18-04-2024

ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ರೋಹಿತ್ ಅಸಮಾಧಾನ..!

Author: ಪೃಥ್ವಿ ಶಂಕರ

17ನೇ ಆವೃತ್ತಿಯ ಐಪಿಎಲ್​ನ ಮೊದಲಾರ್ಧದ ಮುಗಿದಿದ್ದು, ದ್ವಿತೀಯಾರ್ಧ ಈಗಾಗಲೇ ಆರಂಭವಾಗಿದೆ. ಇದುವರೆಗೆ ನಡೆದಿರುವ ಪಂದ್ಯಗಳು ಅಭಿಮಾನಿಗಳಿಗೆ ರಸದೌತಣವನ್ನೇ ನೀಡಿವೆ.

ಇದಕ್ಕೆ ಕಾರಣ ಐಪಿಎಲ್‌ನಲ್ಲಿ ಬಿಸಿಸಿಐ ತಂದಿರುವ ಕೆಲವು ನಿಯಮಗಳು ಕಾರಣವಾಗಿವೆ. ಅದರಲ್ಲಿ ಪ್ರಮುಖವಾದದ್ದು ಇಂಪ್ಯಾಕ್ಟ್ ಪ್ಲೇಯರ್ ನಿಯಮ.

ಈ ನಿಯಮದನುಸಾರವಾಗಿ ತಂಡಗಳು ತಮ ಅಗತ್ಯಕ್ಕೆ ತಕ್ಕಂತೆ ಒಬ್ಬ ಬ್ಯಾಟರ್ ಅಥವಾ ಒಬ್ಬ ಬೌಲರ್​ನನ್ನು ಪಂದ್ಯದಲ್ಲಿ ಅಧಿಕವಾಗಿ ಬಳಸಬಹುದಾಗಿದೆ.

ಹೀಗಾಗಿ ಎಲ್ಲಾ ತಂಡಗಳು ಪಂದ್ಯದ ಸ್ಥಿತಿಗನುಗುಣವಾಗಿ ಬೌಲರ್ ಬೇಕಾದರೆ ಬೌಲರ್, ಬ್ಯಾಟರ್ ಬೇಕಾದರೆ ಬ್ಯಾಟರ್​ನನ್ನು ಕಣಕ್ಕಿಳಿಸುತ್ತಿವೆ.

ಆದರೆ ಈ ನಿಯಮ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಹಿಡಿಸಿಲ್ಲ ಎಂದು ತೊರುತ್ತದೆ. ಹೀಗಾಗಿ ರೋಹಿತ್ ಐಪಿಎಲ್ ಮಧ್ಯದಲ್ಲಿ ಈ  ನಿಯಮದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರೋಹಿತ್, ಈ ನಿಯಮ ಆಲ್‌ರೌಂಡರ್‌ಗಳಿಗೆ ಅನಾನುಕೂಲವಾಗಿದೆ ಎಂದಿದ್ದಾರೆ.

ಇಂಪ್ಯಾಕ್ಟ್ ಪ್ಲೇಯರ್ ನಿಯಮ ಭಾರತೀಯ ಕ್ರಿಕೆಟ್‌ನಲ್ಲಿ ಆಲ್‌ರೌಂಡರ್‌ಗಳ ಬೆಳವಣಿಗೆಯಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದು ರೋಹಿತ್ ಹೇಳಿದ್ದಾರೆ.

ಈ ನಿಯಮದಿಂದಾಗಿ ವಾಷಿಂಗ್ಟನ್ ಸುಂದರ್, ಶಿವಂ ದುಬೆ ಸೇರಿದಂತೆ ಅನೇಕ ಆಲ್‌ರೌಂಡರ್‌ಗಳಿಗೆ ಬೌಲಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರೋಹಿತ್ ಅಸಮಾಧಾನ ಹೊರಹಾಕಿದ್ದಾರೆ.

ರೋಹಿತ್ ಅಸಮಾಧಾನಕ್ಕೂ ಕಾರಣವಿದೆ. ಏಕೆಂದರೆ ಜೂನ್​ನಲ್ಲಿ ಟಿ20 ವಿಶ್ವಕಪ್ ನಡೆಯಲ್ಲಿದೆ. ಈ ಚುಟುಕು ಮಾದರಿ ಹೆಚ್ಚಾಗಿ ಆಲ್‌ರೌಂಡರ್‌ಗಳನ್ನು ಕೇಳುತ್ತದೆ.

ಆದರೆ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಬಂದ ನಂತರ ಆಲ್‌ರೌಂಡರ್‌ಗಳು ಬ್ಯಾಟಿಂಗ್ ಕಡೆ ಹೆಚ್ಚು ಒತ್ತು ನೀಡುತ್ತಿದ್ದು, ಬೌಲಿಂಗ್​ನಿಂದ ದೂರ ಸರಿದಿದ್ದಾರೆ. ಇದು ಟಿ20 ವಿಶ್ವಕಪ್ ದೃಷ್ಟಿಯಿಂದ ಟೀಂ ಇಂಡಿಯಾಗೆ ಹಿನ್ನಡೆಯನ್ನುಂಟು ಮಾಡಿದೆ.