12-05-2024

IPL 2024: ಫೀಲ್ಡಿಂಗ್‌ಗೆ ಅಡ್ಡಿಪಡಿಸಿ ವಿಕೆಟ್ ಕೈಚೆಲ್ಲಿದ ಜಡೇಜಾ

Author: ಪೃಥ್ವಿ ಶಂಕರ

ಐಪಿಎಲ್ 2024 ರ 61 ನೇ ಪಂದ್ಯದಲ್ಲಿ ಚೆನ್ನೈ ಮತ್ತು ರಾಜಸ್ಥಾನ ನಡುವಿನ ಪಂದ್ಯದಲ್ಲಿ ರವೀಂದ್ರ ಜಡೇಜಾ ವಿಚಿತ್ರ ರೀತಿಯಲ್ಲಿ ಔಟಾದರು.

ವಾಸ್ತವವಾಗಿ, ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 20 ಓವರ್‌ಗಳಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡು 141 ರನ್ ಗಳಿಸಿತು.

ಇದಕ್ಕುತ್ತರವಾಗಿ ಗುರಿ ಬೆನ್ನಟ್ಟಿದ ಚೆನ್ನೈ ಒಂದು ಹಂತದಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 121 ರನ್ ಗಳಿಸಿತ್ತು.

ಈ ವೇಳೆ 16ನೇ ಓವರ್‌ ಬೌಲಿಂಗ್ ಮಾಡುವ ಜವಬ್ದಾರಿಯನ್ನು ಅವೇಶ್ ಖಾನ್ ಹೊತ್ತರು. ಆಗ ರುತುರಾಜ್ ಜತೆ ಜಡೇಜಾ ಕ್ರೀಸ್‌ನಲ್ಲಿದ್ದರು. ಆ ಓವರ್‌ನ ಐದನೇ ಎಸೆತದಲ್ಲಿ ಜಡೇಜಾ ಥರ್ಡ್ ಮ್ಯಾನ್‌ಗೆ ಶಾಟ್‌ ಹೊಡೆದು ರನ್‌ಗಾಗಿ ಓಡಿದರು.

ಒಂದು ರನ್ ಗಳಿಸಿದ ನಂತರ ಜಡೇಜಾ ಎರಡನೇ ರನ್‌ಗೆ ಅರ್ಧ ಪಿಚ್​ವರೆಗು ಓಡಿದರು. ಆದಾಗ್ಯೂ, ರುತುರಾಜ್ ಎರಡನೇ ರನ್ ತೆಗೆದುಕೊಳ್ಳಲು ನಿರಾಕರಿಸಿದರು.

ಅಷ್ಟರೊಳಗೆ ಚೆಂಡು ಸ್ಯಾಮ್ಸನ್ ಅವರ ಕೈಸೇರಿತ್ತು. ಕೂಡಲೇ ಸಂಜು ಚೆಂಡನ್ನು ನಾನ್-ಸ್ಟ್ರೈಕ್ ಎಂಡ್‌ಗೆ ಎಸೆದರು.

ಆದರೆ ಔಟಾಗುವದರಿಂದ ಪಾರಾಗುವ ದಾವಂತದಲ್ಲಿ ಜಡೇಜಾ ಚೆಂಡಿಗೆ ಅಡ್ಡಲಾಗಿ ಓಡಿದರು. ಹೀಗಾಗಿ ಚೆಂಡು ಜಡೇಜಾ ಅವರಿಗೆ ಬಡಿಯಿತು.

ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ್ದಕ್ಕಾಗಿ ಸ್ಯಾಮ್ಸನ್ ಕೂಡಲೇ ಅಂಪೈರ್‌ಗೆ ಮನವಿ ಮಾಡಿದರು. ಕೆಲಕಾಲ ಚರ್ಚೆಯ ನಂತರ ಮೈದಾನದಲ್ಲಿದ್ದ ಇಬ್ಬರೂ ಅಂಪೈರ್‌ಗಳು ಅದನ್ನು ಮೂರನೇ ಅಂಪೈರ್‌ಗೆ ಕಳುಹಿಸಿದರು.

ಅಂಪೈರ್​ಗಳ ಮನವಿಯನ್ನು ಪರಿಶೀಲಿಸಿದ ಮೂರನೇ ಅಂಪೈರ್, ಜಡೇಜಾ ಕೊನೆಯವರೆಗೂ ಚೆಂಡಿನ ಮೇಲೆ ಕಣ್ಣಿಟ್ಟಿದ್ದನ್ನು ಕಂಡು ಇದು ಔಟೆಂದು ತೀರ್ಪು ನೀಡಿದರು.