17-06-2024

ಚೊಚ್ಚಲ ಪಂದ್ಯದಲ್ಲೇ ಮಿಂಚಿದ 33 ವರ್ಷದ ಲೆಗ್ ಸ್ಪಿನ್ನರ್

ಒಬ್ಬ ಕ್ರಿಕೆಟಿಗನಿಗೆ 33 ನೇ ವಯಸ್ಸಿನಲ್ಲಿ ತಂಡಕ್ಕೆ ಪದಾರ್ಪಣೆ ಮಾಡುವ ಅವಕಾಶ ಸಿಗುವುದು ಬಹಳ ವಿರಳ. ಆದರೆ ಈ ವಯಸ್ಸಿನಲ್ಲಿಯೂ ಪದಾರ್ಪಣೆ ಮಾಡಿರುವ ಕೆಲವೇ ಕೆಲವು ಆಟಗಾರರು ಸಾಧನೆಯ ಶಿಖರವೇರಿದ್ದಾರೆ.

ಇಂತಹದ್ದೇ ಘಟನೆ ಭಾರತ ವನಿತಾ ತಂಡದಲ್ಲೂ ನಡೆದಿದೆ. ನಿನ್ನೆ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ವನಿತಾ ತಂಡಗಳ ನಡುವಿನ ಏಕದಿನ ಪಂದ್ಯದಲ್ಲಿ ಭಾರತದ ಪರ 33 ವರ್ಷದ ಆಶಾ ಶೋಭನಾ ಚೊಚ್ಚಲ ಪಂದ್ಯವನ್ನಾಡಿದರು.

ವಾಸ್ತವವಾಗಿ ನಿನ್ನೆ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 143 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ಈ ಪಂದ್ಯದಲ್ಲಿ ಚೊಚ್ಚಲ ಏಕದಿನ ಪಂದ್ಯವನ್ನಾಡಿದ 33 ವರ್ಷದ ಆಶಾ ಶೋಭನಾ ಪ್ರಮುಖ 4 ವಿಕೆಟ್ ಪಡೆದು ಗೆಲುವಿನ ರೂವಾರಿ ಎನಿಸಿಕೊಂಡಿದ್ದಾರೆ.

ತಮ್ಮ ಖೋಟಾದ 8.4 ಓವರ್​ಗಳಲ್ಲಿ 21 ರನ್ ನೀಡಿ ಆಶಾ ಶೋಭನಾ 4 ವಿಕೆಟ್ ಕಬಳಿಸಿದರು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 8 ವಿಕೆಟ್ ಕಳೆದುಕೊಂಡು 265 ರನ್ ಗಳಿಸಿದ್ದು, ಇದಕ್ಕೆ ಕಾರಣವಾಗಿದ್ದು ಸ್ಟಾರ್ ಬ್ಯಾಟ್ಸ್‌ಮನ್ ಸ್ಮೃತಿ ಮಂಧಾನ.

ಟೀಂ ಇಂಡಿಯಾ ಕೇವಲ 99 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಅಂತಹ ಪರಿಸ್ಥಿತಿಯಲ್ಲಿ ಸ್ಮೃತಿ ಅದ್ಭುತ ಬ್ಯಾಟಿಂಗ್ ಮಾಡಿ ಅದ್ಭುತ ಶತಕ ದಾಖಲಿಸಿದರು.

ತಮ್ಮ ಏಕದಿನ ವೃತ್ತಿಜೀವನದ ಆರನೇ ಶತಕ ಬಾರಿಸಿದ ಸ್ಮೃತಿ, 127 ಎಸೆತಗಳಲ್ಲಿ 117 ರನ್ ಗಳಿಸಿ ಔಟಾದರು.