ಸಿದ್ಧಗಂಗಾ ಮಠಕ್ಕೆ ಗೋಮಾಳ ಜಮೀನು: ಯಲಚಗೆರೆ ಗ್ರಾಮಸ್ಥರ ವಿರೋಧ-ಪ್ರತಿಭಟನೆ-ಎಚ್ಚರಿಕೆ

ನೆಲಮಂಗಲ: ತಾಲೂಕಿನ ಯಕಚಗೆರೆ ಗ್ರಾಮದಲ್ಲಿನ ಗೋಮಾಳವನ್ನ ಗ್ರಾಮಸ್ಥರು ಸ್ಮಶಾನಕ್ಕೆ ಬಳಸುತ್ತಿದ್ದು, ಈಗ ದಿಢೀರನೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಜಮೀನನ್ನು ಹಸ್ತಾಂತರಿಸಲಾಗಿದೆ. ಹೀಗಾಗಿ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ ತಹಶೀಲ್ದಾರ್ ಕಚೇರಿ ಎದುರು ತಮಟೆ ಚಳುವಳಿ ನಡೆಸಿದ್ದಾರೆ.

ಪ್ರಭಾವಿಗಳಿಗೆ ಮಣಿದು ಸಿದ್ದಗಂಗಾ ಮಠಕ್ಕೆ ಜಮೀನು
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಯಕಚಗೆರೆ ಗ್ರಾಮದ ಸರ್ವೆ ನಂಬರ್ 74ರಲ್ಲಿನ 9 ಎಕರೆ 20 ಗುಂಟೆ ಜಮೀನಿನಲ್ಲಿ ಈ ಹಿಂದಿನಿಂದಲೂ ಗೋವುಗಳು ಆಹಾರ ಹಾಗೂ ಆಶ್ರಯ ಪಡೆದಿವೆ. ಅಲ್ಲದೆ ಊರಿನಲ್ಲಿ ಮೃತ ಪಟ್ಟ ವ್ಯಕ್ತಿಗಳ ಶವ ಸಂಸ್ಕಾರವನ್ನ ನೆರೆವೇರಿಸಲು ಗೋಮಾಳದ ಭೂಮಿಯನ್ನ ಬಳಸಲಾಗುತ್ತಿದೆ. ಆದರೆ ಇದೀಗ ಏಕಾಏಕಿ ತಾಲೂಕು ಆಡಳಿತ, ಪ್ರಭಾವಿಗಳಿಗೆ ಮಣಿದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಜಮೀನು ಹಸ್ತಾಂತರಿಸಿದ್ದು ಗ್ರಾಮಸ್ಥರ ತೀವ್ರ ವಿರೋಧಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ, ಇಂದು ತಾಲೂಕು ಕಚೇರಿ ಮುಂಭಾಗದಲ್ಲಿ ಯಲಚಗೆರೆ ಗ್ರಾಮದ ಮಹಿಳೆಯರು ಸೇರಿದಂತೆ ನೂರಾರು ಗ್ರಾಮಸ್ಥರು ಜಮೀನು ಹಸ್ತಾಂತರ ವಿರೋಧಿಸಿ ತಮಟೆ ಪ್ರತಿಭಟನೆ ನಡೆಸಿದರು.

ಜೊತೆಗೆ ಮಠಕ್ಕೆ ಹಸ್ತಾಂತರಿಸಿರುವ ಗೋಮಾಳದ ಜಾಗವನ್ನ ವಾಪಸ್ ಪಡೆದು, ಅದೇ ಜಾಗದಲ್ಲಿ ಸ್ಮಶಾನಕ್ಕೆ ಅವಕಾಶ ಸೇರಿದಂತೆ ಗ್ರಾಮದಲ್ಲಿ ಆಶ್ರಯರಹಿತರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ತಹಶೀಲ್ದಾರ್ ಶ್ರೀನಿವಾಸ್ ವಿರುದ್ದ ದಿಕ್ಕಾರ ಕೂಗಿದ್ದು, ಜನ ವಿರೋಧಿ-ರೈತ ವಿರೋಧಿ ತಹಶೀಲ್ದಾರ್ ಎಂದು ಆಕ್ರೋಶ ವ್ಯಕ್ತಪಡಿಸಿದರು.

400  ರಾಸುಗಳಿವೆ ಅವುಗಳಿಗೂ ಮೇವು ಬೇಕು
ಇದೇ ಗ್ರಾಮಸ್ಥರು ಮಾತನಾಡಿ ನಮ್ಮ ಊರಿನ ಜಮೀನನ್ನು ನಮ್ಮ ಊರಿನ ಬಳಕೆಗೆ ನೀಡಲಿ, ನಮ್ಮಲ್ಲಿ ಯಾರಾದರೂ ಸಾವನ್ನಪ್ಪಿದರೆ ಗ್ರಾಮದಲ್ಲಿ ಶವ ಸಂಸ್ಕಾರ ಮಾಡಲು ಜಾಗವಿಲ್ಲ. ಈಗಲೂ ಕೂಡ ಅನೇಕ ಕುಟುಂಬಗಳು ಸ್ವಂತ ಸೂರಿಲ್ಲದೆ ಪರಿತಪಿಸುತ್ತಿವೆ. ಗ್ರಾಮದಲ್ಲಿ 400 ಕ್ಕೂ ಹೆಚ್ಚು ರಾಸುಗಳಿವೆ. ಅವುಗಳಿಗೂ ಮೇವು ಬೇಕಾಗುತ್ತದೆ.

ಹೀಗಾಗಿ ಗ್ರಾಮದಲ್ಲಿ ಸಾವಿರ ಸಮಸ್ಯೆ ಇದ್ದರೂ ಸಹ ಭೂಮಿಯನ್ನ ಮಠದ ಸ್ವಾಧೀನಕ್ಕೆ ನೀಡಿರುವುದು ಬೇಸರದ ಸಂಗತಿ. ಈ ಭೂಮಿಯನ್ನ ವಾಪಸ್ ಪಡೆದು ಗ್ರಾಮದ ಹಾಗೂ ಗ್ರಾಮಸ್ಥರ ಉಪಯೋಗಕ್ಕೆ ಕೂಡಲೇ ನೀಡಬೇಕು. ಇಲ್ಲವಾದಲ್ಲಿ ತಾಲೂಕು ಆಡಳಿತ ಹಾಗೂ ತಹಶೀಲ್ದಾರ್ ವಿರುದ್ದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರು ತಹಶೀಲ್ದಾರ್‌ಗೆ ಎಚ್ಚರಿಕೆ ನೀಡಿದರು.

Related Tags:

Related Posts :

Category:

error: Content is protected !!