಳು ಜೋಳ, ಮೂರು ಆರು, ಆರು ಮೂರಾದೀತು ಎಂದು ಮಲ್ಲಯ್ಯನ ಕಾರಣಿಕ ಆಗಿದೆ. ಈ ವರ್ಷವೂ ಸಹ ನಾಡಿಗೆ ಸಮೃದ್ಧ ಮಳೆಯಾಗುವ ಸೂಚನೆ ನೀಡಿದ್ದು, ಮಾಳಮ್ಮದೇವಿಯೂ ದೇಶ ಸಂಚಾರ ಮಾಡುವ ಮೂಲಕ ಕಷ್ಟಗಳ ನಿವಾರಣೆಯಾಗಿ ಸಮೃದ್ಧಿ ಮೂಡುವ ಆಶಾಭಾವನೆಯನ್ನು ಭಕ್ತರು ಹೊಂದಿದ್ದಾರೆ. ಜೊತೆಗೆ, ರೈತರು ಬೆಳೆದ ಬೆಳೆಗೆ ಇರುವ ಬೆಲೆಗಿಂತ ಮುಂದಿನ ದಿನಗಳಲ್ಲಿ ಅಧಿಕ ಬೆಲೆ ಸಿಗುವ ಸಾಧ್ಯತೆ ಇದೆ ಎಂಬುವುದು ಭಕ್ತರ ಅಭಿಪ್ರಾಯ.

ಕನ್ನಡದಲ್ಲೇ ನಡೆಯುತ್ತೆ ಕಾರಣಿಕ!
ಈ ಭಾಗದ ಆರಾಧ್ಯ ದೈವವಾಗಿರುವ ಮಾಳ ಮಲ್ಲೇಶ್ವರ ಬನ್ನಿ ಉತ್ಸವದಲ್ಲಿ ಬೆಳಗಿನ ಜಾವ ನಡೆಯುವ ಕಾರಣಿಕೋತ್ಸವದಲ್ಲಿ ದೇವಸ್ಥಾನ ಸೀಮಾಂಧ್ರ ಪ್ರದೇಶದಲ್ಲಿದರೂ ಮಲ್ಲಯ್ಯನ ಕಾರಣಿಕ ಮಾತ್ರ ಕನ್ನಡ ಭಾಷೆಯಲ್ಲೇ ನಡೆಯುವುದು ಇಲ್ಲಿನ ವಿಶೇಷ.
-ಬಸವರಾಜ ಹರನಹಳ್ಳಿ