ಕೊರೊನಾ ಸೋಂಕಿತೆ ಸಾಹಿತಿಯ ಅಂತ್ಯಕ್ರಿಯೆಗೆ ಸ್ಥಳೀಯರ ವಿರೋಧ

ಹಾವೇರಿ: ಕೊರೊನಾಗೆ ಸಾಹಿತಿಯೊಬ್ಬರು ಮೃತಪಟ್ಟಿದ್ದು, ಸಾಹಿತಿಯ ಅಂತ್ಯಕ್ರಿಯೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿರುವ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದ ಹೊರವಲಯದಲ್ಲಿರೋ ಮೆಡ್ಲೇರಿ ರಸ್ತೆಯಲ್ಲಿ ನಡೆದಿದೆ.

ನಿನ್ನೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮಹಿಳಾ ಸಾಹಿತಿ ಮೃತಪಟ್ಟಿದ್ದರು. ಇಂದು ಅವರ ಅಂತ್ಯಕ್ರಿಯೆ ಮಾಡಲು ಜಿಲ್ಲಾಡಳಿತ ಸೂಚಿಸಿರುವ ಮೆಡ್ಲೇರಿ ರಸ್ತೆಯಲ್ಲಿರೋ ಸರಕಾರಿ ಜಮೀನಿಗೆ ಶವವನ್ನು ತರಲಾಗಿದೆ. ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗಿದೆ. ಆದರೆ ಗಂಗಾಜಲತಾಂಡಾ, ಬಸಲೀಕಟ್ಟಿ ತಾಂಡಾ,‌ ಗೋವಿಂದ ಬಡಾವಣೆ ಸೇರಿದಂತೆ ಸ್ಥಳೀಯರು ಅಂತ್ಯಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಒಂದು ಗಂಟೆಯಿಂದ ಆಂಬ್ಯುಲೆನ್ಸ್​ನಲ್ಲೇ ಮೃತದೇಹ ಇರಿಸಿಕೊಂಡು ಕಾಯುತ್ತಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಯ್ದುಕೊಳ್ಳದೆ ವಿರೋಧ ವ್ಯಕ್ತಪಡಿಸುತ್ತಿರುವ ಸ್ಥಳೀಯರಿಗೆ ಪೊಲೀಸರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Related Tags:

Related Posts :

Category: